ತುರ್ಕಿ ದೇಶದ ಒಂದು ಮಹಾನಗರ ಇಸ್ತಾಂಬುಲ್‌ ತನ್ನ ರಮಣೀಯ ಸುಂದರ ಪ್ರದೇಶ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಗಳ ಕಾರಣ ಇದು ಇಡೀ ವಿಶ್ವವನ್ನು ತನ್ನತ್ತ ಸೆಳೆಯುತ್ತಿದೆ. ಈ ಕಾರಣದಿಂದಲೇ ವಿಶ್ವಾದ್ಯಂತ ಪ್ರವಾಸಿಗರು ಇಸ್ತಾಂಬುಲ್‌ ತಮ್ಮ ಮುಂದಿನ ಡೆಸ್ಟಿನೇಶನ್‌ ಎಂದು ಹೊರಡುತ್ತಾರೆ.

3 ವರ್ಷಗಳ ಹಿಂದೆ ನಾನು ನನ್ನ ಐವರು ಗೆಳತಿಯರೊಂದಿಗೆ ಇಲ್ಲಿಗೆ ಹೊರಟಿದ್ದೆವು. ನಮ್ಮ ಈ ಟ್ರಿಪ್‌ 4 ದಿನಗಳದ್ದಾಗಿತ್ತು ಹಾಗೂ ನಾವೆಲ್ಲ ಗೆಳತಿಯರೂ ಕೂಡಿ ಇಲ್ಲಿ ಬೊಂಬಾಟ್‌ ಮಜಾ ಉಡಾಯಿಸಿದೆವು. ನಾವು ಇಲ್ಲೆಲ್ಲ ಬಹಳ ಸುತ್ತಾಡಿದೆವು, ಸಖತ್‌ ಶಾಪಿಂಗ್‌ ಮಾಡಿದೆವು, ಮನಬಂದಂತೆ ತಿಂದು ಮೆರೆದೆವು. ಅಂದರೆ ಒಂದು ಪ್ರವಾಸಕ್ಕೆ ಬೇಕಾದ ಎಲ್ಲಾ ಮೋಜುಮಸ್ತಿಗಳನ್ನೂ ಚೆನ್ನಾಗಿ ಎಂಜಾಯ್‌ ಮಾಡಿದೆವು. ಹೀಗಾಗಿ ಈ ಪ್ರವಾಸ ನಮಗೆ ಸದಾ ಸ್ಮರಣೀಯ. ಇಷ್ಟು ದಿನಗಳಾದ ಮೇಲೆ ನಾವು ಭೇಟಿ ಆದಾಗಲೂ ಇಸ್ತಾಂಬುಲ್‌ನ ಸವಿನೆನಪು ನಮ್ಮನ್ನು ಎಲ್ಲಿಗೋ ಕೊಂಡೊಯ್ಯುತ್ತದೆ.

ಬಾಸ್ಪೊರಸ್‌ ನದಿ ತಟದಲ್ಲಿ

ಇದುವರೆಗೂ ನಾನು ನನ್ನ ಜೀವನದಲ್ಲಿ ನದಿಗಳನ್ನೇ ಕಂಡವಳಲ್ಲ ಎಂದರೆ ನೀವು ನಂಬಲೇಬೇಕು. ಅದರ ಬಗ್ಗೆ ಕೇಳಿದ್ದೆ, ಅಷ್ಟೆ. ಇಲ್ಲಿಗೆ ಬಂದ ಮೇಲೆ ಅತಿ ವಿಶಾಲವಾದ ಈ ನದಿ ಕಂಡಾಗ ದಂಗಾದೆ! ಅದು ಎಷ್ಟು ನಿರ್ಮಲ, ಸ್ವಚ್ಛವಾಗಿತ್ತು ಎಂದರೆ ಅದರಿಂದ ಕಣ್ಣು ಸರಿಸಿ ಬೇರೆ ನೋಡುವುದೇ ಬೇಡ ಎನಿಸುತ್ತದೆ. ಇಲ್ಲಿನ ಎಲ್ಲಾ ನದಿಗಳೂ ನನಗೆ ಬಹಳ ಹಿಡಿಸಿದವು. ಏಕ್‌ದಂ ಬ್ಲೂ ಕಲರ್‌ನಿಂದ ಕೂಡಿತ್ತು. ಅದರಲ್ಲೂ ಹಲವು ಶೇಡ್ಸ್ ಕಾಣಿಸುತ್ತಿತ್ತು. ಇದಂತೂ ಬಹಳ ಸಂತಸ ನೀಡುತ್ತಿತ್ತು. ನಾವೆಲ್ಲ ಕ್ರೂಸ್‌ ಮೇಲೆ ಹೋಗಿದ್ದೆವು. ಕ್ರೂಸ್‌ ಮೇಲೂ ಬಲು ವಿಭಿನ್ನ ಅನುಭವ ದೊರಕಿತು. ಇಂಥ ರಮಣೀಯ ದೃಶ್ಯವನ್ನು ಹಿಂದೆಂದೂ ಕಂಡಿರಲಿಲ್ಲ. ಅದ್ಭುತ, ಆನಂದಕರ, ವರ್ಣನಾತೀತ!

ನನಗೆ ಇಸ್ತಾಂಬುಲ್‌ನ ಊಟ ತಿಂಡಿ ಸಹ ವಂಡರ್‌ಫುಲ್ ಎನಿಸಿತು. ಆ ಡಿಶೆಸ್‌ ಹೆಸರಂತೂ ನೆನಪಿಗೆ ಬರುತ್ತಿಲ್ಲ, ಆದರೆ ಅದರ ರುಚಿ ನಾಲಿಗೆಯಲ್ಲೇ ನೆಲೆ ನಿಂತಿದೆ. ಅಲ್ಲಿನ ಟೇಸ್ಟಿ ಟೇಸ್ಟಿ ಫುಡ್ಸ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ! ಅಲ್ಲಿನ ವಿಭಿನ್ನ, ವರ್ಣಮಯ ರೆಸ್ಟೋರೆಂಟ್‌ಗಳ ಕುರಿತು ಹೇಳುವುದಾದರೂ ಏನು? ಅಲ್ಲಿ ಅನೇಕ ದೇಶಗಳ ಆಹಾರ ಸಿಗುತ್ತಿತ್ತು. ಆದರೆ ನನಗಿದ್ದ ತೊಂದರೆ ಎಂದರೆ 3 ದಿನಗಳಿಗಿಂತ ಹೆಚ್ಚಾಗಿ ನಾನು ಭಾರತೀಯ ಆಹಾರವಿಲ್ಲದೆ ಇರಲಾರೆ. 3 ದಿನ ಕಳೆದಂತೆ ಅಲ್ಲಿ ನಮ್ಮದೇ ಆಹಾರದ ಗೀಳು ಹತ್ತಿಕೊಂಡಿತು. ಹೀಗಾಗಿ 4ನೇ ದಿನ ನಾವು ಇಂಡಿಯನ್‌ ರೆಸ್ಟೋರೆಂಟ್‌ ಹುಡುಕಿ ಹೊರಟೆವು. ಅಂತೂ ಒಂದು ದೇಶೀ ಢಾಬಾ ಸಿಕ್ಕಿತು. ನಮಗೆ ಅಲ್ಲಿ ಬಟರ್‌ ಚಿಕನ್‌, ಬಟರ್‌ ನಾನ್‌, ತಂದೂರಿ ನಾನ್‌, ದಾಲ್‌ ಮಖನಿ, ಬಿರಿಯಾನಿ ಇತ್ಯಾದಿ ಕಂಡಾಗ ಸ್ವರ್ಗಕ್ಕೆ ಮೂರೇ ಗೇಣು! ಅಂಥ ಸ್ವಾದಿಷ್ಟ ಭೋಜನ ಇಂದಿಗೂ ನೆನಪಾಗಿ ಕಾಡುತ್ತದೆ.

ಇಸ್ತಾಂಬುಲ್‌ನ 2 ರೂಪಗಳು

ಇದರ ಭೌಗೋಳಿಕ ಕ್ಷೇತ್ರದ ಬಗ್ಗೆ ನೋಡಿದರೆ ಇದು 2 ವಿಭಿನ್ನ ಭಾಗಗಳಾಗಿ ಹಂಚಿಹೋಗಿದೆ. ಇವೆರಡೂ ಪ್ರದೇಶಗಳೂ ಪರಸ್ಪರ ತೀರಾ ವಿಭಿನ್ನ. ಒಂದು, ಸಾಂಪ್ರದಾಯಿಕ ವಸ್ತುನಿಷ್ಠವಾದುದು, ಅಂದರೆ ಹಿಂದೆ ಹೇಗಿತ್ತೋ ಈಗಲೂ ಹಾಗೇ ಉಳಿದುಕೊಂಡಿದೆ. ಮತ್ತೊಂದು, ಬಿಲ್‌ಕುಲ್‌ ಅತಿ ಆಧುನಿಕ, ಅಲ್ಲಿಗೇ ಹೆಚ್ಚಿನ ಟೂರಿಸ್ಟ್ ಹೋಗುತ್ತಾರೆ. ನಾವು ಎರಡೂ ಭಾಗ ನೋಡಿದೆವು. ಹೀಗಾಗಿಯೇ ಎರಡರ ಸಂಸ್ಕೃತಿ ಎಷ್ಟು ವಿಭಿನ್ನ ಎಂದು ಅದರ ಅಂತರದಲ್ಲೇ ತಿಳಿಯಿತು. ಪಾಶ್ಚಿಮಾತ್ಯ ದೇಶಗಳಲ್ಲಂತೂ ಎಲ್ಲೆಲ್ಲೂ ಆಧುನಿಕ ಪರಿವೇಶಗಳೇ ಇರುತ್ತವೆ. ಆದರೆ ಇಲ್ಲಿ ಆಧುನಿಕತೆ ಇದ್ದರೂ ಹಿಂದಿನ ತುರ್ಕಿಶ್‌ ಕಲ್ಚರ್‌, ಅವರ ಪ್ರಾಚೀನ ಶೈಲಿಯ ಟಿಪಿಕಲ್ ಮಾರುಕಟ್ಟೆಗಳು ಹೇಗಿದ್ದವೋ ಅದೇ ಗಲಾಟೆ ಉಳಿಸಿಕೊಂಡು ಹಾಗೇ ಇದೆ.

ಇಲ್ಲಿ ಈವ್‌ ಐ ಜ್ಯೂವೆಲರಿ ಬಲು ಪ್ರಸಿದ್ಧಿ. ಅಲ್ಲೂ ಹಲವಾರು ಬಗೆಯ ರತ್ನಾಭರಣಗಳಿದ್ದವು. ಈಶ್ವರ್‌ ಐ ಬಳೆ, ಕಡಗ, ತೋಳುಬಂದಿ, ಕಿವಿಗಳಿಗೆ ರಿಂಗ್ಸ್ ಇತ್ಯಾದಿ. ನಾವೆಲ್ಲ ಗೆಳತಿಯರೂ ಬೇಕಾದಷ್ಟು ಶಾಪಿಂಗ್‌ ಮಾಡಿದೆವು. ಮನೆಗೂ ಸಹ ಬೇಕಾದಷ್ಟು ಒಡವೆ, ಉಡುಗೊರೆ ಕೊಂಡೆವು.

ಸ್ವಾರಸ್ಯಕರ ಇತಿಹಾಸ

ಈಗ ಇದರ ಇತಿಹಾಸದತ್ತ ಗಮನಿಸೋಣ. ಇಂದು ಇಸ್ತಾಂಬುಲ್ ಹೆಸರಿನ ಈ ಮಹಾನಗರ ಹಿಂದೆ ಬಾಜ್‌ನಟಿಯಂ ನಂತರ ಕಸಿನ್ಯಾ ಹೆಸರಿನಿಂದ ಪ್ರಸಿದ್ಧಿ ಪಡೆದಿತ್ತು. ಇದನ್ನು 7 ಬೆಟ್ಟಗಳ ನಗರವೆಂದೂ ಹೇಳುತ್ತಾರೆ. ಏಕೆಂದರೆ ನಗರದ ಅತಿ ಪ್ರಾಚೀನ ಕ್ಷೇತ್ರಗಳು 7 ಬೆಟ್ಟಗಳ ಮೇಲೆ ಆಗಿವೆ.

ಇನ್ನೊಂದು ಮಹತ್ವಪೂರ್ಣ ವಿಚಾರವೆಂದರೆ, ಇದು 2 ಮಹಾದ್ವೀಪಗಳ ನಡುವೆ ಇರುವಂಥ ಏಕಮಾತ್ರ ದೇಶ. ಇದರ ಒಂದು ತುದಿಯಲ್ಲಿ ಯೂರೋಪ್‌ ಮತ್ತೊಂದು ತುದಿಯಲ್ಲಿ ಏಷ್ಯಾ ಖಂಡಗಳಿವೆ. ತುರ್ಕಿ ದೇಶದ ಅತ್ಯುನ್ನತ ಆರ್ಥಿಕ, ಸಾಂಸ್ಕೃತಿಕ ಕೇಂದ್ರ ಎಂದರೆ ಇಸ್ತಾಂಬುಲ್. ಇದು ಇದರ ಮತ್ತೊಂದು ಪ್ಲಸ್‌ಪಾಯಿಂಟ್‌. ಇಲ್ಲಿನ ಸಂಗ್ರಹಾಲಯಗಳ ಮೂಲಕ ಇದರ ಇತಿಹಾಸ, ಕಲೆ, ಸಂಸ್ಕೃತಿಗಳನ್ನು ಅರಿಯಬಹುದು.

ಪೇರಾ ಮ್ಯೂಸಿಯಂ, ಅತಾತುರ್ಕ್‌ ಮ್ಯೂಸಿಯಂ, ಸಿಟಿ ಮ್ಯೂಸಿಯಂ, ಅರ್ಚ್‌ ಮ್ಯೂಸಿಯಂ, ಇಸ್ತಾಂಬುಲ್‌ ಮ್ಯೂಸಿಯಂ ಆಫ್‌ ಮಾಡರ್ನ್‌ ಆರ್ಟ್‌, ತುರ್ಕಿಶ್‌ ಇಸ್ಲಾಮಿಕ್‌ ಆರ್ಟ್‌ ಮ್ಯೂಸಿಯಂ ಮೊದಲಾದವು ಪ್ರಮುಖ. ಇದರ ಹೊರತಾಗಿ ಪ್ರಿನ್ಸೆಸ್‌ ಐಲೆಂಡ್‌ ಸಹ ಬಲು ಪ್ರಸಿದ್ಧ, ಸುಂದರ.

ನೀವು ಪುಸ್ತಕ ಪ್ರಿಯರಾಗಿದ್ದರೆ ಫತೇಹ್‌ನಲ್ಲಿರುವ ಬೇಏಜಿದ್‌ ಮಸೀದಿ ಬಳಿ ಇರುವ ಅತಿ ಬೃಹತ್‌ ಬುಕ್ಸ್ ಮಾರ್ಕೆಟ್‌ ಕಾಣಬಹುದು. ಇಲ್ಲಿ ತುರ್ಕಿ ಇಸ್ತಾಂಬುಲ್‌ನ ಇತಿಹಾಸ, ಕಲೆ, ಸಂಸ್ಕೃತಿ, ಪೌರಾಣಿಕ ಗ್ರಂಥ, ಭೂಪಟ, ಸಾಹಿತ್ಯದ ಹಲವು ಪ್ರಕಾರದ ಪುಸ್ತಕ ಕೊಳ್ಳಬಹುದು.

ಶಾಪಿಂಗ್‌ಗಂತೂ ಇನ್ನೂ ಹೆಚ್ಚಿನ ಸುವರ್ಣಾವಕಾಶ! ಇಲ್ಲಿನ ಗ್ರಾಂಡ್‌ ಬಜಾರ್‌ನ್ನು ಯಾರೂ ತಪ್ಪಿಸುವುದಿಲ್ಲ. ಇದು ಇಲ್ಲಿನ ಅತಿ ಪ್ರಾಚೀನ ಬಜಾರ್‌. ಭಾನುವಾರ ರಜೆ. ಇಲ್ಲಿನ ಅಂಗಡಿಗಳಿಂದ ನೀವು ಧಾರಾಳವಾಗಿ ಒಡವೆ, ವಸ್ತ್ರ, ಮನೆಗಾಗಿ ಐಟಮ್ಸ್, ಗೃಹಾಲಂಕಾರದ ಸಾಮಗ್ರಿ, ರತ್ನಗಂಬಳಿ, ಫರ್ನೀಚರ್‌, ಆಹಾರ ಸಾಮಗ್ರಿ….. ಇತ್ಯಾದಿ ಎಲ್ಲವನ್ನೂ ಸ್ಪರ್ಧಾತ್ಮಕ ದರಗಳಲ್ಲಿ ಕೊಳ್ಳಬಹುದು. ಗ್ರಾಹಕರ ಎಲ್ಲಾ ಬೇಡಿಕೆಗಳನ್ನೂ ಇದು ತಣಿಸುತ್ತದೆ. ಹತ್ತಿರದಲ್ಲೇ ಇರುವ ಸ್ಪೈಸ್‌ ಬಜಾರ್‌ ಕೇವಲ ಮಸಾಲೆ ವಸ್ತು ಹೊಂದಿದ್ದು, ಅದರ ಪರಿಮಳ ನಿಮ್ಮನ್ನು ಅಲ್ಲಿಗೇ ಎಳೆಯುತ್ತದೆ. ಇಲ್ಲಿ ಇಡಿಯಾದ, ಪುಡಿಯಾದ ಎಲ್ಲಾ ಬಗೆಯ ಆಹಾರ  ಸಾಮಗ್ರಿ ಲಭ್ಯ.

– ಕೆ. ರೇಣುಕಾ

Tags:
COMMENT