ಒಂದೂವರೆ ವರ್ಷದ ಹಿಂದೆ 1000 ರೂ. ಮತ್ತು 500 ರೂ. ನೋಟುಗಳನ್ನು ಸ್ಥಗಿತಗೊಳಿಸಿದಾಗ, ಹೊಸ ಕರೆನ್ಸಿಗಾಗಿ ಜನರು ಉದ್ದುದ್ದನೆಯ ಕ್ಯೂನಲ್ಲಿ ಎಟಿಎಂ ಹಾಗೂ ಬ್ಯಾಂಕ್ ಮುಂದೆ ನಿಲ್ಲಬೇಕಾಯಿತು. ನಗದು ಕೊರತೆಯಿಂದ ಅನೇಕ ಸಮಸ್ಯೆಗಳು ಎದುರಾದವು. ಈ ಮಧ್ಯೆ ಜನರಿಗೆ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಕಾರ್ಡ್ ಮುಖಾಂತರ ನಡೆಸುವ ನಗದು ರಹಿತ ವ್ಯವಹಾರ ಜನರಿಗೆ ವರದಾನವಾಗಿ ಪರಿಣಮಿಸಿದವು.
ಪೆಟ್ರೋಲ್ ಪಂಪ್‌ನಿಂದ ಹಿಡಿದು ಆಹಾರ ಧಾನ್ಯಗಳ ಖರೀದಿತನಕ ಅಂಗಡಿಯವರು ಕಾರ್ಡ್ ಮೂಲಕ ಪೇಮೆಂಟ್ ಮಾಡಲು ಅವಕಾಶ ಕಲ್ಪಿಸಿದರು. ಬಿಲ್‌ಗಳ ಪಾವತಿಯಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಬಹಳಷ್ಟು ಉಪಯುಕ್ತವಾಗಿ ಪರಿಣಮಿಸಿತು.
ಅಂದಹಾಗೆ ನಗದುರಹಿತ ವಹಿವಾಟಿನತ್ತ ಹೆಚ್ಚುತ್ತಿರುವ ಒಲವಿನ ಜೊತೆಗೆ, ಅಪಾಯಗಳು ಕೂಡ ಕಡಿಮೆ ಏನಿಲ್ಲ. ಕಾರ್ಡ್ ಮತ್ತು ಬ್ಯಾಂಕ್ ಅಕೌಂಟ್ ಹ್ಯಾಕಿಂಗ್‌ನ ಅಪಾಯ ಸದಾ ಕಾಡುತ್ತಿರುತ್ತದೆ. ಅದರ ಬಳಕೆಯಲ್ಲಿ ನೀವು ತೋರುವ ಒಂದಷ್ಟು ನಿರ್ಲಕ್ಷ್ಯತನ ನಿಮಗೆ ಬಹುದೊಡ್ಡ ಹಾನಿಗೆ ಕಾರಣವಾಗಬಹುದು.
ಏನಿದು ಹ್ಯಾಕಿಂಗ್?
ಆನ್‌ಲೈನ್ ಅಥವಾ ಕಾರ್ಡ್ ಮೂಲಕ ಮಾಡಲ್ಪಡುವ ಆನ್‌ಲೈನ್ ಪಾವತಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಹ್ಯಾಕರ್ಸ್ ಫೇಕ್‌ಪೇಜ್ ಅಥವಾ ಕಂಪ್ಯೂಟರ್ ವೈರಸ್ ಮುಖಾಂತರ ಜನರ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಡೀಟೇಲ್ ಅಥವಾ ಆನ್‌ಲೈನ್ ಪಾಸ್‌ವರ್ಡ್ ಮುಂತಾದವುಗಳನ್ನು ಕದಿಯುತ್ತಾರೆ. ಇದನ್ನೇ `ಹ್ಯಾಕಿಂಗ್' ಎಂದು ಹೇಳಲಾಗುತ್ತದೆ. ಅಕೌಂಟ್ ಮತ್ತು ಕಾರ್ಡ್ ಡೀಟೇಲ್‌ನ್ನು ಹ್ಯಾಕಿಂಗ್ ಮಾಡಿ ಹ್ಯಾಕರ್ಸ್ ಜನರ ಬ್ಯಾಂಕ್ ಖಾತೆಗಳನ್ನು ಆನ್‌ಲೈನ್ ಕಳ್ಳತನಕ್ಕೆ ಬಳಸಿಕೊಳ್ಳುತ್ತಾರೆ.
ಹ್ಯಾಕರ್ಸ್ ಭೀತಿ ತಪ್ಪಿದ್ದಲ್ಲ
2016ರಲ್ಲಿ ದೇಶದಲ್ಲಿ ಹಲವು ಬ್ಯಾಂಕುಗಳ 32 ಲಕ್ಷ ಎಟಿಎಂ ಕಾರ್ಡ್‌ಗಳ ರೀಟೇಲ್‌ನ್ನು ಹ್ಯಾಕ್ ಮಾಡಲಾಗುತ್ತದೆ. ಬ್ಯಾಂಕುಗಳು ತಕ್ಷಣವೇ ಕಾರ್ಯಪ್ರವೃತ್ತವಾಗಿ ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ಬ್ಲಾಕ್ ಮಾಡಿಸಿತು. 2 ವಾರಗಳೊಳಗೆ ಹೊಸ ಡೆಬಿಟ್ ಕಾರ್ಡ್‌ಗಳನ್ನು ಜಾರಿಗೊಳಿಸಿದವು. ಬ್ಯಾಂಕುಗಳು ಪಿನ್ ನಂಬರ್ ಬದಲಿಸುವ ತನಕ ಗ್ರಾಹಕರಿಗೆ ಸಂಬಂಧಪಟ್ಟ ಖಾತೆಗಳಿಂದ ಪ್ರತಿದಿನದ ಹಣ ಪಡೆಯುವ ಮಿತಿಯನ್ನು 500ಕ್ಕೆ ಮಿತಿಗೊಳಿಸಿದ್ದವು. ದೇಶವಿದೇಶದಲ್ಲಿ ಹ್ಯಾಕರ್ಸ್‌ಗಳು ಗ್ರಾಹಕರಿಂದ ಯಾವುದಾದರೂ ತಪ್ಪು ಘಟಿಸುತ್ತಿಯೇ ಎಂಬುದನ್ನು ಕಾಯುತ್ತಿರುತ್ತಾರೆ. ಇದೇ ಕಾರಣದಿಂದ ನೆಟ್ ಬ್ಯಾಂಕಿಂಗ್ ಹಾಗೂ ಕಾರ್ಡ್
ಬಳಸುವಾಗ ಎಚ್ಚರದಿಂದ ಇರುವುದು ಅವಶ್ಯ.
ಅಕೌಂಟ್ ಹ್ಯಾಕ್ ಆದಾಗ....
ಸೈಬರ್ ಲಾ ಎಕ್ಸ್ಪರ್ಟ್ ಪವನ್ ಪ್ರಕಾರ, ನಗದು ರಹಿತ ವಹಿವಾಟು ಹೆಚ್ಚುತ್ತಾ ಹೋದಂತೆ ಹ್ಯಾಕಿಂಗ್‌ನ ಘಟನೆಗಳು ಸಾಮಾನ್ಯ ಎಂಬಂತಾಗಿ ಬಿಟ್ಟಿವೆ. ಇಂತಹ ಸ್ಥಿತಿಯಲ್ಲಿ ಖಾತೆ ಅಥವಾ ಕಾರ್ಡ್ ಹ್ಯಾಕ್ ಆಗಿಬಿಟ್ಟರೆ ವ್ಯಕ್ತಿ ತಕ್ಷಣವೇ ಜಾಗೃತನಾಗಬೇಕು. ಈ ಕಳಕಂಡ ಕ್ರಮಕ್ಕೆ ಮುಂದಾಗಬೇಕು.
ಹ್ಯಾಕಿಂಗ್ ಮಾಹಿತಿಯನ್ನು ತಕ್ಷಣವೇ ಬ್ಯಾಂಕ್‌ಗೆ ಕೊಡಿ ಹಾಗೂ ನಿಮ್ಮ ಕಾರ್ಡ್‌ನ್ನು ಬ್ಲಾಕ್ ಮಾಡಿ.
ನೀವು ಹೊರಗಡೆ ಇದ್ದರೆ ಬ್ಯಾಂಕಿನ ಕಸ್ಟಮರ್ ನಂಬರ್‌ಗೆ ಫೋನ್ ಮಾಡಿ ನಿಮ್ಮ ಕಾರ್ಡ್‌ನ್ನು ಬ್ಲಾಕ್ ಮಾಡಿಕೊಳ್ಳಿ.
ಬ್ಯಾಂಕಿಗೆ ಮಾಹಿತಿ ಕೊಟ್ಟು ನಿಮ್ಮ ಖಾತೆಯಿಂದ ಕಾರ್ಡ್ ಅಥವಾ ನೆಟ್‌ವರ್ಕಿಂಗ್‌ನ್ನು ನಿರ್ಬಂಧಗೊಳಿಸಿ.
ಪೊಲೀಸರಿಗೆ ಈ ಕುರಿತಂತೆ ಲಿಖಿತ ದೂರು ನೀಡಿ.
ಈ ಅವಧಿಯಲ್ಲಿ ನೀವು ಸ್ವತಃ ವಹಿವಾಟು ನಡೆಸಲು ಚೆಕ್‌ನ್ನು ಬಳಸಿ.