ಗರ್ಭದ ಮೇಲೆ ಕಾನೂನು ಪಹರೆ ಏಕೆ?

ಹೆಣ್ಣು ಭ್ರೂಣಹತ್ಯೆ ತಡೆಗೆ ಸರ್ಕಾರ ಭಾರಿ ಹೆಸರುಳ್ಳ ಕಾನೂನು `ಪ್ರೀ ಕನ್ಸೆಪ್ಶನ್‌ ಅಂಡ್‌ ಪ್ರೀ ನೆಟ್‌ ಡೈಗ್ನೊಸ್ಟಿಕ್‌ ಟೆಕ್ನಿಕ್‌’  (ಪ್ರಾಹಿಬಿಷನ್‌ ಆಫ್‌ ಸೆಕ್ಸ್ ಸೆಲೆಕ್ಷನ್‌) ಆ್ಯಕ್ಟ್ 1994 ರೂಪಿಸಿದೆ. ಅದರ ಒಂದು ನಿಯಮದನ್ವಯ ಪೊಲೀಸ್‌ ಅಧಿಕಾರಿಗಳ ತಂಡ ಅಲ್ಲಲ್ಲಿ ಆಸ್ಪತ್ರೆಗಳ ಅಲ್ಟ್ರಾಸೌಂಡ್‌ ಯಂತ್ರಗಳನ್ನು ಪರೀಕ್ಷೆ ನಡೆಸಬಹುದು, ರಿಜಿಸ್ಟರ್‌, ರಿಪೋರ್ಟ್‌ ಮುಂತಾದವುಗಳನ್ನು ಪರಿಶೀಲಿಸಿ ಏನಾದರೂ ತಪ್ಪು ನಡೆದಿರುವುದು ಕಂಡುಬಂದರೆ ವೈದ್ಯರು, ನರ್ಸ್‌ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ತಮ್ಮ ವಶಕ್ಕೆ ಪಡೆಯಬಹುದು. ಈ ರೀತಿಯ ತಂಡಗಳು ದೇಶಾದ್ಯಂತ ಕಾರ್ಯನಿರ್ವಹಿಸಲಿದ್ದು, ಅವು ಹೆಣ್ಣು ಭ್ರೂಣಹತ್ಯೆಯನ್ನು ತಡೆಯುತ್ತವೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರಿ ಪ್ರಮಾಣದಲ್ಲಿ ಹಣವನ್ನಂತೂ ಮಾಡಿಕೊಳ್ಳುತ್ತವೆ.

ಅದೇ ಕಾರಣದಿಂದ ಕುಗ್ರಾಮಗಳಲ್ಲಿ ನಡೆಸಿದ ದಾಳಿಯ ಬಗ್ಗೆ ರಾಜ್ಯ ಸರ್ಕಾರಗಳು ಸಾಕಷ್ಟು ಗಂಭೀರವಾಗಿರುತ್ತವೆ. ಒಡಿಸ್ಸಾದ ಢೆಂಕನಾಲದಲ್ಲಿ 2014ರಲ್ಲಿ ಒಂದು ತಂಡ ಜಗನ್ನಾಥ್‌ ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಮಮತಾ ಸಾಹು ಹಾಗೂ ಇತರರ ವಿರುದ್ಧ ಮೊಕದ್ದಮೆ ದಾಖಲಿಸಿ ಸಮನ್ಸ್ ಜಾರಿಗೊಳಿಸಿತು.

ಈ ಪ್ರಕರಣ ಹೈಕೋರ್ಟ್‌ ಕಟ್ಟೆ ಏರಿತು. ಆದರೆ ಹೈಕೋರ್ಟ್‌ ಈ ಪ್ರಕರಣನ್ನು ಕಿತ್ತುಹಾಕಿತು. ಬಳಿಕ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಯಿತು. ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರ ಮತ್ತು ಇನ್‌ಸ್ಪೆಕ್ಟರ್‌ಗಳ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣನ್ನು ಮತ್ತೆ ಮುಂದುವರಿಸಿತು.

ಇಷ್ಟೊಂದು ದೀರ್ಘ ವಿಷಯ ಪ್ರಸ್ತಾಪಿಸಲು ಕಾರಣ ಇಷ್ಟೆ, ತನ್ನಿಷ್ಟದ ಸಂತಾನದ ಆಯ್ಕೆ ಪ್ರತಿಯೊಬ್ಬ ಮಹಿಳೆಯ ಹಕ್ಕು. ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ಅಥವಾ ಖಾಸಗಿ ಯಾವುದೇ ಕಾರಣಗಳಿರಬಹುದು. ಯಾವುದೇ ಆಸ್ಪತ್ರೆ ಈ ಕುರಿತಂತೆ ಮಹಿಳೆಯ ಮೇಲೆ ಒತ್ತಡ ಹಾಕುವಂತಿಲ್ಲ, ಅಪಾಯ ಉಂಟು ಮಾಡುವಂತಿಲ್ಲ. ಎದೆಯಲ್ಲಿ ಒಂದಿಷ್ಟು ನೋವು ಅನಿಸಿದರೆ ಅದನ್ನು ಹಾರ್ಟ್‌ ಅಟ್ಯಾಕ್‌ ಎಂದು ಸಬೂಬು ಹೇಳಿ ಲಕ್ಷ ಲಕ್ಷ ರೂ. ಸುಲಿಗೆ ಮಾಡಲಾಗುತ್ತದೆ. ಮೂತ್ರ ಸೋಂಕನ್ನು `ಕಿಡ್ನಿ ಫೇಲ್ಯೂರ್‌’ ಎಂದು ಹೇಳಿ ಅದನ್ನು ತೆಗೆಸಿ ಹಾಕಲಾಗುತ್ತದೆ. ಆದರೆ ಪ್ರಸವ ಪೂರ್ವ ಪರೀಕ್ಷೆಯನ್ನು ಗರ್ಭಿಣಿ ತನಗಿಷ್ಟವಾದಾಗ ಮಾಡಿಸಿಕೊಳ್ಳಬಹುದು ಎಂಬುದನ್ನು ಮಾತ್ರ ಒಪ್ಪುವುದಿಲ್ಲ. ಅವಳ ಈ ಇಚ್ಛೆಗೆ ಸರ್ಕಾರ ನಿರ್ಬಂಧ ಹೇರುವುದು ಸರಿಯಲ್ಲ. ಬಹುಶಃ ಧಾರ್ಮಿಕ ಹಾಗೂ ಸಾಮಾಜಿಕ ಕಾರಣಗಳಿಂದಾಗಿಯೇ ಮಹಿಳೆ ತನಗಿಷ್ಟವಾದ ಸಂತಾನ ಬಯಸುತ್ತಿದ್ದರೆ, ಅದಕ್ಕೆ ಸರ್ಕಾರ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸಬೇಕು. ಸಮಾಜಕ್ಕೆ ಸಜೆ ನೀಡಬೇಕು ಮಹಿಳೆಗೇಕೆ ಆ ಶಿಕ್ಷೆ?

ಪ್ರತಿಯೊಬ್ಬ ಮಹಿಳೆಗೂ ತನ್ನ ಕುಡಿ ತನಗೆ ಪ್ರಿಯವಾಗಿರುತ್ತದೆ. ಸಂತಾನ ಆಯ್ಕೆಯಲ್ಲಿ ಸಮತೋಲನ ಕಾಪಾಡಿ ಎಂದು ಸೃಷ್ಟಿಯೇ ಕಲಿಸಿಕೊಟ್ಟಿದೆ. ಹುಟ್ಟಲಿರುವ ಮಗು ಗಂಡೊ, ಹೆಣ್ಣೊ ಎಂದು ತಿಳಿದುಕೊಳ್ಳುವುದು ತಪ್ಪೇನಲ್ಲ. ಅದೇ ಆಧಾರದನ್ವಯ ದಂಪತಿಗಳು ಸಿದ್ಧತೆ ಮಾಡಿಕೊಳ್ಳಬಹುದು. ಬಟ್ಟೆ ಖರೀದಿಸಬಹುದು. ಗಂಡ-ಹೆಂಡತಿ ತಮ್ಮದೇ ಆದ ಕನಸುಗಳನ್ನು ಕಟ್ಟಿಕೊಳ್ಳಬಹುದು. ಒಂದು ವೇಳೆ ಹುಟ್ಟಲಿರುವ ಮಗು ತನಗಿಷ್ಟವಾದದ್ದು ಆಗಿರದಿದ್ದರೆ ಗರ್ಭಪಾತ ಮಾಡಿಸಿಕೊಳ್ಳಬಹುದು, ಅದು ಅವಳ ಆಯ್ಕೆ. ಸಮಾಜ ಹಾಗೂ ಧರ್ಮವನ್ನು ಮುಂದಿಟ್ಟುಕೊಂಡು ಆಸ್ಪತ್ರೆ, ಅಲ್ಟ್ರಾಸೌಂಡ್‌ ಯಂತ್ರ ಅಥವಾ ವೈದ್ಯರನ್ನು ಅಪರಾಧಿಯಾಗಿಸಿ ಸರ್ಕಾರ ಧರ್ಮ ಹಾಗೂ ಸಮಾಜದ ಬಗ್ಗೆ ಹೆದರಿಕೆಯನ್ನು ಬಿಂಬಿಸುತ್ತದೆ. ಈಗಂತೂ ಸರ್ಕಾರ ಇಬ್ಬಗೆಯ ಮಾತಾಡುತ್ತದೆ. ಒಂದೆಡೆ ಆಧುನಿಕ ತಂತ್ರಜ್ಞಾನದ ಬಗ್ಗೆ ಹೇಳುತ್ತದೆ.

ಮತ್ತೊಂದೆಡೆ ಯೋಗ ಹಾಗೂ ಗೋಮೂತ್ರದಿಂದ ಸಾವಿರ ರೋಗಗಳಿಗೆ ಮುಕ್ತಿ ದೊರಕಿಸಿಕೊಡುವ ಮೊಹರು ಹಾಕುತ್ತದೆ. ಒಂದೆಡೆ ಧರ್ಮದ ಹೆಸರಿನಲ್ಲಿ ಇನ್ನೊಬ್ಬರ ಮನೆಗೆ ಬೆಂಕಿ ಇಡುತ್ತದೆ. ಸ್ತ್ರೀಯರನ್ನು ಕಾಲ ಕಸವೆಂದು ಭಾವಿಸುತ್ತದೆ. ಅವರನ್ನು ವ್ರತ, ಉಪವಾಸ, ಪೂಜೆ, ಆರತಿ, ಶೋಭಾಯಾತ್ರೆ ಮೆರವಣಿಗೆಗಳಲ್ಲಿ ತೊಡಗಿಸಿ `ಹೆಮ್ಮೆ’ ಪಟ್ಟುಕೊಳ್ಳಲಾಗುತ್ತವೆ. ಇನ್ನೊಂದೆಡೆ ಆಸ್ಪತ್ರೆಗಳಿಂದ ಆಧುನಿಕ ಸೌಲಭ್ಯಗಳನ್ನು ತೆಗೆಸಿ ಹಾಕಲಾಗುತ್ತದೆ.

ಸಂತಾನ ಸ್ತ್ರೀಯ ಹಕ್ಕು. ಗರ್ಭ ಅವಳ ಸಂಪತ್ತು. ಆ ಹಕ್ಕಿನ ಮೇಲೆ ಕನ್ನ ಹಾಕುವ ಹಕ್ಕು ಸರ್ಕಾರಕ್ಕಿಲ್ಲ. ಸಂತಾನ ಆಯ್ಕೆಯ ಅವಳ ಹಕ್ಕನ್ನು ಕಿತ್ತುಕೊಳ್ಳಬಾರದು. ಸುಪ್ರೀಂ ಕೋರ್ಟ್‌ ಸರ್ಕಾರದ ಅಭಿಪ್ರಾಯಕ್ಕೆ ಧ್ವನಿಗೂಡಿಸಬಹುದು. ಲಿಂಗಾನುಪಾತ ಏನೇ ಆಗಿರಬಹುದು. ಆದರೆ ಮಹಿಳೆಯ ಹಕ್ಕನ್ನು ಮಾತ್ರ ಕಸಿದುಕೊಳ್ಳಬಾರದು.

ಪರಿಸರಕ್ಕೆ ಹಾನಿಯುಂಟು ಮಾಡುವ ಹಕ್ಕು ಯಾರಿಗೂ ಇಲ್ಲ

ಕೇರಳದ ಎರ್ನಾಕುಲಂ ನಗರದಲ್ಲಿ ಸಮುದ್ರ ತೀರದಲ್ಲಿ ನಿರ್ಮಿಸಲಾದ ಬಹುಮಹಡಿ ಕಟ್ಟಡ ಎಂಥವರಿಗೂ ಅಸೂಯೆ ಹುಟ್ಟಿಸುವಂತಿತ್ತು. ಈ 343 ಫ್ಲ್ಯಾಟುಗಳ ಭಾರಿ ಕಟ್ಟಡಕ್ಕೆ ಸಮುದ್ರದ ತಂಗಾಳಿ ಬೀಸುತ್ತಿತ್ತು. ದೂರದತನಕ ವಿಹಂಗಮ ದೃಶ್ಯವಿತ್ತು. ಅತ್ಯುತ್ತಮ ಸೌಲಭ್ಯಗಳಿದ್ದವು. ಮೂರು ಬಿಲ್ಡರುಗಳು ಸೇರಿ ನಿರ್ಮಿಸಿದ ಈ ಟವರ್‌ ಕೇರಳ ಪ್ರತಿಷ್ಠೆಯ ಹಾಗಿತ್ತು. ಕಟ್ಟಡ ನಿರ್ಮಾಣಕ್ಕೆ ನಿಷಿದ್ಧವಿರುವ ಸ್ಥಳದಲ್ಲಿ ಈ ಕಟ್ಟಡ ನಿರ್ಮಿಸಿರುವ ಬಗ್ಗೆ ಪರಿಸರವಾದಿಗಳು ಆಕ್ಷೇಪ ಎತ್ತಿದರು. ಸುಪ್ರೀಂ ಕೋರ್ಟ್‌ ಕೂಡ ಅಲ್ಲಿ ಫ್ಲ್ಯಾಟ್‌ ಕೊಂಡವರ ಗೋಳು ಕೇಳಿಸಿಕೊಳ್ಳದೆ ತಾನು ಪರಿಸರದ ಜೊತೆಗೆ ಯಾವುದೇ ರಾಜೀ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಖಡಕ್‌ ಆಗಿ ಹೇಳಿತು.

ಫ್ಲ್ಯಾಟ್ಸ್ ಎಷ್ಟೇ ಬೆಲೆಗೆ ಮಾರಾಟವಾಗಿರಬಹುದು. ಈಗ ಅವುಗಳ ಬೆಲೆ ಎಷ್ಟೇ ಆಗಿರಬಹುದು, ಪ್ರತಿಯೊಬ್ಬರಿಗೂ ಕೇವಲ 25 ಲಕ್ಷ ರೂ. ಕೊಟ್ಟು ಹೊರಗೆ ಹಾಕಲಾಯಿತು. ಬಹುಶಃ 10-20 ದಿನಗಳಲ್ಲಿ ಫ್ಲ್ಯಾಟ್ಸ್ ಗಳ ಟವರ್‌ಗಳನ್ನು ಕಂಟ್ರೋಲ್ಡ್ ಸ್ಛೋಟದ ಮುಖಾಂತರ ಬೀಳಿಸಲಾಗುತ್ತದೆ.

ಒಂದು ಟವರ್‌ನ ಹೆಸರು ಹೋಲಿ ಫೇಯ್ತ್ ಅಪಾರ್ಟ್‌ಮೆಂಟ್‌, ಇನ್ನೊಂದರ ಹೆಸರು ಗೋಲ್ಡನ್‌ ಕಾಯಲೋರಂ, ಮತ್ತೊಂದು ಜೆಮ್ಸ್ ಕೋರ್‌ ಕೇವ್‌. ಹೆಸರುಗಳಿಂದ ಫ್ಲ್ಯಾಟ್‌ಗಳ ಟವರ್‌ಗಳ ಧರ್ಮ, ಜಾತಿ ಗೊತ್ತಾಗುತ್ತಿತ್ತು. ಪ್ರತಿಯೊಬ್ಬರು ತಮ್ಮ ತಮ್ಮದೇ ಫ್ಲ್ಯಾಟ್‌ಗಳಲ್ಲಿ ಇರಬೇಕೆಂದು ನಿಗದಿಪಡಿಸಲಾಗಿತ್ತು. 1 ರಿಂದ ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಈ ಕಟ್ಟಡಗಳಲ್ಲಿ ಜಿಮ್, ಕ್ಲಬ್‌ ಹೌಸ್‌, ಪವರ್‌ ಬ್ಯಾಕ್‌ಅಪ್‌, ಗಾರ್ಡನ್‌, ಸ್ವಿಮ್ಮಿಂಗ್‌ ಪೂಲ್ ಹೀಗೆ ಏನೆಲ್ಲ ಇದ್ದವು. 2013ರಲ್ಲಿ ನಿರ್ಮಿಸಲಾದ ಈ ಫ್ಲ್ಯಾಟ್‌ಗಳು ಈಗಲೂ ಒಂದು ಒಂದೂವರೆ ಕೋಟಿ ರೂ.ಗಳಲ್ಲಿ ಮಾರಾಟ ಆಗುತ್ತಿದ್ದವು.

ದೇಶಾದ್ಯಂತ ಕಾಡು, ಕೆರೆ, ನದಿ, ಹೊಲಗದ್ದೆ ಹಾಗೂ ಸಮುದ್ರ ತೀರದ ಬಳಿ ನಿರ್ಮಿಸಲಾದ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಗರಗಳ ಮಧ್ಯಭಾಗದಲ್ಲಿನ ದಟ್ಟಣೆಗೆ ಬೇಸತ್ತು ಜನರು ಹೊರಭಾಗದಲ್ಲಿ ಪರಿಸರದ ಬಗ್ಗೆ ಚಿಂತಿಸದೆ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಮುಖಂಡರು, ಅಧಿಕಾರಿಗಳು ಹಾಗೂ ಸ್ಥಳೀಯರು ಇವರನ್ನು ವರದಾನ ಎಂಬಂತೆ ತಿಳಿಯುತ್ತಾರೆ. ಏಕೆಂದರೆ ಬೆಲೆಯೇ ಇರದಿದ್ದ ಭೂಮಿಗೆ ಕೆಲವೇ ತಿಂಗಳುಗಳಲ್ಲಿ ಲಕ್ಷ ಲಕ್ಷಕ್ಕೆ ಮಾರಾಟವಾಗುತ್ತವೆ. ಪರಿಸರಕ್ಕೆ ಈ ತೆರನಾದ ಪೆಟ್ಟು ದೇಶದೆಲ್ಲೆಡೆ ಕಂಡುಬರುತ್ತದೆ. ಸುಪ್ರೀಂ ಕೋರ್ಟ್‌ ಮಾತ್ರ ಅದಕ್ಕೆ ಕಡಿವಾಣ ಹಾಕುತ್ತಿದೆ. ಯಾವುದೇ ಸರ್ಕಾರವಾಗಿರಬಹುದು, ರಾತ್ರಿ ಬೆಳಗಾಗುವುದರೊಳಗೆ ಇಂತಹ ಅಕ್ರಮಗಳಿಗೆ ಅನುಮತಿ ಕೊಟ್ಟು ಬಿಡುತ್ತವೆ. ಪ್ರತಿಯೊಂದು ಅನುಮತಿಗೆ ಹಣ ಇಲ್ಲವೇ 1-2 ಫ್ಲ್ಯಾಟ್‌ಗಳು ದೊರಕುತ್ತವೆ. ಸಾಮಾನ್ಯ ಜನರು 200 ಅಡಿ ಜಾಗಕ್ಕಾಗಿ ಪರದಾಡುತ್ತಾರೆ. ಶ್ರೀಮಂತರಿಗೆ ಮಾತ್ರ ದೇಶಾದ್ಯಂತ ಸ್ವಚ್ಛ ಗಾಳಿ, ದುಬಾರಿ ವಾಹನಗಳ ಸಂಪರ್ಕ ಇರುವ ಕಡೆ ಮನೆಗಳು ಲಭ್ಯವಿವೆ. ಇದರಲ್ಲಿ ಬಿಲ್ಡರ್ಸ್‌ಗಳದ್ದಷ್ಟೇ ತಪ್ಪು ಇದೆ ಎಂದು ಹೇಳಲಾಗದು. ಸಾಮಾನ್ಯವಾಗಿ ಖರೀದಿದಾರರಿಗೆ ಇದರಲ್ಲೇನೊ ಕೊರತೆ ಇದೆ ಎಂದೆನಿಸುತ್ತದೆ. ಆದರೆ ಬಹಳಷ್ಟು ಜನರಿಗೆ 10-20 ವರ್ಷ ದಾಟಿದರೂ ಸಾಕು, ಅದರಲ್ಲಿ ತಪ್ಪೇನಿದೆ ಎಂದು ಯೋಚಿಸುತ್ತಾರೆ. ಏಕೆಂದರೆ ಅದೊಂದೇ ಅವರ ಮನೆಯಾಗಿರುವುದಿಲ್ಲ.

ಪರಿಸರದ ಜೊತೆಗಿನ ಚೇಷ್ಟೆ ಕೆಲವರಿಗೆ ತಪ್ಪಾಗಿ ಗೋಚರಿಸುತ್ತದೆ. ಅದು ರೆಸಾರ್ಟ್‌ ಆಗಿರಬಹುದು, ಅಪಾರ್ಟ್‌ಮೆಂಟ್‌ ಆಗಿರಬಹುದು, ಇಲ್ಲವೇ ಸಫಾರಿ ಇರಬಹುದು. ನದಿ, ಕಾಡು, ಸಮುದ್ರಗಳನ್ನು ಅವುಗಳ ಪಾಡಿಗೆ ಅವನ್ನು ಬಿಟ್ಟುಬಿಡಬೇಕು. ಕಾಡು, ಪ್ರಾಣಿ, ಪಕ್ಷಿ, ಮರಗಿಡಗಳಿಗೆ ಹಾನಿ ಮಾಡುವ ಹಕ್ಕು ಯಾರಿಗೂ ಇಲ್ಲ.

ಈ ಬಾಬತ್ತು ಶಬರಿಮಲೈನಲ್ಲೇ ಆಗಿರಬಹುದು, ಗಂಗೆಯ ತಟದಲ್ಲಿಯೇ ಆಗಿರಲಿ ಯಾರನ್ನೂ ಬಿಡಬಾರದು. ಕೇವಲ ಶ್ರೀಮಂತ ಜನರ ಸುಖಕ್ಕೆ ಅಷ್ಟೇ ಅಲ್ಲ, ಪೂಜಾರಿ ಪುರೋಹಿತರಿಗಾಗಿಯೂ ಪರಿಸರ ಹಾಳುಗೆಡುಹುದು ನಿರಂತರಾಗಿ ನಡೆದಿದೆ. ಆದರೆ ಭಕ್ತಿರಸದಲ್ಲಿ ಮುಳುಗಿರುವ ಸರ್ಕಾರ ಹಾಗೂ ನ್ಯಾಯಾಲಯದ ಕಣ್ಣುಗಳು ಮುಚ್ಚಿವೆ.

ನಮ್ಮ ಸುರಕ್ಷತೆ ನಾವೇ ಮಾಡಿಕೊಳ್ಳಬೇಕು

ದೇಶಾದ್ಯಂತ ರಸ್ತೆಗಳಲ್ಲಿ ಚಿಕ್ಕ ಪುಟ್ಟ ಅಪರಾಧಗಳು ಸಾಮಾನ್ಯವಾಗುತ್ತಿವೆ, ಹೆಚ್ಚಾಗುತ್ತಿವೆ ಎಂಬುದು ಸುದ್ದಿಗಳಿಂದ ಗೊತ್ತಾಗುತ್ತದೆ. ಪ್ರವಾಸಕ್ಕೆ ಹೊರಟಿರುವ ಜನರನ್ನು ಲೂಟಿ ಮಾಡುವುದು, ದ್ವಿಚಕ್ರ ವಾಹನದಲ್ಲಿ ಹೋಗುವ ಮಹಿಳೆಯರ ಸರ ಎಗರಿಸುವುದು, ಪರ್ಸ್‌ ಕಿತ್ತುಕೊಂಡು ಓಡಿಹೋಗುವುದು, ರೆಸ್ಟೋರೆಂಟ್‌, ಪಬ್‌ಗಳಲ್ಲಿ ಹೊಡೆದಾಡುವುದು, ವಿದ್ಯಾರ್ಥಿ ಚುನಾವಣೆಗಳಲ್ಲಿ ಹಿಂಸೆ ಈಗ ಸಾಮಾನ್ಯ ಎಂಬಂತಾಗಿದೆ. ಮೊದಲು ನಡೆಯುತ್ತಿದ್ದ ಪ್ರಮಾಣದಲ್ಲಿಯೇ ಇವು ನಡೆಯುತ್ತಿರಬಹುದು. ಆದರೆ ಇವು ಟಿ.ವಿಯಲ್ಲಿ ವೈರಲ್ ಆಗುತ್ತಿವೆ. ಮೊಬೈಲ್‌ನಿಂದ ಸೆರೆಹಿಡಿದು ಇಲ್ಲವೇ ಸಿಸಿ ಟಿ.ವಿಯಿಂದ ಪಡೆದುಕೊಂಡ ವಿಡಿಯೋಗಳು ಭಯದ ವಾತಾವರಣ ಹುಟ್ಟಿಸುತ್ತಿವೆ.

ಈ ಬೆಂಕಿಯಲ್ಲಿ ತುಪ್ಪ ಸುರಿಯುವ ಕೆಲಸವನ್ನು ಭಗವಾಧಾರಿ ಯುವ ಪಡೆ ಮಾಡುತ್ತಿದೆ. ಅದು ಅಪರಾಧ ಎಸಗುವ ಲೈಸೆನ್ಸ್ ಪಡೆದುಕೊಂಡಂತೆ ವರ್ತಿಸುತ್ತಿದೆ. ಅವರು ಯಾರೊಂದಿಗಾದರೂ ಜಗಳ ತೆಗೆದರೆ ಅವರಿಗೆ ಸಾಥ್‌ ಕೊಡಲು ಕೆಲವೇ ನಿಮಿಷಗಳಲ್ಲಿ ಭಗವಾ ಸೈನ್ಯ ಹಾಜರಾಗುತ್ತದೆ. ಅವರ ಬೇಟೆ ಅಳುತ್ತಾ ಕುಳಿತುಬಿಡುತ್ತದೆ.

ಭಯದ ಈ ವಾತಾವರಣ ದಿನ ಹೆಚ್ಚುತ್ತ ಹೊರಟಿದೆ. ಏಕೆಂದರೆ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ವ್ಯಾಪಾರದಲ್ಲಿ ಇಳಿಮುಖ ಗೋಚರಿಸುತ್ತಿದೆ. ನಿರ್ಮಲಾ ಸೀತಾರಾಮನ್‌ರ ಟ್ಯಾಕ್ಸ್ ಕಡಿಮೆ ಮಾಡುವ ಗ್ಲೂಕೋಸ್‌ ಏನೇನೂ ಕೆಲಸ ಮಾಡಲಿಲ್ಲ. ಸಾಮಾನ್ಯವಾಗಿ ಆರ್ಥಿಕ ಹತಾಶೆಯ ದಿನಗಳಲ್ಲಿ ಅಪರಾಧಗಳು ಹೆಚ್ಚುತ್ತವೆ. ಇತ್ತೀಚೆಗೆ ಇದಕ್ಕೆ ಧರ್ಮದ ಪೆಟ್ರೋಲ್ ಕೂಡ ಉಚಿತವಾಗಿ ದೊರಕುತ್ತಿದೆ. ಅಪರಾಧಗಳ ಭಯ ಹೆಚ್ಚುತ್ತಾ ಹೊರಟಿದೆ.

ದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ಬೆಳಗ್ಗೆ 6.30ಕ್ಕೆ 59 ವರ್ಷದ ಮಹಿಳೆಯ ಮೇಲೆ ಗುಂಡು ಹಾರಿಸಲಾಯಿತು. ಲೂಟಿಯೇನೂ ಆಗಲಿಲ್ಲ. ಆದರೆ ಉದ್ದೇಶ ಅದೇ ಆಗಿತ್ತು. ಮಹಿಳೆ ವಾಹನವನ್ನು ಮುಂದೆ ಓಡಿಸಿದ್ದರಿಂದ ಅಪರಾಧಿ ಗುಂಡು ಹಾರಿಸಿ ಓಡಿಹೋದ. ಹಾಗಾಗಿ ಲೂಟಿ ಮಾಡಲು ಆಗಲಿಲ್ಲ. ಇನ್ನೊಂದು ಘಟನೆಯಲ್ಲಿ ಓಡಿಹೋಗುತ್ತಿದ್ದ ಒಬ್ಬ ವ್ಯಕ್ತಿಯನ್ನು ಮಕ್ಕಳ ಕಳ್ಳ ಎಂದು ಹೇಳಿ, ಜನಸಮೂಹ ಥಳಿಸಿತು. ಇದೂ ಕೂಡ ದೆಹಲಿಯಲ್ಲಿ ಸಂಭವಿಸಿತು. ಮುಂಗೇರ್‌ ಎಂಬಲ್ಲಿ ರೇಪ್‌ನ ಪ್ರಯತ್ನದಲ್ಲಿ ಒಬ್ಬ ಹುಡುಗಿ ಹಾಗೂ ಆಕೆಯ ಸ್ನೇಹಿತನನ್ನು ಹೊಡೆದು ಸಾಯಿಸಲಾಯಿತು.

ಈ ಘಟನೆಗಳು ಭಯ ಹುಟ್ಟಿಸುತ್ತವೆ. ತಮ್ಮ ಮನೆಯೊಳಗೆ ತಾವು ಅಸುರಕ್ಷಿತರು ಎಂಬ ಭಾವನೆ ಹುಟ್ಟುಹಾಕುತ್ತವೆ. ಈಗ ಜನಸಮೂಹಕ್ಕೆ ರಕ್ಷಣೆ ಕೂಡ ಸಿಗುತ್ತಿಲ್ಲ. ಏಕೆಂದರೆ ಸರ್ಕಾರ `ಮಾಬ್‌ ಲಿಂಚಿಂಗ್‌’ಗೆ ಅನುಮತಿ ಕೊಟ್ಟುಬಿಟ್ಟಿದೆ. ಅದು ಭಗವಾ ಗ್ರೂಪ್‌ ಆಗಿದ್ದರೆ ಎಷ್ಟು ಬೇಕಾದರೂ `ಮಾಬ್‌ ಲಿಂಚಿಂಗ್‌’ ಮಾಡಬಹುದು. ಈಗ ಜನರು ತಮ್ಮ ಸುರಕ್ಷತೆಯನ್ನೇ ತಾವೇ ಮಾಡಿಕೊಳ್ಳಬೇಕು. ಅಪರಾಧಿಗಳಿಂದ, ಪೊಲೀಸರಿಂದ, ಜನರಿಂದ ಸುರಕ್ಷಿತರಾಗಿ ಉಳಿಯಲು ಇದೊಂದು ಉಪಾಯ ಬಾಕಿ ಉಳಿದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ