ಸಾಮಾನ್ಯವಾಗಿ ನಾವು ನಮ್ಮ ಏಕಾಂಗಿತನ ಇಲ್ಲವೇ ಬೇಸರ ನೀಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಆಸರೆ ಪಡೆದುಕೊಳ್ಳುತ್ತೇವೆ. ಅದೇ ಕ್ರಮೇಣ ನಮಗೆ ಅಭ್ಯಾಸವಾಗುತ್ತಾ ಹೋಗುತ್ತದೆ. ಮುಂದೆ ಹೋದಂತೆ ಅದು ಒಂದು ಚಟದ ರೂಪದಲ್ಲಿ ನಮ್ಮನ್ನು ತನ್ನ ಕಪಿಮುಷ್ಟಿಯಲ್ಲಿ ಹೇಗೆ ಸಿಲುಕಿಸುತ್ತ ಹೋಗುತ್ತದೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ. ಆಗ ನಾವು ಇಷ್ಟಪಟ್ಟು ಕೂಡ ಅದರಿಂದ ಹೊರಬರಲು ಆಗುವುದಿಲ್ಲ. ಡ್ರಗ್ ಅಡಿಕ್ಷನ್‌ನ ಹಾಗೆ ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಜೊತೆಗೆ ಸಾಮಾಜಿಕವಾಗಿಯೂ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಕಳೆದ ವರ್ಷ ಅಮೆರಿಕದ `ಪ್ರಿವೆಂಟಿವ್ ಮೆಡಿಸಿನ್'ನಲ್ಲಿ ಬಂದ ಒಂದು ಲೇಖನದಲ್ಲಿ ಫೇಸ್‌ಬುಕ್, ಗೂಗಲ್, ಟ್ವಿಟರ್, ಲಿಂಕ್ಡ್ ಇನ್, ಯೂಟ್ಯೂಬ್, ಇನ್‌ಸ್ಟಾ ಗ್ರಾಂಗಳನ್ನು ಏಕಾಂಗಿತನ ಕಳೆಯಲು ಬಳಸುತ್ತಾರೆ, ಆದರೆ ಅದರ ಪರಿಣಾಮ ತದ್ವಿರುದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಸಂಶೋಧಕರು 1932ರ ವಯೋಮಾನದ 1500 ಜನರನ್ನು ಅತ್ಯಂತ ಪ್ರಮುಖ 11 ಜಾಲತಾಣಗಳ ಉಪಯೋಗ ಕುರಿತಂತೆ ಅಭಿಪ್ರಾಯ ದಾಖಲಿಸಿ ಅದನ್ನು ವಿಶ್ಲೇಷಿಸಿದರು.
ಅಮೆರಿಕಾದ ಲೇಖಕ ಬ್ರಯನ್ ಪ್ರಿಮ್ಯಾಕ್ ಪ್ರಕಾರ, ``ನಾವು ಸಾಮಾಜಿಕ ಜೀವಿಗಳು. ಆದರೆ ಈ ಸೋಶಿಯಲ್ ಮೀಡಿಯಾಗಳು ನಮ್ಮನ್ನು ಸಮಾಜದಿಂದ ದೂರ ಮಾಡುತ್ತಿವೆ. ಯುವಕರನ್ನು ಏಕಾಂಗಿತನಕ್ಕೆ ನೂಕುತ್ತಿವೆ. ಅಮೆರಿಕಾದ `ಕಾಮನ್ ಸೆನ್ಸ್ ಮೀಡಿಯಾ' ಕೂಡ ಒಂದು ಸಮೀಕ್ಷೆ ನಡೆಸಿತು. ಅದರಲ್ಲಿ ಹದಿವಯಸ್ಸಿನ ಮಕ್ಕಳು ಮುಖಾಮುಖಿ ಭೇಟಿಯಾಗದೆ ಸೋಶಿಯಲ್ ಮೀಡಿಯಾ ಅಥವಾ ವಿಡಿಯೋ ಚ್ಯಾಟ್ ಮುಖಾಂತರ ಸಂಪರ್ಕಿಸಲು ಇಷ್ಟಪಡುತ್ತಾರೆ.'' 1141 ಮಕ್ಕಳನ್ನು ಈ ಅಧ್ಯಯನದಲ್ಲಿ ತೊಡಗಿಸಲಾಗಿತ್ತು. ಶೇ.35ರಷ್ಟು ಮಕ್ಕಳು ವಿಡಿಯೋ ಮೂಲಕ ಗೆಳೆಯರನ್ನು ಕಾಣಲು ಇಷ್ಟಪಡುತ್ತಾರೆ. ಶೇ.40ರಷ್ಟು ಮಕ್ಕಳು ಸೋಶಿಯಲ್ ಮೀಡಿಯಾದ ಕಾರಣದಿಂದ ತಮ್ಮ ಸ್ನೇಹಿತರನ್ನು ಭೇಟಿಯಾಗಲು ಆಗುವುದಿಲ್ಲ ಎಂದು ಹೇಳಿದರು. ಶೇ.32ರಷ್ಟು ಮಕ್ಕಳು ಫೋನ್ ಹಾಗೂ ವಿಡಿಯೋ ಕಾಲ್ ಇಲ್ಲದೆ, ಇರಲು ಆಗುವುದಿಲ್ಲ ಎಂದು ಹೇಳಿಕೊಂಡರು.
ಇಂಟರ್‌ನೆಟ್‌ನ ಚಟ
ಹದಿವಯಸ್ಸಿನ ಮಕ್ಕಳ ಯೋಚನೆ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ನಿರಂತರವಾಗಿ ಕಲ್ಪನಾಲೋಕದಲ್ಲಿ ವಿಹರಿಸುವ ಹುಡುಗರು ವಾಸ್ತವ ಲೋಕದಿಂದ ದೂರ ಸರಿಯುತ್ತಿದ್ದಾರೆ. ಇದರಿಂದ ಅವರು ನಿರಾಶೆ ಮತ್ತು ಹತಾಶೆಗೆ ತುತ್ತಾಗುತ್ತಿದ್ದಾರೆ.
ಸೋಶಿಯಲ್ ಮೀಡಿಯಾಗಳು ಕ್ರಮೇಣ ನಮ್ಮನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡು ಹೇಗೆ ಹಾನಿ ಮಾಡುತ್ತಿವೆ ಎನ್ನುವುದನ್ನು ಗಮನಿಸಿ. ಸಾಮಾನ್ಯವಾಗಿ ತಾಯಿ ತಂದೆ ತಮ್ಮ ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊಟ್ಟು ಅವರ ಮನಸ್ಸನ್ನು ಒಂದೆಡೆ ನಿಲ್ಲಿಸುವ ಪ್ರಯತ್ನಪಡುತ್ತಾರೆ. ಏಕಾಂಗಿತನದಿಂದ ಬಳಲುವ ಮಕ್ಕಳು ಸ್ಮಾರ್ಟ್ ಫೋನ್‌ನಲ್ಲಿ ತಮ್ಮದೇ ಆದ ಲೋಕ ಕಂಡುಕೊಳ್ಳುತ್ತಾರೆ. ಆರಂಭದಲ್ಲಿ ಹೊಸ ಹೊಸ ಸ್ನೇಹಿತರನ್ನು ಹೊಂದುವುದು ಖುಷಿ ಕೊಡುತ್ತದೆ. ಆದರೆ ಕ್ರಮೇಣ ವಾಸ್ತವ ಜಗತ್ತಿನ ದರ್ಶನ ಆಗುತ್ತಾ ಹೊರಟಂತೆ ಭ್ರಮನಿರಸನವಾಗುತ್ತದೆ.
ಯಾವ ರೀತಿ ಬೆಳಕಿನ ಹಿಂದೆ ಓಡಿದರೆ ಅದನ್ನು ಹಿಡಿಯಲು ಆಗುವುದಿಲ್ಲವೋ, ಅದೇ ರೀತಿ ಇಂತಹ ಅವಾಸ್ತವ ಸಂಬಂಧಗಳು ಮನಸ್ಸಿಗೆ ತಲುಪದೇ ಹಾಗೆಯೇ ಹೊರಟುಹೋಗುತ್ತವೆ.