ಧರ್ಮದ ಕಪಿಮುಷ್ಟಿಯಲ್ಲಿ ಕಾಶಿಯ ವಿಧವೆಯರು
ನರೇಂದ್ರ ಮೋದಿ ಸರ್ಕಾರವಂತೂ ಗಂಗಾ ನದಿಯ ಶುದ್ಧೀಕರಣದ ಯೋಜನೆ ಕುರಿತು ಜೋರು ಜೋರಾಗಿ ಭಾಷಣ ಬಿಗಿಯುತ್ತಿದೆ. ಆದರೆ ಕಾಶಿಗೆ ಅಂಟಿರುವ ಕಲೆಯಾದ, ಕಾಶಿ ವಿಧವೆಯರ ದೈನೇಸಿ ಸ್ಥಿತಿ ಕುರಿತು ಏನೂ ಹೇಳುತ್ತಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯ ಅಂಗವಾಗಿ ಕಾಶಿ ಹಲವಾರು ತಿಂಗಳುಗಳ ಕಾಲ ಚರ್ಚೆಯಲ್ಲಿತ್ತು. ಇಲ್ಲಿನ ಮಿಠಾಯಿ, ಗೂಳಿ, ಗಲ್ಲಿಗಳ ಕುರಿತಾಗಿ ಚರ್ಚೆಗಳು ನಡೆದದ್ದೇ ಬಂತು. ಆದರೆ ಹಿಂದೂ ಸಮಾಜದ ಶಾಪಗ್ರಸ್ತ ವಿಧವೆಯರಾಗಿ ಗೋಳಾಡುತ್ತಿರುವ ಅಸಹಾಯಕ ಹೆಂಗಸರ ಕುರಿತಾಗಿ ಯಾರೂ ಚಕಾರವೆತ್ತಲಿಲ್ಲ.
ಈಗ ಕಾಶಿಯ ಬೃಂದಾವನಕ್ಕೆ, ಬಹುಶಃ ಸಣ್ಣ ಪ್ರಾಯದ ಅಥವಾ ಅತಿ ಮೃದ್ಧ ವಿಧವೆಯರು ಹೆಚ್ಚಾಗಿ ಬಂದು ಸೇರುತ್ತಿಲ್ಲ ಎಂಬುದು ನಿಜವಿರಬಹುದು. ಆದರೆ ಕಾಶಿಯಲ್ಲಿ ಇಂದೂ ಸಹ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲೇ ಅಸಹಾಯಕರಾಗಿ ಉಳಿಯುವ ವಿಧವೆಯರನ್ನು ದೊಡ್ಡ ಹೊರೆ ಎಂದೇ ಭಾವಿಸಲಾಗುತ್ತದೆ, ಅಲ್ಲಿ ಈ ವಿಧವೆಯರು ಕ್ಷಣಕ್ಷಣ ನರಳುತ್ತಾ ಬದುಕುತ್ತಿದ್ದಾರೆ.
ಮಹಾನ್ ಹಿಂದೂ ಸಂಸ್ಕೃತಿಯ ಡೋಲು ಬಾರಿಸುತ್ತಾ ನಮ್ಮನ್ನು ನಾವು ಎಷ್ಟೇ ಶ್ರೇಷ್ಠರೆಂದು ಹೇಳಿಕೊಳ್ಳಲಿ, ಈ ವಿಧವೆಯರ ಅಸಹಾಯಕ ಬದುಕು ನಮ್ಮ ಕಂದಾಚಾರ ಹಾಗೂ ಮೂಢನಂಬಿಕೆಯ ಕೊಡುಗೆಯೇ ಆಗಿದೆ. ಈಗ ನಮ್ಮ ದೇಶದಲ್ಲಿ ಸತಿಸಹಗಮನದ ಹೆಸರಿನಲ್ಲಿ ವಿಧವೆಯರನ್ನು ಸುಡುತ್ತಿಲ್ಲ ಎಂಬುದು ನಿಜ, ಅವರ ಮೇಲಾಗುತ್ತಿರುವ ದುರ್ವ್ಯವಯಹಾರಗಳಂತೂ ಬಾಣಲೆಯಿಂದ ಬೆಂಕಿಗೆ ಎಂಬಂತೆಯೇ ನಡೆಯುತ್ತಿದೆ. ಸಾಮಾನ್ಯ ಮನೆಗಳಲ್ಲೂ ಸಹ ವರ್ಷದಲ್ಲಿ ಹಲವಾರು ಸಲ ಧಾರ್ಮಿಕ ಸಮಾರಂಭ ನಡೆಸಲು ಪುರೋಹಿತರು ಬಂದು ತಮ್ಮ ಥೈಲಿ ತುಂಬಿಸಿಕೊಳ್ಳುತ್ತಾರೆ, ಅದೇ ಮನೆಗಳಲ್ಲಿ ವಿಧವೆಯರು ಇಂಥ ಸಮಾರಂಭದಲ್ಲಿ ಮುಂದೆ ಬಂದರೆ ಅವರನ್ನು ಮಟ್ಟಹಾಕಿ ಹಿಂದೋಡಿಸಲಾಗುತ್ತದೆ.
ಇಲ್ಲಿನ ವಿಡಂಬನೆ ಎಂದರೆ, ಯಾವ ಪುರೋಹಿತರು ಜಾತಕ ಹೊಂದಿಸಿ ಪ್ರಶಸ್ತ ಎಂದು ಇಂಥ ಮದುವೆ ಮಾಡಿಸಿದರೋ ಅವರನ್ನು ಯಾರೂ ದೂಷಿಸುವುದಿಲ್ಲ. ಅಂಥ ಮದುವೆಯಿಂದ ತಾನೇ ಹುಡುಗಿ ಹೀಗೆ ವಿಧವೆಯಾದದ್ದು? ಯಾವ ದೇವತೆಗಳ ಸಾಕ್ಷಿಯಾಗಿ ಧಾರ್ಮಿಕ ವಿವಾಹ ನಡೆಯಿತೋ ಹುಡುಗಿಯರ ಈ ಕಷ್ಟಕ್ಕೆ ಆ ದೇವರನ್ನು ಬಯ್ಯುವಂತಿಲ್ಲ. ಇಂಥ ಮದುವೆಗಳಿಂದ ಪುರೋಹಿತರು ಬೇಕಾದಷ್ಟು ದಕ್ಷಿಣೆ ಗಿಟ್ಟಿಸುತ್ತಾರೆ.
ಹಿಂದೂ ಸಮಾಜ ಕೊಳಕು ಗಂಗಾ ನದಿಯನ್ನು ಹೇಗೋ ಸಹಿಸಿಕೊಂಡು ಬದುಕೀತು, ಏಕೆಂದರೆ ಶುದ್ಧೀಕರಣದಿಂದಾಗಿ ಈಗ ಅದೇ ಗಂಗಾ ನೀರು ಮನೆಗೆ ಕ್ಲೀನಾಗಿ ಬರಬಹುದು. ಆದರೆ ಅದೇ ಸಮಾಜ ಕಾಶಿ, ಬೃಂದಾವನ, ಸಾಮಾನ್ಯ ಮನೆಗಳಲ್ಲಿ ತಿರಸ್ಕೃತ ಜೀವನ ನಡೆಸುತ್ತಿರುವ ಲಕ್ಷಾಂತರ ವಿಧವೆಯರನ್ನು ಹೇಗೆ ಸಹಿಸೀತು? ಗಂಡಸು ವಿಧುರನಾದ ತಕ್ಷಣ ಮತ್ತೆ ಮದುಮಗನಾಗಿ ಸುಖವಾಗಿರಬಹುದಾದರೆ, ವಿಧವೆಗೇಕೆ ಬಿಳಿ ಸೀರೆಯ ಅಮಂಗಲೆ ಪಟ್ಟ? ಅವಳ ಜೀವನದಲ್ಲಿ ನಗು ಶಾಶ್ವತವಾಗಿ ಅಳಿಸಿ ಹೋಗಬೇಕೇಕೆ? ಈ ಜಾಬ್ದಾರಿ ಸರ್ಕಾರದ್ದಲ್ಲದಿರಬಹುದು, ಆದರೆ ಸರ್ಕಾರ ಸಾಮಾಜಿಕ ಧಾರ್ಮಿಕ ವಿಷಯಗಳ ಆಧಾರದಿಂದ ರೂಪುಗೊಂಡಿದ್ದರೆ, ಅದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು.
ಕೇವಲ ನದಿ ನೀರಿನ ಶುದ್ಧೀಕರಣ ಮಾತ್ರ ಮುಖ್ಯವಾಗದೆ, ನದಿಯ ದಡದಲ್ಲಿ ಹೆಚ್ಚುತ್ತಿರುವ ಕಲುಷಿತ ಸಂಸ್ಕೃತಿಯನ್ನೂ ಕಡೆಗಾಣಿಸಬೇಕಿದೆ. ಆದರೆ ವಿಡಂಬನೆ ಎಂದರೆ, ನಮ್ಮ ಸಮಾಜದ ರಕ್ಷಕರೆನಿಸಿಕೊಂಡವರು ಇಲ್ಲಿಯವರೆಗೂ ಈ ವಿಧವೆಯರ ಸ್ಥಿತಿ ಸುಧಾರಿಸುವ ಬದಲು, ಅದನ್ನು ಅಡಗಿಸಿಡಲು ನೋಡುತ್ತಾರೆ. ಈ ವಿಧವೆಯರ ಕುರಿತಾದ ದೀಪಾ ಮೆಹ್ತಾರ `ವಾಟರ್' ಚಿತ್ರದ ಶೂಟಿಂಗ್ ಇಲ್ಲಿ ನಡೆಯದಂತೆ ಬೇಕೆಂದೇ ತಡೆಯೊಡ್ಡುತ್ತಾರೆ.