ಕೆಂಪು ಬಣ್ಣದ ಸೀರೆ ಉಟ್ಟುಕೊಂಡು, ಮಲ್ಲಿಗೆ ಹೂ ಮುಡಿದು, ಅದರ ಕಂಪನ್ನು ಬೀರುವ ಅಪ್ಪಟ ಕನ್ನಡದ ನೀರೆಯರಿಂದ ಎರಡೂವರೆ ಗಂಟೆಗಳ ಕಾಲ, ಚಿಕ್ಕ ಮಕ್ಕಳಂತೆ ಅನೇಕ ಚಟುವಟಿಕೆಗಳನ್ನು ಒಳಗೊಂಡ ತರಗತಿ.

ಅವರೆಲ್ಲಾ ಚಿಕ್ಕ ಮಕ್ಕಳಂತೆ ವಿದ್ಯಾರ್ಥಿಗಳಾಗಿ ಬಿಟ್ಟಿದ್ದರು.

ಸಾಫ್ಚ್ ವೇರ್‌ ಕಂಪನಿಗಳ ಉದ್ಯೋಗಿಗಳೆಂದರೆ, ಇವರಿಗೆ ಕನ್ನಡದ ಬಗ್ಗೆ ಪ್ರೀತಿ ಇಲ್ಲ ಎನ್ನುವ ಭಾವನೆ ಸಾರ್ವಜನಿಕರಲ್ಲಿ ಮನೆ ಮಾಡಿದೆ. ಆದರೆ ಅಲ್ಲಿ ಕೆಲಸ ಮಾಡುವವರು ಬೇರೆ ಬೇರೆ ರಾಜ್ಯಗಳಿಂದ ಬಂದವರಾದ್ದರಿಂದ ಅವರಿಗೆ ಕನ್ನಡ ಗೊತ್ತಿಲ್ಲ. ಅವರಿಗೆ ಕನ್ನಡ ಕಲಿಸುವಲ್ಲಿ ನಮ್ಮ ಕನ್ನಡಿಗರಿಗೆ ಉದಾಸೀನ. ನಾವು ಕನ್ನಡಿಗರೇ ಅಷ್ಟು, ಅವರ ಭಾಷೆಯಲ್ಲೇ ಮಾತನಾಡಿಬಿಡುತ್ತೇವೆ. ಅವರಿಗೆ ಕನ್ನಡ ಕಲಿಸುವ ಗೋಜಿಗೇ ಹೋಗುವುದಿಲ್ಲ. ಇದು ಸ್ವಲ್ಪ ಮಟ್ಟಿಗೆ ನಿಜವೇ ಆದರೂ, ಅಂತಹ ಕಂಪನಿಗಳಲ್ಲಿ ಕನ್ನಡಿಗರೂ ಇರುತ್ತಾರೆ. ಅವರಿಗೆ ಕನ್ನಡದ ಬಗ್ಗೆ ನಿಜಕ್ಕೂ ಪ್ರೀತಿ ಇರುತ್ತದೆ. ಅವರ ಮನ ಮಲ್ಲಿಗೆ ಹೂವಿನ ಕಂಪಿಗೆ ಮಾರುಹೋಗುತ್ತದೆ. ಸೀರೆಯುಟ್ಟ ನಾರಿಯರನ್ನು ಕಂಡರೆ ಗೌರವ ಉಕ್ಕುತ್ತದೆ. ಅಂತೆಯೇ ಕನ್ನಡವೆಂದರೂ ಅಷ್ಟೇ ಪ್ರೀತಿ. ತಮ್ಮ ಆಫೀಸಿನ ಕಛೇರಿಗಳ ವಿಭಾಗಗಳಿಗೆ ಶಿವಮೊಗ್ಗ, ಹಂಪೆ ಎನ್ನುವ ಹೆಸರಗಳನ್ನೂ ಇಟ್ಟಿದ್ದಾರೆ. ತಮ್ಮ ಸಹೋದ್ಯೋಗಿಗಳಿಗೆ ಕನ್ನಡ ಕಲಿಸುವ ನಿರ್ಧಾರದಿಂದ ಎರಡು ಗಂಟೆಗಳ ಕನ್ನಡದ ತರಗತಿ ನಡೆಸುತ್ತಿದ್ದಾರೆ.

ಕಲಿಯಲು ಬಂದವರಿಗೆ ಸ್ವಲ್ಪ ಕನ್ನಡ ಗೊತ್ತಿಲ್ಲ. ಆದರೆ ಕಲಿಯುವ ಆಸಕ್ತಿಯಂತೂ ಇತ್ತು. ಎರಡೂವರೆ ಗಂಟೆ ಚಿಕ್ಕ ಮಕ್ಕಳಂತೆ ಕನ್ನಡ ಕಲಿತರು. ಅಲ್ಲಿ ಕಲಿಕೆ ಇತ್ತು. ಮನರಂಜನೆ ಇತ್ತು, ವಿವಿಧತೆ ಇತ್ತು. ಇದು ವಿಶ್ವದ ಅತಿ ಹೆಚ್ಚು ಮಾನ್ಯತೆ ಪಡೆದಿರುವ ಸಾಫ್ಟ್ ವೇರ್‌ ಕಂಪನಿಯಲ್ಲಿ ನಡೆದ ಕನ್ನಡದ ತರಗತಿ. ನಡೆಸಿ ಕೊಟ್ಟವರು ಆಶಾ ಇನ್‌ಫೈನೈಟ್‌ ಸಂಸ್ಥೆಯವರು.

ಅವರು ಸರ್ಕಾರಿ ಶಾಲೆಯ ಮಕ್ಕಳಿಗೂ ಇಂಗ್ಲಿಷ್‌ ಕಲಿಸುತ್ತಿದ್ದಾರೆ. ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದ ಕನ್ನಡೇತರರಿಗೆ ಕನ್ನಡ ಕಲಿಸುವ ಆಸೆ ಇವರದು. ಅವರು ಕನ್ನಡ ಮಾತನಾಡಿದರೆ ಸಾಕು ಎನ್ನುವ ಹಂಬಲ. ಭಾಷೆ ಎನ್ನುವುದು ಪ್ರತಿಯೊಬ್ಬರ ವ್ಯಕ್ತಿತ್ವದ ಗುರುತಿಸುವಿಕೆಯೂ ಹೌದು.

ದಿನನಿತ್ಯದ ಓಡಾಟದಲ್ಲಿ ನಾವು ನಮ್ಮ ನಾಡು, ನುಡಿ, ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ ಮತ್ತು ನಮ್ಮ ಮಾತೃಭಾಷೆಯ ಬಳಕೆ ಕ್ರಮೇಣ ನಶಿಸುತ್ತಿದೆ. ಮಾಯವಾಗುತ್ತಿದೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ಮಾತೃಭಾಷೆ ಪರಕೀಯ ಭಾಷೆಯೇ ಆಗಬಹುದು. ಆದ್ದರಿಂದ ನಮ್ಮ ಮಕ್ಕಳಿಗೂ ಮಾತೃಭಾಷೆಯ ಕಲಿಕೆ ಅತ್ಯಗತ್ಯವಾಗಿದೆ.

ಅಂತೆಯೇ ಇಲ್ಲಿ ಉದ್ಯೋಗಕ್ಕಾಗಿ ಬಂದು ನೆಲೆಸಿ. ಇಲ್ಲಿಯವರೇ ಆಗಿಬಿಟ್ಟಿರುವ ಕನ್ನಡೇತರರಿಗೂ ಕನ್ನಡದ ಮಹತ್ವ ತಿಳಿಸಿ. ಅವರೂ ನಮ್ಮ ಭಾಷೆಯನ್ನೂ ಕಲಿಯುವಂತೆ ಮಾಡುವುದು ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ಕಂಪನಿಯಲ್ಲೂ ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಬರಿಯ ನವೆಂಬರ್‌ ರಾಜ್ಯೋತ್ಸವದ ಭರಾಟೆ ಅಷ್ಟೇ ಅಲ್ಲ, ಇದು ವರ್ಷಪೂರ್ತಿ ನಡೆಸುವ ಅಕ್ಷರದ ಉತ್ಸವವಾಗಬೇಕು!

ಈ ಕಾರ್ಯಕ್ರಮದ ರೂವಾರಿ ಆಶಾ ಸಂಸ್ಥೆಯ  ಮುಖ್ಯಸ್ಥೆ ಸಿ.ವಿ. ಮೀರಾ ರಮಣ ಮತ್ತು ಕಂಪನಿಯ ಉದ್ಯೋಗಿ ಮಲೆನಾಡಿನ ಹೊಸ ನಗರದ ನವೀನ್‌ ಕೃಷ್ಣಪ್ಪ, ಇವರೆಲ್ಲ ಅಪ್ಪಟ ಕನ್ನಡಿಗರು. ಪ್ರತಿಯೊಂದು ಕಂಪನಿಯಲ್ಲೂ ಇಂತಹವರು ಒಬ್ಬೊಬ್ಬರಿದ್ದರೆ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಲು ಸಾಧ್ಯ. ಸಿರಿಗನ್ನಡಂ ಗೆಲ್ಗೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ