ಆಸ್ತಿ ಖರೀದಿಸುವುದು ಪ್ರತಿಯೊಬ್ಬರ ಜೀವನದ ಬಹು ದೊಡ್ಡ ಕನಸು. ತಮ್ಮ ಆರ್ಥಿಕ ಶಕ್ತ್ಯಾನುಸಾರ ತಮ್ಮದೇ ಆದ ಮನೆ, ನಿವೇಶನ, ಫ್ಲಾಟ್‌ಗಳನ್ನು ಹೊಂದಲು ಬಯಸುತ್ತಾರೆ. ಆರ್ಥಿಕವಾಗಿ ಸದೃಢರಾಗಿರುವವರು ವಿಶಾಲವಾದ, ವೈಭವದ ಬಂಗಲೆಯನ್ನು ಖರೀದಿಸಿದರೆ, ಮಧ್ಯಮ ವರ್ಗದ ಜನ ಪುಟ್ಟ ಮನೆಗಳನ್ನೋ ಅಥವಾ ಚಿಕ್ಕದಾದ ನಿವೇಶನವನ್ನು ಕೊಳ್ಳಲು ಬಯಸುತ್ತಾರೆ. ವರ್ಷಾನುಗಟ್ಟಲೆಯಿಂದ ಕೂಡಿಟ್ಟ ಹಣದಿಂದ ತಮ್ಮ ಕನಸಿನ ಮನೆ ಅಥವಾ ನಿವೇಶನವನ್ನು ಕೊಳ್ಳುವ ಸಂಭ್ರಮದಲ್ಲಿರುತ್ತಾರೆ. ಮನೆ ಎನ್ನುವುದು ಕೇವಲ ಸಿಮೆಂಟು ಇಟ್ಟಿಗೆಗಳ ಗೂಡಲ್ಲ....! ಬದಲಿಗೆ ಅದೊಂದು ಭಾವನೆಗಳಿಂದ ಮಿಳಿತಗೊಂಡಿರುವ ಭಾವನಾತ್ಮಕ ವಿಚಾರ.

ಆದ್ದರಿಂದ ಆಸ್ತಿ ಖರೀದಿಸುವಾಗ ಹಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ. ಭವಿಷ್ಯದಲ್ಲಿ ಬಂದೊದಗಬಹುದಾದ ಹಲವಾರು ಸಮಸ್ಯೆಗಳಿಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಒಂದಿಷ್ಟು ಸಲಹೆಗಳು ನಿಮಗೆ ಉಪಯುಕ್ತವಾಗಬಲ್ಲದು.

ಅವುಗಳು ಹೀಗಿವೆ :

  1. ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಅಥವಾ ನಿವೇಶನವನ್ನು ಖರೀದಿಸುವ ಮುನ್ನ ಆಸ್ತಿಯನ್ನು ಪರಭಾರೆ ಮಾಡುವ ವ್ಯಕ್ತಿಯ ಸ್ವವಿವರ ಅವರ ವ್ಯಯಕ್ತಿಕ ಹಿನ್ನೆಲೆ, ಜಮೀನಿನ ಸಂಪೂರ್ಣ ವಿವರ ಇತ್ಯಾದಿ ವಿಚಾರಗಳನ್ನು ಅಗತ್ಯವಾಗಿ ಪಡೆದುಕೊಳ್ಳತಕ್ಕದ್ದು. ಡೆವಲಪರ್‌ ಅಥವಾ ರಿಯಲ್ ಎಸ್ಟೇಟ್‌ ಸಂಸ್ಥೆಗಳಿಂದ ನೇರವಾಗಿ ಖರೀದಿಸುವುದಾದಲ್ಲಿ ಸಂಸ್ಥೆಯ ಬಗ್ಗೆ ಹಾಗೂ ಡೆವಲಪರ್

ಕುರಿತು ಅವರ ಟ್ರ್ಯಾಕ್‌ ರೆಕಾರ್ಡ್‌ನ್ನು ಒಮ್ಮೆ ತಿಳಿದುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಕೇವಲ ಬಣ್ಣ ಬಣ್ಣದ ಬ್ರೋಶರ್‌ಗಳ ಮೋಹಕ್ಕೆ ಆಕರ್ಷಿತರಾಗುವುದಾಗಲಿ ಅಥವಾ ಹಣಕಾಸು ಸಂಸ್ಥೆಗಳಿಂದ ಅನುಮೋದನೆ ಪಡೆದಿದೆ ಎನ್ನುವ ಕಾರಣಕ್ಕಾಗಿ ಇಲ್ಲವೇ ರಮ್ಯವಾದ ಭರವಸೆಯುಕ್ತ ಹೇಳಿಕೆಯನ್ನು ನಂಬಬೇಡಿ. ಎಷ್ಟೋ ಸಾರಿ ಕಲರ್‌ಫುಲ್ ಬ್ರೋಶರ್‌ಗಳು ನಿಮ್ಮನ್ನು ಮರುಳು ಮಾಡುವುದಿದೆ. ಜೊತೆಗೆ ಅದ್ಭುತವಾದ `ರಿಚ್‌' ಆಫೀಸ್‌ಗಳ ಇಂಟೀರಿಯರ್‌ಗಳ  ಆಕರ್ಷಣೆಗೆ ಒಳಗಾಗಿ ಹರಿಬರಿಯ ನಿರ್ಧಾರ ತೆಗೆದುಕೊಂಡು ನಿಂತ ಕಾಲಲ್ಲೇ ಅಡ್ವಾನ್ಸ್ ಚೆಕ್‌ನ್ನು ನೀಡಲು ಹೋಗದಿರಿ. ಅವರಾಡುವ ಸಿಹಿಮಾತಿಗೆ ಮನಸೋತು ದಿಢೀರ್‌ ನಿರ್ಧಾರ ಬೇಡ. ಏಕೆಂದರೆ ನೀವು ಖರೀದಿಸುತ್ತಿರುವುದು ಯಾವುದೋ ಬೊಂಬೆಗಳನ್ನಲ್ಲ.... ಆಸ್ತಿಯನ್ನು ಎನ್ನುವುದು ನೆನಪಿರಲಿ.

  1. ಇನ್ನು ಆಸ್ತಿ ಪರಬಾರೆಗೆ ಮುನ್ನ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಅದನ್ನು ನುರಿತ ವಕೀಲರಲ್ಲಿ ಸಂಶೋಧಿಸಿ `ಲೀಗ್‌ಒಪೀನಿಯನ್‌'ನ್ನು ಪಡೆದುಕೊಂಡು ಆಸ್ತಿಯ ನಿಖರತೆಯನ್ನು ತಿಳಿದುಕೊಳ್ಳಬೇಕು. ಸರಿಯಾಗಿ ಕಾನೂನಾತ್ಮಕ ಪರೀಕ್ಷೆಗೊಳಪಡಿಸದೆ ಅತಿಯಾದ ಆತ್ಮವಿಶ್ವಾಸದಿಂದ ಖರೀದಿಸಿದಲ್ಲಿ, ಮುಂದೆ ಎದುರಾಗಬಹುದಾದ ಸಮಸ್ಯೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ.
  2. ನಿವೇಶನ ಅಥವಾ ಮನೆಯನ್ನು ಖರೀದಿಸುವಾಗ ಒಂದು ಪ್ರಮುಖ ವಿಚಾರ ಮನದಲ್ಲಿರಲಿ. ಅದು ಆಸ್ತಿಗಳು ಯಾವಾಗಲೂ ಭವಿಷ್ಯದ ಬೆಂಗಾವಲಾಗಿ ನಿಲ್ಲುವಂತಹದ್ದು. ಹಾಗಾಗಿ ಸಾಧ್ಯವಾದಷ್ಟು ಉತ್ತಮ ಮರು ಮಾರಾಟ ಮೌಲ್ಯವಿರುವಂತಹ ಆಸ್ತಿಯನ್ನೇ ಖರೀದಿಸಿ. ಒಳ್ಳೆಯ ಮರು ಮಾರಾಟ ದೊರಕಬೇಕೆಂದರೆ ಅದು ಅತ್ಯುತ್ತಮ ಏರಿಯಾದಲ್ಲಿರಬೇಕು. ಇಲ್ಲಿ ಮರು ಮಾರಾಟ ಮೌಲ್ಯವನ್ನು ನಿರ್ಧರಿಸುವುದು ನೀವು ಖರೀದಿಸಬಯಸುವ ನಿವೇಶನ ಅಥವಾ ಮನೆ ಎಂತಹ ಏರಿಯಾದಲ್ಲಿದೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಮೊದಲನೆಯದಾಗಿ ಸುಸಜ್ಜಿತವಾದ, ನೀಟಾಗಿರುವ, ಉದ್ಯಾನವನ ಹತ್ತಿರವಿರುವಂತಹ ಸ್ಥಳವನ್ನೇ ಆಯ್ಕೆ ಮಾಡಿ. ಎಲ್ಲಕ್ಕಿಂತ ಮುಖ್ಯವಾಗಿ ಯಥೇಚ್ಛವಾಗಿ ನೀರು ದೊರಕುವಂಥ ಸ್ಥಳಗಳಿಗೆ ಮೊದಲ ಆದ್ಯತೆ ನೀಡಿ.
  3. ಒಂದು ವೇಳೆ ನಿವೇಶನವನ್ನು ಖರೀದಿಸಿ, ನಿಮ್ಮ ಇಷ್ಟಕ್ಕನುಸಾರವಾಗಿ ಮನೆ ಕಟ್ಟಿಸುವುದಾದಲ್ಲಿ ಮೊದಲು ಸಂಬಂಧಿಸಿದ ಇಲಾಖೆಯಿಂದ ಮೂಲನಕ್ಷೆಯನ್ನು ಪಡೆದುಕೊಂಡು, ನಕ್ಷೆಗನುಗುಣವಾಗಿ ಮನೆಯನ್ನು ನಿರ್ಮಿಸತಕ್ಕದ್ದು. ಒಂದು ವೇಳೆ ಮೂಲನಕ್ಷೆಯ ನಿಯಮವನ್ನು ಉಲ್ಲಂಘಿಸಿ ನಿರ್ಮಾಣ ಮಾಡಿದಲ್ಲಿ ಮುಂದೆ, ತೊಂದರೆಗೆ ಸಿಲುಕುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಮೂಲನಕ್ಷೆಗೆ ಅನುಗುಣವಾಗಿ ಪ್ಲಾನ್‌ನ್ನು ಪಡೆದುಕೊಳ್ಳಿ.
  4. ಪ್ರಾಪರ್ಟಿ ಹುಡುಕುವ ಕೆಲಸ ಬಹಳ ಕಷ್ಟಕರ. ಎಲ್ಲೆಲ್ಲಿ? ಯಾವ ಯಾವ ಪ್ರಾಪರ್ಟಿಗಳಿವೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ಕಮೀಷನ್‌ ಉಳಿಸುವ ಆಸೆಯಿಂದ ಅನಗತ್ಯವಾಗಿ ನಿಮ್ಮ ಅಮೂಲ್ಯ ಶ್ರಮ, ಸಮಯವನ್ನು ಹಾಳುಮಾಡಿಕೊಳ್ಳಬೇಡಿ. ಆದ್ದರಿಂದ ಒಳ್ಳೆಯ ಪ್ರಾಪರ್ಟಿ ಹುಡುಕುವ ಕೆಲಸವನ್ನು ಒಂದು ಒಳ್ಳೆಯ ರಿಯಲ್ ಎಸ್ಟೇಟ್‌ ಸಂಸ್ಥೆ ಅಥವಾ ಏಜೆಂಟ್‌ಗೆ ವಹಿಸಿಬಿಡಿ. ನಿಮಗಿಷ್ಟವಾಗುವ ಹತ್ತಾರು ಪ್ರಾಪರ್ಟಿಗಳನ್ನು ನಿಮಗೆ ತೋರಿಸುತ್ತಾರೆ. ಇದರಿಂದ ಆಯ್ಕೆ ತುಂಬಾ ಸುಲಭವಾಗುತ್ತದೆ. ಏಜೆಂಟ್‌ಕಮೀಷನ್‌ ಹಣವನ್ನು ಮುಂಚಿತವಾಗಿ ನಿರ್ಧರಿಸಿಕೊಂಡಲ್ಲಿ ನಿಮ್ಮ ಕನಸಿನ ಪ್ರಾಪರ್ಟಿಯನ್ನು ಆಯ್ಕೆ ಮಾಡುವಲ್ಲಿ ನಿಮಗೆ ನೆರವಾಗುತ್ತಾರೆ. ಇಲ್ಲಿ ಒಂದು ವಿಚಾರವನ್ನು ಗಮನದಲ್ಲಿಡಿ. ಪ್ರಾಪರ್ಟಿಯ ದರ ನಿಗದಿ ಮಾಡುವುದನ್ನು ನೀವೇ ಮಾಡಿ. ಯಾವುದೇ ಕಾರಣಕ್ಕೂ ದರ ನಿರ್ಧಾರವನ್ನು ರಿಯಲ್ ಎಸ್ಟೇಟ್‌ ಏಜೆಂಟ್‌ ಕೈಗೆ ಕೊಡಬೇಡಿ.
  5. ಯಾವುದೇ ಒಂದು ಆಸ್ತಿಯನ್ನು ಮಾಡುವುದರ ಮೂಲ ಉದ್ದೇಶ ಭವಿಷ್ಯದ ಭದ್ರತೆ, ಸ್ವಂತ ಮನೆಯ ಕಲ್ಪನೆ, ಹಣ ತೊಡಗಿಸುವಿಕೆ ಇತ್ಯಾದಿ. ಹಾಗಾಗಿ ಆಸ್ತಿಯನ್ನು ಖರೀದಿಸಲು ನಿರ್ಧರಿಸಿದಾಗ ಮೊದಲು ತೀವ್ರಗತಿಯಲ್ಲಿ ಬೆಳವಣಿಗೆಯಾಗುತ್ತಿರುವ ಪ್ರದೇಶವನ್ನು ಗುರುತಿಸಿ. ಏಕೆಂದರೆ, ವೇಗವಾಗಿ ಅಭಿವೃದ್ಧಿ ಹೊಂದುವ ಏರಿಯಾಗಳಾದರೆ ನಿಮ್ಮ ಹೂಡಿಕೆಯು ಕೆಲವೇ ವರ್ಷಗಳಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ಸ್ಥಳದ ಅಭಿವೃದ್ಧಿ ಯಾವ ಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿಯಲು ಸಂಬಂಧಿಸಿದ ಇಲಾಖೆಯಿಂದ ವರದಿ ಪಡೆದುಕೊಂಡು ಖಚಿತಪಡಿಸಿಕೊಳ್ಳಿ. ಆಗ ನಿಮ್ಮ ಹೂಡಿಕೆ ಮೌಲ್ಯಯುತವಾಗಿದೆಯೇ? ಎಂಬುದನ್ನು ತಿಳಿದುಕೊಳ್ಳಬಹುದು. ಜೊತೆಗೆ ನೀವು ಖರೀದಿಸ ಬಯಸುವ ಸ್ಥಳ ಜನನಿಬಿಡ ಪ್ರದೇಶವೇ? ಎಂಬುದನ್ನು ತಿಳಿದುಕೊಳ್ಳಿ ಅಥವಾ ಆ ಸ್ಥಳದ ಅಕ್ಕಪಕ್ಕ ವಾಣಿಜ್ಯ ಸಂಕೀರ್ಣಗಳು, ಶಾಲಾಕಾಲೇಜು, ಸರ್ಕಾರಿ ಕಛೇರಿಗಳು ತಲೆ ಎತ್ತಲಿವೆಯೇ? ಎಂಬುದನ್ನೂ ತಿಳಿದುಕೊಳ್ಳಿ. ಏಕೆಂದರೆ ವಾಣಿಜ್ಯ ಸಂಕೀರ್ಣಗಳು ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಜನ ಸಂಚಾರ ಹೆಚ್ಚಾಗಿದ್ದು ಅದೊಂದು ವಾಣಿಜ್ಯ ವಲಯವಾಗಿ ರೂಪುಗೊಂಡಿರುತ್ತದೆ. ಆಗ ನಿಮ್ಮ ಪ್ರಾಪರ್ಟಿಗೆ ಒಳ್ಳೆಯ ಬೆಲೆ ಹಾಗೂ ಅಲ್ಪಕಾಲದಲ್ಲಿಯೇ ಬಂಡವಾಳ ದ್ವಿಗುಣಗೊಳ್ಳುತ್ತದೆ. ಆದ್ದರಿಂದ ನೀವು ಆಯ್ಕೆ ಮಾಡುವ ಸ್ಥಳ ಉತ್ತಮವಾಗಿದ್ದು ನಿಮ್ಮ ಪ್ರಾಪರ್ಟಿ ಮೌಲ್ಯಯುತ ಆಗಿರಲಿ.
  6. ನೀವು ನಿರ್ದಿಷ್ಟವಾಗಿ ಫ್ಲಾಟು ಖರೀದಿಸಬೇಕೆಂದು ನಿರ್ಧರಿಸಿದಲ್ಲಿ ಅಗಲವಾದ ರಸ್ತೆಗಳು, ಅಭಿವೃದ್ಧಿಗೊಂಡಿರುವ ನಾಗರಿಕ ಸೌಲಭ್ಯವಿರುವ ಮುಖ್ಯ ರಸ್ತೆಗೆ ಹತ್ತಿರವಿರುವ ಸ್ಥಳವನ್ನು ಆಯ್ಕೆ ಮಾಡಿ. ನೀರಿನ ಸೌಲಭ್ಯ ಚೆನ್ನಾಗಿರುವಲ್ಲಿ ಆಯ್ಕೆ ಮಾಡಿ. ಅಲ್ಲದೆ ಫ್ಲಾಟ್‌ ಬಳಿ ಸಿನಿಮಾ ಹಾಲ್, ಶಬ್ದ ಮಾಲಿನ್ಯವಿರುವ ಯಾವುದೇ ವಾಣಿಜ್ಯ ವಸತಿಗಳಿದ್ದಲ್ಲಿ ಖಂಡಿತವಾಗಿಯೂ ದೂರವಿರಿ. ಬದಲಿಗೆ ಅಪಾರ್ಟ್‌ಮೆಂಟ್‌ ಪಕ್ಕದಲ್ಲಿ ಶಾಲೆಗಳು, ದೇವಸ್ಥಾನ, ನರ್ಸರಿ, ಉದ್ಯಾನವನ, ಸುತ್ತಲೂ ಹರಡಿಕೊಂಡಿರುವ ಹಸಿರು ಪರಿಸರ. ಸಾಕಷ್ಟು ತೆರೆದ ಸ್ಥಳವಾಗಿದ್ದಲ್ಲಿ ಗಾಳಿಬೆಳಕು ದೊರಕುವ ಕಡೆ ಫ್ಲಾಟ್‌ನ್ನು ಖರೀದಿಸುವುದು ಒಳಿತು.
  7. ನಿರ್ಮಾಣ ಹಂತದಲ್ಲಿರುವ ಫ್ಲಾಟ್‌ ಅಥವಾ ಕಟ್ಟಡವನ್ನು ಖರೀದಿಸುವುದಾದಲ್ಲಿ, ನೀವು ಗುರುತಿಸಿಕೊಂಡಿರುವ ಫ್ಲಾಟ್‌ ಬಳಿ ಆಗಾಗ್ಗೆ ಭೇಟಿ ನೀಡಿ ಪ್ರಗತಿಯನ್ನು ಗಮನಿಸಿ. ಎಷ್ಟು ಶೀಘ್ರದಲ್ಲಿ ನಿರ್ಮಾಣ ಕಾರ್ಯ ಮುಗಿಯಬಹುದು? ಎಂಬುದನ್ನು ಸಂಬಂಧಿಸಿದ ವ್ಯಕ್ತಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳಿ.
  8. ಸಾಮಾನ್ಯವಾಗಿ ಹಲವಾರು ಮಂದಿ ವಾಸ್ತು ಪ್ರಕಾರವನ್ನು ಇಷ್ಟಪಡುತ್ತಾರೆ. ವಾಸ್ತು ಪ್ರಕಾರ ಕಟ್ಟಿಸಿರುವ ಮನೆಗಳಿಗೆ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿರುತ್ತದೆ. ಆದರೆ ನೀವು ವಾಸ್ತುವನ್ನು ನಂಬದಿದ್ದಲ್ಲಿ ಅಥವಾ ವಾಸ್ತುಶಾಸ್ತ್ರವನ್ನು ವಿರೋಧಿಸುವವರಾಗಿದ್ದಲ್ಲಿ, ನೀವು ಮನೆ ಖರೀದಿಸುವ ಸಂದರ್ಭದಲ್ಲಿ ವಾಸ್ತು ಪ್ರಕಾರ ಕಟ್ಟಿಸಿರುವ ಮನೆಯನ್ನೇ ಕೊಂಡುಕೊಳ್ಳಿ. ಏಕೆಂದರೆ ಎಲ್ಲಾ ಕಾಲದಲ್ಲೂ ಶಾಸ್ತ್ರ, ಸಂಪ್ರದಾಯ ನಂಬುವವರು ಇರುವುದರಿಂದ ಭವಿಷ್ಯದಲ್ಲಿ ಮರು ಮಾರಾಟದ ದೃಷ್ಟಿಯಿಂದ ವಾಸ್ತು ಪ್ರಕಾರವಿರುವ ಮನೆಯನ್ನು ಹೊಂದುವುದು ಉತ್ತಮ.
  9. ಆಸ್ತಿ ಖರೀದಿಯಲ್ಲಿ ಬೆಲೆ ನಿರ್ಧರಿಸುವುದು ತುಸು ಕಷ್ಟ. ಅದರ ನಿಖರ ಬೆಲೆಯನ್ನು ನಿರ್ಧರಿಸಬೇಕಾದಲ್ಲಿ ಮಾರುಕಟ್ಟೆಯ ಪ್ರಸ್ತುತ ದರವನ್ನು ತಿಳಿದುಕೊಂಡಿರಬೇಕು. ರಿಯಲ್ ಎಸ್ಟೇಟ್‌ ಮಾರುಕಟ್ಟೆ ತಜ್ಞರನ್ನು ಸಂಪರ್ಕಿಸಿ ಪ್ರಸ್ತುತ ಬೆಲೆಯನ್ನು ನೋಟ್ ಮಾಡಿಕೊಳ್ಳಿ. ಇದರಿಂದ ಹೆಚ್ಚಿನ ಬೆಲೆಗೆ ಪ್ರಾಪರ್ಟಿ ಖರೀದಿಸುವುದನ್ನು ತಡೆಯಬಹುದು. ಮಾಲೀಕರು ಹೇಳೋ ಬೆಲೆಗೂ, ಮಾರುಕಟ್ಟೆ ಬೆಲೆಗೂ ಬಹಳ ವ್ಯತ್ಯಾಸವಿರುತ್ತದೆ. ಅಲ್ಲದೆ ಕೆಲವೊಂದು ಗೌಪ್ಯ ವೆಚ್ಚವನ್ನು ಅದರಲ್ಲಿ ಸೇರಿಸಿರುತ್ತಾರೆ.
  10. ಯಾವುದೇ ಪ್ರಾಪರ್ಟಿಯನ್ನು ಖರೀದಿಸುವ ಮುನ್ನ ಮೂಲ ಸೌಲಭ್ಯಗಳಾದ ವಿದ್ಯುಚ್ಛಕ್ತಿ, ನೀರಿನ ಸೌಲಭ್ಯ, ಒಳಚರಂಡಿ ಮುಂತಾದ ಇಲಾಖೆಗಳಿಂದ `ಕ್ಲಿಯರೆನ್ಸ್ ಸರ್ಟಿಫಿಕೇಟ್‌' ದೊರಕಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದಲ್ಲಿ ಮೂಲಭೂತ ಸೌಲಭ್ಯಕ್ಕಾಗಿ ಸರ್ಕಾರಿ ಕಛೇರಿಗಳಿಗೆ ನೀವೇ ಅಲೆಯಬೇಕಾಗುತ್ತದೆ.
  11. ಫ್ಲಾಟ್‌ ಖರೀದಿಸುವವರು ಕಡ್ಡಾಯವಾಗಿ 2 ಮುಖ್ಯವಾದ ದಸ್ತಾವೇಜುಗಳನ್ನು ಹೊಂದಿರತಕ್ಕದ್ದು. (ಎ) ಕಮೆನ್ಸ್ ಮೆಂಟ್‌ಸರ್ಟಿಫಿಕೇಟ್‌ (ಬಿ) ಆಕ್ಯುಪೆನ್ಸಿ ಸರ್ಟಿಫಿಕೇಟ್‌. ಇವೆರಡೂ ದಾಖಲೆಗಳು ಅತ್ಯಂತ ಮಹತ್ವಪೂರ್ಣ ದಾಖಲೆಗಳಾಗಿರುವುದರಿಂದ ಮಿಸ್‌ ಮಾಡದೆ ಪಡೆದುಕೊಳ್ಳಿ.
  12. ಮನೆ ಮಾಲೀಕರು ಅಥವಾ ಡೆವಲಪರ್‌ಗಳು ನೀಡುವ ದಾಖಲೆ ಪತ್ರಗಳು ಸರಿಯಾಗಿವೆಯೇ? ಸತ್ಯಸಂಧತೆಯಿಂದ ಕೂಡಿದೆಯೇ ಎನ್ನುವುದನ್ನು ಕಂಡುಕೊಳ್ಳಲು, ಎಲ್ಲಾ ದಾಖಲೆ ಪತ್ರಗಳನ್ನು ಒಂದೊಂದಾಗಿ ಪರಿಶೀಲಿಸಿ, ಸಂಬಂಧಿಸಿದ ಇಲಾಖೆಗೆ ಹೋಗಿ ಮಾಹಿತಿ ನೀಡಿ ಖಚಿತತೆಯನ್ನು ಪಡೆದುಕೊಳ್ಳಿ.
  13. ಮಾರಾಟ ಒಡಂಬಡಿಕೆ ಹಾಗೂ ಕ್ರಯಪತ್ರಗಳಿಗನುಸಾರವಾಗಿ ಸರ್ಕಾರಕ್ಕೆ ಅಗತ್ಯ `ಸ್ಟ್ಯಾಂಪ್‌ ಡ್ಯೂಟಿ'ಯನ್ನು ಪಾತಿಸಲಾಗಿದೆಯೇ? ಎಂಬುದನ್ನು ಪರೀಕ್ಷಿಸಿ. ಜೊತೆಗೆ ಎಲ್ಲಾ ಮಾರಾಟ ಪ್ರಕ್ರಿಯೆಗಳು ಕಾನೂನಾತ್ಮಕವಾಗಿ ನಡೆದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
  14. ಫ್ಲಾಟ್‌ ಖರೀದಿಯ ಸಮಯದಲ್ಲಿ ಕೆಲವು ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಉದಾಹರಣೆಗೆ ಎಂತಹ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿಕೊಳ್ಳಲಾಗಿದೆ. ಕಾರ್ಪೆಟ್‌ ಏರಿಯಾ ಮತ್ತು ಸೂಪರ್‌ ಬಿಲ್ಡಪ್‌ಏರಿಯಾ ಮುಂತಾದ ತಾಂತ್ರಿಕ ವಿಚಾರಗಳ ಮಾಹಿತಿಯನ್ನು ಕಲೆ ಹಾಕಿ ಇಟ್ಟುಕೊಂಡಲ್ಲಿ ದರ ನಿಗದಿಪಡಿಸುವ ಸಂದರ್ಭದಲ್ಲಿ ಬಹಳ ಸಹಕಾರಿಯಾಗಿರುತ್ತದೆ. ಜೊತೆಗೆ ಆರಂಭದಲ್ಲಿ ನೀಡಿದ ವಾಗ್ದಾನದಂತೆ ಕ್ಲಬ್‌ ಹೌಸ್‌, ಸ್ವಿಮಿಂಗ್‌ ಪೂಲ್‌, ಆಟದ ಮೈದಾನ, ಉದ್ಯಾನವನ ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದಾರೆಯೇ ಎನ್ನುವುದನ್ನೂ ಖಚಿತಪಡಿಸಿಕೊಳ್ಳಿ.
  15. ಒಂದು ವೇಳೆ ನಿಮ್ಮ ನಡುವೆ ಜಿ.ಪಿ.ಎ. ವ್ಯವಹಾರ ನಡೆದಿದ್ದಲ್ಲಿ ಜಿ.ಪಿ.ಎ. ಅವಧಿಯನ್ನು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ.

- ಅಶೋಕ್ಎಂ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ