ನಾವು ಚೀನಾ ಪ್ರವಾಸಕ್ಕೆ ಹೋದಾಗ ಕೆಲವು ಟ್ರಾವೆಲ್ಸ್ ‌ನವರು ಚೀನಾದಲ್ಲಿ ಮಧ್ಯಾಹ್ನದ ಊಟ ನೀಡಲಾಗುವುದಿಲ್ಲ, ಅದನ್ನು ನೀವೇ ಅರೇಂಜ್‌ ಮಾಡಿಕೊಳ್ಳಬೇಕೆಂದರು. ಬೇರೆ ದೇಶಗಳಲ್ಲಿ ಅಂದರೆ ಯು.ಎಸ್‌.ಎ., ದುಬೈ ಇಂತೆಡೆಗಳೆಲ್ಲಾ ನಮ್ಮ ಊಟಕ್ಕೆ ಕೊರತೆ ಇಲ್ಲ ಬೇಕಾದಷ್ಟು ಭಾರತೀಯ ರೆಸ್ಟೋರೆಂಟ್‌ ಗಳಿವೆ. ಆದರೆ ಚೀನಾದಲ್ಲಿ ಊಟ ಕಷ್ಟ ಎಂದು ಎಲ್ಲರೂ ಹೇಳುತ್ತಿದ್ದರು. ಜೊತೆಗೆ ಅಲ್ಲಿ ಯಾವುದಕ್ಕೆ ಏನು ಹಾಕಿರುತ್ತಾರೋ ಗೊತ್ತಾಗುವುದಿಲ್ಲ, ಅವರು ಜಿರಲೇನೂ ತಿಂತಾರೆ ಎನ್ನುವ ಭಾವನೆ ನಮ್ಮವರದು, ಹೀಗಾಗಿ ಅಲ್ಲಿ ನಾವು ಊಟ ಹುಡುಕಿಕೊಂಡು ಹೇಗೆ ಹೋಗುವುದೆನ್ನುವ ಸಮಸ್ಯೆ ಇತ್ತು.

ಆದ್ದರಿಂದ ನಾವು ಮಧ್ಯಾಹ್ನದ ಊಟ ಕೊಡುವ ಕಂಪನಿಯನ್ನೇ ಆರಿಸಿಕೊಂಡೆವು. ಅಲ್ಲೂ ಸಹ ಅವರ ಪ್ರಕಾರ ಮಧ್ಯಾಹ್ನ ಚೈನೀಸ್‌ ರೆಸ್ಟೋರೆಂಟ್‌ ನಲ್ಲೇ ವೆಜ್‌ ಊಟ, ಒಂದು ರೀತಿಯಲ್ಲಿ ಸಮಾಧಾನವಾಯಿತು. ಸಸ್ಯಾಹಾರ ಏನು ಕೊಟ್ಟರೂ ಪರವಾಗಿಲ್ಲ ಎಂದುಕೊಂಡೆ. ಹಾಗೆಯೇ ಅವರ ಆಹಾರ ಹೇಗಿರುತ್ತದೆ ನೋಡಬಹುದೆನ್ನುವ ಕುತೂಹಲ. ನಾವು ಹೋಗುತ್ತಿದ್ದ ಭಾರತೀಯ ರೆಸ್ಟೋರೆಂಟ್‌ ಗಳು ಚಿಕ್ಕವು. ಊಟವೇನೋ ಚೆನ್ನಾಗಿರುತ್ತಿತ್ತು ಆದರೆ ಕೂರಲು, ಬಡಿಸಿಕೊಂಡು ಬರಲು ಸ್ವಲ್ಪ ಇಕ್ಕಟ್ಟಿರುತ್ತಿತ್ತು. ಅದರಲ್ಲೂ ಹಾಂಗ್‌ ಕಾಂಗ್‌ ನಲ್ಲಂತೂ ವಿಪರೀತ ಇಕ್ಕಟ್ಟು. ಚೈನಾದಲ್ಲಿ ಪರವಾಗಿಲ್ಲವೆನ್ನಬಹುದು, ಆದರೆ ಚೀನೀ ರೆಸ್ಟೋರೆಂಟ್‌ ಗಳಂತೂ ಬಹಳ ಚೆನ್ನಾಗಿದ್ದು, ಆಕರ್ಷಕವಾಗಿ ರೂಪಿಸಲಾಗಿತ್ತು. ಒಂದಕ್ಕಿಂತ ಒಂದು ವೈಭವೋಪೇತವಾಗಿದ್ದವೆನ್ನಬಹುದು, ವಿಶಾಲವಾಗಿ ಅಲಂಕೃತವಾಗಿದ್ದವು.

ಮಧ್ಯಾಹ್ನ ಚೀನೀಯರ ವೆಜ್‌ ಊಟದ ಬಗ್ಗೆ ನಾವು ಹೊರಡುವ ಮುಂಚೆ ಹೋಗಿ ಬಂದವರೊಬ್ಬರು ಹೇಳಿದ್ದು. ಅವರು ಬಹಳಷ್ಟು ತರಹದ ಭಕ್ಷ್ಯ ಬಡಿಸುತ್ತಾರೆ, ಆದರೆ ನಮಗೆ ಏನೂ ತಿನ್ನಲು ಆಗುವುದಿಲ್ಲ. ನೀವು ಸ್ವಲ್ಪ ಗೊಜ್ಜು ಅಥವಾ ಚಟ್ನಿಪುಡಿ ತೆಗೆದುಕೊಂಡು ಹೋಗಿ, ಅವರು ನೀಡುವ ಅನ್ನದ ಜೊತೆ ಕಲಸಿಕೊಂಡು ತಿನ್ನಬಹುದೆಂದರು. ಪ್ರವಾಸ ಎಂದ ಮೇಲೆ ಸ್ವಲ್ಪ ಕುರುಕಲು ತೆಗೆದುಕೊಳ್ಳುವುದು ಸರ್ವೇ ಸಾಮಾನ್ಯ, ಜೊತೆಗೆ ಉಪ್ಪಿನಕಾಯಿ, ಚಟ್ನಿಪುಡಿ ಸಹಾ ಇಟ್ಟುಕೊಂಡೆವು.

ಅವರ ಊಟದ ರೀತಿ ನನಗಂತೂ ಬಹಳ ಇಷ್ಟವಾಯಿತು. ದುಂಡನೆಯ ಟೇಬಲ್, ಮಧ್ಯದಲ್ಲೊಂದು ಗಾಜಿನ ಟೇಬಲ್ ಟಾಪ್‌ ಅದು ತಿರುಗುವಂತಹುದು. ಸುತ್ತಲೂ ಹತ್ತು ಜನ ಕೂರಬಹುದು. ಒಬ್ಬೊಬ್ಬರಿಗೆ ಒಂದು ಪುಟ್ಟ ತಟ್ಟೆ, ಒಂದು ಸೂಪ್‌ ಬೌಲ್‌, ಒಂದು ಟೀ ಕಪ್‌ ಮತ್ತು ಒಂದು ಲೋಟ ನೀರು ಅಥವಾ ಜ್ಯೂಸ್‌ ಯಾವುದಾದರೂ ಒಂದನ್ನು ಕೊಡುತ್ತಾರೆ. ಗಾಜಿನ ಟೇಬಲ್ ಟಾಪ್‌ ನ ಸುತ್ತಲೂ ತಟ್ಟೆಗಳಲ್ಲಿ ಒಂದಾದ ಮೇಲೆ ಒಂದು ಭಕ್ಷ್ಯಗಳನ್ನು ತಂದಿಡುತ್ತಿರುತ್ತಾರೆ.

chinadha-veg-meals-2

ಹಸಿರು ತರಕಾರಿ, ಉದ್ದವಾಗಿ ತುರಿದ ಕ್ಯಾರೆಟ್‌, ಕೋಸು, ಬೇಯಿಸಿದ ಎಳಸಾದ ಬೀನ್ಸ್, ಎಳಸಾದ ಸಿಪ್ಪೆಸಹಿತ ಬಟಾಣಿ, ಸೋಯಾ ಬೀನ್ಸ್ ನಿಂದ ತಯಾರಿಸಿದ ಟೋಫು, (ನೋಡಲು ನಮ್ಮ ನುಚ್ಚಿನುಂಡೆಯಂತಿರುತ್ತದೆ) ಹುರಿದು ಸ್ವಲ್ಪ ಮಸಾಲೆ ಹಾಕಿದ ಬದನೆಕಾಯಿ, ಹೂಕೋಸು ಮತ್ತು ಕ್ಯಾರೆಟ್‌, ಬೇಯಿಸಿದ ಜೋಳ, ಬೇಯಿಸಿದ ಬಟಾಣಿ, ಹುರಿದ ಗೋಡಂಬಿ, ಬೇಯಿಸಿದ ಹಸಿರು ಬ್ರೋಕ್ಲಿ, ನಂತರ ಫ್ರೈಡ್‌ ರೈಸ್‌, ಒಂದು ಕೆಟಲ್ ನಲ್ಲಿ ಸಕ್ಕರೆ ಮತ್ತು ಹಾಲಿಲ್ಲದ ತಿಳಿಯಾದ ಟೀ, ಎಷ್ಟು ಬೇಕಾದರೂ ಬಗ್ಗಿಸಿಕೊಂಡು ಕುಡಿಯಬಹುದು! ತಿನ್ನಲು ಮಾತ್ರ ಬಹಳ ಪುಟ್ಟ ತಟ್ಟೆ.

ಅಲ್ಲಿರುವುದನ್ನೇ ಎಲ್ಲರೂ ಒಬ್ಬರ ನಂತರ ಒಬ್ಬರು ಹಾಕಿಕೊಳ್ಳಬಹುದು. ಕೊನೆಗೊಂದು ಸಿಹಿ. ಮಧ್ಯದಲ್ಲಿ ಕ್ರೀಮ್ ಇರುವ ಕೇಕ್‌, ಸೂಪ್‌. ನಂತರ ಶುಭ್ರವಾಗಿ ಕತ್ತರಿಸಿದ ಕಲ್ಲಂಗಡಿ ಹಣ್ಣು. ಅದೂ ಸಹ ಹತ್ತು ಚೂರುಗಳು. ಒಂದೊಂದು ದಿನ ಒಂದೊಂದು ಹಣ್ಣು. ಮೊದಲ ದಿನ ಮೊದಲು ತೆಗೆದುಕೊಂಡವರು ಹೆಚ್ಚು ಚೂರುಗಳನ್ನು ಹಾಕಿಕೊಂಡಿದ್ದರಿಂದ ಕೊನೆಯವರಿಗೆ ಉಳಿಯಲೇ ಇಲ್ಲ. ಅವರು ಅಷ್ಟೇ ನೀಡುವುದು ಎಂದರು. ಮುಕ್ಕಾಲು ಮೂರುಪಾಲು ಎಲ್ಲ ತರಕಾರಿಗಳೂ ಉಪ್ಪು ಹಾಕಿ ಬೇಯಿಸಿದವುಗಳು. ಒಂದೆರಡು ಹಸಿಯದು. ವಿಧ ವಿಧದ ತರಕಾರಿಗಳು. ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಆಹಾರ. ಆದರೂ ನಮ್ಮವರಿಗೆ ಒಂದಷ್ಟು ಅನ್ನಕ್ಕೆ ಸಾರು ಹಾಕಿಕೊಂಡು ಕಲಸಿಕೊಳ್ಳದಿದ್ದರೆ ಎಲ್ಲಿ ತೃಪ್ತಿಯಾಗುತ್ತೆ?

ಅವರು ನೀಡಿದ ಯಾವ ಭಕ್ಷ್ಯಗಳಿಗೂ ಅತಿಯಾದ ಖಾರವಿರಲಿಲ್ಲ. ಸ್ವಲ್ಪ ಉಪ್ಪು, ಒಂದೆರಡಕ್ಕೆ ಮಾತ್ರ ಸ್ವಲ್ಪ ಮಸಾಲೆ ಅಂದರೆ ಸಾಸ್‌ ಹಾಕಿರಬಹುದೆನಿಸಿತು. ಎಲ್ಲವನ್ನೂ ಸ್ವಲ್ಪ ಸ್ವಲ್ಪ ರುಚಿ ನೋಡುವಷ್ಟರಲ್ಲಿ ಹೊಟ್ಟೆ ತುಂಬಿಯೇ ಹೋಯಿತು.

chinadha-veg-meals-3

ಕೊನೆಗೆ ಸೂಪ್‌ ಕುಡಿದು ಊಟಕ್ಕೆ ಮುಕ್ತಾಯ. ನಾವು ಮೊದಲು ಸೂಪ್‌ ಕುಡಿದರೆ ಅವರು ಕೊನೆಗೆ ನೀಡುತ್ತಿದ್ದರು. ಎಲ್ಲಾ ಸರಿ…. ತಿನ್ನುವ ತಟ್ಟೆಯೇಕೆ ಅಷ್ಟು ಚಿಕ್ಕದು? ಹಾಕಿಕೊಂಡದ್ದನ್ನು ತಿನ್ನದಿದ್ದರೆ ಬೇರೆ ಹಾಕಿಕೊಳ್ಳಲು ಸ್ಥಳವೇ ಇರುತ್ತಿರಲಿಲ್ಲ, ನಾವು ಕಾಫಿ ಕುಡಿಯುವ ಸಾಸರ್‌ ನ ಸೈಜಿನದು. ಕೊನೆಗೆ ತಡೆಯದೆ ನಮ್ಮ ಗೈಡನ್ನು ಆದೇಕೆ ಅಷ್ಟೊಂದು ಚಿಕ್ಕ ತಟ್ಟೆ? ಅದರಲ್ಲಿ ತಿನ್ನುವುದಾದರೂ ಹೇಗೆ ಎಂದು ಕೇಳಿದ್ದಕ್ಕೆ ಅವಳು, ಚೀನೀಯರು ಬಹಳ ಕಡಿಮೆ ತಿನ್ನುತ್ತಾರೆ, ಅವರು ತಮ್ಮ ದೇಹದ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಎಂದಳು. ಅದಂತೂ ನಿಜವಿರಬಹುದೆನಿಸಿತು.

ಏಕೆಂದರೆ ಅಲ್ಲಿ ನಾವು ನೋಡಿದವರೆಲ್ಲಾ ಸಪೂರವಾಗಿದ್ದರು. ಡೊಳ್ಳು ಹೊಟ್ಟೆಯವರನ್ನು ಕಾಣಲೇ ಇಲ್ಲ. ಅಲ್ಲಿಯ ಪೊಲೀಸರಂತೂ ನಿಜಕ್ಕೂ ಹದಿಹರೆಯದ ಹುಡುಗರು, ಅವರ ಹೊಟ್ಟೆಯಂತೂ ತೆಳ್ಳಗಿತ್ತು. ನಮ್ಮವರಂತೆ ದಪ್ಪ ಹೊಟ್ಟೆಯವರು ಯಾರೂ ಇರಲಿಲ್ಲ.

ನಮ್ಮಲ್ಲಿನ ಪೊಲೀಸರಿಗೆ ಕಳ್ಳನನ್ನು ಓಡಿಸಿಕೊಂಡು ಹೋಗಲು ಆಗುವುದೇ ಇಲ್ಲ ಅಷ್ಟು ದಪ್ಪಗಿರುತ್ತಾರೆ ಎಂದು ನಮ್ಮೊಡನೆ ಬಂದವರೊಬ್ಬರು ನಗೆಚಟಾಕಿ ಹಾರಿಸಿದರು. ಅವರು ಹೇಳಿದ್ದರಲ್ಲೂ ಹುರುಳಿರಬಹುದೆನಿಸಿತು. ಯಾವುದಾದರೂ ದೇಶದ ಸಂಸ್ಕೃತಿ ಅರಿಯಬೇಕೆಂದರೆ ಅವರ ಆಹಾರ ಸೇವನೆಯ ಬಗ್ಗೆಯೂ ತಿಳಿದುಕೊಳ್ಳುವುದು ಅಗತ್ಯ, ಒಂದಕ್ಕೊಂದು ಬೆರೆತಿರುತ್ತದೆ. ನಾವು ಅಲ್ಲಿ ಚೀನೀಯರ ಊಟ ತಿನ್ನದಿದ್ದರೆ ಅವರ ಊಟದ ಶೈಲಿ ಗೊತ್ತಾಗುತ್ತಲೇ ಇರಲಿಲ್ಲ. ನನಗಂತೂ ನಿಜಕ್ಕೂ ಆರೋಗ್ಯಕರ ಆಹಾರವೆಂದೆನಿಸಿತು. ಆದರೂ ದಿನಾ ಅದೇ ತಿನ್ನಲು ಬೇಸರ ಆಗಬಹುದೇನೋ? ಆದರೆ ಬಹಳಷ್ಟು ನಮ್ಮ ಸಹಪ್ರವಾಸಿಗರು ನಮಗೆ ಹೊಟ್ಟೆ ತುಂಬಲೇ ಇಲ್ಲ ಎಂದು ಮೂಗು ಮುರಿದರು.

ಮಂಜುಳಾ ರಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ