ಸಾಗರದಲ್ಲಿ ಪ್ರಪ್ರಥಮ ಡೊಳ್ಳು ತಂಡ ಕಟ್ಟಿ ಕುಣಿದ ಹೆಗ್ಗಳಿಕೆ ವಿದೇಶದಲ್ಲೂ ಇವರ ಸದ್ದು ಅಪಾರ! ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಚೂಡಾಮಣಿ ರಾಮಚಂದ್ರರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ.....?
ಬದಲಾಗಿರುವ ಕಾಲಘಟ್ಟದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಮಲೆನಾಡಿನಲ್ಲಿ ಡೊಳ್ಳು ಕುಣಿತ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದನ್ನು ಕಲಿತು, ಸೊಂಟಕ್ಕೆ ಡೊಳ್ಳು ಕಟ್ಟಿ ಕುಣಿಯುವುದನ್ನು ಕಲಿತ ಹೆಗ್ಗಳಿಕೆ ಸಾಗರದ ಜಾನಪದ ಕಲಾವಿದೆ ಚೂಡಾಮಣಿ ರಾಮಚಂದ್ರರಿಗೆ ಸಲ್ಲುತ್ತದೆ.
ಪ್ರಪ್ರಥಮ ಮಹಿಳಾ ಡೊಳ್ಳು ತಂಡ ಕಟ್ಟಿ ದೇಶದ ಹಲವು ರಾಜ್ಯ, ವಿದೇಶಗಳಲ್ಲೂ ಡೊಳ್ಳಿನ ಝೇಂಕಾರವನ್ನು ಪಸರಿಸಿದ ಹೆಮ್ಮೆ ಚೂಡಾಮಣಿಯವರದು.
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಹುಚ್ಚರಾಯಪ್ಪ ಮತ್ತು ಸರಸ್ವತಿ ಬಾಯಿ ದಂಪತಿಯರ ಪುತ್ರಿಯಾಗಿ 1947ರಲ್ಲಿ ಜನಿಸಿದ ಇವರು, ಎಸ್.ಎಸ್.ಎಲ್.ಸಿ ಹಿಂದಿ ಪಂಡಿತ್ ಪರೀಕ್ಷೆ, ಸಂಸ್ಕೃತ ಪರೀಕ್ಷೆ, ಶೀಘ್ರಲಿಪಿ, ಸಂಗೀತ, ವೀಣಾವಾದನ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ಇವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ, ಜಾನಪದ ಕಲೆಗಳು ಅಂದರೆ ಕೋಲಾಟ, ಡೊಳ್ಳು ಕುಣಿತ, ಜಾನಪದ ಹಾಡುಗಳು, ವೀರಗಾಸೆ, ಲಂಬಾಣಿ ನೃತ್ಯ ಹಾಗೂ ಭಜನೆ ಇವುಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ವಿವಾಹದ ನಂತರ ಸಾಗರದ ನಿವಾಸಿಯಾಗಿದ್ದು, ಎಲ್ಲ ಚಟುವಟಿಕೆಗಳಲ್ಲಿ ಇವತ್ತಿಗೂ ಸಕ್ರಿಯರಾಗಿದ್ದಾರೆ. ಕುಟುಂಬದ ಎಲ್ಲರ ಸಹಕಾರ, ಬೆಂಬಲ ಇವರಿಗಿದೆ.
ಸಾಗರದ ಮಹಿಳಾ ಸಮಾಜ, ಕನ್ನಡ ಸಾಹಿತ್ಯ ಪರಿಷತ್ತು, ರೋಟರಿ ಇನ್ನರ್ ವೀಲ್ ಕ್ಲಬ್ ನಲ್ಲಿ ನಾಲ್ಕು ದಶಕಕ್ಕೂ ಹೆಚ್ಚಿನ ಕಾಲದಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಈ ಸಂಘಗಳ ಸದಸ್ಯರಾಗಿ, ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮಹಿಳಾ ಪರ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿದ್ದು, ಬಡ ಹೆಣ್ಣುಮಕ್ಕಳಿಗೆ ಸಾಧ್ಯವಾದಷ್ಟು ಅನುಕೂಲಗಳನ್ನು ಕಲ್ಪಿಸಿಕೊಡುವುದಕ್ಕೆ ಪೂರಕವಾಗಿ ಅಗತ್ಯ ತರಬೇತಿಗಳ್ನು ನೀಡಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಭಜನಾ ಮಂಡಳಿ, ಜಾನಪದ ಹಾಡುಗಳ ತಂಡ, ಕೋಲಾಟ ತಂಡಗಳ ರಚನೆ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ವೀರಗಾಸೆ ಹಾಗೂ ಲಂಬಾಣಿ ನೃತ್ಯ ಕಲಿತು ಹಲವೆಡೆ ಪ್ರದರ್ಶನ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಹಲವಾರು ತರಬೇತಿ ಕಾರ್ಯಕ್ರಮಗಳು, ಬಡ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳನ್ನು ನಡೆಸುವಿಕೆ, ಸುಮಾರು 30 ವರ್ಷಗಳಿಂದ ಕೇಂದ್ರ ಮಹಿಳಾ ಅಭಿವೃದ್ಧಿ ನಿಗಮದಿಂದ ಧನ ಸಹಾಯ ಪಡೆದು ಈ ಶಿಶುಪಾಲನಾ ಕೇಂದ್ರವನ್ನು ನಡೆಸಲಾಗುತ್ತಿದೆ.
ಸ್ವಸಹಾಯ ಮಹಿಳಾ ಮಂಡಳಿ
ಸ್ನೇಹ ಸಾಗರ ಸ್ವಸಹಾಯ ಮಹಿಳಾ ಮಂಡಳಿಯನ್ನು ಸಹಕಾರ ಶಿಕ್ಷಣದ ಅಡಿಯಲ್ಲಿ ಆರಂಭಿಸಿ, ಇದು ಶಿವಮೊಗ್ಗ ಜಿಲ್ಲೆಯ ಪ್ರಥಮ ಸ್ವಸಹಾಯ ಮಹಿಳಾ ಮಂಡಳಿಯಾಗಿದೆ. ಸುಮಾರು 25 ವರ್ಷಗಳಿಂದಲೂ ಈ ಸಂಸ್ಥೆಯ ಅಧ್ಯಕ್ಷೆಯಾಗಿ ಇವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ವಿವಿಧ ರೀತಿಯ 30ಕ್ಕೂ ಹೆಚ್ಚು ತರಬೇತಿಗಳನ್ನು ನೀಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಲು ನೆರವಾಗಿದ್ದಾರೆ.
ಮಹಿಳಾ ನಾಟಕೋತ್ಸವ, ಜಾನಪದ ಹಾಡು ಉತ್ಸವ, ಕೋಲಾಟ ಮೇಳ, ಭಜನೆ, ಮಹಿಳಾ ಡೊಳ್ಳು ಮೇಳ, ಮಹಿಳಾ ಸಾಹಿತಿಗಳ ಸಮ್ಮೇಳನ, ವಚನ ಸಾಹಿತ್ಯ ಸಮ್ಮೇಳನ, ಮಹಿಳಾ ಕಾರ್ಯವಾಗಲಿ ಹೀಗೆ ಹಲವಾರು ಪ್ರದರ್ಶನಗಳನ್ನು ಪ್ರಪ್ರಥಮವಾಗಿ ಸಾಗರದಲ್ಲಿ ಏರ್ಪಡಿಸಿ ವಿಶೇಷ ಯಶಸ್ಸನ್ನು ಪಡೆದಿದ್ದಾರೆ. ಪ್ರತಿ ವರ್ಷ ಮಹಿಳಾ ಜಾನಪದ ಕಲಾವಿದರನ್ನು ಗುರುತಿಸಿ ಸನ್ಮಾನಿಸಿ ಕಲೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಇವರ ಕಲಾ ಪ್ರೇಮಕ್ಕೆ ಸಾಕ್ಷಿ.





