ತಮ್ಮ ಬಾಲ್ಯದಿಂದಲೇ ಕಾಸ್ಮೆಟಿಕ್‌ ಸರ್ಜನ್‌ ಆಗಬೇಕೆಂದು ಕನಸು ಕಾಣುತ್ತಿದ್ದ ಡಾ. ರಶ್ಮಿ ಶೆಟ್ಟಿ ಮೂಲತಃ ಬೆಂಗಳೂರಿನವರು. ಬೆಂಗಳೂರಿನಲ್ಲೇ ತಮ್ಮ ವೈದ್ಯಕೀಯ ವಿದ್ಯಾಭ್ಯಾಸ ಪೂರೈಸಿದ ಆಕೆ, 1 ವರ್ಷದ ಪ್ಲಾಸ್ಟಿಕ್‌ ಸರ್ಜರಿಯ ತರಬೇತಿ ಪಡೆದುಕೊಂಡರು. ಆ ಸಮಯದಲ್ಲೇ ಅವರ ವಿವಾಹ ಮುಂಬೈನ ಒಬ್ಬ ಪ್ರಸಿದ್ಧ ವಾಣಿಜ್ಯೋದ್ಯಮಿಯೊಂದಿಗೆ ನಡೆಯಿತು.

ಮದುವೆಯ ನಂತರ ಅವರು ಮುಂಬೈಗೆ ಬಂದಾಗ, ಆಕೆ ಮೂಲತಃ ಮುಂಬೈನವರಲ್ಲ ಎಂಬ ಕಾರಣಕ್ಕೆ ಅಲ್ಲಿನ ಹೆಸರಾಂತ ನರ್ಸಿಂಗ್‌ ಹೋಮ್ ಗಳಲ್ಲಿ ಕೆಲಸ ದೊರಕಲಿಲ್ಲ. ಅವರು ಕೊನೆಗೂ ಕಷ್ಟಪಟ್ಟು ಲೀಲಾವತಿ ಆಸ್ಪತ್ರೆಯ ಐ.ಸಿ.ಯು. ಘಟಕದಲ್ಲಿ 1 ವರ್ಷದವರೆಗೂ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಆಗ ಅವರ ಗೆಳತಿಯೊಬ್ಬರಿಂದ ಅವರಿಗೆ ಮಹಾತ್ಮ ಗಾಂಧಿ ಮಿಶನ್‌ ಆಸ್ಪತ್ರೆಯಲ್ಲಿ ಒಬ್ಬ ಡರ್ಮಟಾಲಜಿಸ್ಟ್ ಆಕಸ್ಮಿಕವಾಗಿ ಬಿಟ್ಟು ಹೋಗಿರುವ ವಿಷಯ ತಿಳಿದು, ಅಲ್ಲಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿತು. ಡಾ. ರಶ್ಮಿ ಶೆಟ್ಟಿ ಉನ್ನತ ನೌಕರಿಗಾಗಿ ಎಷ್ಟೋ ಖಾಸಗಿ ಆಸ್ಪತ್ರೆಗಳಲ್ಲಿ ಹುಡುಕಾಟ ನಡೆಸಿದರು. ಆದರೆ ಪ್ರತಿ ಸಲ ಆಕೆಗೆ ನಿರಾಸೆಯೇ ಆಗುತ್ತಿತ್ತು. ಅವರಿಗಾದ ದೊಡ್ಡ ದುಃಖ ಎಂದರೆ, ಅವರ ಪತಿ ಮುಂಬೈನ ಮೂಲನಿವಾಸಿ ಆಗಿದ್ದರೂ ಅವರಿಗೆ ಕಷ್ಟ ತಪ್ಪಲಿಲ್ಲ ಎಂಬುದು. 45 ವರ್ಷಗಳ ಸತತ ಪರಿಶ್ರಮದ ನಂತರ, ಆಕೆ ಮುಂಬೈನ ಸಾಂತಾಕ್ರೂಜ್‌ ಹಾಗೂ ಬೀಚ್ ಕ್ಯಾಂಡಿಗಳಲ್ಲಿ `ರಾ ಸ್ಕಿನ್‌ ಏಸ್ಥೆಟಿಕ್ಸ್’ ಹೆಸರಿನಲ್ಲಿ ತಮ್ಮದೇ ಸ್ವಂತ ಪ್ರಾಕ್ಟೀಸ್‌ ಸೆಂಟರ್‌ ತೆರೆದರು. ಅದು ದಿನೇದಿನೇ ಅಭಿವೃದ್ಧಿ ಹೊಂದಿ, ಹೈದರಾಬಾದ್‌ನಲ್ಲೂ ಶಾಖೆ ತೆರೆಯುವಂತೆ ಆಗಿದೆ, ಬೆಂಗಳೂರಿನಲ್ಲಿ ಇಷ್ಟರಲ್ಲೇ ಆಗಲಿದೆ.

ಡಾ. ರಶ್ಮಿ ಶೆಟ್ಟಿ ನಾನ್‌ ಸರ್ಜಿಕಲ್ ಸೌಂದರ್ಯ ಚಿಕಿತ್ಸೆಗೆ ಪ್ರಸಿದ್ಧರೆನಿಸಿದ್ದಾರೆ. ಅವರು ತಮ್ಮ ಜ್ಞಾನ ಹಾಗೂ ಸಾಮರ್ಥ್ಯದ ಆಧಾರದಿಂದ, ತಮ್ಮನ್ನು ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಆ್ಯಂಟಿ ಏಜಿಂಗ್‌ನ ಮಾಸ್ಟರ್‌ ಕೋರ್ಸ್ ನಲ್ಲಿ ಅವರು ಮೇರುಸಾಧನೆ ಮಾಡಿದ್ದಾರೆ. ಫ್ರಾನ್ಸ್ ನ ಮಾಂಟೆರ್ಕಾಲೆಯೋನಲ್ಲಿ ಆಯೋಜಿಸಲಾಗಿದ್ದ 10ನೇ ಆ್ಯಂಟಿ ಏಜಿಂಗ್ ವರ್ಲ್ಡ್ ಮೆಡಿಕಲ್ ಕಾಂಗ್ರೆಸ್‌ಗೆ ಆಹ್ವಾನಿಸಲಾಗಿದ್ದ ಏಕೈಕ ಭಾರತೀಯ ಮಹಿಳಾ ವೈದ್ಯೆ ಎಂದರೆ ಇವರು ಎಂಥ ಅತಿರಥರು ಎಂಬುದು ಗೊತ್ತಾಗುತ್ತದೆ.

ಡಾ. ರಶ್ಮಿ ಶೆಟ್ಟಿ ವಿದೇಶಗಳಲ್ಲೂ ಆ್ಯಂಟಿ ಏಜಿಂಗ್‌ಗೆ ನಾನ್‌ ಸರ್ಜಿಕಲ್ ವಿಧಾನದಲ್ಲೇ ಚಿಕಿತ್ಸೆ ನೀಡುವ ತರಬೇತಿಯನ್ನು ಪ್ಲಾಸ್ಟಿಕ್ ಸರ್ಜನ್ಸ್ ಮತ್ತು ಡರ್ಮಟಾಲಜಿಸ್ಟ್ ರಿಗೆ ನೀಡಿದ್ದಾರೆ. ಅವರೀಗ ಹಿಂದೂಸ್ಥಾನ್‌ ಯೂನಿ ಲಿವರ್‌ ಲಿ.ನ `ಪಾಂಡ್ಸ್ ಇಂಡಿಯಾ’ ವಿಭಾಗದ ಎಕ್ಸ್ ಪರ್ಟ್‌ ಆಗಿದ್ದಾರೆ.

40ರ ಹರೆಯದ ಡಾ. ರಶ್ಮಿ ಶೆಟ್ಟಿ ಈ ಕ್ಷೇತ್ರದಲ್ಲಿ ಸುಮಾರು 14 ವರ್ಷಗಳಿಂದ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಅವರು ಕೇವಲ ಒಬ್ಬ ಸರ್ಜನ್‌ ಮಾತ್ರವಲ್ಲದೆ, ಒಬ್ಬ ಭರತನಾಟ್ಯ ಕಲಾವಿದೆಯೂ ಹೌದು. ತಮ್ಮ ಬಾಲ್ಯದಿಂದಲೇ ಈಕೆ ಭರತನಾಟ್ಯದ ಕಲಿಕೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದ್ದು. ಬೇಕಾದಷ್ಟು ರಂಗ ಪ್ರದರ್ಶನಗಳನ್ನೂ ನೀಡಿದ್ದಾರೆ. ಅವರೊಂದಿಗಿನ ಮಾತುಕತೆ ಬಹು ರೋಚಕ.

ಅದರಲ್ಲಿನ ಪ್ರಮುಖ ಅಂಶಗಳನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ :

ಇಂದಿನ ಮಹಿಳೆಯರು ತಮ್ಮ ಸೌಂದರ್ಯದ ಕುರಿತು ಎಷ್ಟು ಜಾಗರೂಕರಾಗಿದ್ದಾರೆ?

ಇಂದಿನ ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿದ್ದಾರೆ. ಇಂಟರ್‌ನೆಟ್‌, ದೈನಿಕಗಳು, ಟಿ.ವಿ., ಮಾಸಪತ್ರಿಕೆಗಳು ಇತ್ಯಾದಿಗಳಿಂದ ಅನೇಕ ಮಾಹಿತಿ ಸಂಗ್ರಹಿಸುತ್ತಾರೆ. ಗೃಹಿಣಿ ಅಥವಾ ಉದ್ಯೋಗಸ್ಥ  ವನಿತೆ ಆಗಿರಲಿ, ಪ್ರತಿ ಮಹಿಳೆಯೂ ತನ್ನನ್ನು ತಾನು ಸುಂದರವಾಗಿ ತೋರ್ಪಡಿಸಿಕೊಳ್ಳಲು ಯಾರ ಬಳಿ ಎಲ್ಲಿ ಹೋಗಿ ಬೇಕಾದ ಕ್ರಮ ಕೈಗೊಳ್ಳಬೇಕೆಂಬುದನ್ನು ಅರಿತಿರುತ್ತಾಳೆ. ಹಿಂದೆಲ್ಲಾ ಪ್ರೊಫೆಷನ್ಸ್‌, ಸಿನಿಮಾ ನಟಿಯರಿಗೆ ಮಾತ್ರ ಈ ಮಾಹಿತಿ ಇರುತ್ತಿತ್ತು.

ನಿಮ್ಮ ದೃಷ್ಟಿಯಲ್ಲಿ ಸೌಂದರ್ಯ ಎಂದರೇನು?

ಸೌಂದರ್ಯ ಎಂಬುದು ನಿಜಕ್ಕೂ ಸೀಮಾತೀತ, ಸಮಯಾತೀತ. 60-70 ವರ್ಷದ ವಯಸ್ಸಿನಲ್ಲೂ ಮಹಿಳೆ ಅದ್ಭುತ ಸೌಂದರ್ಯವತಿ ಎನಿಸಬಲ್ಲಳು. ನಮ್ಮ ದಿವಂಗತ ಎಂ.ಎಸ್‌. ಸುಬ್ಬುಲಕ್ಷ್ಮಿಯವರನ್ನು ನೆನಪಿಸಿಕೊಳ್ಳಿ, ಅಂಥ ಕಳೆಗಟ್ಟಿದ ಸೌಂದರ್ಯಕ್ಕೆ ವಯಸ್ಸು ಅಡ್ಡಿಯೇ? ನೀವು ಯಾರನ್ನಾದರೂ ಕಂಡು ಸಹಜವಾಗಿ ಮಂದಹಾಸ ಬೀರತೊಡಗಿದರೆ, ಅವರು ಸುಂದರವಾಗಿ ಕಂಗೊಳಿಸುತ್ತಿದ್ದಾರೆಂದು ಅರ್ಥೈಸಿಕೊಳ್ಳಬಹುದು.

ಕೆರಿಯರ್‌ ಹಾಗೂ ಕೌಟುಂಬಿಕ ಜೀವನ ಎರಡನ್ನೂ ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಏನಾದರೂ ಸಲಹೆಗಳು?

ನೀವು ಪ್ರತಿದಿನ ಬೆಳಗ್ಗೆ ಎದ್ದು ಕೆಲಸ ಆರಂಭಿಸುವ ಮುನ್ನ, ಮುಖ ತೊಳೆದು ಕನ್ನಡಿ ನೋಡಿಕೊಳ್ಳುವಿರಿ. ಆದರಿಂದ ನಿಮಗೆಷ್ಟೋ ಖುಷಿ ಅನಿಸುತ್ತದೆ, ಇದು ಖಂಡಿತವಾಗಿಯೂ ಅಗತ್ಯ ಕೂಡ. ಇದರಿಂದ ನಿಮ್ಮ  ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ನಿಮ್ಮ ಕೆರಿಯರ್ ಹಾಗೂ ಕೌಟುಂಬಿಕ ಜೀವನದಲ್ಲಿ ಹೊಂದಾಣಿಕೆ ಮೂಡಿಸಲು ಹೆಚ್ಚು ಸಹಾಯಕವಾಗುತ್ತದೆ. ಸೌಂದರ್ಯ ಸಂರಕ್ಷಣೆ ಮಾಡಿಕೊಂಡು ಅದನ್ನು ಎಚ್ಚರಿಕೆಯಿಂದ ಉಳಿಸಿಕೊಳ್ಳುವುದು ಅಂಥ ದೊಡ್ಡ ಕಷ್ಟವೇನಲ್ಲ. ಈಗ ಮಾರುಕಟ್ಟೆಯಲ್ಲಿ ಸನ್‌ಸ್ಕ್ರೀನ್‌ ಲೋಶನ್‌, ಫೇಸ್ ವಾಶ್‌, ಮಾಯಿಶ್ಚರೈಸರ್‌ ಇತ್ಯಾದಿಗಳು ಸುಲಭವಾಗಿ ಸಿಗುತ್ತವೆ. ಇದನ್ನು ನಿಯಮಿತವಾಗಿ ಬಳಸಿಕೊಳ್ಳಬೇಕಷ್ಟೆ.

ನಿಮ್ಮನ್ನು ನೀವು ವೈಯಕ್ತಿಕವಾಗಿ ಹೇಗೆ ನೋಡಿಕೊಳ್ತೀರಿ?

ನಾನೀಗ 40ರ ಗಡಿ ಮುಟ್ಟಿದ್ದೇನೆ. ನನ್ನ ಮಗಳು ಉಪಾಸನಾಳಿಗೇ 14 ಆಯ್ತು. ಹೀಗಾಗಿ ವಯೋಸಹಜವಾಗಿ ನಾನು ಮೇಕಪ್ ಮಾಡಿಕೊಳ್ತೀನಿ. ಅತಿ ಗಾಢ ಅಲ್ಲ, ಅಥವಾ ತುಂಬಾ ಲೈಟ್‌ ಕೂಡ ಅಲ್ಲ. ರಾತ್ರಿ ಮಲಗುವಾಗ ನಿಯಮಿತವಾಗಿ ಕೋಲ್ಡ್ ಕ್ರೀಂ ಹಚ್ಚಿಕೊಳ್ತೀನಿ, ಹಗಲಲ್ಲಿ ತಲೆಗೆ ಕೊಬ್ಬರಿ ಎಣ್ಣೆ ಹಚ್ಚಲು ಮರೆಯುವುದಿಲ್ಲ. ನಾನು ಫೇಸ್‌ ವಾಶ್‌ ಇಲ್ಲದೆ ಮುಖ ತೊಳೆಯುವುದೇ ಇಲ್ಲ. ಒಮ್ಮೊಮ್ಮೆ ಫೇಸ್‌ ಮಾಸ್ಕ್ ಸಹ ಬಳಸುತ್ತೀನಿ. ರೆಗ್ಯುಲರ್‌ ಆಗಿ ಫೇಶಿಯಲ್ ಮಾಡಿಸುತ್ತೀನಿ.

ಸೌಂದರ್ಯ ಹೆಚ್ಚಲು ಸದಾ ಸಂತೋಷವಾಗಿ ಇರಬೇಕು ಎನ್ನುತ್ತಾರೆ, ಇದು ನಿಜವೇ?

ಖಂಡಿತಾ ನಿಜ, ಅತಿ ಅಗತ್ಯ ಕೂಡ. ನೀವು ಸಂತೋಷವಾಗಿ ಇಲ್ಲದಿದ್ದರೆ ರಾತ್ರಿ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಿಲ್ಲ. ಕಂಗಳ ಕೆಳಗೆ ಕಪ್ಪು ವೃತ್ತಗಳು ಮೂಡುತ್ತವೆ. ಸಹಜವಾಗಿ ಟೆನ್ಶನ್‌ ಹೆಚ್ಚುತ್ತದೆ, ಕಿರಿಕಿರಿ ಅನಿಸುತ್ತದೆ. ಇವೆಲ್ಲ ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರದಿರುತ್ತದೆಯೇ? ಆದ್ದರಿಂದ ಸದಾ ಶಾಂತಚಿತ್ತರಾಗಿ, ಸಮಾಧಾನದಿಂದ ಇರಿ.

ಬಿಡುವಿನ ಸಮಯದಲ್ಲಿ ನೀವು ಏನು ಮಾಡ್ತೀರಿ?

ಬಿಡುವಿನ ಸಮಯ ನನಗೆ ನಿಜಕ್ಕೂ ಬಲು ಅಪರೂಪ. ಆ ಸಮಯವನ್ನು ಖಂಡಿತಾ ನನ್ನ ಮಗಳ ಅಭಿವೃದ್ಧಿಗಾಗಿ ಮೀಸಲಿಡುತ್ತೀನಿ.

ಕುಟುಂಬ ಹಾಗೂ ಸಮಾಜ ಸುಂದರವಾಗಿ ಇರಬೇಕೆಂದರೆ ಮಹಿಳೆ ಏನೇನು ಮಾಡಬೇಕಾಗುತ್ತದೆ?

ಪ್ರತಿಯೊಬ್ಬರೂ ತಂತಮ್ಮ ಕೆಲಸಗಳನ್ನು ಪ್ರಾಮಾಣಿಕ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿದರೆ, ಇಡೀ ಕುಟುಂಬ ಹಾಗೂ ಸಮಾಜ ಸುಂದರವಾಗಿ ಇರುತ್ತದೆ. ಇದರ ಜೊತೆಯಲ್ಲೇ ಮಹಿಳೆಯರು ತಮ್ಮ ಸೌಂದರ್ಯದ ಕುರಿತಾಗಿ ಎಂದೂ ನಿರ್ಲಕ್ಷ್ಯ ವಹಿಸಬಾರದು, ಏಕೆಂದರೆ ಸೌಂದರ್ಯದಿಂದಲೇ ಆತ್ಮವಿಶ್ವಾಸ ಹೆಚ್ಚುವುದು! ಇದಕ್ಕಾಗಿ ಅಗತ್ಯವಾಗಿ ಈ ಕೆಳಗಿನ ಸಲಹೆಗಳನ್ನು ಗಮನಿಸಿ :

ಬಿಸಿಲಿನಲ್ಲಿ ಹೋಗುವುದಕ್ಕೆ ಮೊದಲು ಮರೆಯದೆ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳಿ.

ರಾತ್ರಿ ಮಲಗುವ ಮುನ್ನ ಅಗತ್ಯವಾಗಿ ಮಾಯಿಶ್ಚರೈಸರ್‌ ಹಚ್ಚಿಕೊಳ್ಳಿ.

ಪ್ರತಿ 2-3 ದಿನಗಳಿಗೊಮ್ಮೆ, ನಿಮ್ಮ ಚರ್ಮದ (ಆಯ್ಲಿ, ಡ್ರೈ, ನಾರ್ಮಲ್) ಪ್ರಕೃತಿಗೆ ಅನುಗುಣವಾಗಿ ಸ್ಕ್ರಬರ್‌ ಮತ್ತು ಫೇಸ್‌ ಮಾಸ್ಕ್ ಅಗತ್ಯವಾಗಿ ಬಳಸಿರಿ.

ಸಮತೋಲನವಿರುವ ಆಹಾರವನ್ನೇ ಸೇವಿಸಿ, ಹೆಚ್ಚು ಹೆಚ್ಚು ನೀರು ಕುಡಿಯಿರಿ, ಕಣ್ತುಂಬ ನಿದ್ದೆ ಮಾಡಿ, ಯೋಚನೆ ಬಿಟ್ಟುಬಿಡಿ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ