ಎರಡು ಶತಮಾನಗಳ ನಂಬಿಕೆ, ಕೆಂಪು ಸಿಂಧೂರದ ಗಣಪತಿ ಮತ್ತು ಭಕ್ತರ ಇಷ್ಟಾರ್ಥ ಸಿದ್ಧಿಯ ಕಥೆ!

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥

ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಶುಭಕಾರ್ಯವನ್ನು ಆರಂಭಿಸುವ ಮೊದಲು ನೆನೆಯುವ ಮೊದಲ ದೇವರು ಶ್ರೀ ಗಣಪತಿ. ವಿಘ್ನಗಳನ್ನು ನಿವಾರಿಸುವವನು, ಬುದ್ಧಿ–ವಿದ್ಯೆ ನೀಡುವವನು, ಸಿದ್ಧಿ–ಸಂಪತ್ತು ಕರುಣಿಸುವವನು ಎಂಬ ನಂಬಿಕೆಯಿಂದ ಗಣೇಶನು ಕೋಟ್ಯಂತರ ಭಾರತೀಯರ ಆರಾಧ್ಯ ದೈವ. ಕರ್ನಾಟಕದ ಪ್ರತಿಯೊಂದು ಊರಿಗೂ ತನ್ನದೇ ಆದ ಗಣಪತಿ ಕ್ಷೇತ್ರ, ಸ್ಥಳೀಯ ಆಚರಣೆ ಅಥವಾ ಭಕ್ತಿಯ ಪರಂಪರೆ ಇದೆ. ಆದರೆ ಒಂದು ಕುಟುಂಬದ ಮನೆಯಲ್ಲಿ ಆರಂಭವಾದ ಗಣೇಶೋತ್ಸವ, ಆರು–ಏಳು ತಲೆಮಾರುಗಳನ್ನು ದಾಟಿ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಾವಿರಾರು–ಲಕ್ಷಾಂತರ ಭಕ್ತರನ್ನು ಸೆಳೆಯುವ ಪರಂಪರೆಯಾಗಿ ಬೆಳೆದಿರುವುದು ನಿಜಕ್ಕೂ ಅಪರೂಪ. ಅಂತಹ ವಿಶಿಷ್ಟ ಕ್ಷೇತ್ರವೇ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದ ವರಸಿದ್ಧಿ ವಿನಾಯಕ.

ಇಲ್ಲಿನ ಗಣಪತಿಯ ವಿಶೇಷತೆ ಕೇವಲ ಅವನ ಕೆಂಪು ಬಣ್ಣದಲ್ಲಿಲ್ಲ. 1827ರಿಂದ ಮುಂದುವರಿದು ಬಂದಿರುವ ಕುಟುಂಬ ಪರಂಪರೆ, ಸಂತಾನಪ್ರಾಪ್ತಿಯ ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ಕಥೆ, ಕೇವಲ ಮೂರು ದಿನಗಳ ಪ್ರತಿಷ್ಠಾಪನೆ, 21 ಇಂಚಿನ ಸಿಂಧೂರ ಗಣಪತಿ, ಏಳು ಕುಲಕರ್ಣಿ ಮನೆಗಳಲ್ಲಿ ನಡೆಯುವ ಪೂಜೆ ಮತ್ತು ಗಣೇಶ ಚತುರ್ಥಿಯಂದು ಹರಿದುಬರುವ ಭಕ್ತಸಾಗರ—ಇವೆಲ್ಲವೂ ಛಬ್ಬಿಯನ್ನು ವಿಭಿನ್ನವಾಗಿಸುತ್ತವೆ. ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಉತ್ಸವ್ ಪೋರ್ಟಲ್ ಕೂಡ ಛಬ್ಬಿ ಗಣೇಶೋತ್ಸವದ ಇತಿಹಾಸವನ್ನು 1827ರಿಂದ ಆರಂಭವಾಗುತ್ತದೆ ಎಂದು ದಾಖಲಿಸಿದೆ.

ಛಬ್ಬಿ ಎಲ್ಲಿದೆ?

ಛಬ್ಬಿ ಗ್ರಾಮವು ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಇದೆ.  ಹುಬ್ಬಳ್ಳಿಯಿಂದ ಸುಮಾರು 15–18 ಕಿ.ಮೀ. ದೂರದಲ್ಲಿದೂರದಲ್ಲಿರುವ  ಸಾಮಾನ್ಯವಾದ ಒಂದು ಸಣ್ಣ ಗ್ರಾಮ. ಆದರೆ ಗಣೇಶ ಚತುರ್ಥಿಯ ಮೂರು ದಿನಗಳಲ್ಲಿ ಈ ಸಣ್ಣ ಗ್ರಾಮವೇ ಉತ್ತರ ಕರ್ನಾಟಕದ ಪ್ರಮುಖ ಭಕ್ತಿಕೇಂದ್ರವಾಗಿ ರೂಪಾಂತರಗೊಳ್ಳುತ್ತದೆ.

1827ರಲ್ಲಿ ಆರಂಭವಾದ ಒಂದು ಕುಟುಂಬದ ಕಥೆ

ಛಬ್ಬಿಯ ಗಣೇಶೋತ್ಸವದ ಕಥೆಯ ಕೇಂದ್ರದಲ್ಲಿ ತಮ್ಮಪ್ಪ ಶಾನುಭೋಗ/ಕುಲಕರ್ಣಿ ಎಂಬ ಕುಟುಂಬದ ಹಿರಿಯರ ಹೆಸರು ಬರುತ್ತದೆ. ಸುಮಾರು 1827ರಲ್ಲಿ ಸಂತಾನವಿಲ್ಲದೆ ಚಿಂತೆಯಲ್ಲಿದ್ದ ತಮ್ಮಪ್ಪಣ್ಣನ ಮನೆಗೆ ಶ್ರೀ ಕೃಷ್ಣೇಂದ್ರ ಸ್ವಾಮೀಜಿ ಎಂಬ ಅವಧೂತರು/ಸಂತರು ಆಗಮಿಸಿದ್ದರು ಎಂಬುದು ಕುಟುಂಬದ ಪರಂಪರೆ. ಅವರ ಆತಿಥ್ಯದಿಂದ ಸಂತುಷ್ಟರಾದ ಸ್ವಾಮೀಜಿಯವರು, ಸಿಂಧೂರದ ಕೆಂಪು ಬಣ್ಣದ ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮೂರು ದಿನ ಪೂಜಿಸುವಂತೆ ಸೂಚಿಸಿದರು ಎಂಬ ನಂಬಿಕೆ ಇದೆ. ಅದರಂತೆ ತಮ್ಮಪ್ಪಣ್ಣ ಕುಟುಂಬವು ಕೆಂಪು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆಯನ್ನು ಆರಂಭಿಸಿತು. ಮುಂದೆ ಕುಟುಂಬಕ್ಕೆ ಸಂತಾನಪ್ರಾಪ್ತಿಯಾಯಿತು ಎಂಬುದು ಈ ಪರಂಪರೆಯ ಪ್ರಮುಖ ನಂಬಿಕೆ. ಈ ಘಟನೆ ನಡೆದ ನಂತರ ಆ ಪೂಜೆ ನಿಲ್ಲಲಿಲ್ಲ.

ಒಂದು ವರ್ಷ… ಎರಡು ವರ್ಷ… ಒಂದು ತಲೆಮಾರು… ಎರಡು ತಲೆಮಾರು… ಹೀಗೆ ಸುಮಾರು ಎರಡು ಶತಮಾನಗಳ ಕಾಲ ಈ ಸಂಪ್ರದಾಯ ಮುಂದುವರಿಯಿತು. ಇಂದಿಗೆ ಆ ಕುಟುಂಬದ ಆರು–ಏಳು ತಲೆಮಾರುಗಳು ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿವೆ.

ಇದು ದೇವಾಲಯದ ಗಣಪತಿಯಲ್ಲ. ಒಂದು ಮನೆತನದ ಗಣಪತಿ ಉತ್ಸವ!

ಛಬ್ಬಿ ಗಣಪತಿಯ ಮತ್ತೊಂದು ಅಪರೂಪದ ಸಂಗತಿಯೇ ಇದು. ಇದು ಆರಂಭದಿಂದಲೂ ದೊಡ್ಡ ಸಾರ್ವಜನಿಕ ದೇವಾಲಯದಲ್ಲಿ ಪ್ರತಿಷ್ಠಾಪಿತವಾಗಿದ್ದ ಗಣಪತಿಯಲ್ಲ. ಒಂದು ಕುಟುಂಬದ ಮನೆಯಲ್ಲೇ ಆರಂಭವಾದ ಮನೆತನದ ಗಣಪತಿ. ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾಯಿತು. ಒಬ್ಬರು ತಮ್ಮ ಸಂಬಂಧಿಕರಿಗೆ ಹೇಳಿದರು. ಅವರು ಮತ್ತೊಬ್ಬರಿಗೆ ಹೇಳಿದರು. ಛಬ್ಬಿಗೆ ಹೋಗಿ ಗಣಪತಿ ದರ್ಶನ ಮಾಡಿದರೆ ಹರಕೆ ಈಡೇರುತ್ತದೆ ಎಂಬ ನಂಬಿಕೆ ಹರಡಿತು. ಹೀಗೆ ಮನೆಯ ಹಬ್ಬ ಕ್ರಮೇಣ ಸಾರ್ವಜನಿಕ ಭಕ್ತಿಯ ಉತ್ಸವವಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ