ನಟ ದರ್ಶನ್ ಅಭಿನಯದ “ಸುಂಟರಗಾಳಿ” ಸಿನಿಮಾದ ಸರಾಯಿ ಶಾರದೆ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟಿ ಲಲಿತಮ್ಮ (65) ಭಾನುವಾರ (ಅಕ್ಟೋಬರ್ 4) ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಲಲಿತಮ್ಮ, “ಅಮ್ಮನ ಮಡಿಲು ಟ್ರಸ್ಟ್” ಆಶ್ರಮದ ಆರೈಕೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ರಂಗಭೂಮಿ ಸೇರಿದಂತೆ ಹಲವು ಸಿನಿಮಾ, ಧಾರಾವಾಹಿ ಹಾಗೂ ನಾಟಕಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದ ಹಿರಿಯ ಕಲಾವಿದೆ ಲಲಿತಮ್ಮ, ಕಳೆದ ಎರಡೂವರೆ ತಿಂಗಳಿನಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು.
ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು. ಕಳೆದ ಹತ್ತು ದಿನಗಳಿಂದ ವೃದ್ಧಾಶ್ರಮದಲ್ಲೇ ಅವರಿಗೆ ಚಿಕಿತ್ಸೆ ಹಾಗೂ ಆರೈಕೆ ನೀಡಲಾಗುತ್ತಿತ್ತು.
ಲಲಿತಮ್ಮ ಅವರ ನಿಧನವನ್ನು ‘ಅಮ್ಮನ ಮಡಿಲು ಟ್ರಸ್ಟ್’ ಖಚಿತಪಡಿಸಿದ್ದು, ಟ್ರಸ್ಟ್‌ನ ಶಶಿಕಲಾ ಅವರು ವಿಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ, “ಲಲಿತಮ್ಮ ಅವರು 180ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದರು. “ರಂಗೋಲಿ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಇಂದು ಅವರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದ್ದಾರೆ.
ನಟ ದರ್ಶನ್ ಅಭಿನಯದ “ಸುಂಟರಗಾಳಿ” ಸಿನಿಮಾದಲ್ಲಿ ಲಲಿತಮ್ಮ ಅವರು ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ “ಜಂಗ್ಲಿ”, “ಲೈಫು ಇಷ್ಟೇನೆ” ಸೇರಿದಂತೆ ಹಲವು ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು.





