ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್(94) ನಿಧನ ಹೊಂದಿದ್ದಾರೆ. ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ 10.30ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.
ಅವರು ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಸಿಂಗೀತಂ ಶ್ರೀನಿವಾಸ ರಾವ್ ಅವರು 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ನಂದಿ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದರು.
1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಅವರು, ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದರು.
ಆನಂದ್ ಸಿನಿಮಾ ಮೂಲಕ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ಮೂಖಿ, ಪುಷ್ಕಕ ವಿಮಾನಮ್, ಶಿವಣ್ಣ ಅಭಿನಯದ ಆನಂದ್, ಆದಿತ್ಯ 369, ಬೈರವ ದ್ವೀಪಮ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಿಂಗೀತಂ ಶ್ರೀನಿವಾಸ ರಾವ್ ಅವರು ಡಾ.ರಾಜ್ಕುಮಾರ್ ನಟಿಸಿರುವ ದೇವತಾ ಮನುಷ್ಯ, ಚಲಿಸುವ ಮೋಡಗಳು, ಹಾಲು ಜೇನು, ಭಾಗ್ಯದ ಲಕ್ಷ್ಮೀ ಬಾರಮ್ಮ, 2 ನಕ್ಷತ್ರಗಳು, ಶ್ರಾವಣ ಬಂತು, ಶ್ರುತಿ ಸೇರಿದಾಗ ಸೇರಿದಂತೆ ಹಲವಾರು ಕನ್ನಡ ಚಿತ್ರಗಳನ್ನು ನಿರ್ದೇಶಿಸಿದ್ದರು.
ರಾಘವೇಂದ್ರ ರಾಜ್ಕುಮಾರ್ ಅವರ ಚಿರಂಜೀವಿ ಸುಧಾಕರ್ ಸೇರಿದಂತೆ ಜಗ್ಗೇಶ್ ಅಭಿನಯದ ‘ಮೇಕಪ್’ ಸಿನಿಮಾಕೂಡ ನಿರ್ದೇಶಿಸಿದ್ದರು. 1988ರಲ್ಲಿ ಸಂಭಾಷಣೆ ರಹಿತ ಪುಷ್ಪಕ ವಿಮಾನ ಸಿನಿಮಾ ನಿರ್ದೇಶಿಸಿಯೂ ಸಿನಿ ಪ್ರೇಕ್ಷಕರ ಮನ ಗೆದ್ದವರು.
ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ನಿಧನದಿಂದ, ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.





