ಟ್ಯಾಕ್ಸಿ ಮಾಡಿಕೊಂಡು ನಾವೊಂದು ಹಳ್ಳಿಯ ಕಡೆ ಹೊರಟೆವು. ನಮ್ಮ ಡ್ರೈವರ್‌ ಕಾಲಿನ್‌ ಶಾಂಭಾಂಗ್‌ ನೋಡಲು ಕೆಳ ಮಧ್ಯಮ  ವರ್ಗದಿಂದ ಬಂದವರಂತೆ ಕಾಣುತ್ತಿದ್ದ ಯುವಕ. ಇಸ್ತ್ರಿ ಇಲ್ಲದ ಸಾಧಾರಣ ಮಾಸಿದ ಅಂಗಿ. ಷರಾಯಿ ಧರಿಸಿದ್ದರು. ನಡತೆಯಲ್ಲಿ  ಅಸಾಧಾರಣ ಸಭ್ಯತೆ, ಸ್ಪಷ್ಟ, ಸುಲಲಿತವಾದ ಇಂಗ್ಲಿಷ್‌ ಮಾತನಾಡುತ್ತ ನಮ್ಮ ಗಮನ ಸೆಳೆದರು. ಇಡೀ ದಿನ ನಾವು ಅವರ ಜೊತೆ ಪಯಣಿಸಲಿದ್ದೆ. ಕಣಿವೆ, ಬೆಟ್ಟದ ಸಾಲುಗಳ ನಡುವೆ ನಾವು ಸಾಗುತ್ತಿದ್ದೆವು. ಎಲ್ಲೆಲ್ಲೂ ಹಸಿರು. ಸೂರ್ಯ ಮತ್ತು ಮೋಡಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದವು. ನಮ್ಮ ಭೇಟಿಯ ಗುರಿ ಒಂದು ಹಳ್ಳಿಯಾಗಿತ್ತು. ಹಳ್ಳಿಯಿಂದ ನಗರಕ್ಕೆ ವಲಸೆ ಸಾಮಾನ್ಯವಾದ ದಿನಗಳಲ್ಲಿ ನಗರದಿಂದ ಹಳ್ಳಿ ನೋಡಲು ವಿಶೇಷ ಪ್ರವಾಸವೆಂದರೆ ಯಾರಿಗಾದರೂ ವಿಚಿತ್ರ ಅನಿಸಿದರೆ ಆಶ್ಚರ್ಯವೇನು?

ಕಾಲಿನ್‌ ಅದು ಇದು ಮಾತುಗಳ ನಡುವೆ ಏನೋ ನೆನಪಿಸಿಕೊಂಡಂತೆ, “ಸರ್‌, ನಾವೀಗ ಭೇಟಿ ನೀಡಲಿರುವ ಹಳ್ಳಿಯಲ್ಲಿ ಅಭ್ಯಾಸ ಬಲದಿಂದ ಏನಾದರೂ ಕಸ ಎಸೆದರೆ, ಹಳ್ಳಿಯ ಪುಟ್ಟ ಮಕ್ಕಳು ನಮ್ಮೆದುರೆ, ಬೇರೆಯವರು ಎಸೆದದ್ದು ಎಂಬ ಮುಖಭಾವ ತೋರಿಸದೆ ಕಸವನ್ನು ತಾವೇ ಎತ್ತಿ ಕಸದಬುಟ್ಟಿಗೆ ಹಾಕಿ ತಮ್ಮಷ್ಟಕ್ಕೆ ಹೊರಟು ಹೋಗಿಬಿಡುತ್ತಾರೆ,” ಎಂದರು.

ಅವರು ನೀಡಿದ ಎಚ್ಚರಿಕೆ ರೂಪದ ಪರೋಕ್ಷ ಸಲಹೆಯ ದನಿ ಅದೆಷ್ಟು ಮೃದುವಾಗಿತ್ತೆಂದರೆ ನಮಗೆ ಹೇಳಿದ್ದೇ ಆದರೂ ನಮ್ಮ ಅಹಂಗೆ ಕೊಂಚ ಧಕ್ಕೆಯಾಗಲಿಲ್ಲ. ದೂರದಿಂದ ಬಂದ ಪ್ರವಾಸಿಗರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದನ್ನು ಕಾಲಿನ್‌ ಅವರಿಂದ ನಾವು ತಿಳಿದುಕೊಂಡೆವು. ಹಾಗೆ ನೋಡಿದರೆ ನಾವು ಹೋದ ಎಲ್ಲೆಡೆಯಲ್ಲೂ ಸ್ಥಳೀಯರ ವರ್ತನೆ ಕಾಲಿನ್‌ ಅವರಿಗಿಂತ ಭಿನ್ನವಾಗಿರಲಿಲ್ಲ.

ಒಂದೆಡೆ ಟ್ಯಾಕ್ಸಿ ನಿಲ್ಲಿಸಿ, “ನೀವಿನ್ನು ನಿಮ್ಮಿಷ್ಟ ಬಂದಷ್ಟು ಹೊತ್ತು ಹಳ್ಳಿಯೊಳಗೆ ಸುತ್ತಾಡಿ ಬನ್ನಿ,” ಎಂದು ಕಾಲಿನ್‌ ಸೂಚಿಸಿದರು. ಪ್ರವೇಶದಲ್ಲಿ ಹಳ್ಳಿಯ ಮೇಲ್ವಿಚಾರಕ ಸಮಿತಿಯ ಸದಸ್ಯರಿಗೆ 50 ರೂ.ಗಳ ಪ್ರವೇಶ ಶುಲ್ಕ ತೆತ್ತು ಒಳ ನಡೆದೆವು.

ನಾವಿದ್ದ ಹಳ್ಳಿ ಯಾವುದು? ಎಲ್ಲಿದೆ? ಅದುವೇ ಬಾಂಗ್ಲಾ ದೇಶದ ಗಡಿಗೆ ತೀರಾ ಸನಿಹವಿರುವ ಮೇಘಾಲಯದ ಹಳ್ಳಿ ಮಾಲಿನ್‌ನಾಂಗ್‌. ರಾಜಧಾನಿ ಶಿಲ್ಲಾಂಗ್‌ನಿಂದ 90 ಕಿ.ಮೀ. ದೂರಲ್ಲಿದೆ. ಈ ಹಳ್ಳಿಯ ಹೆಗ್ಗಳಿಕೆ ಏನು? ಇದು ಏಷ್ಯಾ ಖಂಡದ ಅತಿ ಸ್ವಚ್ಛ ಹಳ್ಳಿ. ಮೇಘಾಲಯ ಪ್ರವಾಸೋದ್ಯಮ ಹೀಗೆಂದು ಈ ಹಳ್ಳಿಯ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಇದಕ್ಕೆ ಪುರಾವೆಯಾಗಿ 2003ರಲ್ಲಿ `ಡಿಸ್ಕವರಿ ಇಂಡಿಯಾ’ ಪತ್ರಿಕೆ ನಡೆಸಿದ ಸಮೀಕ್ಷಾ ವರದಿಯ ಬಗ್ಗೆ ಗಮನ ಸೆಳೆಯುತ್ತದೆ. ಒಂದು ಊರಿಗೆ ಸ್ವಚ್ಛತೆಯೇ ದೂರದೂರದಿಂದ ಪ್ರವಾಸಿಗರನ್ನು ಕರೆತರುವಷ್ಟು ಆಕರ್ಷಣೆ ಹೊಂದಿದೆ ಎಂದರೆ!?  ಮಾಲಿನ್‌ನಾಂಗ್‌ನಲ್ಲಿ ಸುತ್ತಾಡಿದ ಮೇಲೆ ಈ ಪ್ರಶ್ನೆಗೆ ಉತ್ತರ ಸಿಕ್ಕಿತು, ಹೌದೆಂದು.

ಮಾಲಿನ್‌ನಾಂಗ್‌ ಸುಮಾರು ತೊಂಬತ್ತು ಸಂಸಾರಗಳ, ಜನಸಂಖ್ಯೆ ಐನೂರರ ಆಜುಬಾಜಿನಲ್ಲಿರುವ ಹಳ್ಳಿ. ಇಲ್ಲಿನ ನಿವಾಸಿಗಳು ಖಾಸಿ ಬುಡಕಟ್ಟು ಮೂಲದವರು. ಇರದು ಮಾತೃ ಪ್ರಧಾನ ಕೌಟುಂಬಿಕ ವ್ಯವಸ್ಥೆ. ಆಸ್ತಿ ಹಿಡಿತ ಪೂರಾ ಹೆಣ್ಣಿನದೇ! ಇಲ್ಲಿನ ಪ್ರತಿ ಮನೆಯಲ್ಲೂ ಸುಸಜ್ಜಿತ ಶೌಚಾಲಯವಿದೆ. 2007ರಿಂದಲೇ ಬಯಲು ಶೌಚಕ್ಕೆ ಪೂರ್ಣ ವಿದಾಯ ಹೇಳಲಾಗಿದೆ. ಸಾಮಾನ್ಯವಾಗಿ ಊರಿನ ಹೊರಲಯದಲ್ಲಿ ಶೌಚದ ವಾಸನೆ ಮೂಗಿಗೆ ಅಡರುವುದನ್ನು ಕಂಡಿರುತ್ತೇವೆ. ಪರೀಕ್ಷಿಸಬೇಕೆಂದು ಮಾಲಿನ್‌ನಾಂಗ್‌ನ ಹೊರವಲಯದಲ್ಲೆಲ್ಲ ಸುತ್ತಾಡಿ ಬಂದೆವು. ಊಹುಂ, ಎಲ್ಲೂ ದುರ್ವಾಸನೆಯ ಸುಳಿವಿಲ್ಲ. `ಸ್ವಚ್ಛ ಭಾರತ’ ಎಂಬ ಘೋಷಣೆ ಕಸ ಪೊರಕೆಯನ್ನು ದಾಟಿ ಮುಂದೆ ಬಾರದಿರುವ ಇಂದಿಗೆ ಎಷ್ಟೋ ಮುಂಚೆಯೇ (2003ರಲ್ಲಿ) ಮಾಲಿನ್‌ನಾಂಗ್‌ ನಿವಾಸಿಗಳು ತಮ್ಮ ಹಳ್ಳಿ ಎಲ್ಲ ಕಾಲಕ್ಕೂ ಸ್ವಚ್ಛವಾಗಿರಬೇಕು ಎಂಬ ಕನಸು ಕಂಡರು. ಆ ಕನಸನ್ನು ನನಸಾಗಿಸಿದರು ಕೂಡಾ.

ಹಳ್ಳಿಯಲ್ಲಿ ಮೂರು ಶಾಲೆಗಳಿವೆ. ಇಲ್ಲಿನ ಸಾಕ್ಷರತೆ ಶೇ.100 ರಷ್ಟು. ಮಕ್ಕಳಿಗೆ ನಾಲ್ಕನೇ ವಯಸ್ಸಿನಿಂದಲೇ ಸ್ವಚ್ಛತೆಯ ಪಾಠ ಶುರುವಾಗುತ್ತದೆ. ಮನೆಯಲ್ಲಿ ಮೊದಲ ಪಾಠ ಸ್ವಚ್ಛತೆಯೇ ಆಗಿದೆ. ಮನೆ, ಮನೆಯ ಮುಂದಿನ ಅಂಗಳ, ಅಂಗಳದಾಚೆಯ ರಸ್ತೆ, ರಸ್ತೆ ಕರೆದೊಯ್ಯುವ ಎಡೆಗಳಲ್ಲೆಲ್ಲ ಕಸ ಬಿಸಾಡದಿರುವ ಬಗ್ಗೆ ಎಚ್ಚರಿಕೆಗೆ ಮೊದಲ ಪ್ರಾಶಸ್ತ್ಯವಿದೆ. ಪ್ಲಾಸ್ಟಿಕ್‌ ಬಳಕೆ ತೀರಾ ತೀರಾ ಕಡಿಮೆ. ಎಲ್ಲೂ ಕೂಡ ಪ್ಲಾಸ್ಟಿಕ್‌ ಕಸ ಬಿದ್ದದ್ದು ಕಾಣಲಿಲ್ಲ. ಸಾರ್ವಜನಿಕ ಕಸದ ಬುಟ್ಟಿಗಳೂ ಪ್ಲಾಸ್ಟಿಕ್‌ನದಲ್ಲ. ಬದಲಾಗಿ ಬಿದಿರಿನಿಂದ ಕಲಾತ್ಮಕವಾಗಿ ತಯಾರಿಸಿದಂತಹವು. ಪ್ರತಿ ಕಾಲು ಹಾದಿ, ಗಲ್ಲಿ, ಬೀದಿ, ರಸ್ತೆಗಳಲ್ಲೆಲ್ಲ ಬಿದಿರಿನ ಕಸದ ಬುಟ್ಟಿಗಳು ರಾರಾಜಿಸುತ್ತವೆ. ಅವುಗಳೊಳಗೆ ಇಣುಕಿ ನೋಡಿದರೆ ಒಂದೋ ಎರಡೋ ಕಸದ ಚೂರುಗಳು. ಅವು ಪ್ರವಾಸಿಗರು ಎಸೆದಂತಹ. ಪ್ರತಿ ದಿನ ಸರಾಸರಿ ಐನೂರು ಮಂದಿ ಪ್ರವಾಸಿಗರು ಮಾಲಿನ್‌ನಾಂಗ್‌ಗೆ ಭೇಟಿ ಕೋಡುತ್ತಾರೆ. ಕಸವನ್ನು ಗೊಬ್ಬರವಾಗಿಸಿ ಬಳಸುವ ವ್ಯವಸ್ಥೆಯೂ ಇಲ್ಲಿದೆ.

ಒಂದು ಊರಿನ ನಿಜವಾದ ಸ್ವಚ್ಛತೆಗೆ ಪುರಾವೆ ಏನು ಗೊತ್ತೆ? ಕಸ, ಕಡ್ಡಿ, ಗಲೀಜುಗಳಿಲ್ಲದ ನಿರ್ಮಿಲ ಚರಂಡಿಗಳು. ಮಾಲಿನ್‌ನಾಂಗ್‌ನ ಚರಂಡಿಗಳಲ್ಲಿ ಇಳಿದು ನಡೆಯಲು ಕಸಿವಿಸಿ ಆಗುವುದೇ ಇಲ್ಲ. ಇಲ್ಲಿನ ಜನ ಹೊರಗೆಲ್ಲೂ ಉಗಿಯುವುದಿಲ್ಲ. ಹೀಗಾಗಿ ಚರಂಡಿಗಳು ಸದಾ ಸ್ವಚ್ಛವಾಗಿರುತ್ತವೆ.

ಮಾಲಿನ್‌ನಾಂಗ್‌ ನಿವಾಸಿಗಳ ಸೌಂದರ್ಯ ಪ್ರಜ್ಞೆ ನಿಜಕ್ಕೂ ಪ್ರಶಂಸನೀಯ. ಪ್ರತಿ ಮನೆಯ ಹಿತ್ತಲು ಮತ್ತು ಅಂಗಳಗಳಲ್ಲಿ ವಿವಿಧ ಬಗೆಯ ಹೂವಿನ ಗಿಡಗಳು ಕಿಕ್ಕಿರಿದಿವೆ. ಬಗೆ ಬಗೆಯ ಹೂವುಗಳರಳಿ ಇಡೀ ಹಳ್ಳಿ ಬಣ್ಣಗಳಲ್ಲಿ ಮಿಂದು ಎದ್ದಂತೆ ಕಾಣಬರುತ್ತದೆ. ಪ್ರತಿ ಹಾದಿ ಬೀದಿಯ ಇಕ್ಕೆಲಗಳಲ್ಲೂ  ಜರೀಗಿಡಗಳ ಹಸಿರು ಮತ್ತು ಹೂಗಳ ವೈಭವವನ್ನು ಕಂಡೇ ತಣಿಯಬೇಕು.

ಅಲ್ಲಿಲ್ಲಿ ಮರಗಳು, ಅವುಗಳ ನೆರಳಲ್ಲಿ ಕೂರಲು ಅಡಿಗೆ ದಬ್ಬೆಯ ಬೆಂಚುಗಳು, ಸುತ್ತ ಅರಳಿ ನಿಂತ ಆರ್ಕಿಡ್‌, ಹೆಲಿಕೋನಿಯ, ಲಿಲ್ಲಿ, ದಾಸವಾಳ, ಕರ್ಣಕುಂಡಲ, ಗುಲಾಬಿ ಇತ್ಯಾದಿ ಹೂಗಳನ್ನು ನೋಡುತ್ತ ಮೈಮರೆಯಬಹುದು. ಯಥೇಚ್ಛ ಹಸಿರು ಮತ್ತು ಮರಗಳಿರುವೆಡೆ ತರತರಹದ ಚಿಟ್ಟೆಗಳ ಹಾರಾಟ ಸಾಮಾನ್ಯ. ಹಕ್ಕಿಗಳ ಗಾಯನ, ಕೂಜನಗಳು ಕೇಳಿ ಬರುತ್ತವೆ. ಹಕ್ಕಿ ವೀಕ್ಷಕರಿಗೆ ಇಲ್ಲಿ ಅಧ್ಯಯನಕ್ಕೆ ಸಾಕಷ್ಟು ಅವಕಾಶವಿದೆ. ಎಂತಹ ಅರಸಿಕರೂ ಮಾಲಿನ್‌ನಾಂಗ್‌ನ ಚೆಲುವಿಗೆ ಮನಸೋಲಲೇ ಬೇಕು. ನೈಸರ್ಗಿಕವಾಗಿ ಬಿದ್ದುಕೊಂಡ ಬಂಡೆ ಕಲ್ಲುಗಳನ್ನು ಕದಲಿಸದೆ ಅವು ಆಚೆ ಈಚೆ ಇರುವಂತೆಯೇ ಕಾಂಕ್ರೀಟ್‌ಕಾಲು ಹಾದಿಗಳನ್ನು ನಿರ್ಮಿಸಲಾಗಿದೆ. ಹಳ್ಳಿಯು ಸದಾ ಮಳೆ ಬೀಳುವ ಎಡೆಯಲ್ಲಿ ಇರುವುದರಿಂದ ನೀರಿಗೆ ಕೊರತೆಯಿಲ್ಲ. ಸುತ್ತ ಆವರಿಸಿರುವ ಕಾಡು ಹಳ್ಳಿಯನ್ನು ತನ್ನ ಮಡಿಲಲ್ಲಿ ಕಾಪಿಟ್ಟುಕೊಂಡಿದೆ.

ಪೂರ್ತಿ ಬಿದಿರಿನಿಂದಲೇ ನಿರ್ಮಿಸಿದ ವೀಕ್ಷಣಾ ಗೋಪುರವನ್ನು ಹತ್ತಿ ದಕ್ಷಿಣದಲ್ಲಿ ಬಾಂಗ್ಲಾದೇಶದ ಬಯಲು ಪ್ರದೇಶವನ್ನು ನೋಡಬಹುದು. ಉತ್ತರಕ್ಕೆ ಕಣ್ಣು ದಣಿಯುವಷ್ಟು ಕಾಡಿನ ದೃಶ್ಯಾವಳಿ. ಮಾಲಿನ್‌ನಾಂಗ್‌ನ ಜನರ ಮುಖ್ಯ ಹಣದ ಬೆಳೆ ಅಡಕೆಯಾಗಿದೆ. ಇಲ್ಲಿನ ಸುತ್ತಲಿನ ಪರಿಸರದ ವಿಶೇಷವೆಂದರೆ ಕಸ ಪೊರಕೆಯ ಹುಲ್ಲು. ಇದನ್ನು ಮಲೆನಾಡಿನಲ್ಲಿ ಏಲಕ್ಕಿ ಬೆಳೆದಂತೆ ಕಾಡಿನ ನಡುವೆ ಪ್ರತ್ಯೇಕವಾಗಿ ಬೆಳೆಯಲಾಗುತ್ತದೆ. ಈ ಹುಲ್ಲಿನ ಕಸ ಪೊರಕೆಗಳು ರಫ್ತಾಗುತ್ತವೆ.

ಪ್ರವಾಸಿಗರು ತಮ್ಮ ಹಳ್ಳಿಯ ಖ್ಯಾತಿಯನ್ನು ಎಲ್ಲೆಡೆ ಒಯ್ಯಲಿ ಎಂಬ ಆಮಿಷಕ್ಕೆ ಮಾಲಿನ್‌ನಾಂಗ್‌ನ ಜನ ಬಲಿಯಾಗಿರಬಹುದೆ ಎಂದು ಒಂದು ಶಂಕೆ ಮೂಡಿದ್ದು ನಿಜ. ಆದರೆ ಅದು ಸುಳ್ಳಾಗಿತ್ತು. ಅವರು ತಮ್ಮ ಪಾಡಿಗೆ ನಿತ್ಯದ ಕೆಲಸಗಳಲ್ಲಿ ಮುಳುಗಿರುತ್ತಿದ್ದರು. ಮಾತನಾಡಿಸಿದರೆ ಒಂದೆರಡು ಸೌಜನ್ಯದ ಮಾತು. ಒಂದು ಸಹಜ ಮುಗುಳ್ನಗು. ಸ್ವಚ್ಛತೆಯನ್ನು ನಿತ್ಯ ಕರ್ಮಗಳಂತೆ ಇಲ್ಲಿ ಭಾವಿಸಲಾಗುತ್ತದೆ. ತಮ್ಮ ಮೇಲೆ ಹೇರಿದ ಹೊಣೆಗಾರಿಕೆ ಎಂಬ ಭಾವವಿಲ್ಲ. ಪ್ರವಾಸಿಗರ ಭೇಟಿ ಇಲ್ಲಿನ ಜನರ ಖಾಸಗೀತನಕ್ಕೆ ಅಡಚಣೆಯಾಗದೆ ಎಂಬ ಆಲೋಚನೆಯೂ ಬಂತು. ಆದರೆ ಪ್ರವಾಸೋದ್ಯಮ ಅರಿಗೆ ಆದಾಯ ತರುವ ಅಂಶ ಆಗಿದೆ.

ಬರೀ ಏಷ್ಯಾದಲ್ಲೇಕೆ ಜಗತ್ತಿಗೇ ಮಾಲಿನ್‌ನಾಂಗ್‌ ಖ್ಯಾತಿ ಈಗ ಹರಡಿದೆ ವಿದೇಶಗಳಿಂದಲೂ ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ. ಮಾಲಿನ್‌ನಾಂಗ್‌ ನಿವಾಸಿಗಳು ಜಗತ್ತಿನಾದ್ಯಂತ ತಮಗೆ ದಕ್ಕಿದ ಸ್ವಚ್ಛತೆಯ ಖ್ಯಾತಿಯನ್ನು ತಮ್ಮ ಮುಂದಿನ ಪೀಳಿಗೆಗಳೂ ಮುಂದುವರಿಸಿಕೊಂಡು ಹೋಗುತ್ತಾರೆಂದು ಬಲವಾದ ಭರವಸೆ ಹೊಂದಿದ್ದಾರೆ. ಗಲಭೆ, ಮತಾಂಧತೆ, ಜಾತಿಜಗಳ, ಕಾಲೆಳೆಯುವ ರಾಜಕೀಯಗಳಲ್ಲಿ ಪೀಳಿಗೆಗಳ ಕರ್ತೃತ್ವ ಶಕ್ತಿ ವ್ಯರ್ಥವಾಗದಂತೆ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿದರೆ ಮಾಲಿನ್‌ನಾಂಗ್‌ನಂತಹ ಲಕ್ಷಾಂತರ ಹಳ್ಳಿಗಳನ್ನು ಭಾರತದಲ್ಲಿ ರೂಪಿಸಬಹುದಾಗಿದೆ.

ಮರಳುವಾಗ ಮನಸ್ಸು ಭಾರವಾಗಿತ್ತು. ಆದರೆ ದಟ್ಟ ನೆನಪುಗಳು ನಮ್ಮ ಜೊತೆಗಿದ್ದ. ಸುಂದರ ಪರಿಸರ ನಿರ್ಮಿಸಿದ ಮಾಲಿನ್‌ನಾಂಗ್‌ ನಿವಾಸಿಗಳಿಗೆ ಒಂದು ಹೃದಯಪೂರ್ವಕ ಶಹಬ್ಬಾಶ್‌ ಹೇಳಿ ಕಾರು ಹತ್ತಿದೆವು.

ಕೆ.ಎಸ್‌. ರವಿಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ