ಧರ್ಮ ಹಿಂಸೆಯನ್ನು ಹೆಚ್ಚಿಸುತ್ತದೆ
`ನಿನ್ನ ರಕ್ತ ಕುಡಿದುಬಿಡ್ತೀನಿ!' `ಇವತ್ತು ನಿನ್ನ ಮುಗಿಸಿಬಿಡ್ತೀನಿ....' ಇಂತಹ ವಾಕ್ಯಗಳನ್ನು ಹೇಳುವವರು ಸಮಾಜದಲ್ಲಿ ಹೆಚ್ಚಾದಾಗ ಹಿಂಸೆ ಹೆಚ್ಚಾಗುವುದು ಸಹಜವೇ. ಇದೇ ಆಗಸ್ಟ್ ನಲ್ಲಿ ದೆಹಲಿಯಲ್ಲಿ 4 ಯುವಕರು ಒಬ್ಬ ವ್ಯಾಪಾರಿಯನ್ನು ಕರೆಸಿಕೊಂಡರು. ನಂತರ ಅವನ ಮನೆಗೆ ಫೋನ್ ಮಾಡಿ 3 ಕೋಟಿ ರೂ. ಕೊಡುವಂತೆ ಕೇಳಿದರು. ಹಣ ಸಿಗದಿದ್ದಾಗ ಅವನ ಕೊಲೆ ಮಾಡಿದರು. ವ್ಯಾಪಾರಿಯ ಮಗ, ಒಂದೂವರೆ ಕೋಟಿ ರೂ.ಗಳ ವ್ಯವಸ್ಥೆ ಮಾಡಿಯಾಗಿದೆ. ಉಳಿದ ಹಣ ವ್ಯವಸ್ಥೆ ಮಾಡಲು ಆಗುತ್ತಿಲ್ಲ ಎಂದು ಕೂಗುತ್ತಲೇ ಇದ್ದ.
ಹಾಗೆ ವ್ಯಾಪಾರಿಯನ್ನು ಕರೆಸಿಕೊಂಡ ಅಪರಾಧಿಗಳದು ಲೇವಾದೇವಿ ವ್ಯವಹಾರವೋ ಏನು ಎಂಬುದು ಮುಂದೆ ತಿಳಿದುಬರುತ್ತದೆ. ಆದರೆ ಇಂದು ಹಿಂಸೆ ಎಷ್ಟು ಹೆಚ್ಚಾಗಿದೆಯೆಂದರೆ, ಮನುಷ್ಯ ಪ್ರಾಣಿಗಳಿಗಿಂತ ಕೂರ್ರವಾಗಿದ್ದಾನೆ. ಪ್ರಾಣಿಗಳಿಗೆ ಹಿಂಸಾಪ್ರವೃತ್ತಿ ಇದೆ. ಆದರೆ ಅವು ಹಸಿವಿನ ಕಾರಣದಿಂದಾಗಿ ಅಥವಾ ತಮ್ಮ ಸುರಕ್ಷತೆಗಾಗಿ ಹಿಂಸೆ ಮಾಡುತ್ತವೆ. ಆದರೆ ಮನುಷ್ಯನಿಗೆ ಮೋಜಿಗಾಗಿ ಹಿಂಸೆಯ ಪಾಠವನ್ನು ಪದೇ ಪದೇ ಕಲಿಸಲಾಗುತ್ತಿದೆ.
ನಮ್ಮ ದೇವಾನುದೇವತೆಯರನ್ನೇ ನೋಡಿ. ಹೆಚ್ಚಿನ ದೇವತೆಗಳ ಕೈಗಳಲ್ಲಿ ಏನಾದರೊಂದು ಆಯುಧ ಇದ್ದೇ ಇರುತ್ತದೆ. ಒಬ್ಬರು ಬಿಲ್ಲು ಬಾಣ ಹಿಡಿದಿದ್ದರೆ, ಮತ್ತೊಬ್ಬರು ಚಕ್ರ ಹಿಡಿದಿರುತ್ತಾರೆ. ಒಬ್ಬರು ಗದೆ ಹಿಡಿದಿದ್ದರೆ, ಇನ್ನೊಬ್ಬರು ತ್ರಿಶೂಲ ಹಿಡಿದಿರುತ್ತಾರೆ. ಹಿಂಸೆಯನ್ನು ಪೂಜಿಸುವುದು, ನಂತರ ಅಪರಾಧಗಳು ಹೆಚ್ಚಾಗುತ್ತಿವೆಯೆಂದು ಬೊಬ್ಬೆ ಹಾಕುವುದು. ಇದೆಂಥ ಸಮಾಜ?
ಯೂರೋಪ್, ಅಮೆರಿಕಾಗಳಲ್ಲಿ ಮಿಲಿಟರಿಗೆ ಸೇರುವುದು ಮತ್ತು ತರಬೇತಿ ಪಡೆಯುವುದು ಅನಿವಾರ್ಯ. ಅಂದರೆ ಎಲ್ಲರೂ ಬಂದೂಕುಗಳನ್ನು ಬೊಂಬೆಗಳೆಂದು ತಿಳಿಯುತ್ತಾರೆ. ಕಂಪ್ಯೂಟರ್ ಗೇಮ್ಸ್ ಗಳಲ್ಲಂತೂ ಹಿಂಸೆ ಯಥೇಚ್ಛವಾಗಿದೆ. ಮಕ್ಕಳಿಗೆ ಅವನನ್ನು ಸಾಯಿಸು, ಇವನನ್ನು ಸಾಯಿಸು ಎಂದು ಪದೇ ಪದೇ ಹೇಳಿಕೊಡಲಾಗುತ್ತದೆ. ಒಂದು ಕಡೆ ಖಜಾನೆಗಾಗಿ ಒಬ್ಬನನ್ನು ಸಾಯಿಸಿದರೆ, ಇನ್ನೊಂದು ಕಡೆ ಆಟದಲ್ಲಿ ಶತ್ರು ಎನಿಸಿಕೊಂಡವನನ್ನು ಸಾಯಿಸುತ್ತಾರೆ. ಹಾಲಿವುಡ್ ಇರಲಿ, ಬಾಲಿವುಡ್ ಇರಲಿ ಮುಕ್ಕಾಲು ಪಾಲು ಚಿತ್ರಗಳಲ್ಲಿ ಗುಂಡುಗಳು ಮೊಳಗುತ್ತಿರುತ್ತವೆ. ಪ್ರೇಕ್ಷಕರು ಖುಷಿಯಿಂದ ಚೀರುತ್ತಿರುತ್ತಾರೆ. ಧಾರ್ಮಿಕ ಸಂಘಗಳಲ್ಲೂ ಹಗಲೂ ರಾತ್ರಿ ಬಿಲ್ಲು, ಕತ್ತಿ, ಭರ್ಜಿ ಇತ್ಯಾದಿ ನೋಡಲು ಸಿಗುತ್ತವೆ. ಅಲ್ಲಿಂದ ಹೊರಬರುತ್ತಲೇ ಯಾರಾದರೂ ಹೊಡೆದಾಡುವುದನ್ನು ಕಂಡಾಗ `ಅಪರಾಧಗಳನ್ನು ಕಂಟ್ರೋಲ್ ಮಾಡದೇ ಇರೋ ಇದೆಂಥಾ ಸರ್ಕಾರ?' ಎಂದು ಟೀಕಿಸುತ್ತಾರೆ.
ನಮ್ಮ ಅಕ್ಕಪಕ್ಕದಲ್ಲಿ ನಾಲ್ಕೂ ಕಡೆ ಆಯುಧಗಳ ರೇಸ್ ನಡೆಯುತ್ತಿದೆ. ಪಾಕಿಸ್ತಾನದಲ್ಲಿ ತಾಲಿಬಾನಿಗಳು ಮತ್ತು ಇಸ್ಲಾಮಿಸ್ಟ್ ಗಳು ತುಂಬಿದ್ದಾರೆ. ಮ್ಯಾನ್ಮಾರ್‌ನಲ್ಲಿ ಸೇನೆಯ ಆಡಳಿತವಿದೆ. ಶ್ರೀಲಂಕಾ, ಈಗತಾನೆ ರಕ್ತಸಿಕ್ತ `ಗೃಹಯುದ್ಧ'ದಿಂದ ಹೊರಬಂದಿದೆ. ಸಂಪೂರ್ಣ ಪಶ್ಚಿಮ ಏಷ್ಯಾ ಧಗಧಗಿಸುತ್ತಿದೆ. ಆಫ್ರಿಕಾದಲ್ಲಿ ಜನಾಂಗೀಯ ಯುದ್ಧ ನಡೆಯುತ್ತಿದೆ. ಹೆಚ್ಚಿನ ಪ್ರದೇಶಗಳಲ್ಲಿ ಧರ್ಮ ಹಿಂಸೆಯನ್ನು ಹೆಚ್ಚಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಆ 60 ವರ್ಷದ ವ್ಯಾಪಾರಿಯನ್ನು ಕರೆಸಿ ಸಾಯಿಸಿದ್ದರಲ್ಲಿ ಆಶ್ಚರ್ಯ ಏನಿದೆ? ಇದಂತೂ ಸಂಸ್ಕೃತಿ ಮತ್ತು ಸಾಮಾಜಿಕ ಆಲೋಚನೆಯ ಭಾಗವಾಗಿಬಿಟ್ಟಿದೆ. ಬಂದೂಕು ಇಟ್ಟುಕೊಳ್ಳುವುದು ಅಮೆರಿಕಾದಲ್ಲಿ ಸಂವಿಧಾನಬದ್ಧ ಅಧಿಕಾರವಾಗಿದ್ದರೆ, ಇಲ್ಲಿ ತ್ರಿಶೂಲ, ಕತ್ತಿ ಇಟ್ಟುಕೊಳ್ಳುವುದು. ಮನೆ ಈ ಆಯುಧಗಳ ಬಲದಲ್ಲಿ ಸುರಕ್ಷಿತವಾಗಿರಬಹುದೇ?