– ರಾಘವೇಂದ್ರ ಅಡಿಗ ಎಚ್ಚೆನ್.

ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆಯನ್ನು ಈ ದಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್‍ ಹಾಲ್) ಶ್ರೀಕ್ಷೇತ್ರ ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ  ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ, ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಖ್ಯಾತ ಗಾಯಕರಾದ ಶ್ರೀ ಶಂಕರ್‍ ಶಾನಭಾಗ್ ಅವರು ಪ್ರಾರ್ಥನೆ ಮಾಡಿದರು ಮತ್ತು ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ ಅವರನ್ನು ಗೌರವಿಸಲಾಯಿತು.

ಶ್ರೀ ಮೈ. ಚ. ಜಯದೇವ (1932 – 2017)

ಶ್ರೀ ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧ್ಯೇಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ, ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು – ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ, ಅಬಲಾಶ್ರಮ – ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ