ಮೆಟ್ರೊ ಕಲಾ ಕೇಂದ್ರ ಮಹಾತ್ಮ ಗಾಂಧಿ ರಸ್ತೆ..... ಬೆಂಗಳೂರಿನ ಪ್ರತಿಷ್ಠಿತ ರಸ್ತೆ. ವಿದೇಶಿಗರೇ ಹೆಚ್ಚಾಗಿ ಸುತ್ತಾಡುವ ರಸ್ತೆ. ಹೀಗಾಗಿ ಈ ರಸ್ತೆಗೆ ಅಂತಾರಾಷ್ಟ್ರೀಯ ಮಹತ್ವ ಬಂದುಬಿಟ್ಟಿದೆ. ಬೆಂಗಳೂರಿಗೆ ಬಂದ ಯಾರೇ ಆಗಲಿ ಎಂ.ಜಿ. ರಸ್ತೆಗೆ ಭೇಟಿ ಕೊಡದೇ ಇರಲಾರರು.
ಅದು ದುಬಾರಿ ರಸ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಅಲ್ಲಿ ಏನೂ ಕೊಳ್ಳದಿದ್ದರೂ ಪರ್ವಾಗಿಲ್ಲ, ಕಣ್ಣಿಂದ ನೋಡಿಯಾದರೂ ತೃಪ್ತಿ ಪಟ್ಟುಕೊಳ್ಳೋಣ ಎನ್ನುವುದು ಹಲವರ ಅಭಿಪ್ರಾಯ.
ಮೆಟ್ರೊ ರೈಲು ಎಂ.ಜಿ. ರಸ್ತೆಗೆ ಕಾಲಿಟ್ಟ ಬಳಿಕ ಅದರ ಅಂದಚೆಂದ, ಮಾದಕತೆ ಕಣ್ಮರೆಯಾಗಿ ಹೋಯಿತು ಎಂದು ಬಹಳ ಜನ ವಿಷಾದದಿಂದಲೇ ಹೇಳುತ್ತಿದ್ದರು. ಅವರು ಹೀಗೆ ಹೇಳಲು ಒಂದು ಕಾರಣ ಇತ್ತು. ಅನಿಲ್ ಕುಂಬ್ಳೆ ವೃತ್ತದಿಂದ ಮಾಣಿಕ್ ಷಾ ಪರೇಡ್ ಮೈದಾನದ ಅಂಚಿನ ತನಕ ಆರಿಸಿಕೊಂಡಿದ್ದ ಕಾಲುದಾರಿ ಹಸಿರಿನಿಂದ ಕಣ್ಮನ ಸೆಳೆಯುತ್ತಿತ್ತು. ಮನಸ್ಸಿಗೆ ಏನೋ ಹಿತಕರ ಅನುಭವ ನೀಡುತ್ತಿತ್ತು. ಮೆಟ್ರೊ ರೈಲು ಆ ಸೊಗಸನ್ನು ಕಿತ್ತುಕೊಂಡುಬಿಟ್ಟಿತ್ತು.
ಮರುಕಳಿಸಿದ ಅಂದ
ಮೆಟ್ರೋ ರೈಲು ನಿಲ್ದಾಣ ಎರಡು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ರಸ್ತೆಯ ಎತ್ತರಿಸಿದ ಮಾರ್ಗದಲ್ಲಿ ಸ್ಥಾಪನೆಗೊಂಡಿತು. ಹೀಗಾಗಿ ಅನಿಲ್ ಕುಂಬ್ಳೆ ವೃತ್ತದ ತನಕ ಕೆಳಭಾಗದಲ್ಲಿ 550 ಮೀಟರ್‌ನಷ್ಟು ಜಾಗ ಖಾಲಿ ಉಳಿದಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲು, ಮಹಾತ್ಮ ಗಾಂಧಿ ರಸ್ತೆಯ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಲು ಆಗಿನ ಬಿಎಂಆರ್‌ಸಿಎಲ್ ನಿರ್ದೇಶಕ ಶಿವಶೈಲಂ ನಿರ್ಧರಿಸಿದರು. ಅದರ ಪ್ರತಿಫಲ ಎಂಬಂತೆ 2013ರ ಮೇ 6 ರಂದು `ರಂಗೋಲಿ ಮೆಟ್ರೊ ಕಲಾ ಕೇಂದ್ರ' ಜನ್ಮ ತಳೆಯಿತು.
ಬೆಂಗಳೂರಿಗೆ ಮೆಟ್ರೊ ರೈಲು ಬಂದಿದ್ದೇ ಎಂ.ಜಿ. ರಸ್ತೆ ವತಿಯಿಂದ ಬೈಯಪ್ಪನಹಳ್ಳಿ ತನಕ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳು ಕಳೆದೆರಡು ವರ್ಷಗಳಿಂದ ಶನಿವಾರ-ಭಾನುವಾರ ಹಾಗೂ ರಜೆ ದಿನಗಳಂದು ಪ್ರವಾಸಿ ರೈಲಿನಂತಾಗಿಬಿಟ್ಟಿವೆ.
ಮೆಟ್ರೊ ರೈಲಿನಲ್ಲಿ ಸಂಚರಿಸಲೆಂದು ಬರುವವರನ್ನು `ರಂಗೋಲಿ' ಕಲಾ ಕೇಂದ್ರ ಆಕರ್ಷಿಸುತ್ತಿದೆ. ಅವರನ್ನು ಒಂದೆರಡು ಗಂಟೆ ಇಲ್ಲಿಯೇ ತಡೆಹಿಡಿದು ನಿಲ್ಲಿಸುತ್ತದೆ. ಮಕ್ಕಳ ಜೊತೆಗೆ ಬಂದರಂತೂ ಇನ್ನೂ ಹೆಚ್ಚು ಹೊತ್ತು ಕಳೆಯಬೇಕಾಗುತ್ತದೆ. ಅಷ್ಟೊಂದು ವಿಶೇಷತೆ ಇಲ್ಲಿನ ರಂಗೋಲಿ ಕಲಾ ಕೇಂದ್ರದ ಅಂತರಂಗದಲ್ಲಿ ಅಡಗಿದೆ.
ನವ್ಯ ಕಲಾ ಲೋಕ
ಅನಿಲ್ ಕುಂಬ್ಳೆ ವೃತ್ತದಿಂದ ಮಾಣಿಕ್ ಷಾ ಪರೇಡ್ ಮೈದಾನದ ತನಕ 550 ಮೀಟರ್ ಉದ್ದನೆಯ ಜಾಗದಲ್ಲಿ ಆವರಿಸಿಕೊಂಡಿರುವ `ರಂಗೋಲಿ' ಕಲಾ ಕೇಂದ್ರದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರನ್ನೂ ರಂಜಿಸುವ ಬಹಳಷ್ಟು ವಿಶೇಷತೆಗಳಿವೆ. ಅನಿಲ್ ಕುಂಬ್ಳೆ ವೃತ್ತದಿಂದ ನೀವು `ರಂಗೋಲಿ' ಕಲಾ ಕೇಂದ್ರದಲ್ಲಿ ಕಾಲಿಡುತ್ತಿದ್ದಂತೆಯೇ `ನಗರ ಪೇಟೆ' ನಿಮ್ಮನ್ನು ಸ್ವಾಗತಿಸುತ್ತದೆ. ವಿವಿಧ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ 14 ಮಳಿಗೆಗಳು ಇಲ್ಲಿವೆ. ಅದನ್ನು ದಾಟಿ ಮುಂದೆ ಹೋದರೆ ರಂಗಸ್ಥಳವಿದೆ. ಅಲ್ಲಿ 120 ಜನರು ಒಂದೇ ಕಡೆ ಕುಳಿತು ವಿವಿಧ ರಂಗ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ. ಶನಿವಾರ-ಭಾನುವಾರಗಳಂದು ಇಲ್ಲಿನ ಚಟುವಟಿಕೆಗಳು ಹೆಚ್ಚು ರಂಗು ಪಡೆದುಕೊಳ್ಳುತ್ತವೆ.