ಮಹಿಳೆಯರು ಏನನ್ನಾದರೂ ವಿಶೇಷವಾದುದನ್ನು ಮಾಡಬೇಕೆನ್ನುತ್ತಾರೆ. ಆದರೆ ಕುಟುಂಬದ ಹಿರಿಯರು ಅವರನ್ನು ಅಡ್ಡಿಪಡಿಸುತ್ತಾರೆ. ಹುಡುಗರ ಹಾಗೆ ಅವರಿಗೂ ಅವಕಾಶಗಳು ದೊರೆತರೆ ಅವರೂ ಅವಶ್ಯವಾಗಿ ಯಶಸ್ವಿಯಾಗುತ್ತಾರೆ. ಇದರಲ್ಲಿ ತಂದೆತಾಯಿಯರ ಸಹಾಯ ಸಹಕಾರ ಅತ್ಯಗತ್ಯ.

ಮನುಷ್ಯನಲ್ಲಿ ಏನನ್ನಾದರೂ ಮಾಡಬೇಕೆಂಬ ಛಲ ಬಂದುಬಿಟ್ಟರೆ, ಎಂಥದೇ ಪರಿಸ್ಥಿತಿಯನ್ನು ಎದುರಿಸಿಯೂ ಅವರು ಯಶಸ್ವಿಯಾಗಬಲ್ಲರು. ಇಂಥದೇ ಸಾಧನೆಗೆ ಪಾತ್ರರಾದರು ಬಿ.ಬಿ.ಸಿ. ವರ್ಲ್ಡ್ ನ್ಯೂಸ್‌ ಪ್ರೆಸೆಂಟರ್‌ ಮಿಶಲ್ ಹುಸೇನ್‌. ಅವರು ಬ್ರಿಟನ್ನಿನ ಐವರು ಪ್ರಭಾವಿ ಮಹಿಳೆಯರಲ್ಲಿ ಒಬ್ಬರೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮಿಶಲ್ ಹುಸೇನ್‌ ಅವರು ಮಾಡಿದ ವರದಿಗಳಲ್ಲಿ ಕೆಲವಂತೂ ಹೃದಯ ನಡುಗಿಸಿಬಿಡುವಂಥವು. ಅದರಲ್ಲಿ ಪಾಕಿಸ್ತಾನದ ಅಬಾಟಾಬಾದ್‌ನಲ್ಲಿ ಸಂಭವಿಸಿದ ಲಾಡೆನ್‌ನ ಭೀಕರ ಸಾವಿನ ಸುದ್ದಿ, ಈಜಿಪ್ಟ್ ಕ್ರಾಂತಿ ಮತ್ತು ಬೆನಜಿರ್‌ ಬುಟ್ಟೋ ಹತ್ಯೆಯ ಸುದ್ದಿಗಳು ಅದರಲ್ಲಿ ಪ್ರಮುಖವಾದವು. ಮಿಶಲ್ ತಮ್ಮ 18ನೇ ವಯಸ್ಸಿನಲ್ಲಿ ವರದಿಗಾರ್ತಿಯಾಗಿ ಟಿವಿ ಮಾಧ್ಯಮಕ್ಕೆ ಸೇರ್ಪಡೆಗೊಂಡರು. ಆಗಿನಿಂದ ಈಗಿನವರೆಗೆ ಒಂದಕ್ಕಿಂತ ಒಂದು ಎನ್ನಬಹುದಾದ ಸವಾಲಿನಿಂದ ಕೂಡಿದ ಸುದ್ದಿಗಳ ವರದಿ ಮಾಡುತ್ತ ಮುಂದೆ ಮುಂದೆ ಸಾಗಿದರು. ಅವರ ಈ ಪ್ರಗತಿ ಪಥದಲ್ಲಿ ಕುಟುಂಬದವರು ಸಂಪೂರ್ಣ ಸಹಕಾರ ನೀಡಿದರು. 2003ರಲ್ಲಿ ಅವರು ಹಾಶ್ಮಿ ಅವರನ್ನು ಮದುವೆ ಮಾಡಿಕೊಂಡರು.

ಅವರಿಗೆ 3 ಮಕ್ಕಳಿವೆ.

ಮಿಶಲ್ ಹುಸೇನ್‌ ಅವರು ಕೆಲವು ತಿಂಗಳುಗಳ ಹಿಂದೆ ಭಾರತಕ್ಕೆ ಬಂದಾಗ ಮುಂಬೈಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಸೆಂಟ್ ಝೇವಿಯರ್‌ ಕಾಲೇಜಿನ `ಮಾಸ್‌ ಮೀಡಿಯಾ’ ಮತ್ತು ಬ್ಯಾಚುಲರ್‌ ಆಫ್‌ ಆರ್ಟ್ಸ್ ಮತ್ತು ಕಮ್ಯುನಿಕೇಶನ್‌ ಕೋರ್ಸಿನ ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದರು. ಇಂದಿನ ಯುವ ಪೀಳಿಗೆಗೆ ಅವರು ಮಾದರಿ ಎನಿಸುವಂತೆ ಕೆಲಸ ಮಾಡಿದ್ದಾರೆ. ಆ ಸಂದರ್ಭದಲ್ಲಿ ಅವರೊಂದಿಗೆ ನಡೆಸಿದ ಮಾತುಕತೆಯ ಸಂಕ್ಷಿಪ್ತ ವಿವರಣೆ ಇಲ್ಲಿದೆ :

ನೀವು ತಯಾರಿಸಿದ ಡಾಕ್ಯುಮೆಂಟರಿ `ದಿ ಅರಬ್‌ ಸ್ಪ್ರಿಂಗ್‌ ಹೌ ಫೇಸ್‌ ಬುಕ್‌ ಚೇಂಜ್ಡ್ ದಿ ವರ್ಲ್ಡ್’ ಅನುಭವ ಹೇಗಿತ್ತು?

ಆ ನನ್ನ ಪ್ರವಾಸ ಅತ್ಯಂತ ಸ್ಮರಣಾರ್ಹವಾಗಿತ್ತು. ನಾನು ಟ್ಯೂನಿಶಿಯಾ, ಈಜಿಪ್ಟ್, ಲಿಬಿಯಾ, ಬಹ್ರೇನ್‌ ಮತ್ತು ಲೆಬನಾನ್‌ಗೆ ಹೋಗಿದ್ದೆ. ಅಲ್ಲಿನ ಜನರೊಂದಿಗೆ ಮಾತುಕಥೆ ನಡೆಸಿದೆ. ಏಕೆಂದರೆ ನಾನು ಅಲ್ಲಿನ ಕಥೆಯನ್ನು ಹೊರಜಗತ್ತಿಗೆ ತೋರಿಸಬೇಕಿತ್ತು. ಅದು ನನಗೆ ಕೇವಲ ಸವಾಲಿನಿಂದಷ್ಟೇ ಕೂಡಿರಲಿಲ್ಲ. ವಿಶೇಷ ಅನುಭವವನ್ನೂ ನೀಡಿತು. ನಾನು ಈಜಿಪ್ಟ್ ನಿಂದ ಲಿಬಿಯಾತನಕ 8 ಗಂಟೆಗಳ ಕಾಲ ಪ್ರವಾಸ ಮಾಡಿದಾಗ, ವಿರೋಧಿಗಳು ಹೇಗೆ ವಿರೋಧ ಮಾಡುತ್ತಾರೆ. ಇದರ ಪ್ರಭಾವ ಸರ್ಕಾರದ ಮೇಲೆ ಹೇಗಾಗುತ್ತದೆ. ಅದರಿಂದ ಎಷ್ಟೊಂದು ತೊಂದರೆಗಳು ಆಗುತ್ತವೆ ಎನ್ನುವುದನ್ನು ನಾನು ಕಣ್ಣಾರೆ ಕಂಡುಕೊಂಡೆ. ಅಲ್ಲಿ ಹತ್ತಿರದಿಂದ ಗಮನಿಸಿದಾಗ, ಅಲ್ಲಿ ಕೆಲವರು ಅತ್ಯಂತ ಬಡವರಾಗಿದ್ದಾರೆ, ಮತ್ತೆ ಕೆಲವರು ಅತ್ಯಂತ ಶ್ರೀಮಂತರಾಗಿದ್ದಾರೆ. ಅಲ್ಲಿ ನಿರುದ್ಯೋಗವಿದೆ, ಹಸಿವಿನಿಂದ ನೂರಾರು ಜನ ಸಂಕಷ್ಟಕ್ಕೊಳಗಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಬಡವರಿಗೆ, ನಿರುದ್ಯೋಗಿಗಳಿಗೆ ಪಲಾಯನ ಮಾಡುವುದನ್ನು ಬಿಟ್ಟು ಬೇರೆ ಮಾರ್ಗವೇ ಉಳಿದಿಲ್ಲ.  ಒಂದೆಡೆ ಒಸಾಮಾ ಬಿನ್‌ ಲಾಡೆನ್‌ನ ಸಾವಿನ ವರದಿ ಹಾಗೂ ಮತ್ತೊಂದೆಡೆ ಬ್ರಿಟನ್ನಿನ ರಾಜ ಮನೆತನದ ಮದುವೆಯ ಬಗ್ಗೆ ಏಕಕಾಲಕ್ಕೆ ವರದಿ ಮಾಡುವುದು ಎಷ್ಟೊಂದು ಉತ್ಸಾಹಪೂರ್ಣ ಹಾಗೂ ಸವಾಲಿನಿಂದ ಕೂಡಿತ್ತು.

ಒಸಾಮಾನ ಸುದ್ದಿ ಅತ್ಯಂತ ಅಸಾಧಾರಣವಾದುದು. ಒಸಾಮಾ ಸತ್ತ ಅಬಾಟಾಬಾದ್‌ ಉತ್ತರ ಪಾಕಿಸ್ತಾನದಲ್ಲಿದೆ. ಲಾಡೆನ್‌ನನ್ನು ಅನೇಕ ದೇಶಗಳು ಹುಡುಕುತ್ತಲಿದ್ದವು. ಆದರೆ ಅಮೆರಿಕ ಒಸಾಮಾನನ್ನು ಮುಗಿಸುವಲ್ಲಿ ಯಶಸ್ವಿಯಾಯಿತು. ಆ ಸುದ್ದಿ ಪ್ರತಿಯೊಂದು ಚಾನೆಲ್‌ಗೂ ಪ್ರಥಮ ಆದ್ಯತೆಯ ಸುದ್ದಿ. ಅದನ್ನು ತೋರಿಸುವುದು ಅವಶ್ಯಕವಾಗಿತ್ತು. ಇನ್ನೊಂದೆಡೆ ರಾಜಮನೆತನದ ವಿವಾಹ ಸಮಾರಂಭ. ಅದನ್ನು ನೋಡಲು ಜನರು ಉತ್ಸುಕರಾಗಿದ್ದರು. ನಾನು ಆಗ ಒಂದು ಸಲ ಒಸಾಮಾ ಬಗ್ಗೆ ಮತ್ತೊಂದೆಡೆ ರಾಜ ಪರಿವಾರದ ಮದುವೆಯ ಬಗ್ಗೆ ಹೇಳುತ್ತಿದ್ದೆ. ಸುಮಾರು 48 ಗಂಟೆಗಳ ಕಾಲ ಈ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಇದು ಇಂದಿನ ದಿನದ ಬೇಡಿಕೆಯೂ ಹೌದು.

ನಿಮಗೆ ಎಷ್ಟೋ ಸಲ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಬೇಕಾಗಿ ಬರುತ್ತದೆ. ಮಹಿಳೆಯರಂತೂ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.

ಭಾರತಕ್ಕೆ ಸಂಬಂಧಪಟ್ಟಂತೆ ನಿಮ್ಮ ಸ್ಮರಣಾರ್ಹ ಕ್ಷಣಗಳು ಏನಾದರೂ ಇವೆಯೇ?

ನಾನು ಪಾಕಿಸ್ತಾನಕ್ಕೆ ಅಷ್ಟೇ ಅಲ್ಲ, ಭಾರತಕ್ಕೂ ಹಲವು ಸಲ ಭೇಟಿ ಕೊಟ್ಟಿರುವೆ. ನಾನು `ಲೈಫ್‌ ಆಫ್‌ ಮಹಾತ್ಮ ಗಾಂಧಿ’ ತಯಾರಿಸುತ್ತಿದ್ದಾಗ ಭಾರತವನ್ನು ತುಂಬಾ ಸುತ್ತಿದ್ದೆ. ಗುಜರಾತ್‌, ಕೊಲ್ಕತ್ತಾ, ಅಮೃತಸರ್‌, ದೆಹಲಿ ಮುಂತಾದ ಸ್ಥಳಗಳಿಗೆ ಭೇಟಿ ಕೊಟ್ಟಿದ್ದೆ. ಈ ಐತಿಹಾಸಿಕ ಸ್ಥಳಗಳು ನನಗೆ ಬಹಳ ಹಿಡಿಸಿದವು.

ಮಹಿಳೆಯರಿಗೆ ಎಷ್ಟು ಸ್ವಾತಂತ್ರ್ಯ ಇರಬೇಕಿತ್ತೊ, ಅಷ್ಟು ಸ್ವಾತಂತ್ರ್ಯ ಇಲ್ಲ ಎನ್ನುತ್ತೀರಾ?

ಮಹಿಳೆಯರಿಗೆ ಈಗಲೂ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕರೆ ಅವರು ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ನೀವು ವಿಶ್ವದ ಯಾವುದೇ ಕಡೆ ನೋಡಿ, ಮಹಿಳೆಯರು ತೊಂದರೆ ಪಡುತ್ತಿರುವುದು ಕಂಡುಬರುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲೂ ಕೂಡ ಉದ್ಯೋಗಸ್ಥ ಮಹಿಳೆಯರು ಸಾಕಷ್ಟು ಸಂಘರ್ಷ ನಡೆಸಿದ್ದಾರೆ. ಅವರು ಉದ್ಯೋಗವನ್ನೇನೊ ಮಾಡುತ್ತಿದ್ದಾರೆ. ಆದರೆ ಅವರಿಗೆ ತಾಯಿಯಾಗುವುದು ಹಾಗೂ ಕೆಲಸ ಮಾಡುವುದು ಇವರೆಡಕ್ಕೂ ಸಮಾನ ಪ್ರಾಶಸ್ತ್ಯ ಕೊಡಲು ಸಾಕಷ್ಟು ಸಂಘರ್ಷ ಮಾಡಬೇಕಾಗಿ ಬರುತ್ತಿದೆ. ತಂದೆತಾಯಿಗಳು ನನಗೆ ಹಾಗೂ ನನ್ನ ಸೋದರನಿಗೆ ಸಮಾನ ಅವಕಾಶಗಳನ್ನು ನೀಡಿದ್ದರು. ಪ್ರತಿಯೊಬ್ಬ ಯುವತಿ ಯಶಸ್ಸಿಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಕುಟುಂಬದ ಹಿರಿಯರು ಆಕೆಯನ್ನು ತಡೆಯಲು ಪ್ರಯತ್ನಿಸುತ್ತಿರುತ್ತಾರೆ. ಇದು ನಿಲ್ಲಬೇಕು. ಅವರಿಗೆ ಹುಡುಗರ ಹಾಗೆ ಅವಕಾಶಗಳನ್ನು ಕೊಡಬೇಕು. ಆಗಲೇ ಅವರು ಏನನ್ನಾದರೂ ಮಾಡಲು ಸಾಧ್ಯ.

`ಇನ್ನೋಸೆನ್ಸ್ ಆಫ್‌ ಮುಸ್ಲಿಂ’ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಯಾಯಿತು. ನೀವು ಆ ಚಿತ್ರ ನೋಡಿದಿರಾ? ನಿಮ್ಮ ಅಭಿಪ್ರಾಯವೇನು?

ನಾನು ಆ ಚಿತ್ರದ ಟ್ರೇಲರ್‌ ನೋಡಿರುವೆ. ಮೀಡಿಯಾದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಓದುವುದು ನನಗೆ ಅಷ್ಟೊಂದು ಸಾಧ್ಯವಾಗುವುದಿಲ್ಲ. ಸೋಶಿಯಲ್ ಮೀಡಿಯಾಗಳ ಜೊತೆಗೆ ಜನರು ಕೂಡ ಸ್ವತಃ ಅದನ್ನು ನೋಡಬೇಕು. ತಾವೇನು ಮಾಡಲು ಹೊರಟಿದ್ದೇವೆ ಎಂಬುದನ್ನು ಜನರು ಯೋಚಿಸಬೇಕು. ಕಾನೂನು ಭಂಗ ಮಾಡುವುದು ಸರಿಯಲ್ಲ. ಈ ಬಗ್ಗೆ ಯೋಚಿಸಬೇಕು.

ನಿಮ್ಮ ಮುಂದಿನ ಯೋಜನೆಗಳೇನು? ಮಹಿಳೆಯರಿಗೆ ಏನು ಸಂದೇಶ ಕೊಡಲು ಇಚ್ಛಿಸುವಿರಿ?

ನಾನು ಸಾಕಷ್ಟು ಸುತ್ತಾಡಿ ಜನರನ್ನು ಹತ್ತಿರದಿಂದ ಕಂಡಿರುವೆ, ಅವರ ಭಾವನೆಗಳನ್ನೂ ಅರ್ಥ ಮಾಡಿಕೊಂಡಿರುವೆ. ಮಹಿಳೆಯರು ತಮ್ಮನ್ನು ತಾವು ಯಾವುದೇ ಕಾರಣಕ್ಕೂ ದುರ್ಬಲ ಎಂದು ಭಾವಿಸಬಾರದು. ಜೀವನದ ಸವಾಲುಗಳನ್ನು ಎದುರಿಸಬೇಕು. ತಮ್ಮದೇ ಆದ ವಿಭಿನ್ನ ಪಡಿಯಚ್ಚು ಮೂಡಿಸಬೇಕು ಎಂಬುದೇ ನನ್ನ ಆಶಯ.

– ಜಿ. ಸುಮತಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ