ಅಧ್ಯಾಪಕಿಯಾಗಿದ್ದ ಅವರು ರಂಗಾಸಕ್ತಿಯಿಂದ ಅವಧಿಗೆ ಮುಂಚೆಯೇ ವೃತ್ತಿಗೆ ರಾಜೀನಾಮೆ ನೀಡಿ ಹವ್ಯಾಸಿ ರಂಗಭೂಮಿಯಲ್ಲಿಯೇ ತಮ್ಮನ್ನು ಪರಿಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆರಂಭದಲ್ಲಿ ಏಕವ್ಯಕ್ತಿ ಕಲಾ ಪ್ರದರ್ಶನದಿಂದ ಗಮನಸೆಳೆದು, ಸದ್ಯ ಎರಡು ಪಾತ್ರಗಳಿರುವ ತಿಳಿ ಹಾಸ್ಯದ ನಾಟಕಗಳನ್ನು ರಂಗ ಪ್ರಯೋಗ ಮಾಡಿ ತಮ್ಮ ವೈಶಿಷ್ಟ್ಯತೆಯ ಛಾಪು ಮೂಡಿಸುತ್ತಿದ್ದಾರೆ.
ಲಕ್ಷ್ಮೀ ಚಂದ್ರಶೇಖರ್... ಏಕಪಾತ್ರಾಭಿನಯದಿಂದ ಕನ್ನಡ ರಂಗಭೂಮಿಯಲ್ಲಿ ಮನೆ ಮಾತಾದವರು. ಅವರು ಮೂಲತಃ ಪ್ರಾಧ್ಯಾಪಕಿ. ಆದರೆ ಅವರನ್ನು ಹೆಚ್ಚು ಸೆಳೆದದ್ದು ಕನ್ನಡ ರಂಗಭೂಮಿ. ಕನ್ನಡದ ಜೊತೆಗೆ ಆಂಗ್ಲ ನಾಟಕಗಳಲ್ಲೂ ಅಭಿನಯಿಸುತ್ತಿರುವುದು ಅವರ ವಿಶೇಷತೆಯೆನ್ನಬಹುದು.
ರಂಗಾಸಕ್ತಿ ಬೆಳೆದದ್ದು
ಲಕ್ಷ್ಮೀಯವರು ಕಲಾಪೋಷಕ ಕುಟುಂಬದಲ್ಲಿ ಬೆಳೆದವರು. ಅವರ ತಂದೆಗೆ ಸಂಗೀತ ನಾಟಕಗಳೆಂದರೆ ಪಂಚಪ್ರಾಣ. ಹೀಗಾಗಿ ಲಕ್ಷ್ಮೀಯವರು ರಂಗಭೂಮಿಯಲ್ಲಿ ಹಾಗೂ ಅವರ ಸೋದರ ಎಚ್.ಕೆ. ನರಸಿಂಹಮೂರ್ತಿ ವಯೋಲಿನ್‌ನಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು.
ಚನ್ನರಾಯಪಟ್ಟಣದಲ್ಲಿ ವಾಸವಾಗಿದ್ದ ಅವರ ಮನೆ ಪಕ್ಕದಲ್ಲೇ ನಾಟಕ ಕಂಪನಿಗಳು ಟೆಂಟ್ ಹಾಕುತ್ತಿದ್ದವು. ಹೀಗಾಗಿ ಲಕ್ಷ್ಮೀಯವರಿಗೆ 3-4 ತಿಂಗಳ ಕಾಲ ಮನರಂಜನೆಯೋ ಮನರಂಜನೆ! ನಾಟಕದ ರಿಹರ್ಸಲ್ ನೋಡಲು ಆಗಾಗ ಅಲ್ಲಿಗೆ ಹೋಗುತ್ತಿದ್ದರು. ಕೆಲವೊಂದು ಸಲ ಬಿದಿರಿನ ತಟ್ಟಿಯ ಸಂದಿಯಿಂದ ಅಲ್ಲಿನ ಚಟುವಟಿಕೆಗಳನ್ನು ಗಮನವಿಟ್ಟು ನೋಡುತ್ತಿದ್ದರು.
ನಾಟಕ ತಂಡದವರ ಸಂಭಾಷಣೆ ಮನೆಯಲ್ಲೂ ಸುಲಭವಾಗಿ ಕೇಳಿಸುತ್ತಿದ್ದುದರಿಂದ, `ಕಿತ್ತೂರ ಚೆನ್ನಮ್ಮ', `ದಾನಶೂರ ಕರ್ಣ' ಮುಂತಾದ ನಾಟಕಗಳ ಸಂಭಾಷಣೆಯನ್ನು ಅವರು ಅದೇ ರೋಷಾವೇಶದಿಂದ ಹೇಳಿ ಮನೆಯವರನ್ನೆಲ್ಲ ಚಕಿತಗೊಳಿಸುತ್ತಿದ್ದರು.
ಹೈಸ್ಕೂಲ್ ಮುಗಿಸುವ ಹೊತ್ತಿಗೆ ಅವರಿಗೆ ತ್ರಿವೇಣಿಯವರ ಕಾದಂಬರಿಗಳನ್ನು ಓದುವ ಅಭ್ಯಾಸ ಚೆನ್ನಾಗಿಯೇ ಅಂಟಿಕೊಂಡಿತ್ತು. `ಕಂಕಣ' ಮತ್ತು `ಮುಕ್ತಿ' ಈ ಎರಡು ಕಾದಂಬರಿಗಳಂತೂ ಅವರ ಮನಸ್ಸನ್ನು ಅಪಾರವಾಗಿ ಸೆಳೆದಿದ್ದವು. ಅವು ಹಾಸ್ಟೆಲ್‌ನಲ್ಲಿ ಇರುವ ಹುಡುಗಿಯರ ಜೀವನದ ಕುರಿತಾಗಿ ಬರೆದಂತಹ ಕಾದಂಬರಿಗಳು. ತಾವು ಹಾಸ್ಟೆಲ್‌ನಲ್ಲಿ ಇರಬೇಕೆಂದು ಅವರು ಆಗಲೇ ಅಂದುಕೊಳ್ಳುತ್ತಿದ್ದರು. ಚನ್ನರಾಯಪಟ್ಟಣದ ಅವರ ಅಜ್ಜಿ ಅಂದರೆ ತಂದೆಯ ತಾಯಿ ತುಂಬಾ ವಿಚಿತ್ರ ಸ್ವಭಾವದವರು. ಮನೆಯ ಯಾರೊಬ್ಬರಿಗೂ ಸಿನಿಮಾ, ನಾಟಕ ನೋಡಲು ಅವಕಾಶ ಕೊಡುತ್ತಿರಲಿಲ್ಲ. ಈ ಕಾರಣದಿಂದಲೇ ಅವರು ಹೈಸ್ಕೂಲ್ ಮುಗಿಯುತ್ತಿದ್ದಂತೆ ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ (ಹಾಸ್ಟೆಲ್ ವಾಸ) ಆರಂಭಿಸಿದರು.
ಕೈ ಬೀಸಿ ಕರೆದ `ಸಮತೆಂತೋ'
ಕಾಲೇಜ್ ಡೇ ಬರುತ್ತಿದ್ದಂತೆ ಅವರು ಹುಡುಗಿಯರದ್ದೇ ಆದ ತಂಡ ಕಟ್ಟಿಕೊಂಡು ಯಾವುದಾದರೂ ನಾಟಕ ಆಡುತ್ತಿದ್ದರು. ಲಕ್ಷ್ಮೀಯವರು ಎತ್ತರದ ವ್ಯಕ್ತಿತ್ವದವರಾದ್ದರಿಂದ, ಅವರಿಗೆ ಪುರುಷನ ಪಾತ್ರವನ್ನೇ ಮಾಡಬೇಕಾಗಿ ಬರುತ್ತಿತ್ತು. ಪಾತ್ರ ಯಾವುದೇ ಇರಲಿ, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆನ್ನುವುದೇ ಅವರ ಅಭಿಲಾಷೆಯಾಗಿರುತಿತ್ತು.
ಹಾಸ್ಟೆಲ್‌ನಲ್ಲಿ ಇದ್ದದ್ದರಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಲು ಅವರಿಗೆ ಸಮಯ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಮೈಸೂರಿನಲ್ಲಿ ಆಗ ಪ್ರಸಿದ್ಧವಾಗಿದ್ದ `ಸಮತೆಂತೋ' (ಸರಸ್ವತಿಪುರಂ ಮಧ್ಯದ ತೆಂಗಿನ ತೋಟ) ಅವರ ನಾಟಕ ಚಟುವಟಿಕೆಗೆ ವೇದಿಕೆಯಾಗಿ ದೊರಕಿತು. ಆ ಸಂಸ್ಥೆಯಲ್ಲಿ ಆಗ ಬ್ಯಾಂಕ್ ಉದ್ಯೋಗಿಗಳು, ಕಾಲೇಜು ಉಪನ್ಯಾಸಕರು ಹಾಗೂ ಲೇಖಕರೇ ಹೆಚ್ಚಿನ ಪ್ರಮಾಣದಲ್ಲಿದ್ದರು. ಲಕ್ಷ್ಮೀ ಆಗ ಇನ್ನೂ ವಿದ್ಯಾರ್ಥಿನಿ. `ಸಮತೆಂತೋ' ವತಿಯಿಂದ ಪ್ರದರ್ಶಿತವಾದ ಎ.ಎನ್. ಮೂರ್ತಿರಾಯರ `ಆಷಾಢಭೂತಿ' ನಾಟಕದಲ್ಲಿ ಅಭಿನಯಿಸುವ ಅವಕಾಶ ದೊರಕಿತು. ಅದರಲ್ಲಿ ಅವರಿಗೆ ದೊರೆತದ್ದು ಬೋಳು ತಲೆಯ ಅಜ್ಜಿಯ ಪಾತ್ರ. ಚನ್ನರಾಯಪಟ್ಟಣದ ತಮ್ಮ ಅಜ್ಜಿಯನ್ನೇ ಹೋಲುವಂತಹ ಪಾತ್ರ ಅದಾಗಿದ್ದರಿಂದ ಅವರು ಅದರಲ್ಲಿ ಲೀವಾಜಾಲವಾಗಿ ಅಭಿನಯಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡರು. 7 ವರ್ಷದ ತಮ್ಮ ಹಾಸ್ಟೆಲ್ ಜೀವನದಲ್ಲಿ ಅವರು `ಕದಡಿದ ನೀರು,' `ಬಹಾದ್ದೂರ್ ಗಂಡು,' `ಮೃಚ್ಛಕಟಿಕ' ಮುಂತಾದ ನಾಟಕಗಳಲ್ಲಿ ಗಮನಸೆಳೆಯುವ ಅಭಿನಯ ನೀಡಿದರು.