ದೈನಂದಿನ ಯಾಂತ್ರಿಕ ಜೀವನದಿಂದ ಬೇಸತ್ತು ಹೋಗಿರುವ ನಮಗೆ ಇಂಥ ಹಾಸ್ಯ ಚಟಾಕಿಗಳು ಬಹಳಷ್ಟು ಮನರಂಜನೆ ನೀಡುತ್ತವೆ. ಇವುಗಳನ್ನು ವಿವರವಾಗಿ ಗಮನಿಸೋಣವೇ……..?

ಪತ್ನಿ ಬೇಸಿಗೆಯಲ್ಲಿ ಮಕ್ಕಳನ್ನು ತವರಿಗೆ ಕರೆದುಕೊಂಡು ಹೋಗಿಬಂದಳು. ಮನೆಗೆ ಬಂದು ನೋಡುತ್ತಾಳೆ…. ಇಡೀ ಮನೆ ಥಳಥಳ ಹೊಳೆಯುತ್ತಿದೆ. ಅಡುಗೆ ಮನೆಯ ಪಾತ್ರೆ ಪಡಗ ನೀಟಾಗಿ ಕೂತಿವೆ… ಬಟ್ಟೆಗಳು ಮಡಿಸಲ್ಪಟ್ಟು ವಾರ್ಡ್‌ರೋಬ್‌ ಸೇರಿವೆ… ಒಟ್ಟಾರೆ ಮನೆಯಲ್ಲಿ ಹುಡುಕಿದರೂ ಕಸ ಕೊಳೆ ಇಲ್ಲ…… ತನ್ನ ಹೆಗಲಿನ ಮೇಲೆ ನೀರಿನ ಹನಿಗಳು ಬಿದ್ದದ್ದು ಗಮನಿಸಿ ಪತಿ ಮಹಾಶಯ ತಿರುಗಿ ಪತ್ನಿಗೆ ಹೇಳಿದ, “ಏನಾಯ್ತು? ಪ್ರಯಾಣ ಸುಖಕರವಾಗಿತ್ತು ತಾನೇ? ನಿನ್ನ ತವರಿನಲ್ಲಿ ಎಲ್ಲರೂ ಕ್ಷೇಮ ತಾನೇ?”

ಪತ್ನಿ ಮುಗುಳ್ನಗುತ್ತಾ ಹೇಳಿದಳು, “ಹಾಗೇನಿಲ್ಲ ಬಿಡಿ. ಎಲ್ಲಾ ಚೆನ್ನಾಗಿದ್ದಾರೆ. ನನ್ನ ಕಂಗಳಿಂದ ಉದುರಿದ್ದು ಕಣ್ಣೀರಲ್ಲ…. ಆನಂದಬಾಷ್ಪ! ನಿಮಗೆ ಇಷ್ಟೆಲ್ಲ ಮನೆಗೆಲಸ ಬರುತ್ತೆ ಅಂತ ಗೊತ್ತಿಲ್ಲದೆ ರಂಗಿ, ನಿಂಗಿ ಅಂತ ಕೆಲಸದವರ ಜೊತೆ ಹೋರಾಡ್ತಿದ್ದೆ. ಇನ್ನು ಮುಂದೆ ಯಾವ ರಂಗಿಯೂ ಬೇಡ, ನಿಂಗಿಯೂ ಬೇಡ!  ಎಲ್ಲಾ ಕೆಲಸ ನೀವೇ ಮಾಡಿ…..”

ನೀತಿ : ಹೆಂಡತಿಯನ್ನು ಇಂಪ್ರೆಸ್‌ ಮಾಡಲು ಆಕೆ ಇಲ್ಲದಾಗ ಹೆಚ್ಚಿನ ಮನೆಗೆಲಸ ಮಾಡೀರಿ, ಜೋಕೆ!

ಜಡ್ಜ್ : ನಿಮ್ಮ ವಿಚ್ಛೇದನಕ್ಕೆ ನೆಲೆಯಾದರೂ ಏನು?

ಮಾಧವಿ : ನೆಲೆ ಏನು ಬಂತು? ಕೋರಮಂಗ್ಲಾ ಬಳಿ ಇರುವ ದೊಡ್ಡ ಬಂಗಲೆ, ಅದಕ್ಕೆ ಸಂಬಂಧಿಸಿದ ನೆಲದ್ದೇ ಈಗ ತಕರಾರು….

ಜಡ್ಜ್ : ಅಲ್ಲ….. ಅಲ್ಲಮ್ಮ…. ನಾನು ಕೇಳಿದ್ದು ನಿಮ್ಮ ಡೈವೋರ್ಸ್‌ಗೆ ಗ್ರೌಂಡ್ಸ್ ಏನು ಅಂತ?

ಮಾಧವಿ : ಅದೇ ನಾನು ಹೇಳಿದ್ದು, ಗ್ರೌಂಡು ಬಂಗಲೆಯ ಜೊತೆಯಲ್ಲೇ ಇದೆ, ತುಂಬಾ ದೊಡ್ಡದೇನಲ್ಲ ಅದರದೇ ತಕರಾರು.

ಜಡ್ಜ್ : ಅಯ್ಯೋ… ನಿನಗೆ ಅರ್ಥ ಆಗ್ತಿಲ್ಲಮ್ಮ… ನಾನು ವಿಚ್ಛೇದನಕ್ಕೆ ಆಧಾರ ಏನು ಅಂತ ಕೇಳಿದ್ದು?

ಮಾಧವಿ : ಆಧಾರ್‌ ಬಗ್ಗೆ ಕೇಳಿದ್ರಾ? ಅದ್ರಲ್ಲಿ ನನ್ನ ಫೋಟೋ ಚೆನ್ನಾಗಿ ಬರಲಿಲ್ಲ ಅಂತ ಎಲ್ಲೂ ತೋರಿಸೋಲ್ಲ ಬಿಡಿ.

ಜಡ್ಜ್ : ಅದಲ್ಲಾ…..! ವಿಚ್ಛೇದನಕ್ಕೆ ತಳಹದಿ ಏನು ಅಂತ?

ಮಾಧವಿ : ಆ ಬಂಗಲೆಗೆ ತಳಹದಿ ಭದ್ರವಾಗಿದೆ, ಆ ಬಗ್ಗೆ ಯೋಚನೆ ಇಲ್ಲ ಬಿಡಿ.

ಜಡ್ಜ್ : ಅಯ್ಯಯ್ಯೋ! ವಿಷಯ ಅದಲ್ಲ… ನೀವು ಡೈವೋರ್ಸ್‌ ತಗೊಳ್ತಿರೋದು ಯಾಕೆ ಅಂತ?

ಮಾಧವಿ : ಡೈವೋರ್ಸಾ…? ಅದು ನನಗೆ ಬೇಡ, ನನ್ನ ಗಂಡಂಗೆ ಬೇಕಂತೆ.

ಜಡ್ಜ್ : ರೀ ಸ್ವಾಮಿ, ಯಾಕ್ರಿ ಬೇಕು ನಿಮಗೆ ಡೈವೋರ್ಸ್‌?

ಮದನ್‌ : ಮಹಾಸ್ವಾಮಿ, ನಿಮ್ಮ ಒಂದೊಂದು ಪ್ರಶ್ನೆಗೂ ಹಲವು ಉತ್ತರ ಬಂತಲ್ಲವೇ, 15 ವರ್ಷದಿಂದ ನಾನು ಎಷ್ಟು ಪ್ರಶ್ನೆ ಕೇಳಿರಬಹುದು ಅಂತ ಲೆಕ್ಕ ಹಾಕಿ…..

ಜಡ್ಜ್ ಸಾಹೇಬರ ಕಣ್ಣಲ್ಲಿ ಗಳಗಳ ನೀರಿಳಿದಿತ್ತು……

ಪತಿ : ಚಿಕನ್‌ ಕುರ್ಮಾ ಚೆನ್ನಾಗಿದೆ…. ಆದರೆ ಇದರ ರುಚಿಯಲ್ಲಿ ಏನೋ ವ್ಯತ್ಯಾಸ ಆಗಿದೆಯಲ್ಲ….?

ಪತ್ನಿ : ಇರಬಹುದು, ಅದನ್ನು ತಯಾರಿಸುವಾಗ ಕೋಳಿ ಕಾಲು ಸೀದುಹೋಯಿತು. ಪಾಪ ಅಂತ ಅದರ ಕಾಲಿಗೆ ಬೋರೋಪ್ಲಸ್‌ ಹಚ್ಚಿದೆ…..!

ಹುಡುಗಿ : ಹಾಯ್‌

ಹುಡುಗ : ಹೋ

ಹುಡುಗಿ : ಹೌ ಆರ್‌ ಯೂ?

ಹುಡುಗ : ವೆರಿ ಫೈನ್‌

ಹುಡುಗಿ : ವೇರ್‌ ಆರ್‌ ಯೂ ಫ್ರಂ?

ಹುಡುಗ : ಬ್ಯಾಂಗಲೂರ್‌….

ಹುಡುಗಿ : ನೀವೆಷ್ಟು ಓದಿದ್ದೀರಿ?

ಹುಡುಗ : ನಿಮ್ಮಷ್ಟೇ ಓದಿದ್ದೀನಿ.

ಹುಡುಗಿ : ನನ್ನಷ್ಟೇ….? ಏನ್ರಿ ಹಾಗಂದ್ರೆ?

ಹುಡುಗ : ಅಷ್ಟೇ…. ಇನ್ನೇನು ಮತ್ತೆ? ನೀವೆಲ್ಲಿಗೆ ನಿಲ್ಲಿಸಿದ್ರೋ ನನಗೂ ಅಷ್ಟೇ ಇಂಗ್ಲಿಷ್‌ ಬರೋದು… ಅಲ್ಲಿಂದ ಸೀದಾ ಕನ್ನಡದಲ್ಲೇ ಮಾತನಾಡೋದು!

ಒಂದು ಸ್ಪರ್ಧೆ ನಡೆಯುತ್ತಿತ್ತು. ಅಲ್ಲಿಗೆ ಬಂದಿದ್ದ ಗಂಡಂದಿರಿಗೆಲ್ಲ, `ಸಂತೋಷವನ್ನು 3 ಶಬ್ದಗಳಲ್ಲಿ ವ್ಯಾಖ್ಯಾನಿಸಿ’ ಎಂದು ಕೇಳಲಾಯಿತು.

ಎಲ್ಲರೂ ಬಾಯಿಗೆ ಬಂದದ್ದು ಬರೆದರು.

ಗುಂಡನ ಉತ್ತರ, `ಹೆಂಡತಿ ತವರಿಗೆ ಹೋದಳು!’ ಎಂದಿತ್ತು.

ಇತರ ಎಲ್ಲಾ ಉತ್ತರಗಳನ್ನೂ ತಿರಸ್ಕರಿಸಿ, ಗುಂಡನ ಉತ್ತರಕ್ಕೆ ಪ್ರಥಮ ಬಹುಮಾನದ ಜೊತೆ ದ್ವಿತೀಯ ಹಾಗೂ ತೃತೀಯವನ್ನೂ ಸೇರಿಸಿ 5 +3 +2 =10 ಸಾವಿರ ರೂ. ನೀಡಿ ಕಳುಹಿಸಿದರು!

ಗುಂಡ ಮನೆಗೆ ಬಂದು ಬಾಗಿಲು ಬಡೀತಾನೆ, ಗುಂಡಿ ಬಾಗಿಲು ತೆರೆದರೆ ಕೇಳಿ!

ಎಂದಿನಂತೆ ಗಂಡಹೆಂಡಿರ ಮಧ್ಯೆ ಜಗಳ ನಡೆದಿತ್ತು.

ಪತ್ನಿ : ನಾನು ಇಡೀ ಮನೆ ಸಂಭಾಳಿಸುತ್ತೇನೆ! ಅಡುಗೆ ಮನೆ, ಹೊರಗಿನ ಕೆಲಸ, ಮನೆಗೆಲಸ, ಮಕ್ಕಳ ಆಟಪಾಠ…. ಮತ್ತೆ ತಾವೇನು ಮಾಡ್ತೀರಿ?

ಪತಿ : ನಾನು ನನ್ನನ್ನು ಹೇಗೋ ಸಂಭಾಳಿಸುತ್ತೇನೆ…. ನಿನ್ನ ಮತ್ತೇರಿದ ಕಂಗಳನ್ನು ದಿಟ್ಟಿಸುತ್ತಲೇ….

ಪತ್ನಿ : ಛೀ…. ಹೋಗೀಪ್ಪ… ಈಗಲೂ ನನ್ನ ಸೌಂದರ್ಯ ವರ್ಣಿಸ್ತೀರ… ರಾತ್ರಿ ಅಡುಗೆಗೆ ನಿಮ್ಮ ನೆಚ್ಚಿನ ಐಟಂ ಏನು ಮಾಡಲಿ?

ಇಂದಿನ ಸುಭಾಷಿತ : ಊಟ ಮಾಡುವಾಗ ಗಂಡ ಉಪ್ಪಿನಕಾಯಿ ಬೇಕೆಂದು ಕೇಳಿದರೆ, ಪಲ್ಯದಲ್ಲಿ ದಂ ಇಲ್ಲ ಅಂತ ಅರ್ಥ. ಅದನ್ನು ಆತನಿಗೆ ಹೇಳಲಿಕ್ಕೂ  ದಂ ಇಲ್ಲ ಅಂತ….

ಗುಂಡ ಹೊಸದಾಗಿ ಮದುವೆಯಾಗಿದ್ದ. ಹೆಂಡತಿ ಗುಂಡಿಯನ್ನು ಕರೆದುಕೊಂಡು ಸಂಜೆ ಬೀಚ್‌ ಕಡೆ ಕೈಕೈ ಹಿಡಿದುಕೊಂಡು ವಾಕಿಂಗ್‌ ಹೊರಟಿದ್ದ.

ಅಷ್ಟರಲ್ಲಿ ತುಂಟ ಹುಡುಗನೊಬ್ಬ ಅಲ್ಲಿಗೆ ಬಂದು, “ನಿನ್ನೆ ಸ್ಕರ್ಟ್‌ ಹಾಕ್ಕೊಂಡು ನಿಮ್ಮ ಜೊತೆ ಬಂದಿದ್ರಲ್ಲ ಆಂಟಿ, ಅವರು ಇವತ್ತು ಬರ್ಲಿಲ್ಲವೇ ಅಂಕಲ್?” ಅಂತ ಕೇಳಿ ಮಂಗಮಾಯ ಆಗಿಬಿಡುವುದೇ?

ಒಂದು ವಾರದಿಂದ ಅನ್ನ-ನೀರಿಲ್ಲದೆ ಗುಂಡ ಅದೇ ತುಂಟ ಹುಡುಗನಿಗಾಗಿ ಆ ಬೀಚ್‌ನಲ್ಲಿ ಹುಡುಕಾಡುತ್ತಿದ್ದಾನಂತೆ…..!

ಮಹೇಶ : ನಿನ್ನ ಹೆಂಡತಿ ಜೊತೆ ಜಗಳ ಆಗಿತ್ತಲ್ಲ… ಸರಿಹೋಯ್ತೆ?

ಸುರೇಶ : ಮಂಡಿ ಊರಿ ನಡೆದು ಬಂದಳು ನನ್ನ ಬಳಿಗೆ, ಗೊತ್ತಾಯ್ತಾ…? ಮಂಡಿ ಊರಿಕೊಂಡು.

ಮಹೇಶ : ಇದೇನು ಹೇಳ್ತಿದ್ದೀಯಾ ನೀನು?

ಸುರೇಶ : ಅಷ್ಟಲ್ಲದೆ ಇನ್ನೇನು?

ಮಹೇಶ : ಹಾಗೆ ಬಂದು ಏನು ಹೇಳಿದಳು?

ಸುರೇಶ : ಏನಂದ್ಲು ಗೊತ್ತಾ…. ಮಂಚದ ಕೆಳಗಿಂದ ಹೊರಗೆ ಬನ್ನಿ, ಈಗ ಇನ್ನು ಹೊಡೆಯೋಲ್ಲ!

ವಯೋವೃದ್ಧ ರಾಮರಾಯರು 100 ಕಿ.ಮೀ. ವೇಗದಲ್ಲಿ ಕಾರು ಓಡಿಸುತ್ತಿದ್ದರು. ರಿಯರ್‌ ವ್ಯೂ ಕನ್ನಡಿಯಲ್ಲಿ ಗಮನಿಸಿದಾಗ ಪೊಲೀಸ್‌ ಜೀಪೊಂದು ತಮ್ಮ ಬೆನ್ನಟ್ಟುತ್ತಿರುವುದು ಗೊತ್ತಾಯಿತು. ತಕ್ಷಣ ಕಾರಿನ ಸ್ಪೀಡ್‌ ಹೆಚ್ಚಿಸಿ 140, 150, 170 ಕಿ.ಮೀ. ತಲುಪಿದರು.

ತಮ್ಮ ವಯಸ್ಸಿಗೂ ತಾವು ಮಾಡುತ್ತಿರುವ ಅಡಾವುಡಿ ಕೆಲಸಕ್ಕೂ ಸರಿ ಇಲ್ಲ ಅನಿಸಿ ರಸ್ತೆ ಬದಿ ಕಾರು ನಿಲ್ಲಿಸಿ ಪೊಲೀಸರ ಕ್ಷಮಾಪಣೆ ಕೋರಲು ಸಿದ್ಧರಾದರು.

ಜೀಪ್‌ ನಿಲ್ಲಿಸಿದ ಪೊಲೀಸ್‌ ಇನ್‌ಸ್ಪೆಕ್ಟರ್‌ ಇವರ ಬಳಿ ಬಂದು, “ಈ ಸ್ಪೀಡ್‌ನಲ್ಲಿ ಕಾರು ಓಡಿಸುತ್ತಿದ್ದೀರಲ್ಲ… ಇದುವರೆಗಿನ ಹಳೆ ಕಾರಣ ಬಿಟ್ಟು ಏನಾದರೂ ನಂಬುವಂಥ ಹೊಸ ಸಬೂಬು ಹೇಳಿದರೆ ಮಾತ್ರ ನಿಮ್ಮನ್ನು ಬಿಡ್ತೀನಿ,” ಎಂದ.

“4 ದಿನಗಳ ಹಿಂದೆ ನನ್ನ ಹೆಂಡತಿ ಒಬ್ಬ ಪೊಲೀಸ್‌ ಎಸ್‌.ಐ. ಜೊತೆ ಓಡಿಹೋದಳು… ನೀನೇನಾದರೂ ಅವಳನ್ನು ಹುಡುಕಿ ತಂದು ನನಗೆ ಒಪ್ಪಿಸುತ್ತಿದ್ದೀಯೇನೋ ಅಂದುಕೊಂಡೆ,” ಎಂದಾಗ ಆತ ಗಂಭೀರವಾಗಿ, “ಹ್ಯಾವ್ ಎ ಗುಡ್‌ ಡೇ ಸರ್‌,” ಎಂದು ಹೊರಟೇಬಿಟ್ಟ.

ಟೀಚರ್‌ : ಗುಂಡ, ಈ ಸಲ ಬೇಸಿಗೆ ರಜೆಯಲ್ಲಿ ಎಲ್ಲಿಗೆ ಹೋಗಿದ್ದಿರಿ?

ಗುಂಡ : ತಿರುವನಂತಪುರಕ್ಕೆ ಟೀಚರ್‌…..

ಟೀಚರ್‌ : ಎಲ್ಲಿ…. ಅದರ ಸ್ಪೆಲ್ಲಿಂಗ್‌ ಹೇಳು ನೋಡೋಣ.

ಗುಂಡ : ಬಡ್ಕೊಂಡೆ ನಮ್ಮಪ್ಪಂಗೆ…ಗೋವಾ ಹೋಗೋಣಾಂತ….!

ನಮ್ಮ ಭಾರತೀಯ ಕುಟುಂಬಗಳಲ್ಲಿ ಎಲ್ಲಾ ಸದಸ್ಯರೂ ಪರಸ್ಪರ ತುಂಬಾ ಸೌಹಾರ್ದಯುತವಾಗಿ ಇರ್ತಾರೆ ಅಂತೀರಲ್ಲ, ಅದು ಹೇಗೆ?

ರೋಗಿಗೆ ಅಂತ ಮಾಡಿದ ಕಿಚಡಿಯನ್ನು ಮನೆಮಂದಿಯೆಲ್ಲ ತೆಪ್ಪಗೆ ತಿಂತಾರಲ್ಲ…. ಇದಕ್ಕಿಂತ ಬೇಕೇ…?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ