ಧರ್ಮದ ಕೊಡುಗೆ ಭಯೋತ್ಪಾದನೆ

ಕೇವಲ 6 ತಿಂಗಳ ಹೆಣ್ಣುಮಗುವಿನ ಯುವ ತಾಯಿತಂದೆ ನಿರಾಯುಧ ನಿರ್ದೋಷಿಗಳನ್ನು ಸುಖಾಸುಮ್ಮನೆ ಸಂಹರಿಸಲು ಮುಂದಾಗುವುದು ಏನೇನೂ ಒಪ್ಪತಕ್ಕ ವಿಷಯವಲ್ಲ. ಆದರೆ ಹೀಗಾದದ್ದು ನಿಜ. ಪಾಕಿಸ್ತಾನಿ ಮೂಲದ ಇಬ್ಬರು ಯುವ ಮುಸ್ಲಿಮರು, ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಸಣ್ಣ ನಗರ ಸ್ಯಾನ್‌ ಬರ್ನಾರ್‌ ಡಿನೋದ ಒಂದ ಕ್ರಿಸ್‌ಮಸ್‌ ಪಾರ್ಟಿಯಲ್ಲಿ ಆಕ್ರಮಣ ನಡೆಸಿ, 14 ಜನರನ್ನು ಒಮ್ಮೆಲೇ ಕೊಂದುಹಾಕಿ, 17 ಮಂದಿ ತೀವ್ರ ಗಾಯಾಳುಗಳಾಗುವಂತೆ ಮಾಡಿದರು. ಅತಿ ಸಾಮಾನ್ಯ ದಂಪತಿಗಳಂತೆ ವಾಸಿಸುತ್ತಿದ್ದ ಈ ಜೋಡಿ ಎಷ್ಟೋ ರೈಫಲ್ಸ್, ಪೈಪ್‌ ಬಾಂಬ್‌, ಸಾಮಾನ್ಯ ಬಾಂಬ್‌ಗಳನ್ನು ಸಂಗ್ರಹಿಸಿದ್ದರು. ಅದೂ ತಾವು ಪಾಕಿಸ್ತಾನದ ಸ್ವಾತ್‌ ಜಿಲ್ಲೆಯಲ್ಲಿದ್ದೇವೆ, ಅಮೆರಿಕಾದಲ್ಲಲ್ಲ ಎಂಬಂತಿದ್ದರು.

ಇತ್ತೀಚೆಗಂತೂ ಅಮೆರಿಕಾದಲ್ಲಿ ಇಂಥ ಘಟನೆಗಳು ದಿನೇದಿನೇ ನಡೆಯುತ್ತಿವೆ. ಏಕೆಂದರೆ ಅಲ್ಲಂತೂ ಪ್ರತಿಯೊಬ್ಬರ ಬಳಿಯೂ ಬಂದೂಕಿನ ಹಕ್ಕಿದೆ ಹಾಗೂ ಪ್ರತಿಯೊಬ್ಬರೂ ಬಹಳ ಟೆನ್ಶನ್‌ನಲ್ಲೇ ಬದುಕುತ್ತಿದ್ದಾರೆ. ಅಮೆರಿಕಾದ ಆರ್ಥಿಕ ಪ್ರಗತಿ ಹಲವರಲ್ಲಿ ಎಂಥ ಅತೃಪ್ತಿ ಹೆಚ್ಚಿಸಿದೆ ಎಂದರೆ, ಯಾರಿಗೆ ಯಾವಾಗ ಮನಸ್ಸು ಬಂದರೆ, ಅವರು 4-5 ಬಂದೂಕು ಖರೀದಿಸಿ, ಒಮ್ಮೆ ಶಾಲಾ ಮಕ್ಕಳು, ಒಮ್ಮೆ ಮಾರುಕಟ್ಟೆಯ ಗ್ರಾಹಕರು, ಮಾನಸಿಕ ಅಸ್ವಸ್ಥರು ಕ್ರಿಸ್‌ಮಸ್‌ ಪಾರ್ಟಿ ನಡೆಸುತ್ತಿದ್ದ ಕಡೆ ನುಗ್ಗಿ ತಮ್ಮ ಕೋಪ ಪ್ರದರ್ಶಿಸಲು ಅವರನ್ನೆಲ್ಲ ಸಂಹರಿಸುತ್ತಾರೆ.

ಈ ದಂಪತಿಗಳೇನೋ ಮುಸ್ಲಿಮರು, ಆದರೆ ಅಮೆರಿಕಾದಲ್ಲಿ ಹೆಚ್ಚಿನ ಹತ್ಯಾಕಾಂಡಗಳನ್ನು ಬಿಳಿಯರೇ ಮಾಡುತ್ತಿದ್ದಾರೆ. ಅವರು ಹಾಗೆ ಮಾಡಲು ಕಾರಣ ತಾವು ಅತಿ ಹೆಚ್ಚಿನ ಟೆನ್ಶನ್‌, ಡಿಪ್ರೆಶನ್‌ನಲ್ಲಿ ಇರುವುದಾಗಿದೆ. ಜೊತೆಗೆ ಮಾರಕಾಸ್ತ್ರಗಳೂ ಸುಲಭ ಲಭ್ಯ.

ಕಳೆದ 20 ವರ್ಷಗಳಲ್ಲಿ ಈ ಹತ್ಯೆಗಳಲ್ಲಿ ಅಮೆರಿಕಾದ ಎಷ್ಟು ಅಮಾಯಕರು ಸತ್ತಿದ್ದಾರೆಂದರೆ, ಅಮೆರಿಕಾದ ಸೈನಿಕರೂ ಯುದ್ಧಗಳಲ್ಲಿ ಅಷ್ಟು ಸತ್ತಿಲ್ಲ. ಈ ಮಾರಾಮಾರಿಯ ಪ್ರಮುಖ ಕಾರಣ ಮಾರಕಾಸ್ತ್ರಗಳು ಸುಲಭವಾಗಿ ಸಿಗುವುದೇ! ಅಮೆರಿಕಾದ ಸಂವಿಧಾನ ರಚಿಸಿದರು, ಮಾರಕಾಸ್ತ್ರಗಳನ್ನು ಹೊಂದಿರುವುದು ಮೌಲಿಕ ಹಕ್ಕು ಎಂದು ಸಾರಿದ್ದರು, ಆಗ ಯೂರೋಪ್‌ ತರಹ  ಆಡಳಿತಗಾರರ ಸರ್ವಾಧಿಕಾರ ಇಲ್ಲೂ ನಡೆಯಬಾರದೆಂಬ ಉದ್ದೇಶದಿಂದ. ಇದರಿಂದ ಅಮೆರಿಕಾದಲ್ಲಿ ಪ್ರಜಾಪ್ರಭುತ್ವವೇನೋ ಖಾಯುಂ ಆಯ್ತು, ಆದರೆ ಆಂತರಿಕ ಆತಂಕ ಇಮ್ಮಡಿಸಿತು. ಅಮೆರಿಕಾದ ಕುಟುಂಬಗಳಲ್ಲಿ ಶಿಸ್ತು ಲೇಶ ಮಾತ್ರ ಇಲ್ಲ. ಅಲ್ಲಿನ ಮಕ್ಕಳು, ಯುವಜನತೆಗೆ ಸಿಕ್ಕಿರುವ ಸ್ವಾತಂತ್ರ್ಯದಿಂದ ಅವರ ಹೊಸ ಆಲೋಚನೆ, ಹೊಸ ಸಂಶೋಧನೆ, ಹೊಸ ಟೆಕ್ನಿಕ್ಸ್, ಕಠಿಣ ಪರಿಶ್ರಮಕ್ಕೆ ಕಾರಣವಾಯ್ತು. ಆದರೆ ಈ ಪೈಪೋಟಿಯಲ್ಲಿ ಹಿಂದುಳಿದವರಲ್ಲಿ, ಈ ಸ್ವಾತಂತ್ರ್ಯ ಸ್ವೈರತೆಗೆ ತಿರುಗಿ ಕಬಂಧ ಬಾಹುಗಳಾಗಿ ಸಮಾಜ ಆಕ್ರಮಿಸಿದೆ. ಜೊತೆಗೆ ಕೈಯಲ್ಲಿ ಮಾರಕಾಸ್ತ್ರ ಇದ್ದರಂತೂ ತಿಳಿದ, ತಿಳಿಯದ ಎಲ್ಲರನ್ನೂ ಸಂಹರಿಸುವ ದೈತ್ಯಶಕ್ತಿ ತುಂಬುತ್ತದೆ.

ಇದರಿಂದ ಪಾರಾಗಲು ಅಮೆರಿಕಾ ಬೃಹತ್‌ ಜೇಲುಗಳನ್ನೇನೋ ಮಾಡಿದೆ. ಅದರಲ್ಲಿ ಈ ಉದ್ಧಂಡ ಯುವಜನತೆಯನ್ನು ಬಂಧಿಸಿಡಲು, ಆದರೆ ಈ ಮಂದಿ ಅಲ್ಲಿಗೆ ಬಂದು ಇನ್ನಷ್ಟು ಹೆಚ್ಚಿನ ಅಪರಾಧಗಳನ್ನು ಕಲಿಯುತ್ತಿದ್ದಾರೆ. ಇಸ್ಲಾಮಿ ಭಯೋತ್ಪಾದನೆ ಇನ್ನಷ್ಟು ಪಾಠಗಳನ್ನು ಕಲಿಸಿದೆ, ಆಡಳಿತಗಾರರನ್ನು ಸುಲಭವಾಗಿ ಬೆದರಿಸಲು ನಿರಾಯುಧ ನಿರ್ದೋಷಿಗಳನ್ನು ಕಂಡಲ್ಲಿ ಸಂಹರಿಸಿ ಎಂದು. ಯುದ್ಧಕಲೆಯಲ್ಲಿ ಇಸ್ಲಾಮಿ ದೇಶ ಬಹಳ ದುರ್ಬಲ. ಹೀಗಾಗಿ ಭಯೋತ್ಪಾದನೆಯ ನೆರವಿನಿಂದ ಎಲ್ಲೆಲ್ಲೂ ಆತಂಕ ಹರಡುತ್ತಾರೆ. ಇದೇ ರೀತಿ ಉದ್ರಿಕ್ತ ಅಮೆರಿಕನ್‌ ಯುವಜನತೆ, ನಶೆ ಹಾಗೂ ಸ್ವೈರತೆಯ ಮಿಶ್ರಭಾವದಿಂದ ಸಾಮಾನ್ಯ ಜನರಿಗೆ ನಿತ್ಯನರಕ ಸೃಷ್ಟಿಸಿದ್ದಾರೆ. ಇಸ್ಲಾಮಿ ಭಯೋತ್ಪಾದನೆಯು ಇವರ ಮನದಲ್ಲಿ ತಮ್ಮ ಸೋಲು, ಅಪಮಾನ, ಫೇಲ್ಯೂರ್‌ಗಳಿಗೆ ನೆರೆಮನೆಗೆ ಬೆಂಕಿ ಹಚ್ಚುವುದೇ ಧಾರ್ಮಿಕ ಹಕ್ಕು ಎಂಬ ಬೀಜ ಬಿತ್ತಿದೆ. ಅಲ್ಲಿನ ಮೌಲ್ವಿಗಳು ಇದೇ ಸರಿ ಎಂದು ಸಮರ್ಥಿಸುತ್ತಿದ್ದರೆ, ಇದು ಮೇಲಿನವನ ಮರ್ಜಿ ಎಂದೇ ತಿಳಿಯಬೇಕಿದೆ.

ಹಲವು ವರ್ಷಗಳಿಂದ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಇಂಥ ಯುದ್ಧಗಳ, ಸಾಮಾನ್ಯ ಜನರ ಬಲಿ ತೆಗೆದುಕೊಳ್ಳುತ್ತಿವೆ. ಇಡೀ ಹಳ್ಳಿ, ನಗರ, ಊರುಗಳಿಗೆ ಬೆಂಕಿ ಬೀಳುತ್ತಿರುತ್ತದೆ. ಇಂದಿನ ಸಭ್ಯ ಸಮಾಜವೇನೋ ಇದನ್ನು ಬಿಟ್ಟಿದೆ, ಆದರೆ ಧಾರ್ಮಿಕ ಸಮಾಜ ಈ ಕ್ರಿಮಿಯನ್ನು ಅತಿಯಾಗಿ ಪೋಷಿಸುತ್ತಿದೆ, ಆ ಕ್ರಿಮಿ ಸಾಮಾನ್ಯರ ತಲೆಯೊಳಗೂ ಬಂದು ಸೇರಿದೆ. ಎಬೋಲಾಗಿಂತಲೂ ಅತಿ ಕ್ರೂರವಾದ ಈ ಸೋಂಕನ್ನು ತಡೆಯವುದಾದರೂ ಆದೀತೇ? ಖಂಡಿತಾ ಇಲ್ಲ. ಧರ್ಮದ ಅಂಗಡಿಗಳು ಎಷ್ಟೋ ವರ್ಷಗಳಿಂದ ಹೀಗೇ ಮೆರೆಯುತ್ತಿವೆ, ಈಗಲೂ ತಾರ್ಕಿಕತೆಯ ಮುಂದೆ ಎದೆ ಸೆಟಿಸಿ ಮುನ್ನುಗ್ಗುತ್ತವೆ. ಧರ್ಮದ ಹೆಸರಿನಲ್ಲಿ ಯಾರೇ ಪೂಜೆ ಪ್ರವಚನ ನಡೆಸಿದರೂ, ಇಂಥ ಬೆಂಕಿಗೆ ಪೆಟ್ರೋಲ್ ಸುರಿಸುತ್ತಿದ್ದಾರೆ ಎಂದೇ ತಿಳಿಯಬೇಕಿದೆ.

ಮಹಾ ಲೂಟಿಗೆ ಮೂಲವಾಯಿತು ಮಳೆ

ಸುನಾಮಿ, ಭೂಕಂಪಗಳು ಹೆಸರು ಕೇಳಿದರೇನೇ ಭಯ ಹುಟ್ಟಿಸುತ್ತವೆ, ಈಗ ಭಾರಿ ಮಳೆಯೂ ಹಿತಕರ ಹನಿ ನೀಡುವ ಬದಲು ಮಹಾ ಲೂಟಿಗೆ ಮೂಲವಾಗಿದೆ. `ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ….’ ಎಂದು ಕಾಯುವ ಬದಲು,  ತಮಿಳುನಾಡಿನಲ್ಲಿ ಪ್ರಚಂಡ ರುದ್ರನರ್ತನ ಮಾಡಿ 80 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯ ಚೆನ್ನೈ ನಗರಕ್ಕೆ ವರ್ಷಗಟ್ಟಲೇ ಸುಧಾರಿಸಿಕೊಳ್ಳಬೇಕಾದ ಭಾರಿ ಆಘಾತ ಮಾಡಿದೆ. ಭಾರಿ ಮಳೆಯಿಂದಾಗಿ ಇಡೀ ಚೆನ್ನೈ ನಗರ ಒಂದು ವಿಶಾಲ ಸ್ವಿಮ್ಮಿಂಗ್‌ ಪೂಲ್ ‌ಆಗಿಹೋಯ್ತು. ದಶಕಗಳಿಂದ ಅಲ್ಲಿಯೇ ನೆಲೆನಿಂತಿದ್ದ ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದವು.

2 ವಾರಗಳ ಕುಂಭದ್ರೋಣ ಮಳೆಯಿಂದಾಗಿ ಇಡೀ ನಗರಕ್ಕೆ ಗರ ಬಡಿದಂಥ ಶಿಕ್ಷೆ ಈ ಹಳೆಯ ನಗರಕ್ಕೆ ಸಿಕ್ಕಿದೆ. ಈ ನಷ್ಟ ತುಂಬಿಕೊಳ್ಳಲು ಎಷ್ಟು ವರ್ಷಗಳು ಹಿಡಿಯುತ್ತದೋ ಹೇಳಲಾಗದು. ವಿಡಂಬನೆ ಎಂದರೆ ಮನೆಗಳು ಇಲ್ಲಿ ಅಮೆರಿಕಾ ತರಹ ಕಚ್ಚಾ ಆಗಿರಲಿಲ್ಲ. ನೆಲ ಅಂತಸ್ತಿನ ಮನೆ ಬಿಟ್ಟು ಮಹಡಿ ಮನೆ ಅಥವಾ ಗುಡಿಸಲುಗಳ ಛಾವಣಿ ಏರಿ ಹೇಗೋ ಜೀವ ಉಳಿಸಿಕೊಂಡಿದ್ದಾಯಿತು. ಆದರೆ ಒಂದೊಂದೇ ಕಾಸಿಗೆ ಕಾಸು ಕೂಡಿಸಿ ಮಾಡಿದ್ದ ಆಸ್ತಿಪಾಸ್ತಿ ಸಂಪೂರ್ಣ ಕೈಬಿಟ್ಟಿತು.

ಹಾಗೆ ನೋಡಿದರೆ, ಮಳೆ ನೀರಿನ ಪ್ರವಾಹ ಕಛೇರಿಗಳು, ಬ್ಯಾಂಕು, ಏರ್‌ಪೋರ್ಟ್‌ನಲ್ಲಿ ನಿಂತಿದ್ದ ವಿಮಾನ ಎಲ್ಲಕ್ಕೂ ನುಗ್ಗಿದವು. ವಾಹನಗಳು ಮುಳುಗಿದವು, ಬೇಸ್‌ಮೆಂಟ್‌ನ ಲಾಕರ್‌, ಅಂಗಡಿ, ಗೋದಾಮು….. ಎಲ್ಲಾ ಮುಳುಗಿದವು. ಒಬ್ಬ ಗೃಹಿಣಿಗೆ ತನ್ನ ಧಾರೆಯ ಕಾಂಜೀರಂ ರೇಷ್ಮೆ ಸೀರೆ ನಾಶವಾದ್ದರಿಂದ ಉಂಟಾದ ದುಃಖವನ್ನು ಪದಗಳಲ್ಲಿ  ಬರೆದು ಹೇಳಲಾಗದು.

ಬ್ಲೇಮ್ ಗೇಮ್ ಶುರುವಾದಾಗ ಕೇಳಿ ಬಂದ ಮಾತು, ಪ್ಲೇಟ್‌ನಂತೆ ಸಪಾಟಾದ ತಗ್ಗಾದ ಪ್ರದೇಶಗಳಲ್ಲಿ ನೀರಿನ ಅಪಾಯ ಎಂದಿದ್ದರೂ ಆಗಬಹುದು ಅಂತಿರುವಾಗ ಅಲ್ಲಿ ಖಂಡಿತಾ ಮನೆಗಳನ್ನು ಕಟ್ಟಬಾರದಿತ್ತು. ಆದರೆ ಹಿಗ್ಗುತ್ತಿರುವ ನಗರದಾಹಕ್ಕೆ ಸೈಟ್‌ಬೇಕಾದಾಗ, ಸೈಟ್‌ ಎಂಥದೇ ಇರಲಿ, ಅಪಾಯಕಾರಿ ಮನೆಯೇ ಆದರೂ ಕಟ್ಟದೇ ಬಿಡಲಾರರು. ಜನರಂತೂ ನಗರ ವ್ಯಾಮೋಹಕ್ಕೆ ಮುಗಿಬಿದ್ದು, ಪ್ರವಾಹ ಉಕ್ಕುವ ಅಡೆಯಾರ್‌ನಂಥ ನದಿ ಪಕ್ಕದಲ್ಲೇ ಮನೆಗಳನ್ನು ಮಾಡಿಕೊಂಡರು, ಹಾಯಾಗಿ ವಾಸಿಸಿದರು. ಜನ ಈ ನಿಟ್ಟಿನಲ್ಲಿ ಪ್ರವಾಹದ ನದಿಯ ತಟವಿರಲಿ, ಐಸ್‌ ತುಂಬುವ ಗಿರಿಗಳಾದರೂ ಮನೆ ಮಾಡಿಕೊಳ್ಳದೇ ಇರಲಾರರು.

ತಮಿಳುನಾಡಿನ ಸರ್ಕಾರ ದೇಶದ ಇತರ ಸರ್ಕಾರಗಳಂತೆಯೇ, ಮುಂದಿನ 10-15 ವರ್ಷಗಳ ಕುರಿತಾಗಿ ಅಲ್ಲದೆ, ಕೇವಲ ಇಂದಿನದನ್ನು ಮಾತ್ರ ಯೋಚಿಸುತ್ತದೆ. ಅದೂ ಇಂದಿನ ಕಷ್ಟಗಳಲ್ಲಿ ಎಷ್ಟು ಮುಳುಗಿರುತ್ತದೆಂದರೆ, ಮುಂದಿನ 10-15 ವರ್ಷ ವರ್ಷಗಳ ನಂತರ ಏನಾಗುತ್ತದೆ ಅಥವಾ ಸುನಾಮಿ, ಭೂಕಂಪ, ಪ್ರವಾಹ, ಭಾರಿ ಮಳೆಗಳಿಂದಾಗಿ ಏನಾಗಬಹುದೆಂದು ಯೋಚಿಸಲು ಪುರಸತ್ತೂ ಇಲ್ಲ. ದೇಶದ ರಾಜಧಾನಿಯಾದ ದೆಹಲಿಗೆ ಹೆಚ್ಚುತ್ತಿರುವ ಮಾಲಿನ್ಯ ಮತ್ತು ವಿಷಮಯ ಆಗುತ್ತಿರುವ ಗಾಳಿಯ ಬಗ್ಗೆ ಯೋಚಿಸಲು ಪುರಸತ್ತು ಇಲ್ಲದಾಗ, ಚೆನ್ನೈನ ಪಯಸ್‌ ಗಾರ್ಡನ್‌ ಅಂದ್ರೆ ಜಯಲಲಿತಾರ ಮನೆಯಲ್ಲಿ ಈ ಬಗ್ಗೆ ಆಲೋಚನೆ ಮೂಡಿರಬಹುದೆಂದು ಊಹಿಸುವುದಾದರೂ ಹೇಗೆ?

ಈಗ ಸದ್ಯಕ್ಕೆ ಮಾಡಬಹುದಾದದ್ದು ಎಂದರೆ ನಿಮ್ಮ ನೆಂಟರಿಷ್ಟರು ತಮಿಳುನಾಡಲ್ಲಿದ್ದರೆ, ಅವರಿಗೆ ಏನಾದರೂ ಸಹಾಯ ಮಾಡಿ. ಸಣ್ಣ ಮಕ್ಕಳಿದ್ದರೆ ನಿಮ್ಮ ಬಳಿಗೆ ಕರೆಸಿ 8-10 ದಿನ ಇರಿಸಿಕೊಳ್ಳಿ. ನಿಮ್ಮ ಒಂದಿಷ್ಟು ಹಳೆಬಟ್ಟಗಳು, ಹತ್ತು ಹಲವು ಅಗತ್ಯ ಸಾಮಗ್ರಿಗಳನ್ನು ಅಗತ್ಯವಿರುವಂಥವರಿಗೆ ಕೊಡಿ, ಧಾರಾಳ ಆರ್ಥಿಕ ಸಹಾಯ ಮಾಡಿ.

ಸಮಾಜ ಸೇವಾ ಸಂಸ್ಥೆಗಳಿಗೆ ಹಣ ಅಥವಾ ಸಾಮಗ್ರಿಗಳನ್ನು ದಾನ ಮಾಡಲು ಮುನ್ನುಗದಿರಿ, ಏಕೆಂದರೆ ಅವು ಸಂತ್ರಸ್ತರಿಗೆ ಸೇರುವುದಿಲ್ಲ. ಅವು ಒಂದೆಡೆ ಸಂಗ್ರಹಗೊಳ್ಳುತ್ತವೆ, ಆದರೆ ಯಾರು ಕೊಂಡೊಯ್ದು ಹೇಗೆ ಹಂಚುತ್ತಾರೆ ಎಂಬುದು ಏನೂ ಹೇಳಲಾಗದು. ಆದ್ದರಿಂದ ನಿಮ್ಮ ಕಷ್ಟಾರ್ಜಿತ ಹಣವನ್ನು ಖಾಸಗಿಯಾಗಿ ನೀಡಿ, ನೆಂಟರಿಷ್ಟರ ಮೂಲಕ ನೇರ ತಲುಪಿಸಿ. ಇಂಥ ಆಪತ್ತಿನಲ್ಲಿ ಖಂಡಿತಾ ಸಹಾಯ ಮಾಡಿ, ಆದರೆ ಶ್ರಾದ್ಧದಲ್ಲಿ ಮಾಡುವಂತೆ ನಿಮ್ಮ ಎದುರಿನ ಪುರೋಹಿತರಿಗೆ ಸತ್ತವರಿಗಾಗಿ ನೀಡಿದ ದಾನದಕ್ಷಿಣೆ ತರಹ ಇದೂ ಸಂದಾಯವಾಗುತ್ತದೆ ಎಂದುಕೊಳ್ಳಬೇಡಿ.

ಬೇರೆ ಇದ್ದರೂ ಸರಿ, ವಿಚ್ಛೇದನ ಬೇಡ

ಸುಪ್ರೀಂ ಕೋರ್ಟ್‌ನ ಒಂದು ನಿರ್ಣಯದಲ್ಲಿ ಹೇಳಿದ್ದೆಂದರೆ, ವಿಚ್ಛೇದನ ಅಥವಾ ಸೆಪರೇಶನ್‌ ನಂತರ ಹೆಣ್ಣಿಗೆ ತನ್ನ ಸ್ತ್ರೀಧನದ ಮೇಲೆ ಹಕ್ಕು ಇದ್ದೇ ಇರುತ್ತದೆ. ಹೆಣ್ಣು ಪತ್ನಿಯಾಗುವ ಮೊದಲು ಮತ್ತು ನಂತರ ಹೊಂದುವ ಧನ ಕನಕವೇ ಸ್ತ್ರೀಧನ. ಇದು ಗಂಡನ ಆದಾಯ ಮತ್ತು ಸಂಪತ್ತಿನಿಂದ ಬೇರೆಯಾದುದು. ಇದು ಅವಳಿಗೆ ಗಂಡ ಅಥವಾ ಅವನ ಮನೆಯವರಿಂದಲೂ ಸಿಕ್ಕಿರಬಹುದು.

ಈ ನಿರ್ಣಯ ಕಾನೂನಿನಲ್ಲಿ ಹೊಸತೊಂದು ವಿಷಯವನ್ನೇನೂ ಜೋಡಿಸುತ್ತಿಲ್ಲ, ಆದರೆ ಮೊದಲಿನ ಕಾನೂನಿಗೆ ಖಂಡಿತಾ ಪುಷ್ಟಿ ನೀಡುತ್ತದೆ. ಡೈಮೋರ್ಸ್ ಅಥವಾ ಸೆಪರೇಶನ್‌ ಮೂಲತಃ ಒಂದು ನೋವಿನ ಪ್ರಕ್ರಿಯೆ. ಯಾವ ಸಂದರ್ಭದಲ್ಲಿ ಹೆಣ್ಣು ಇದಕ್ಕೆ ಒಪ್ಪುತ್ತಾಳೋ, ಗಂಡಸಿಗೆ ಊಹಿಸಲಿಕ್ಕೂ ಸಾಧ್ಯವಿಲ್ಲ. ಒಂದು ವಿಧದಲ್ಲಿ ಇದು ಅನಾಥ ಸ್ಥಿತಿಯೇ ಸರಿ. ಅತ್ತ ಮದುವೆ ಮಾಡಿ ಕಳುಹಿಸಿಕೊಟ್ಟ ತವರೂ ಇಲ್ಲ, ಇತ್ತ ಹೊಸಬಾಳಿಗೆ ಬರಮಾಡಿಕೊಂಡ ಗಂಡನ ಮನೆಯೂ ಇಲ್ಲ.

ಇಂಥ ಸ್ಥಿತಿಯಲ್ಲಿ ಅವಳಿಗೆ ದೊರಕುವ ಹಣ, ಅದು ಅವಳನ್ನು ಕನಿಷ್ಠ ಹಸಿವಿನಿಂದ ಸಾಯುವ ಅಥವಾ ತಿರುಪೆ ಎತ್ತುವ ಸ್ಥಿತಿಯಿಂದ ಕಾಪಾಡುತ್ತದೆ. ವಿಚ್ಛೇದನ ಹೆಣ್ಣಿನ ತಪ್ಪಿನಿಂದಲೂ ಆಗಿರಬಹುದು, ಆದರೆ ನೋವಂತೂ ಇದ್ದೇ ಇರುತ್ತದೆ. ನಿಮ್ಮ ಕೈ ಭೂಕಂಪದಿಂದ ತುಂಡಾಗಿರಲಿ ಅಥವಾ ಕೋಪದಿಂದ, ಅದರ ಮೇಲೆ ಚೂರಿ ಆಡಿದಾಗ, ನೋವಿನಲ್ಲಿ ವ್ಯತ್ಯಾಸವಿಲ್ಲ. ವಿಚ್ಛೇದನಕ್ಕೆ ಯಾರೇ ಜವಾಬ್ದಾರರಿರಲಿ, ಈ ಇಡೀ ಪ್ರಕರಣ ಒಂದು ದುಃಖದ ಕರ್ಮಕಾಂಡವೇ ಸರಿ. ಇದರಲ್ಲಿ ಹೆಣ್ಣಿಗೆ ಏನೇ ಸಿಕ್ಕಿದರೂ ಅದು ಒಳ್ಳೆಯದೇ. ಏಕೆಂದರೆ ಇಂದಿಗೂ ನಮ್ಮ ಸಮಾಜದಲ್ಲಿ ಒಬ್ಬಂಟಿ ಪುರುಷ ಓ.ಕೆ. ಆದರೆ ಒಬ್ಬಂಟಿ ಹೆಣ್ಣು ಮಾತ್ರ ಕ್ಷಣ ಕ್ಷಣ ಬೆಂಕಿಬಲೆಯನ್ನು ಎದುರಿಸಬೇಕು.

ಸ್ತ್ರೀಧನದ ಕುರಿತಾಗಿ ಹೆಣ್ಣಿನ ಹಕ್ಕು ಸದಾ ಇರುತ್ತದೆ. ಪತಿ ದಿವಾಳಿ ಆಗಿರಲಿ, ಪತ್ನಿ ತನ್ನ ಬಿಸ್‌ನೆಸ್‌ನಲ್ಲಿ ನಷ್ಟ ಮಾಡಿಕೊಂಡಿರಲಿ, ಸಾಲ ವಸೂಲಿಯವನು ಈ ಸ್ತ್ರೀಧನ ಮುಟ್ಟುವಂತಿಲ್ಲ. ಈ ದೃಷ್ಟಿಯಿಂದ ಈ ಸುರಕ್ಷಿತ ಧನವನ್ನು ಪತಿಯೊಂದಿಗೆ ವಾಸಿಸುವ ಅಥವಾ ಬೇರೆ ಹೋಗುವ ಹೆಣ್ಣು, ತನ್ನ ಎದೆಗಾನಿಸಿಕೊಂಡು ಕಾಪಾಡಿಕೊಳ್ಳಬೇಕು. ಏಕೆಂದರೆ ಇದು ಅವಳ ಮುಂದಿನ ಭವಿಷ್ಯಕ್ಕೆ ಬಲು ಅವಶ್ಯ. ಗಂಡ ಅಥವಾ ತಂದೆ ಇಬ್ಬರ ಸಹಾಯ ಇಲ್ಲವಾದಾಗ, ಇದನ್ನೇ ಮೂಲಾಧಾರ ಎಂದು ಭಾವಿಸಬೇಕು. ಹಾಗಾಗಿ ಸಾಧ್ಯವಾದಷ್ಟೂ ಇದರಿಂದ ಕಡಿಮೆ ಖರ್ಚು ಮಾಡಬೇಕು. ದಿನೇದಿನೇ ಹೆಚ್ಚುತ್ತಿರುವ ಡೈವೋರ್ಸ್‌ ಪ್ರಕರಣಗಳನ್ನು ಗಮನಿಸಿದಾಗ, ಜೋಡಿಗಳು ಮುಂದೆ ತಮ್ಮ ಗತಿ ಏನಾದೀತೆಂದು ಯೋಚಿಸಲೇಬೇಕು. ಇಬ್ಬರಲ್ಲಿ ಯಾರೊಬ್ಬರಾದರೂ ಬೇರೊಬ್ಬರನ್ನು ಬಯಸಿದಾಗ ಮಾತ್ರ, ಡೈವೋರ್ಸ್‌ಗೆ ಮೊರೆಹೋಗಬೇಕೇ ಹೊರತು ಬೇರೆ ಕಾರಣಕ್ಕಲ್ಲ. ಭಿನ್ನಾಭಿಪ್ರಾಯಗಳಿದ್ದರೆ ಬೇರೆ ಇರಿ, ಆದರೆ ವಿಚ್ಛೇದನ ಖಂಡಿತಾ ಬೇಡ. ಗಂಡನೊಂದಿಗೆ ಜಗಳವೇ, ಬೇರೆ ಮನೆ ಮಾಡಿ, ತವರಿಗೆ ಹೋಗಿ, ಆದರೆ ಶಾಶ್ವತವಾಗಿ ಸಂಬಂಧ ತೊರೆಸುವ ವಿಚ್ಛೇದನಕ್ಕೆ ಓಟ್‌ ಹಾಕಬೇಡಿ. ಇದರಿಂದ ಕಾನೂನಿನ ದೃಷ್ಟಿಯಲ್ಲೂ ನಿಮ್ಮ ಸ್ಥಾನದಲ್ಲಿ ವ್ಯತ್ಯಾಸ ಬರುತ್ತದೆ ಹಾಗೂ ಆರ್ಥಿಕ ಸಮಸ್ಯೆಯೂ ಹೆಚ್ಚುತ್ತದೆ. ಒಂದು ಸೂರಿನಡಿ ಶತ್ರುಗಳಂತೆ ಬದುಕುವುದು ದುಸ್ತರ ಎನಿಸಿದಾಗಲೂ ಸಹ, ಕೋರ್ಟುಗಳ ಗಾಡಾಂಧಕರ ಕಟಕಟೆ ಹತ್ತಬೇಡಿ, ಏಕೆಂದರೆ ಅಲ್ಲಿನ ಕಪ್ಪು ಮಸಿಯ ವಾತಾವರಣ ಮುಂದೆ ನಿಮ್ಮ ಜೀವನವನ್ನು ನರಕಸದೃಶವಾಗಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ