ಹರಿಯಾಣಾ ರಾಜ್ಯದ ರೈತರು, ಕುಸ್ತಿಪಟುಗಳು ವಿಶ್ವದೆಲ್ಲೆಡೆ ಭಾರತದ ಕ್ರೀಡಾ ಪತಾಕೆ ಹಾರಿಸಿದ್ದಾರೆ. ಅಲ್ಲಿನ ಮಹಿಳಾ ರೈತರು ಸಹ ಅಷ್ಟೇ ಕಠಿಣ ಪರಿಶ್ರಮದಿಂದ ಹೆಸರು ಗಳಿಸಿದ್ದಾರೆ.
ಇಂಥ ಒಬ್ಬ ಗ್ರಾಮೀಣ ಹೆಣ್ಣುಮಗಳು ಸ್ವೀಟಿ ಬೂರಾ, ಈಕೆ ತನ್ನ ಕುಸ್ತಿ ಪಂದ್ಯಗಳಿಂದ ಎಷ್ಟೋ ಜನರಿಗೆ ಮಣ್ಣು ಮುಕ್ಕಿಸಿದ್ದಾರೆ, ದೇಶಕ್ಕೆ ಅನೇಕ ಚಿನ್ನದ ಬಹುಮಾನ ಗಳಿಸಿ ಕೊಟ್ಟಿದ್ದಾರೆ. 2023ರಲ್ಲಿ ಈಕೆ ದೆಹಲಿಯ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿದ್ದು ಒಂದು ಅಪೂರ್ವ ದಾಖಲೆ.
ಅಲ್ಲಿ ಈಕೆ 75-81 ಕಿಲೋ ತೂಕ ವರ್ಗದಲ್ಲಿ ಚೀನಾದ ಲಾಂಗ್ ಲೀನಾಳನ್ನು 41 ಪಾಯಿಂಟ್ಸ್ ನಿಂದ ಗೆದ್ದು ಹೊಸ ಇತಿಹಾಸ ರಚಿಸಿದರು. ಆದರೆ ಈ ಮಟ್ಟಕ್ಕೆ ಈಕೆ ಬೆಳೆಯಲು ಮಾಡಿದ ತ್ಯಾಗಗಳು ಅಷ್ಟಿಷ್ಟಲ್ಲ.
ಈಕೆ ಹರಿಯಾಣಾ ರಾಜ್ಯದ ಫಿರಾಯೆ ಗ್ರಾಮದ ನಿವಾಸಿ. ಈಕೆ ಅಲ್ಲಿನ ಹಿಸಾರ್ ಜಾಬ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಸರ್ಕಾರಿ ಕಾಲೇಜಿನಲ್ಲಿ ಡಿಗ್ರಿ ಪಡೆದು ನಂತರ ಪಿಜಿ ಮುಗಿಸಿಕೊಂಡರು.
ಒಂದು ಕಾಲದಲ್ಲಿ ಕಬಡ್ಡಿ ಆಡುತ್ತಿದ್ದ ಈ ಹುಡುಗಿ, ನಂತರ ತಂದೆಯ ಪ್ರೋತ್ಸಾಹದಂತೆ ಮುಂದೆ ಕುಸ್ತಿ ಪಟುವಾಗಿ ತಯಾರಾದರು. 2009ರಲ್ಲಿ 15ರ ಹರೆಯದಲ್ಲಿ ಮೊದಲ ಸಲ ಬಾಕ್ಸಿಂಗ್ ಟ್ರೇನಿಂಗ್ ಸೆಂಟರ್ ಸೇರಿ, ನೆಂಟರಿಷ್ಟರಿಂದ ಟೀಕೆಗೆ ಗುರಿಯಾಗ ಬೇಕಾಯಿತು. ಈ ಕುರಿತಾಗಿ ಸ್ವೀಟಿ ಹೇಳುತ್ತಾರೆ, ``ಯಾರಾದರೂ ಏನಾದರೂ ತಪ್ಪು ಮಾಡಿದರೆ, ನಾನು ಕೈ ಬೀಸಿ ಅವರಿಗೆ ಬಾರಿಸುತ್ತಿದ್ದೆ. ಮೊದಲ ಸಲ ಬಾಕ್ಸಿಂಗ್ ಗ್ಲೌವ್ಸ್ ಧರಿಸಿದಾಗ ಹಿಸಾರ್ ಗೆ ಹೋಗಿ ಕುಸ್ತಿ ಸ್ಪರ್ಧೆಯಲ್ಲಿ ಭಾಗಹಿಸಿದೆ.
``ನನ್ನ ಎದುರಾಳಿ ಕಳೆದ 6-7 ತಿಂಗಳಿನಿಂದ ಈ ಫೀಲ್ಡ್ ನಲ್ಲಿ ಖ್ಯಾತಳು. ಮೊದಲ ಸುತ್ತಿನಲ್ಲಿ ಆಕೆ ನನಗೆ ಮಣ್ಣು ಮುಕ್ಕಿಸಿದಳು. ತಕ್ಷಣ ನನ್ನಲ್ಲಿ ರೋಷ ಜಾಗೃತಗೊಂಡು 2ನೇ ಸುತ್ತಿನಲ್ಲಿ ಆಕೆಗೆ ನೀಡಿದ ಅಪರ್ ಕಟ್ ಗೂಸಾದಿಂದ ಅವಳು ಅಲ್ಲಿಯೇ ಚಿತ್ ಆದಳು!''
ಈಕೆ ಈ ಆಟದ ಕುರಿತು, ``ಹೆಣ್ಣು ಕುಸ್ತಿಗಿಳಿದರೆ ಸಮಾಜ ಏನೇನೋ ಆಡಿಕೊಳ್ಳುತ್ತದೆ. ಇವಳಿಗೇಕೆ ಇದೆಲ್ಲ ಬೇಕು? ಮುಂದೆ ಯಾರು ಮದುವೆ ಆಗ್ತಾರೆ? ಪ್ರಾಕ್ಟೀಸ್ ಮಾಡುತ್ತಿದ್ದಾಗೆಲ್ಲ ಇಂಥದೇ ಮಾತು ಕೇಳಿ ಬರುತ್ತಿತ್ತು. ಮತ್ತಷ್ಟು ಕಷ್ಟಪಟ್ಟಾಗ ವಾಂತಿ ಆಗಿಬಿಡುತ್ತಿತ್ತು. ನನಗೆ ಸಿಕ್ಕಿದ ಈ ಅವಕಾಶ ಬಿಡದೆ, ದೇಶಕ್ಕೆ ಹೆಸರು ತರಬೇಕೆಂದು ಛಲ ತೊಟ್ಟೆ.''
ಸಾವಿಗೇ ಗೂಸಾ ನೀಡುವಂತಾದಾಗ
ತನ್ನ ಜೀವನದ ತಿರುವಿನ ಕುರಿತಾಗಿ ಈಕೆ, ``ನಾನು 2014ರಲ್ಲಿ ಆಸ್ಪತ್ರೆ ಸೇರುವಂತಾಯಿತು. ಕಳೆದ 3 ವರ್ಷದಿಂದ ಟೈಫಾಯ್ಡ್ ಸತತ ಕಾಡುತ್ತಿತ್ತು. ಆದರೂ ಪ್ರಾಕ್ಟೀಸ್ ಬಿಟ್ಟಿರಲಿಲ್ಲ. ಡಾಕ್ಟರ್ ನನಗೆ ಬಾಕ್ಸಿಂಗ್ ಮರೆತುಬಿಡಲು ಹೇಳಿದರು. ಆಗ ನನಗೆ ಬಂದ ಫೋನ್ ಕಾಲ್ ನಿಂದ, ಈ ಸಲ ಯಾರು ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಗೆಲ್ಲುತ್ತಾರೋ, ಅವರನ್ನು ಮಾತ್ರ ಮುಂದಿನ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ದ.ಕೊರಿಯಾಗೆ ಕಳುಹಿಸುತ್ತಾರೆ ಅಂತ ಗೊತ್ತಾಯ್ತು. ಇದರಿಂದ ನನ್ನ ಟೆನ್ಶನ್ ಹೆಚ್ಚಾಯ್ತು. ಇವತ್ತೇ ನನ್ನನ್ನು ಡಿಸ್ ಚಾರ್ಜ್ ಮಾಡಿ ಎಂದು ಡಾಕ್ಟರ್ ನ್ನು ವಿನಂತಿಸಿದೆ. ಅದು ಸಾಧ್ಯವಿಲ್ಲ ಎಂದು ಅವರು ಕೈಬಿಟ್ಟರು. ಅಮ್ಮ ಅಪ್ಪ ಸಹ ಬೇಡ ಎಂದರು.





