ಮಹಿಳೆಯರ ಸೇವಾ ಮನೋಭಾವಕ್ಕೆ ದೊಡ್ಡ ನಮಸ್ಕಾರ. ಕೊರೋನಾ ಮಾರಿಯ ದೆಸೆಯಿಂದ ಇದೀಗ ಎಲ್ಲರೂ ಮನೆಗಳಲ್ಲೇ ಕೈದಿಗಳಾಗಿರಬೇಕಾದ ಅನಿವಾರ್ಯತೆ ಇರುವಾಗ ಡಾಕ್ಟರ್ಸ್‌, ನರ್ಸ್‌ಗಳು ತಮ್ಮ ಪ್ರಾಣಭಯ ತೊರೆದು, ನಿಸ್ವಾರ್ಥ ಸೇವಾಮನೋಭಾವದಿಂದ ಕೊರೋನಾ ಪೀಡಿತರ ಚಿಕಿತ್ಸೆಗೆ ತೊಡಗಿದ್ದಾರೆ. ಅವರಿಗೆ ಇರುವುದು ಒಂದೇ ಗುರಿ. ನಮ್ಮೆಲ್ಲರ ಪ್ರಯತ್ನದ ಫಲವಾಗಿ ಈ ರೋಗಿ ಗುಣಮುಖನಾಗಬೇಕು, ಕೊರೋನಾ ವಿರುದ್ಧದ ಈ ಯುದ್ಧದಲ್ಲಿ ಗೆಲ್ಲಲೇಬೇಕು. ಹೇಗಾದರೂ ಮಾಡಿ ಕೊರೋನಾ ಪೀಡಿತರನ್ನು ಗುಣಮುಖರಾಗಿಸಿ ಅವರಿಗೆ ಹೊಸ ಜೀವನ ಕೊಡಿಸಬೇಕು, ಅವರ ಮನೆಯವರು ಮತ್ತೆ ಮೊದಲಿನಂತೆ ನಗುವಂತಾಗಬೇಕು. ಆಗಲೇ ನಿಜವಾದ ಮಾನವೀಯತೆ ತೋರಿದಂತಾಗುವುದು. ಬನ್ನಿ, ದೆಹಲಿಯ ನೋಯ್ಡಾ ಕ್ಷೇತ್ರದ ಡಾ. ಜ್ಯೋತಿ ಖತ್ರಿಯರನ್ನು ಭೇಟಿಯಾಗಿ ಅವರ ಸತತ ಸೇವೆ ಬಗ್ಗೆ ತಿಳಿಯೋಣ.

ಇಡೀ ದೇಶ ಲಾಕ್ಡೌನ್ಆಗಿದೆ. ಪ್ರತಿಯೊಬ್ಬರೂ ಮನೆಗಳಲ್ಲಿ ಬಂಧಿಗಳು, ಹೀಗಿರುವಾಗ ನೀವು ಒಬ್ಬ ಮಹಿಳಾ ವೈದ್ಯರಾಗಿ ಹೇಗೆ ನಿಭಾಯಿಸುತ್ತಿದ್ದೀರಿ?

ನಾನು ಈ ಪ್ರೊಫಿಶನ್‌ಗೆ ಬಂದಾಗಿನಿಂದಲೇ ನಿರ್ಧರಿಸಿಬಿಟ್ಟಿದ್ದೆ, ಏನೇ ಕಷ್ಟನಷ್ಟಗಳು ಎದುರಾದರೂ ಸರಿ, ನಾನು ಮಾತ್ರ ಸೋಲು ಒಪ್ಪುವವಳಲ್ಲ! ನಮ್ಮ ಭಾರತೀಯ ಸಮಾಜದಲ್ಲಿ  ಮಹಿಳೆಯರು ಹಿಂದಿನಿಂದಲೂ ಎಷ್ಟೋ ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಅದೇ ರೀತಿ ಇದನ್ನೂ ಒಂದು ಕಠಿಣ ಸವಾಲಾಗಿ ಸ್ವೀಕರಿಸಿ ಎದುರಿಸಲೇಬೇಕು. ಒಬ್ಬ ಮಹಿಳಾ ವೈದ್ಯಳಾಗಿ ಮನೆ ಮತ್ತು ನನ್ನ ವೃತ್ತಿಯನ್ನು ಸಮನಾಗಿ ನಿಭಾಯಿಸುವುದು ನಿಜಕ್ಕೂ ಕಷ್ಟ. ಆ ದಿನದ ಡ್ಯೂಟಿ ಮುಗಿಸಿ ನಾನು ಮನೆಗೆ ಹೋಗಿ ಮನೆಮಂದಿ ಜೊತೆ ಸ್ವಲ್ಪ ಸಮಯ ಕಳೆಯುಷ್ಟರಲ್ಲೇ ಎಮರ್ಜೆನ್ಸಿ ಹೊರಟು ಬನ್ನಿ ಎಂದು ಆಸ್ಪತ್ರೆಯಿಂದ ಕರೆ ಬಂದಿರುತ್ತದೆ. ಹೀಗಾದಾಗ ಸಹಜವಾಗಿಯೇ ಕಷ್ಟಗಳು ಹೆಚ್ಚುತ್ತವೆ. ಆದರೆ ಬದುಕಿಗೆ ಭರವಸೆಯೊಂದೇ ಆಧಾರ. ಹೀಗಾಗಿ ನಮ್ಮ ಮನೆಮಂದಿಗೆ ಎಲ್ಲ ಮೊದಲಿನಂತೆಯೇ ಆಗುತ್ತದೆ ಎಂದು ಭರವಸೆ ತುಂಬುತ್ತೇನೆ. ಇದರಿಂದಾಗಿ ಕುಟುಂಬದವರು ನನ್ನ ವೃತ್ತಿ ಧರ್ಮದ ಕಷ್ಟಗಳನ್ನು ಅರಿಯುತ್ತಾರೆ, ಹಾಗಾಗಿ ಎರಡೂ ದೋಣಿಗಳನ್ನು ನಾನು ಸಲೀಸಾಗಿ ನಡೆಸತ್ತಿದ್ದೇನೆ. ಹಿಂದಿನಂತೆ ಬ್ಯಾಲೆನ್ಸ್ ಮಾಡುವುದರಲ್ಲಿ ಕಷ್ಟಗಳಿಲ್ಲದೆ ಹಾಯಾಗಿ ನಿಭಾಯಿಸುತ್ತಿದ್ದೇನೆ.

ಇತ್ತೀಚೆಗಂತೂ ಎಲ್ಲಾ ಕಡೆ ಕೊರೋನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಾ ನರ್ಸ್‌, ವೈದ್ಯರು ತಾವೇ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಿಂಜರಿಕೆ ಸಹಜ, ನೀವು ಹೇಗೆ ಮ್ಯಾನೇಜ್ಮಾಡ್ತಿದ್ದೀರಿ?

ನನಗೆ ಅಂಥ ಭಯ ಇಲ್ಲವೇ ಇಲ್ಲ! ಏಕೆಂದರೆ ಪ್ರತಿ ಕ್ಷಣ ನಾವು ಸುರಕ್ಷತಾ ಕವಚ ತೊಟ್ಟುಕೊಂಡೇ ಕಾರ್ಯ ನಿರ್ವಸುತ್ತೇವೆ. ಮನಸ್ಸಿನಲ್ಲಿ ಸದಾ ಕಾಡುವ ಚಿಂತೆ ಎಂದರೆ ಈ ರೋಗಿಗಳನ್ನು ಹೇಗಾದರೂ ಬದುಕಿಸಿಕೊಳ್ಳಬೇಕು ಎಂಬುದು. ಏಕೆಂದರೆ ಪ್ರತಿ ಸಲ ಮೌನವಾಗಿಯೇ ಅವರು ಕಂಗಳಲ್ಲೇ ನಮ್ಮನ್ನು `ನಾವು ಬದುಕಿ ಉಳಿಯುತ್ತೇವೆ ತಾನೇ?’ ಎಂದು ಪ್ರಶ್ನಿಸುತ್ತಿರುತ್ತಾರೆ. ಹೀಗಿರುವಾಗ ವೈದ್ಯರಾಗಿ ನಾವೇ ಹೆದರಿದರೆ, ನಮ್ಮ ಇಡೀ ದೇಶವನ್ನು ಈ ಆಪತ್ತಿನಿಂದ ರಕ್ಷಿಸುವರಾರು?

ಇಂಥ ಸಂದರ್ಭದಲ್ಲಿ ಕುಟುಂಬದವರು ಸಹಕರಿಸುತ್ತಾರಾ ಇಲ್ಲವಾ?

ನನ್ನ ಕುಟುಂಬದವರು ಖಂಡಿತಾ ಸಪೋರ್ಟ್‌ ಮಾಡುತ್ತಾರೆ. ನನ್ನ ಪತಿ ಸಹ ಡಾಕ್ಟರ್‌, ಅತ್ತೆ ಮಾವ ಸಹ ಬಲು ಸಹಕಾರ ಮನೋಭಾವದವರು. ಮೊಮ್ಮಕ್ಕಳ ಪೂರ್ತಿ ಜವಾಬ್ದಾರಿ ಅವರದೇ! ನಮ್ಮ ಮಕ್ಕಳು ಸಹ ನಮಗಿಂತ ಹೆಚ್ಚಾಗಿ ಅಮ್ಮ ಅಪ್ಪ ದೇಶ ಸೇವೆಗೆ ನಿಂತಿದ್ದಾರೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಅಜ್ಜಿ ತಾತನ ಬಳಿ ಮೊಮ್ಮಕ್ಕಳು ಸುರಕ್ಷಿತವಾಗಿರುವುದರಿಂದ ನಾನು ನನ್ನ ಕರ್ತವ್ಯದಲ್ಲಿ 100% ತೊಡಗಿಕೊಳ್ಳಲು ಸಾಧ್ಯವಾಗಿದೆ.

ನಿಮ್ಮನ್ನು ನೀವು ಹೇಗೆ ಸ್ಟ್ರೆಸ್ಫ್ರೀ ಮಾಡಿಕೊಳ್ಳುತ್ತೀರಿ?

ವಿಶ್ವದಲ್ಲಿ ಎಲ್ಲೆಡೆ ಈ ರೋಗ ಹೆಚ್ಚುತ್ತಲೇ ಇದೆಯಲ್ಲ ಎಂಬ ಟೆನ್ಶನ್‌ನಲ್ಲಿ ನಾವು ಪ್ರತಿ ಕ್ಷಣ ಕಳೆಯುತ್ತಿದ್ದರೆ, ಟಿವಿಯ ನ್ಯೂಸ್ ನೋಡುತ್ತಾ ಕೊರೋನಾ ಅನುದಿನ ಹೆಚ್ಚುತ್ತಿದೆ ಎಂದು ಗಾಬರಿಗೊಂಡರೆ, ನಾವು ರೋಗಿಗಳನ್ನು ಗುಣಪಡಿಸುವ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಬಿಡುತ್ತೇವೆ. ಹೀಗಾಗಿ ಪ್ರತಿ ಮಾಹಿತಿ ಕುರಿತು ಜಾಗೃತಳಾಗುತ್ತೇನೆ, ಆದರೆ ಅದು ನನ್ನನ್ನೇ ತಿಂದುಬಿಡಲು ಅವಕಾಶ ಕೊಡಲ್ಲ. ಸ್ಟ್ರೆಸ್ ಫ್ರೀ ಆಗಲು ಇರುವ ಅಲ್ಪ ವಿರಾಮದಲ್ಲೇ ಉತ್ತಮ ಪುಸ್ತಕ ಓದಿ, ಸಂಗೀತ ಕೇಳಿ, ಕುಟುಂಬದವರೊಡನೆ ಕಳೆದ ಸುಖದ ಕ್ಷಣಗಳನ್ನು ನೆನೆಯುತ್ತೇನೆ. ನಮ್ಮ ಟೀಂ ವರ್ಕ್‌ ಕಾರಣ ಕೊರೋನಾ ರೋಗಿ ಗುಣಮುಖರಾಗುತ್ತಿದ್ದಾರೆ ಎಂದು ಸಕಾರಾತ್ಮಕ ಧೋರಣೆ ತಾಳುತ್ತೇನೆ.

ನಿಮ್ಮನ್ನು ನೀವು ಹೇಗೆ ಸುರಕ್ಷಿತರಾಗಿ ಇರಿಸಿಕೊಳ್ಳುತ್ತೀರಿ?

ಪ್ರತಿಯೊಬ್ಬ ರೋಗಿಯ ಆರೈಕೆ ನಂತರ ಸ್ಯಾನಿಟೈಸರ್‌ನಿಂದ ಕೈ ತೊಳೆಯುವೆ,  ಅಲ್ಲಿ ಇಲ್ಲಿ ಟಚ್‌ ಮಾಡದೆ ಎಚ್ಚರಿಕೆ ವಹಿಸುವೆ. ರೋಗಿಯ ಆರೈಕೆ ನಡುವೆ ಆಗಾಗ ಫ್ರೆಶ್‌ ಗ್ಲೌಸ್‌ ಬದಲಾಯಿಸುವೆ. ಮನೆಗೆ ಹೋದ ತಕ್ಷಣ ಮೊದಲು ಹ್ಯಾಂಡ್‌ವಾಶ್‌ ಮಾಡಿ, ಸ್ನಾನ ಮುಗಿಸಿ, ಬೇರೆ ಬಟ್ಟೆ ಧರಿಸುವೆ. ವೈರಸ್‌ ನಮ್ಮನ್ನು ಯಾವಾಗ ಆಕ್ರಮಿಸುತ್ತದೋ ಖಂಡಿತಾ ಹೇಳಲಾಗದು, ಹೀಗಾಗಿ ಸದಾ ಎಚ್ಚರಿಕೆ ವಹಿಸುತ್ತೇನೆ.

ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಕುರಿತು ನೀವೇನು ಹೇಳಲು ಬಯಸುತ್ತೀರಿ?

ಅತಿ ಕಠಿಣಕರ ಸಂದರ್ಭ ಎದುರಾದಾಗ ಅದರ ನಿವಾರಣೆಯ ಪ್ರಯತ್ನ ಎಲ್ಲೋ ಒಂದು ಕಡೆಯಿಂದ ಆಗಲೇಬೇಕಲ್ಲವೇ? ಸರ್ಕಾರ ಈ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಿಸಿ, ಹೆಚ್ಚು ಜನ ಇದಕ್ಕೆ ಬಲಿಯಾಗದಂತೆ, ರೋಗಿಗಳಿಗೆ ಬೇಕಾದ ಸೌಲಭ್ಯಗಳನ್ನು ಗರಿಷ್ಠ ಮಟ್ಟದಲ್ಲಿ ನೀಡುತ್ತಿದೆ.

ಕುರಿತಾಗಿ ಎಷ್ಟೋ ಕಪೋಲಕಲ್ಪಿತ ಕಟ್ಟುಕಥೆಗಳಿವೆ. ಕುರಿತು ನೀವೇನು ಹೇಳುತ್ತೀರಿ?

ಕೋವಿಡ್‌ ರೋಗದ ಕುರಿತಾಗಿ ಎಲ್ಲಾ ಕಡೆಯಿಂದಲೂ ನಾನಾ ರೀತಿಯ ಗಾಳಿ ಮಾತು ಹರಡುತ್ತಿದೆ, ಖಂಡಿತಾ ಯಾರೂ ಅದಕ್ಕೆ ಕಿವಿಗೊಡಬಾರದು. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ಹೊರಡಿಸುವ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾಧ್ಯವಾದಷ್ಟೂ ಆ್ಯಂಟಿ ಆಕ್ಸಿಡೆಂಟ್‌ ರಿಚ್‌ ಆಗಿರುವ ಆಹಾರ ಸೇವಿಸಿ. ಇದು ನಿಮ್ಮ ಇಮ್ಯೂನಿಟಿ ಹೆಚ್ಚಿಸಲಿದೆ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ