ನನ್ನ ಮದುವೆಯಾದಾಗಿನ ಸಂಗತಿ. ನನ್ನ ಗಂಡ ಬೆಳಗ್ಗೆ ಬೆಳಗ್ಗೆಯೇ ಎಲ್ಲೋ ಹೊರಟಿದ್ದರು. ಅವರು ಹೋಗುತ್ತಿರುವುದನ್ನು ನೋಡಿ ನಾನು ಹಿಂದೆ ಹಿಂದೆಯೇ ಧಾವಿಸಿದೆ ಹಾಗೂ ಅವರನ್ನು ಕೂಗಿ ಕೂಗಿ ಕರೆದು, “ನೀವು ಎಲ್ಲಿಯಾದರೂ ಹೊರಟಿದ್ದೀರಾ?” ಎಂದು ಕೇಳಿದೆ.
ಇಷ್ಟು ಕೇಳುತ್ತಿದ್ದಂತೆ ಅವರು ಕ್ರೋಧಕ್ಕೊಳಗಾದರು ಹಾಗೂ ಕೋಪದಿಂದಲೇ, “ಈ ರೀತಿಯಾಗಿ ಹಿಂದಿನಿಂದ ಬಂದು ಏಕೆ ಕೂಗುತ್ತಿರುವೆ?” ಎಂದು ಕೇಳಿದರು.
ಮೂರ್ಖಳಾದ ನಾನು ಆಗಲೂ ಅರ್ಥ ಮಾಡಿಕೊಳ್ಳದೆ ಅವರ ಎದುರಿಗೆ ಹೋಗಿ, “ಈಗ ಹೇಳಿ, ನೀವು ಹೊರಟಿರುವುದಾದರೂ ಎಲ್ಲಿಗೆ?” ಎಂದು ಕೇಳಿದೆ.
ಅವರು ನನ್ನನ್ನು ಹೇಗೆ ದಿಟ್ಟಿಸಿ ನೋಡಿದರೆಂದರೆ, ನಾನು ಯಾರನ್ನೋ ಕೊಲೆ ಮಾಡಿದ್ದೇನೆ ಎಂಬಂತೆ. ಆದರೆ ಅವರು ನನ್ನನ್ನು ಹಾಗೇಕೆ ನೋಡಿದರೆಂದು ತಿಳಿಯಲಿಲ್ಲ.
2 ಗಂಟೆ ನಂತರ ಅವರು ಮನೆಗೆ ವಾಪಸ್ ಬಂದಾಗ, ಸಾಕಷ್ಟು ಗರಂ ಆಗಿದ್ದರು. “ನೀನು ಮಹಾ ಮೂರ್ಖ ಹೆಂಗಸು. ಯಾರಾದರೂ ಕೆಲಸಕ್ಕೆಂದು ಹೊರಟು ನಿಂತಾಗ, ಅವರ ಹಿಂದೆ ಹಿಂದೆ ಬಂದು ಕೂಗಬಾರದು ಎಂದು ನಿನಗೆ ಗೊತ್ತಿಲ್ವಾ? ನೀನು ಹಿಂದೆ ಬಂದು ಕೂಗಿದ್ದರಿಂದ ನಾನು ಹೋದ ಕೆಲಸ ಆಗಲಿಲ್ಲ,” ಎಂದು ಕೋಪದಿಂದ ಹೇಳಿದರು.
ಇದೆಂಥ ಮೂಢನಂಬಿಕೆ? ನಾನು ಕೂಗಿ ಕರೆದಿದ್ದರಿಂದ ಅವರ ಕೆಲಸ ಆಗಲಿಲ್ಲವಂತೆ, ಅದ್ಹೇಗೆ? ಒಂದು ವೇಳೆ ಯಾರದ್ದಾದರೂ ಕೆಲಸ ಆಗಬಾರದೆಂದರೆ ಹಿಂದಿನಿಂದ ಕೂಗಿದರೆ ಸಾಕೆ? ಕೆಲವರಿಗೆ ಇದೇ ಒಂದು ಅಸ್ತ್ರ ಆಗುತ್ತಲ್ವೇ?
ಪೂಜೆ ಪುನಸ್ಕಾರ ಮಾಡುವವರು ಅದೆಷ್ಟು ಇದ್ದಾರೆಂದರೆ, ಬೆಳಗ್ಗೆ, ಸಂಜೆ ಎರಡೆರಡು ಗಂಟೆ ದೊಡ್ಡ ಧ್ವನಿಯಲ್ಲಿ ಮಂತ್ರ ಹೇಳುತ್ತಾ ಪೂಜೆ ನಡೆಸುತ್ತಿರುತ್ತಾರೆ. ಕಷ್ಟಪಟ್ಟು ದುಡಿದ ಹಣ ಪಂಡಿತರು ಪುರೋಹಿತರ ತಟ್ಟೆಗೆ ಹೋಗಿಬಿಡುತ್ತದೆ. ಯಾರಾದರೂ ಬಡವ ಬಂದು ಒಂದು ರೂ. ಕೇಳಿದರೆ ಅವನತ್ತ ತಿರಸ್ಕಾರದಿಂದ ನೋಡುತ್ತಿರುತ್ತಾರೆ. ಗಂಡ ಅತ್ತೆ ಯಾವಾಗ ನೋಡಿದರೂ ಪುರೋಹಿತರ ಹೊಟ್ಟೆ ತುಂಬಿಸುತ್ತಿರುತ್ತಾರೆ.
ದೀರ್ಘ ಉಪದೇಶ
ತಡೆಯುವ ಪ್ರಯತ್ನ ಮಾಡಿದಾಗ ದೀರ್ಘ ಉಪದೇಶ ಸಿಗುತ್ತದೆ. ಬ್ರಾಹ್ಮಣರಿಗೆ ದಾನ ಕೊಡಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಬ್ರಾಹ್ಮಣರಿಗೆ ಎಷ್ಟು ಹೆಚ್ಚೆಚ್ಚು ದಾನ ಮಾಡುತ್ತೀರೊ ಅಷ್ಟು ಹೆಚ್ಚು ಪುಣ್ಯ ಸಿಗುತ್ತದೆ. ಅದರಿಂದ ನನಗೆ ಎಷ್ಟು ಲಾಭವಾಗುತ್ತೋ ಗೊತ್ತಿಲ್ಲ. ಆದರೆ ಪಂಡಿತರು ಪುರೋಹಿತರಿಗೆ ಮಾತ್ರ ಖಂಡಿತ ಲಾಭ ಸಿಗುತ್ತದೆ. ಅವರ ಬೊಜ್ಜು ಹೊಟ್ಟೆಯನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಜನ ಅವರಿಗೆ ಹೇಗೆ ಅಷ್ಟು ಬೇಗ ಮೂರ್ಖರಾಗುತ್ತಾರೋ ಗೊತ್ತಿಲ್ಲ.
ಇಂದಿನ ಆಧುನಿಕ ಯುಗದಲ್ಲಿ ನಾವು ಆಧುನೀಕರಣದ ವೇಷಭೂಷಣ ಮಾತ್ರ ಧರಿಸುತ್ತೀದ್ದೇವೆ. ನಮ್ಮ ಮಾನಸಿಕತೆ ಹಿಂದೆ ಹೇಗಿತ್ತೋ, ಹಾಗೆಯೇ ಇದೆ. ಇದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಬದಲಾಗುತ್ತಿರುವ ಕಾಲದ ಜೊತೆಗೆ ನಾವು ನಮ್ಮ ಯೋಚನೆಯ ಧಾಟಿಯನ್ನು ಮಾತ್ರ ಬದಲಿಸಿಕೊಳ್ಳುತ್ತಿಲ್ಲ. ಇದರ ಸಂಪೂರ್ಣ ಯಶಸ್ಸು ಇಂದಿನ ಮೀಡಿಯಾ ಚಾನೆಲ್ ಗಳಿಗೆ ಸಲ್ಲುತ್ತದೆ. ಅವು ಇಡೀ ದಿನ ಮೂಢನಂಬಿಕೆಗಳನ್ನು ಪಸರಿಸುತ್ತಿರುತ್ತವೆ.
ಪ್ರತಿದಿನ ಚಾನೆಲ್ ಗಳಲ್ಲಿ ಇಂತಹ ಕಾರ್ಯಕ್ರಮಗಳು ಹೇರಳವಾಗಿ ಪ್ರಸಾರವಾಗುತ್ತಿರುತ್ತವೆ. ಅವನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಏನಿಲ್ಲ. ಅದೊಂದು ದಿನ ನನ್ನ ಅತ್ತೆಗೆ ಹಸುವೊಂದು ತನ್ನ ಕೋಡುಗಳಿಂದ ಇರಿಯುತ್ತಿರುವ ಕನಸು ಕಾಣಿಸಿತು. ಅದನ್ನು ಕಂಡು ಅವರಿಗೂ ಭೂಕಂಪವಾದಂತೆ ಭಾಸವಾಯಿತು. ಪುರೋಹಿತರಿಗೆ ಬುಲಾವ್ ಹೋಯಿತು.
ಪುರೋಹಿತರ ಮಾಯಾಜಾಲ
ಪುರೋಹಿತರು ಬರುತ್ತಿದ್ದಂತೆ ಹೇಳಿದರು, “ಇದಂತೂ ಒಳ್ಳೆಯ ಸಂಕೇತ. ಹಸು ತನ್ನ ಕೋಡುಗಳಿಂದ ಇರಿಯುವುದು ಶುಭ ಸಂಕೇತ. ಅದಕ್ಕೆ ನೀವು ಹೆದರಬೇಕಿಲ್ಲ. ಹಸುವಿನ ಸೇವೆ ಮಾಡಿ ನಿಮ್ಮೆಲ್ಲ ಚಿಂತೆಗಳು ನಿವಾರಣೆ ಆಗಿಬಿಡುತ್ತವೆ.”
ವಾಹ್! ಪುರೋಹಿತರೆ, ಕನಸು ಹಸುವಿನದು ಮತ್ತು ಲಾಭ ಪುರೋಹಿತರಿಗೆ. ಈಗ ಪುರೋಹಿತರು ಹೇಳಿದ್ದನ್ನು ಕೇಳಿಸಿಕೊಳ್ಳಲೇಬೇಕು. ಪುರೋಹಿತರು ಒಂದು ದಿನ ನನ್ನ ಗಂಡನನ್ನು ಭೇಟಿಯಾಗಲು ಮನೆಗೆ ಬಂದರು. ಅವರ ಮುಖ ಚಿಂತೆಯಿಂದ ಕಂಗಾಲಾದಂತೆ ಕಂಡುಬರುತ್ತಿತ್ತು. ಪುರೋಹಿತರು ಹೋದ ಬಳಿಕ ನಾನು ಕೇಳಿದೆ, “ಪುರೋಹಿತರಿಗೆ ಅದೇನು ತೊಂದರೆ ಬಂದಿದೆ?” ನನ್ನ ಗಂಡ ಪುರೋಹಿತರ ಸಮಸ್ಯೆ ಏನೆಂದು ಹೇಳಿದರು, “ಪುರೋಹಿತರಿಗೆ ಇತ್ತೀಚೆಗೆ ಅವರ ಕೆಲಸ ಕಾರ್ಯಗಳು ಮಂದಾಗಿ ನಡೆದಿವೆಯಂತೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಅವರಾರೂ ಪೌರೋಹಿತ್ಯ ಮಾಡಲು ಒಪ್ಪುತ್ತಿಲ್ಲವಂತೆ.”
ನಾನು ನನ್ನ ನಗುವನ್ನು ತಡೆಹಿಡಿಯಲು ಆಗಲಿಲ್ಲ. ನಾನು ನಗುತ್ತಲೇ, “ಪುರೋಹಿತರಿಗೆ ಅವರ ಮಕ್ಕಳು ಪೌರೋಹಿತ್ಯ ಮಾಡದೇ ಇದ್ದರೆ ದುಃಖ ಆಗುವುದು ಸಹಜ. ಕುಟುಂಬದ ಒಂದು ಉದ್ಯೋಗ ನಿಂತು ಹೋಗುತ್ತಲ್ಲ. ಬಹುಶಃ ಪುರೋಹಿತರು ತಮ್ಮ ಜಾತಕ ನೋಡಿಲ್ಲ ಅನಿಸುತ್ತೆ. ನೋಡಿದ್ದರೆ ಅವರು ತಮ್ಮ ದುಃಖಕ್ಕೆ ಪರಿಹಾರ ಕಂಡುಕೊಳ್ಳಬಹುದಿತ್ತು,” ಎಂದು ನನ್ನ ಬಾಯಿಂದ ಅಭ್ಯಾಸವೆಂಬಂತೆ ಮಾತು ಹೊರಬಂತು.
ಇತ್ತ ಕಡೆ ನಗುವಿನ ಅಲೆ ತೇಲಿ ಬರುತ್ತಿತ್ತು. ಅತ್ತಕಡೆಯಿಂದ ಬಂದಾಗ ಸ್ಛೋಟ ಆಗುವುದು ಸಹಜವೇ ಆಗಿತ್ತು. “ಯಾವಾಗ ಏನು ಮಾತಾಡಿದ್ರೂ ತದ್ವಿರುದ್ಧ ಆಗಿಯೇ ಮಾತಾಡ್ತಿಯಾ ಸುಮ್ಮನಿರಲು ಆಗುವುದಿಲ್ಲವೇ?” ಎಂದು ಗಂಡ ಕೋಪದಿಂದಲೇ ಹೇಳಿದರು.
ಮೂಢನಂಬಿಕೆಯ ನೆಪ
ಈಗ ನೀವೇ ಹೇಳಿ, ಜಾತಕ ನೋಡುವುದು, ಕೈ ನೋಡುವುದು ಇವೆಲ್ಲ ಮೂಢನಂಬಿಕೆಯ ವ್ಯಾಪ್ತಿಯಲ್ಲಿಯೇ ಬರುತ್ತದಲ್ಲವೇ? ಇಂದಿನ ವೈಜ್ಞಾನಿಕ ಯುಗದಲ್ಲಿ ಬಹಳಷ್ಟು ಜನರ ಮಾನಸಿಕತೆ ಅದೇ ಕಂದಾಚಾರದಿಂದ ಕೂಡಿದೆ. ಈಗಲೂ ಕೂಡ ಅದೆಷ್ಟೋ ಜನರು ಪುರೋಹಿತರ ಒಪ್ಪಿಗೆಯಿಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ. ಯಾವುದೇ ಶುಭ ಕೆಲಸಕ್ಕೆ ಪುರೋಹಿತರು ಹಾಗೂ ಜ್ಯೋತಿಷಿಗಳ ಸಲಹೆ ಪಡೆದೇ ಮುಂದುವರಿಯುತ್ತಾರೆ. ಮಗು ಯಾವಾಗ ಹುಟ್ಟಲಿದೆ? ಯಾವಾಗ ನಾಮಕರಣ ಮಾಡಬೇಕು? ಇವೆಲ್ಲವನ್ನೂ ಪುರೋಹಿತರೇ ನಿರ್ಧರಿಸುತ್ತಾರೆ. ಅದೇ ಕಾರಣದಿಂದ ಮುಹೂರ್ತದ ಲೆಕ್ಕಾಚಾರದಲ್ಲಿ ಈ ಕೆಲಸ ಕಾರ್ಯಗಳು ಆಗುತ್ತವೆ. ಇಷ್ಟೇ ಅಲ್ಲ, ಹುಡುಗಿ ಆಗಬೇಕಾ ಅಥವಾ ಹುಡುಗ? ಇದೆಲ್ಲವನ್ನು ಪುರೋಹಿತರೇ ನಿರ್ಧರಿಸುತ್ತಾರೆ.
ಒಂದು ವೇಳೆ ಗಂಡು ಶಿಶು ಜನಿಸಬೇಕೆಂದರೆ ಪುರೋಹಿತರು ಕೆಲವು ಔಷಧಿ ಚೀಟಿಗಳನ್ನು ಕೈಗೆ ಕೊಡುತ್ತಾರೆ. ಮೂರನೇ ತಿಂಗಳಲ್ಲಿ ಅದನ್ನು ತಿನ್ನಿಸಬೇಕು ಎಂದು ಹೇಳುತ್ತಾರೆ. ಜನರು ಅದನ್ನು ಕಣ್ಮುಚ್ಚಿ ನಂಬುತ್ತಾರೆ. ತಮ್ಮ ಸೊಸೆ ಅಥವಾ ಮಗಳಿಗೆ ಮೂರನೇ ತಿಂಗಳಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ಔಷಧಿ ತಿನ್ನಿಸುತ್ತಾರೆ.
ಗಂಡು ಹುಟ್ಟಬಹುದು ಇಲ್ಲವೇ ಹೆಣ್ಣು. ಅಕಸ್ಮಾತ್ ಗಂಡು ಹುಟ್ಟಿದರೆ ಪುರೋಹಿತರ ಅದೃಷ್ಟದ ಖಜಾನೆ ತೆರೆದಂತೆಯೇ ಸರಿ, ಒಂದು ವೇಳೆ ಹೆಣ್ಣು ಹುಟ್ಟಿದರೆ, ಪುರೋಹಿತರ ಹೇಳುತ್ತಾರೆ, “ಔಷಧಿ ಸೇವನೆ ಮಾಡುವಾಗ ನೀವು ನಿರ್ಲಕ್ಷ್ಯ ಮಾಡಿರಬಹುದು.” ಅಂದರೆ ಯಾವುದೇ ಸ್ಥಿತಿಯಲ್ಲಿ ಪಂಡಿತರದ್ದೇ ಸರಿ.
ಕರ್ಮವೇ ಪ್ರಧಾನ
ಒಂದು ಸಾರಿ ನಾನು ಪತಿಗೆ ಹೇಳಿದೆ, “ನೀವು ನಂಬಿ. ಆದರೆ ಮೂಢನಂಬಿಕೆಯನ್ನಲ್ಲ ಈ ಪುರೋಹಿತರು ಜ್ಯೋತಿಷಿಗಳು ಮೌಲ್ವಿಗಳು ಕೇವಲ ತಮ್ಮ ಜೇಬು ತುಂಬಿಸಿಕೊಳ್ಳುತ್ತಾರೆ. ಆದರೆ ಏನನ್ನು ಮಾಡುವುದಿಲ್ಲ ಕರ್ಮವೇ ಮುಖ್ಯ.”
ಆ ಮಾತಿಗೆ ಗಂಡ ಹೇಳಿದರು, `’ನಿನ್ನ ವಿಚಾರ ಹಾಗೂ ನಿನ್ನ ಯೋಚನೆ ನಿನ್ನ ಬಳಿಯೇ ಇಟ್ಟುಕೋ. ನನಗೆ ಕಲಿಸಲು ಬರಬೇಡ. ನಿನ್ನ ಲೆಕ್ಕಾಚಾರದಲ್ಲಿ ಈ ಟಾಟಾ, ಬಿರ್ಲಾ, ಅಂಬಾನಿ ಇವರೆಲ್ಲ ನಾಸ್ತಿಕರು. ಅವರೆಲ್ಲ ಎಷ್ಟು ಪೂಜೆ ಪುನಸ್ಕಾರ ಮಾಡುತ್ತಾರೆ ನಿನಗೆ ಗೊತ್ತಿಲ್ಲ. ನಿನ್ನ ಮಾತು ಕೇಳಿದರೆ ನಾನು ಮುಳುಗಿದಂತೆಯೇ.”
ನನಗೂ ಹಠ, ಆ ಮಾತಿಗೆ ನಾನು ಹೇಳಿದೆ, “ಮುಳುಗಿದಾಗ ನೋಡೋಣ, ಆವಾಗ ನಾವು ಮೇಲೇಳದಿದ್ದರೆ ಹೇಳಿ?”
ಅವರ ಕೈಗಳಲ್ಲಿ ಅದೆಷ್ಟು ದಾರಗಳನ್ನು ಕಟ್ಟಾಗಿವೆ ಎಂದರೆ, ಅವನ್ನು ನೋಡಿದರೆ ಅವರಿಗೆ ಹರಕೆ ಕೊಡುವ ಅಪೇಕ್ಷೆ ಎಷ್ಟಿದೆಯೆಂದು ಗೊತ್ತಾಗುತ್ತದೆ. ಅದೊಂದು ದಿನ ನಾನು ಹೇಳಿದೆ, ನೀವು ಮರೆತುಬಿಟ್ಟರೇನು ಪುರೋಹಿತರು ಹೇಳಿದಂತೆ ಮಾಡಲು ಹೋಗಿ, ಹಸುವಿಗೆ ಬೇಸನ್ ಒಣದ್ರಾಕ್ಷಿ ಹಾಗೂ ತುಪ್ಪದಿಂದ ತಯಾರಿಸಿದ ಯಾವುದೊ ತಿಂಡಿ ತಿನ್ನಿಸಲು ಹೋದಾಗ ಏನಾಯ್ತು. ನಿಮಗೆ ಗೊತ್ತೇ ಇದೆಯಲ್ಲ, ಆಗ ಹಸು ನಿಮ್ಮನ್ನು ಎತ್ತಿ ಒಗೆದು ಅದರಿಂದ ಗುಣಮುಖರಾಗಲು ನೀವು ಏಳು ದಿನ ತಗೊಂಡಿದ್ರಿ.
“ಸಾಕು ಮಾಡು. ಯಾವಾಗೆಂದರೆ, ಆಗ ನಿನ್ನ ಟೇಪ್ ರೆಕಾರ್ಡರ್ ಶುರುವಾಗಿಬಿಡುತ್ತೆ,” ಗಂಡ ಸಿಡಿಮಿಡಿಗೊಳ್ಳುತ್ತಾ ಹೇಳಿದರು.
“ನಾನೇನಾದರೂ ತಪ್ಪು ಹೇಳಿದ್ನಾ? ನಾನೇಕೆ ಸುಮ್ಮನಿರಬೇಕು. ನೀವು ಹೊಸ ಆಫೀಸ್ ಆರಂಭಿಸಲು ಕಟ್ಟಡ ಕಟ್ಟುತಿದ್ರಿ. ಅಡಿಪಾಯ ತೆಗೆಯುತ್ತಿದ್ದಾಗ, ನಿಮಗೆ ಪುರೋಹಿತರು ಏನು ಹೇಳಿದ್ರು ಗೊತ್ತಿದೆಯಲ್ಲ, ಇಡೀ ಆಫೀಸಿನ ದೃಷ್ಟಿ ನಿವಾಳಿಸಿ ಹಾಗೂ ಪಶ್ಚಿಮ ದಿಸೆಯಲ್ಲಿ ಕೆಲವು ಬಟ್ಟೆಯಲ್ಲಿ ಅಕ್ಕಿಯ ಜೊತೆಗೆ ಅದನ್ನು ಕಟ್ಟಿ ಇಡಿ ಎಂದಿದ್ದರು. ನೀವಂತೂ ಅದನ್ನು ಮಾಡಲೇಬೇಕಿತ್ತು ಅಲ್ಲವೇ? ಆಗ ಆಗಿದ್ದೇನು? ಅಕ್ಕಿಯನ್ನು ಕೆಂಪು ಬಟ್ಟೆಯ ಜೊತೆಗೆ ಕಟ್ಟಲು ಹೋಗಿ ನೀವು 7 ಅಡಿ ಆಳದ ಗುಂಡಿಗೆ ಬಿದ್ದಿರಿ. ಆಗ ಅಲ್ಲಿ ಕೂಲಿಕಾರರು ಇದ್ದದ್ದು ಒಳ್ಳೆಯದಾಯ್ತು. ನಿಮ್ಮ ಸ್ಥಿತಿ ಏನಾಗುತ್ತಿತ್ತು? ನಿಮಗೆ ಗೊತ್ತೇ ಇತ್ತು ಅಲ್ವಾ?” ನಾನು ಕಣ್ಣು ಮಿಟುಕಿಸುತ್ತಾ ಹೇಳಿದೆ.
“ಹೌದು. ಹಾಗೆ ಆಗಿದ್ದು ನಿಜ. ನಾನು ಆಗ ಪ್ರಾಣಾಪಾಯದಿಂದ ಪಾರಾದದ್ದು ಪುರೋಹಿತರ ಕೃಪಾಕಟಾಕ್ಷದಿಂದ ಅಲ್ವಾ? ಅಷ್ಟೊಂದು ದೊಡ್ಡ ಗುಂಡಿಗೆ ಬಿದ್ದೂ ಕೂಡ ಯಾವುದೇ ಗಾಯ ಆಗಲಿಲ್ಲ.”
“ಓಹ್! ನೀವು ಮತ್ತು ನಿಮ್ಮ ಪುರೋಹಿತರು! ಇದು ನಂಬಿಕೆಯಲ್ಲ, ಮೂಢನಂಬಿಕೆ ಮೂರ್ಖತನದ ಪರಮಾವಧಿ!”
ಮೂಢನಂಬಿಕೆಯ ಆಟ
ಇಡೀ ವರ್ಷ ಮೂಢನಂಬಿಕೆಯ ಆಟ ನಡೆಯುತ್ತಲೇ ಇರುತ್ತದೆ. ಸಲಹೆ ಕೊಡುವ ಪುರೋಹಿತರು ಅದನ್ನು ಒಪ್ಪಿ ಅನುಸರಿಸುವ ಗಂಡ ಹಾಗೂ ಅವರ ಅಮ್ಮ ಹೀಗೆ ಮನೆ ಎರಡು ಜಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಒಂದೆಡೆ ಅತ್ತೆ, ಗಂಡ ಇದ್ದಾರೆ. ಇನ್ನೊಂದೆಡೆ ನಾನು ಹಾಗೂ ಮಕ್ಕಳು ಇದ್ದೇವೆ. ಪ್ರತಿಸಲ ವಾಗ್ಯುದ್ಧದ ಸ್ಥಿತಿ ಇರುತ್ತದೆ.
ಮಾಘ ಮಾಸ ಬಂದಾಗ, ದಾನ ಮಾಡಬೇಕಂತೆ. ಸಂತ ಪಂಚಮಿ ಬಂದಾಗ ಕಥಾ ಸಮಯವಂತೆ, ನವರಾತ್ರಿ ಬಂದಾಗ ಹೋಮಹವನ, ಇನ್ನೇನೊ ಬಂದಿದೆ ಎಂದು ಆಗ ರುದ್ರಾಭಿಷೇಕ ಎಂದರು. ಶ್ರಾದ್ಧ ಬಂದಾಗ ಪಂಡಿತ ಪುರೋಹಿತರಿಗೆ ಆಹಾರ ವ್ಯವಸ್ಥೆ ಮಾಡಿಸಬೇಕು. ಇನ್ನೇನೊ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ, ಮಹಾ ಮೃತ್ಯುಂಜಯ ಜಪ ಮಾಡಬೇಕು ಎಂದು ಆದೇಶ ಬರುತ್ತದೆ.
“ಪುರೋಹಿತರೇ, ಕೌಟುಂಬಿಕ ತೊಂದರೆ ನಿವಾರಣೆ ಆಗುತ್ತಿಲ್ಲ. ಏನು ಮಾಡಬೇಕು?” ಅತ್ತೆ ಕೇಳಿದರು.
“ಒಂದು ಕೆಲಸ ಮಾಡಿ, ನೀಲಪ ಹೋಮ ಹಲನದ ವ್ಯವಸ್ಥೆ ಮಾಡಿ. ಹವನದ ಕೊನೆಯಲ್ಲಿ ಐದು ಕಾಲು ಕೆ.ಜಿ. ಒಣ ಮೆಣಸಿನಕಾಯಿಯಿಂದ ಎಲ್ಲರ ದೃಷ್ಟಿ ನಿವಾರಿಸಿ, ಅಗ್ನಿಕುಂಡದಲ್ಲಿ ಆಹುತಿ ಕೊಡಬೇಕು. ಇದರಲ್ಲಿ ಯಾರು ಎಷ್ಟು ದೃಷ್ಟಿ ಹಾಕಿದ್ದಾರೆಂದು ಗೊತ್ತಾಗುತ್ತದೆ,” ಪುರೋಹಿತರು ಹೇಳಿದರು.
ತಮ್ಮ ಎದುರುಗಡೆ ಬೆಕ್ಕು ಹಾದುಹೋದರೆ, ಬಹಳಷ್ಟು ಜನರು ತಾವು ಹೋಗುವ ಕೆಲಸ ಬಿಟ್ಟು ವಾಪಸ್ ಬರುತ್ತಾರೆ. ಸೂರ್ಯಗ್ರಹಣ ಚಂದ್ರಗ್ರಹಣ ಬಂದರೆ ಅವತ್ತು ಆಹಾರ ಸ್ವೀಕರಿಸುವುದಿಲ್ಲ. ಗ್ರಹಣ ಬಿಡುತ್ತಿದ್ದಂತೆ ಸ್ನಾನ ಮಾಡಬೇಕಾಗಿ ಬರುತ್ತದೆ.
ಇಷ್ಟೇ ಅಲ್ಲ, ಇಡೀ ಮನೆಗೆ ಗಂಗಾಜಲದ ಸಿಂಚನ ಮಾಡುತ್ತಾರೆ. ಮನೆಯಲ್ಲಿ ಗರ್ಭಿಣಿ ಇದ್ದರೆ, ಗ್ರಹಣ ಮುಗಿಯುವತನಕ ಮಡಿಲಲ್ಲಿ ತೆಂಗಿನಕಾಯಿ ಇಟ್ಟುಕೊಂಡು ರಾಮಾಯಣದ ಪಾಠ ಪಠಿಸುತ್ತಿರಬೇಕಾಗುತ್ತದೆ.
ಪ್ರತಿಯೊಂದು ಸಣ್ಣಪುಟ್ಟ ಸಂಗತಿಗಳಿಗೂ ಪುರೋಹಿತರು, ಜ್ಯೋತಿಷಿಗಳ ಸಲಹೆ. ಇದೆಂಥ ನಂಬಿಕೆ? ಬಹುಶಃ ಈ ಗಾಢ ನಂಬಿಕೆಯನ್ನೇ ಮೂಢನಂಬಿಕೆ ಎಂದು ಕರೆಯಲಾಗುತ್ತದೆ. ಇಂತಹ ಅದೆಷ್ಟೊ ಸಂಗತಿಗಳು ಮೂಢನಂಬಿಕೆಗಳಾಗಿ ಬೇರೆಯವರನ್ನು ಆರಿಸಿ ಕೊಳ್ಳುತ್ತಿವೆ. ಅವರಲ್ಲಿ ಮೂಢನಂಬಿಕೆಯ ಬೇರುಗಳು ಎಷ್ಟು ಆಳವಾಗಿ ಬೇರೂರಿವೆಯೆಂದರೆ, ಅವನ್ನು ನಾವು ಇಷ್ಟಪಟ್ಟೂ ಕೂಡ ಬದಲಿಸಲು ಆಗುವುದಿಲ್ಲ.
ಮೂಢನಂಬಿಕೆಯ ಪರಿ
ಭಾರತದಲ್ಲಿ ಚಿಕನ್ ಪಾಕ್ಸ್ ದೇವಿಯ ಪ್ರಕೋಪ ಎನ್ನುವುದೊಂದು ನಂಬಿಕೆ. ಔಷಧಿ ಕೂಡ ಅದನ್ನು ಏನೂ ಮಾಡುವುದಿಲ್ಲ. ಕೇವಲ ಪ್ರಾರ್ಥನೆ ಹಾಗೂ ಕರ್ಮಕಾಂಡದ ಮೂಲಕ ದೇವಿಯನ್ನು ಮೆಚ್ಚಿಸಬೇಕು.
ಬಹುಶಃ ಭಾರತದಲ್ಲಿ ಮಾತ್ರ ವೈದ್ಯರ ಕ್ಲಿನಿಕ್ ನ ಮುಖ್ಯ ದ್ವಾರದ ಬಳಿ ಕೆಟ್ಟ ದೃಷ್ಟಿಯಿಂದ ಪಾರಾಗಲು ಪ್ರತ್ಯೇಕ ಚಿಹ್ನೆ ಕಂಡುಬರುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ನಾಮಫಲಕದಲ್ಲಿ `ನಾವು ಸೇವೆ ಮಾಡುತ್ತೇವೆ. ಮೇಲಿನವ ಸರಿ ಮಾಡುತ್ತಾನೆ,’ ಎಂಬರ್ಥದ ವಾಕ್ಯಗಳು ಕಂಡುಬರುತ್ತವೆ. ಎಷ್ಟೋ ಡಾಕ್ಟರ್ ಗಳು ಗುರುವಾರದಂದು ಕೆಲಸ ಮಾಡುವುದಿಲ್ಲ. ಏಕೆಂದರೆ ಆವತ್ತು ದಿನ ಶುಭ ಆಗಿರುವುದಿಲ್ಲವಂತೆ.
ಭಾರತದಲ್ಲಿ ಕೆಲವು ವಿಜ್ಞಾನಿಗಳು ವಿಜ್ಞಾನದ ಮೇಲೆ ನಂಬಿಕೆ ಇಡುವುದಿಲ್ಲ. ಅವರು ಯಶಸ್ಸಿಗಾಗಿ ದೇವರತ್ತ ಮುಖ ಮಾಡುತ್ತಾರೆ.
ಅಶುಭ ನಂಬರ್ ಗಳನ್ನು ಬಿಟ್ಟುಬಿಡಲಾಗುತ್ತದೆ. ಇವರು ಅಕ್ಷರಸ್ಥರೇನೊ ಸರಿ, ಆದರೆ ಸುಶಿಕ್ಷಿತರಲ್ಲ.
ಮೂಢನಂಬಿಕೆಯುಳ್ಳವರು ಔಷಧಿ ಹಾಗೂ ಚಿಕಿತ್ಸೆ ಎರಡನ್ನು ಮೂಢನಂಬಿಕೆಯ ವ್ಯಾಪ್ತಿಗೆ ತರುತ್ತಾರೆ.
ಕೆಟ್ಟದೃಷ್ಟಿಯಿಂದ ಪಾರು ಮಾಡಲು ಮಕ್ಕಳಿಗೆ ಹಣೆಯ ಮೇಲೆ ಬೊಟ್ಟು ಇಡಲಾಗುತ್ತದೆ.
ಮನೆಯಿಂದ ಹೊರಗೆ ಹೋಗುವಾಗ ವಿಧವೆ ಕಣ್ಣಿಗೆ ಬಿದ್ದರೆ ಅಶುಭ ಎಂದು ಭಾವಿಸಲಾಗುತ್ತದೆ.
ಕೊರಳಿಗೆ ಕಪ್ಪು ದಾರ ಅಥವಾ ತಾಯಿತ ಕಟ್ಟಿಕೊಂಡರೆ ಕೆಟ್ಟ ಆತ್ಮಗಳು ದೂರ ಓಡುತ್ತವೆ.
ಒಂದು ವೇಳೆ ಚಪ್ಪಲಿ ಕಳೆದುಹೋದರೆ ನೀವು ಭಾಗ್ಯಶಾಲಿಗಳು. ಏಕೆಂದರೆ ಕೆಟ್ಟ ಸಂಗತಿಗಳು ಹೊರಟುಹೋಗುತ್ತವೆ.
ನಾಯಿಯೊಂದು ಜೋರು ಜೋರಾಗಿ ಅಳುತ್ತಿದ್ದರೆ, ಅದನ್ನು ವ್ಯಕ್ತಿಯೊಬ್ಬನ ಸಾವಿನ ಪೂರ್ವ ಸಂಕಲ್ಪಿತ ಎಂದು ಭಾವಿಸಲಾಗುತ್ತದೆ. ರಾತ್ರಿ ಹೊತ್ತು ಉಗುರು ಕತ್ತರಿಸಿಕೊಳ್ಳಬಾರದು.
ಬೆಕ್ಕೊಂದು ಅಡ್ಡ ಬಂದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ.
ಬಿಕ್ಕಳಿಕೆ ಬಂದರೆ ಯಾರೋ ನಿಮ್ಮನ್ನು ನೆನಪಿಸಿಕೊಳ್ಳುತ್ತಿದ್ದಾರೆಂದು ಅರ್ಥ.
ಸೋಮವಾರ ಇಲ್ಲವೇ ಶನಿವಾರದಂದು ಕೂದಲು ಕಟಿಂಗ್‌ಮಾಡಿಸಿಕೊಳ್ಳಬಾರದು ಎಂದು ಹೇಳಲಾಗುತ್ತದೆ.
ಇತ್ತೀಚೆಗೆ ಇದರಲ್ಲಿ ಮತ್ತೊಂದು ಸೇರಿದೆ. ಅದೆಂದರೆ ಕಣ್ಣು ಹಾರುವುದು, ಹಾಗೆ ಆಗುತ್ತಿದ್ದರೆ ಯಾವುದೊ ಅಪಾಯ ಆಗುತ್ತದೆ ಎನ್ನುವುದು ನಂಬಿಕೆ.
ಇಂತಹ ಅದೆಷ್ಟೋ ಸಂಗತಿಗಳ ಉದ್ದನೆಯ ಪಟ್ಟಿಯಿದೆ. ಅವು ಮೂಢನಂಬಿಕೆಗಳ ಪಟ್ಟಿಯಲ್ಲಿ ಬರುತ್ತವೆ. ಆದರೆ ಮೂಢನಂಬಿಕೆಗಳ ಲೆಕ್ಕಾಚಾರದಲ್ಲಿ ಅವರು ಧರ್ಮದ ಪಾಲನೆ ಮಾಡುತ್ತಿರುತ್ತಾರೆ. ಈಗ ನೀವೇ ಹೇಳಿ, ಇದು ಎಂತಹ ಧರ್ಮಪಾಲನೆ?
ಇಂದಿನ ವೈಜ್ಞಾನಿಕ ಯುಗದಲ್ಲಿ ಇಂತಹ ಯೋಚನೆಯೊಂದಿಗೆ ಹೇಗೆ ಪ್ರಗತಿ ಸಾಧಿಸಲು ಸಾಧ್ಯ? ಒಂದು ವೇಳೆ ಮಾಂತ್ರಿಕ ತಾಂತ್ರಿಕರ ಪೂಜೆಯಲ್ಲಿ ಅಷ್ಟೊಂದು ಶಕ್ತಿಯಿದ್ದರೆ, ಗಡಿಯಲ್ಲಿ ಸೈನ್ಯದ ಶಕ್ತಿಯ ಅಗತ್ಯವೇನಿದೆ? ಮನೆಯಲ್ಲಿಯೇ ಕುಳಿತು ಈ ಪುರೋಹಿತರು ಜ್ಯೋತಿಷಿಗಳು ಯುದ್ಧಗಳನ್ನು ತಡೆಯಬಹುದಲ್ವಾ? ವಾಸ್ತವ ಸಂಗತಿಯೇನೆಂದರೆ, ಈ ಪುರೋಹಿತ, ಪೂಜಾರಿ, ಜ್ಯೋತಿಷಿಗಳು ಚಲಿಸುವ ಅಂಗಡಿಗಳಿದ್ದಂತೆ. ಅವರಿಗೆ ಕೇವಲ ಅವರ ಜೇಬು ತುಂಬಿಸಿಕೊಳ್ಳುವ ಚಿಂತೆಯಿದೆ. ನಮ್ಮ ಸಮಾಜ ಅಂತಹ ಲೋಭಿಗಳ ಸಂಕೋಲೆಯಲ್ಲಿ ಬಂಧಿಯಾಗಿದೆ. ಕೇವಲ ಅನಕ್ಷರಸ್ಥರು ಕಡಿಮೆ ಓದಿದವರು, ಬಡವರಷ್ಟೇ ಅವರ ಬಲೆಗೆ ಬೀಳುತ್ತಿಲ್ಲ. ಧರ್ಮ ಹಾಗೂ ಆಸ್ಥೆಯ ಹೆಸರಿನಲ್ಲಿ ಸಾಕಷ್ಟು ಓದಿದವರು ಹಾಗೂ ಶ್ರೀಮಂತರು ಕೂಡ ಅವರ ಕಪಿಮುಷ್ಟಿಗೆ ಸಿಲುಕುತ್ತಿದ್ದಾರೆ.
ಮಹಿಳೆಯರ ಶೋಷಣೆ
ಚಮತ್ಕಾರಿ ಬಾಬಾಗಳು ಹಾಗೂ ತಾಂತ್ರಿಕರ ಕಪಿಮುಷ್ಟಿಗೆ ಸಿಲುಕಿದ ಮಹಿಳೆಯರ ಶೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ. ಮುಗ್ಧರು ಅವರಿಗೆ ಮರುಳಾಗಿ ಅವರಿಗೆ ತಮ್ಮದೆಲ್ಲವನ್ನು ಒಪ್ಪಿಸುತ್ತಾರೆ.
ಈ ಬಾಬಾಗಳ ಚಮತ್ಕಾರಿಗಳ ಬಳಿ ಹಣ ಎಷ್ಟೊಂದು ಬರುತ್ತಿರುತ್ತೆಂದರೆ ಅವರು ಸ್ವತಃ ಅದರ ಲೆಕ್ಕ ಇಡಲಾಗುವುದಿಲ್ಲ.
ಇದಕ್ಕೆ ಕೇವಲ ಮುಲ್ಲಾಗಳು, ಬಾಬಾಗಳು, ಪೂಜಾರಿ, ಪುರೋಹಿತರಷ್ಟೇ ಕಾರಣರಲ್ಲ. ನಮ್ಮ ಸಮಾಜದ ಚಂಚಲ ಮನಸ್ಸು ಇದಕ್ಕೆ ಕಾರಣ. ಅವರು ಚಮತ್ಕಾರಿ ಬಾಬಾಗಳ ನೈಜತೆ ಕಂಡುಹಿಡಿಯುವಲ್ಲಿ ಎಡವುತ್ತಾರೆ. ಸಾಮಾಜಿಕ ಹಿಡಿತದ ವಿಶ್ವಾಸವೇ ಮೂಢನಂಬಿಕೆಯಲ್ಲಿ ಪರಿವರ್ತನೆಗೊಳ್ಳುತ್ತದೆ.
ಮೂಢನಂಬಿಕೆಯುಳ್ಳ ಜನರು ತಮ್ಮ ಸ್ವಾತಂತ್ರ್ಯವನ್ನು ಹಾಳುಗೆಡವಿಕೊಳ್ಳುತ್ತಾರೆ. ಅವರು ತಾವೇ ಸ್ವತಃ ಯಾವುದೇ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಏಕೆಂದರೆ ಅವರು ತಮ್ಮ ಮೆದುಳನ್ನು ಮೂಢನಂಬಿಕೆಯ ಜೈಲಿನಲ್ಲಿ ಬಂಧಿಯಾಗಿರಿಸಿಕೊಂಡಿರುತ್ತಾರೆ. ಅವರು ತಮ್ಮ ಬುದ್ಧಿಯನ್ನು ಮೂಢನಂಬಿಕೆಯ ಕೈಗಳಿಗೆ ಮಾರಾಟ ಮಾಡಿರುತ್ತಾರೆ. ಇಲ್ಲದಿದ್ದರೆ ಅವರು ತಮ್ಮ ಜೀವನವನ್ನು ಮೂಢನಂಬಿಕೆಯ ಹೊರತಾಗಿ ಇನ್ನಷ್ಟು ಖುಷಿಯಿಂದ ಕಳೆಯಬಹುದಾಗಿದೆ.
ನೀವು ಒಂದು ಸಲ ಈ ಮೂಢನಂಬಿಕೆಯ ಹೆದರಿಕೆಯನ್ನು ಹೃದಯದಿಂದ ತೆಗೆದುಹಾಕಿ. ಆಗ ನಿಮಗೆ ಅಶುಭ, ಕೆಟ್ಟದ್ದು ಎಂಬ ಯೋಚನೆಯೇ ಬರದು. ಹಾಗಿದ್ದರೆ ಒಮ್ಮೆ ಯೋಚನೆ ಮಾಡಿ.
– ಪ್ರತಿನಿಧಿ