ಪಶ್ಚಿಮ ಘಟ್ಟಗಳ ಹಸಿರು ಮಡಿಲಲ್ಲಿ ಗಂಭೀರವಾಗಿ ನಿಂತಿರುವ ಕುಮಾರ ಪರ್ವತ ಕೇವಲ ಒಂದು ಪರ್ವತವಲ್ಲ ಶಿಖರವಲ್ಲ, ಅದು ಪೌರಾಣಿಕತೆ, ಜನಪದ ನಂಬಿಕೆ, ಭಕ್ತಿ ಮತ್ತು ಸಾಹಸಗಳ ಸಂಗಮ! ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಈ ಪರ್ವತವನ್ನು ಏಕೆ ಕುಮಾರ ಪರ್ವತ ಎಂದು ಕರೆಯಲಾಗುತ್ತದೆ? ಈ ಪ್ರಶ್ನೆಗೆ ಉತ್ತರ ಹುಡುಕಿದಾಗ, ನಮ್ಮ ಸಂಸ್ಕೃತಿಯ ಆಳವಾದ ಬೇರುಗಳು ಕಾಣಿಸುತ್ತವೆ.
ಪೌರಾಣಿಕ ಹಿನ್ನೆಲೆ
ಭಾರತೀಯ ಪೌರಾಣಿಕ ಪರಂಪರೆಯಲ್ಲಿ ಕುಮಾರಸ್ವಾಮಿ, ಅಂದರೆ ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ, ಶಿವಪಾರ್ವತಿಯ ಪುತ್ರ. `ಕುಮಾರ’ ಎಂಬ ಪದವೇ ಯೌವನ, ಶಕ್ತಿ ಮತ್ತು ಶೌರ್ಯದ ಸಂಕೇತ. ಪುರಾಣಗಳ ಪ್ರಕಾರ, ದೈತ್ಯರನ್ನು ಸಂಹರಿಸುವ ಮೊದಲು ಕುಮಾರಸ್ವಾಮಿ ಕಠಿಣ ತಪಸ್ಸಿನಲ್ಲಿ ತೊಡಗಿದ್ದನು.
ಆ ತಪಸ್ಸು ನಡೆದ ಸ್ಥಳಗಳಲ್ಲಿ ಒಂದಾಗಿ ಈ ಪರ್ವತ ಪ್ರದೇಶವನ್ನು ಜನ ನಂಬುತ್ತಾರೆ. ಹೀಗಾಗಿ `ಕುಮಾರನ ತಪಸ್ಸಿನ ನೆಲ’ ಎಂಬ ಅರ್ಥದಲ್ಲಿ ಈ ಶಿಖರಕ್ಕೆ ಕುಮಾರ ಪರ್ವತ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ವ್ಯಾಪಕವಾಗಿದೆ. ಇದಕ್ಕೆ ಮತ್ತೊಂದು ಬಲಲಾದ ಕಾರಣವೆಂದರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಾಮೀಪ್ಯತೆ. ದಕ್ಷಿಣ ಭಾರತದ ಪ್ರಮುಖ ಸರ್ಪಾರಾಧನಾ ಕ್ಷೇತ್ರವಾದ ಕುಕ್ಕೆ, ನೇರವಾಗಿ ಕುಮಾರಸ್ವಾಮಿ ಆರಾಧನೆಗೆ ಸಂಬಂಧಪಟ್ಟದ್ದು.
ರುದ್ರ ರಮಣೀಯ ಪ್ರಕೃತಿ
ದೇವಾಲಯ, ಪರ್ವತ ಮತ್ತು ಕಾಡು ಮೂರೂ ಆಧ್ಯಾತ್ಮಿಕ ವಾತಾವರಣದಲ್ಲಿ ಬೆಸೆದುಕೊಂಡಿರುವುದರಿಂದ, ಪರ್ವತಕ್ಕೂ ದೇವರ ಹೆಸರೇ ನೆಲೆಯಾಗಿದೆ ಎಂಬುದು ಸಹಜವಾದ ವಿವರಣೆ. ಇದಕ್ಕೆ ಪೂರಕವಾಗಿ `ಕುಮಾರಧಾರಾ’ ನದಿ ಸಹ ಜೊತೆಗೂಡಿದೆ. ಜಾನಪದ ಕಥೆಗಳು ಕೂಡ ಈ ನಂಬಿಕೆಯನ್ನು ಗಟ್ಟಿಗೊಳಿಸುತ್ತವೆ. ಸ್ಥಳೀಯ ಹಿರಿಯರ ಮಾತುಗಳಲ್ಲಿ, ಈ ಪರ್ವತದಲ್ಲಿ ದೇವಶಕ್ತಿ ವಾಸಿಸುವ ಅನುಭವವಾಗುತ್ತದೆ ಎನ್ನುವುದು ಸಾಮಾನ್ಯ. ಮಳೆಗಾಲದಲ್ಲಿ ಮುಸುಕು ಮೋಡಗಳು, ಹಸಿರು ಕಾಡಿನ ಮೌನ, ತೀಕ್ಷ್ಣ ಏರುವ ಬಾಣ ಇವು ಪರ್ವತವನ್ನು ಸಾಮಾನ್ಯ ಭೌಗೋಳಿಕ ರಚನೆಯಷ್ಟೇ ಅಲ್ಲ, ಒಂದು ದೈವೀಕ ಸ್ಥಳವೆಂದು ಭಾಸವಾಗುವಂತೆ ಮಾಡುತ್ತವೆ.

ಜನಪದರು ಕಂಡಂತೆ
ಜಾನಪದ ಸಂಪ್ರದಾಯಗಳಲ್ಲಿ ಕುಮಾರ ಪರ್ವತವನ್ನು `ದೇವಕುಮಾರನ ನೆಲೆ’ ಎಂದು ಕರೆದ ಉದಾಹರಣೆಗಳೂ ದೊರಕುತ್ತವೆ. ಇತ್ತೀಚಿನ ದಿನಗಳಲ್ಲಿ ಕುಮಾರ ಪರ್ವತ ಸಾಹಸ ಪ್ರಿಯರ ಸ್ವರ್ಗವಾಗಿ ಹೆಸರು ಪಡೆದಿದೆ. ರಾಜ್ಯದ ಅತಿ ಕಠಿಣ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದೆಂದು ಗುರುತಿಸಲ್ಪಡುವ ಈ ಪರ್ವತ, ಯಾತ್ರಿಕರ ಶಾರೀರಿಕ ಸಾಮರ್ಥ್ಯವನ್ನೂ ಮಾನಸಿಕ ಸ್ಥೈರ್ಯವನ್ನೂ ಪರೀಕ್ಷಿಸುತ್ತದೆ.
ಆದರೆ ಗಮನಾರ್ಹವಾದ ಸಂಗತಿಯೆಂದರೆ ಇಂದಿಗೂ ಅನೇಕ ಯಾತ್ರಿಕರು ಈ ಪಾದಯಾತ್ರೆಯನ್ನು ಕೇವಲ ಸಾಹಸಕ್ಕಾಗಿ ಅಲ್ಲ, ಭಕ್ತಿಯ ಭಾವದಿಂದ ಆರಂಭಿಸುತ್ತಾರೆ. `ಕುಮಾರಸ್ವಾಮಿ ಕಾಪಾಡಲಿ’ ಎಂಬ ಮಂತ್ರದೊಂದಿಗೆ ಪರ್ವತ ಏರುವವರ ಸಂಖ್ಯೆ ಕಡಿಮೆ ಇಲ್ಲ.
ವೈಜ್ಞಾನಿಕ ಯುಗದಲ್ಲಿ
ಇಂದಿನ ವೈಜ್ಞಾನಿಕ ಯುಗದಲ್ಲಿಯೂ, ಪರ್ವತಗಳಿಗೆ ಹೆಸರಿಡುವಲ್ಲಿ ಪೌರಾಣಿಕತೆ ಪ್ರಮುಖ ಪಾತ್ರ ವಹಿಸಿರುವುದು ಗಮನಾರ್ಹ. ಕುಮಾರ ಪರ್ವತ ಅದಕ್ಕೆ ಹೊರತಲ್ಲ. ಇಲ್ಲಿ ಪೌರಾಣಿಕ ನಂಬಿಕೆ ಮತ್ತು ಪ್ರಕೃತಿಯ ವೈಭವ ಪರಸ್ಪರ ಪೂರಕವಾಗಿ ನಿಂತಿವೆ. ಪರ್ವತದ ಎತ್ತರ ಎಷ್ಟು ಮಹತ್ವದ್ದೋ, ಅದರ ಹೆಸರಿನ ಹಿಂದಿರುವ ನಂಬಿಕೆಯೂ ಅಷ್ಟೆ ಎತ್ತರದಲ್ಲಿದೆ.
ಒಟ್ಟಿನಲ್ಲಿ ಕುಮಾರ ಪರ್ವತ ಎಂಬ ಹೆಸರು ಕೇವಲ ಒಂದು ಗುರುತು ಅಲ್ಲ, ಅದು ನಮ್ಮ ಪೌರಾಣಿಕ ಸ್ಮೃತಿ, ಜನಪದ ಪರಂಪರೆ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯ ಪ್ರತಿಬಿಂಬ. ಆ ಹೆಸರಿನೊಳಗೆ ಭಕ್ತಿಶ್ರದ್ಧೆ ಇದೆ ಮತ್ತು ಪೀಳಿಗೆಗಳಿಂದ ಪೀಳಿಗೆಗೆ ಸಾಗಿದ ನಂಬಿಕೆಯ ಉಸಿರಾಟ ಇದೆ.
– ಮಮತಾ ಕೃಷ್ಣ





