ಚುಮು ಚುಮು ಚಳಿಯಲ್ಲೇ ಎದ್ದು ಮುಂಜಾನೆಯೇ ನಮ್ಮ ಪಯಣ ಆರಂಭಿಸಿದೆವು. ಎಳೆ ಬಿಸಿಲು, ಹಕ್ಕಿಗಳ ಚಿಲಿಪಿಲಿ, ಮುಗಿಲು ಚುಂಬಿಸುವ ಶಿಖರಗಳು, ಪೈನ್‌ ಹಾಗೂ ಜ್ಯೂನಿಪರ್‌ ಮರಗಳ ಗಾಢ ಹಸಿರು, ವರ್ಣರಂಜಿತ ಕಾಡು ಹೂಗಳು, ಜುಳುಜುಳು ಹರಿಯುವ ಅಸಂಖ್ಯ ಝರಿಗಳು ಮತ್ತು ಆರ್ಭಟವಿಲ್ಲದ ಸಣ್ಣಸಣ್ಣ ಜಲಪಾತಗಳ ನಡುವೆ ಬೆಳಗಿನ ಅತಿ ಪ್ರಶಾಂತತೆಯಲ್ಲಿ ನಾವು ಸಾಗಿದ್ದೆವು.

ಕಿರಿದಾದ, ಬಳುಕಿ ಬಳುಕಿ ಸಾಗುವ ರಸ್ತೆ ಒಂದೇ ಸಮನೆ ಏರುತ್ತಿತ್ತು. ಬಲಗಡೆ ಆಳದ ಕಣಿವೆಯ ಪ್ರಪಾತ, ಕಣಿವೆಯ ತುಂಬ ಬಿದಿರುಮೆಳೆಗಳು, ರೆಪ್ಪೆ ಮುಚ್ಚಿದರೆ ನಿಸರ್ಗ ಸೌಂದರ್ಯದ ಒಂದು ತುಣುಕೂ ಎಲ್ಲಿ ತಪ್ಪಿಹೋಗುವುದೋ ಎಂಬ ಉದ್ವೇಗದಲ್ಲಿ ನಾವು ಅರಳುಗಣ್ಣಾಗಿಯೇ ಸಾಗಿದ್ದೆವು. ನೋಡನೋಡುತ್ತಿದ್ದಂತೆಯೇ ಚಿತ್ರ ಬದಲಾಗತೊಡಗಿತು. ಕಾಡಿನ ಹಸಿರು ಮರೆಯಾಯಿತು. ದೈತ್ಯ ಬಂಡೆಗಳು ಮತ್ತು ಕಡಿದಾದ ಕೊರಕಲು ಆರಿಸಿದ ಚೂಪು ಶಿಖರಗಳು ಮೈದಳೆದವು. ಪುಟ್ಟ ಪುಟ್ಟ ಪೊದೆಗಳ ನಡುವೆ ಕಂದುಬಣ್ಣದ ಕಾಡುಹೂವಿನ ದೇಟುಗಳು ಅಸಂಖ್ಯವಾಗಿ ಅರಳಿ ನಳನಳಿಸುತ್ತಿದ್ದವು. ಎಲ್ಲೆಡೆ ಎಳೆಬಿಸಿಲಿನ ಲೇಪನವಿದ್ದರೂ ಥಂಡಿ ಏರುತ್ತ ಹೋಯಿತು. ಮರಗಳೇ ಇರದ ಒರಟು ನೆಲದಲ್ಲಿ ಅಲ್ಲೊಂದು ಇಲ್ಲೊಂದು ಚಮರೀಮೃಗಗಳು (ಯಾಕ್‌) ಹಸಿರು ಹುಲ್ಲನ್ನು ಹುಡುಕಿ ಮೇಯುತ್ತಿದ್ದವು.

ನಾವು ಸಾಗುತ್ತಿದ್ದ ರಸ್ತೆಯಾದರೋ ಬಹುತೇಕ ನಿರ್ಜನ. ಆಗೊಮ್ಮೆ ಈಗೊಮ್ಮೆ ಸೈನಿಕರನ್ನು ತುಂಬಿಕೊಂಡ ಹಸಿರು ಮಿಲಿಟರಿ ವಾಹನಗಳು ಮಾತ್ರ ಎದುರಾಗುತ್ತಿದ್ದವು. ಪಾದಚಾರಿಗಳ ಸುಳಿವಂತೂ ಇಲ್ಲವೇ ಇಲ್ಲ. 2 ಗಂಟೆಗಳ ಅವಧಿಯಲ್ಲಿ ಕೇವಲ 40 ಕಿ.ಮೀ. ದೂರದ ಪಯಣದಲ್ಲಿ ನಾವು ನೋಡಿದ್ದು ಬೆರಳೆಣಿಕೆಯಷ್ಟು ಮನೆಗಳಿದ್ದ ಎರಡೇ ಹಳ್ಳಿಗಳನ್ನು. ಇಷ್ಟು ಕಡಿಮೆ ಅವಧಿಯಲ್ಲಿ, ಕಡಿಮೆ ಅಂತರದಲ್ಲಿ 2100 ಮೀಟರ್‌ಗಿಂತಲೂ ಹೆಚ್ಚು ಎತ್ತರಕ್ಕೆ ಸಾಗಿ ಬಂದಿದ್ದೆವು. ಪ್ರತಿ ತಿರುನನ್ನು ದಾಟಿದ ಕೂಡಲೇ ನಮ್ಮ ಕಣ್ಣು ಏನೋ ಕೌತುಕವನ್ನು ಅರಸುತ್ತಿತ್ತು.

chng2

ಕೊನೆಗೂ ಬೆಟ್ಟವೆಂದರ ನೆತ್ತಿ ಹತ್ತಿ ನಮ್ಮ ಕಾರು ನಿಲ್ಲುತ್ತಿದ್ದಂತೆ ನಮ್ಮ ನಿರೀಕ್ಷೆಯ ಕೌತುಕ ಒಂದು ಸರೋವರದ ರೂಪದಲ್ಲಿ ನಮ್ಮೆದುರು ಧುತ್ತನೆ ಎದುರಾಯಿತು. ರೊಮ್ಯಾಂಟಿಕ್‌ ಕವಿಯೊಬ್ಬನ ಕಾವ್ಯದಲ್ಲಿ ಅಪೂರ್ವ ವರ್ಣನೆಗೆ ಸಿಲುಕಿ ಅನಾವರಣಗೊಂಡಂತಿದ್ದ ಒಂದು ಸರೋವರದ ತೀರದಲ್ಲಿ ನಾವಿದ್ದೆವು. ಚಿತ್ರಕಾರನೊಬ್ಬನ ವರ್ಣಗಳಲ್ಲಿ ಮಿಂದು ಕ್ಯಾಲೆಂಡರ್‌ನಿಂದ ಇಳಿದು ಬಂದಿದೆಯೋ ಎಂಬಂತಿದ್ದ ನಿಸರ್ಗದ ಕೌತುಕದೆದುರು ನಾವು ನಿಂತಿದ್ದೆವು.

ನಾನಿನ್ನು ಸಸ್ಪೆನ್ಸ್ ಬೆಳೆಸುವುದಿಲ್ಲ. ನಿಮಗೀಗ ನಾವು ಹಿಮಾಲಯದಲ್ಲಿರಬಹುದು ಎಂಬ ಒಂದು ಊಹೆಯಂತೂ ಬಂದಿದೆ. ನಿಜ, ನಾವು ಹಿಮಾಲಯದಲ್ಲಿದ್ದೆವು. ನಾವಿದ್ದದ್ದು ಪೂರ್ವ ಸಿಕ್ಕಿಂನ ಪರ್ವತಗಳ ನಡುವೆ. ನಾವು ಹೊರಟಿದ್ದು ರಾಜಧಾನಿ ಗ್ಯಾಂಗ್‌ ಟಾಕ್‌ನಿಂದ (ಎತ್ತರ 1670 ಮೀ.). ಬಂದು ತಲುಪಿದ್ದು ಒಂದು ಸರೋವರಕ್ಕೆ (ಎತ್ತರ 3780 ಮೀ.). ನಾವು ಮೈಮರೆತು ನೋಡುತ್ತಿದ್ದ ಸರೋವರವೇ `ಚಾಂಗು ಸರೋವರ.’ ಸ್ಥಳೀಯರ ಭುಟಿಯಾ ಭಾಷೆ (ಟಿಬೆಟ್‌ ಮೂಲದವರ ಭಾಷೆ)ಯ ತ್ಸೋಗೋ ಎಂಬ ಪದ ಅನ್ಯರ ಬಾಯಿಯಲ್ಲಿ `ಚಾಂಗು’ ಎಂದು ಅಪಭ್ರಂಶಗೊಂಡಿದೆ.

ವಿಚಿತ್ರ ಸ್ತಬ್ಧತೆ

ಹಾಗೇ ನೋಡಿದರೆ ಚಾಂಗು ಸರೋವರ ಒಂದು ಪುಟ್ಟ ಕೆರೆಯಂತಿದೆ. ಕರ್ನಾಟಕದ ಎಷ್ಟೋ ಕೆರೆಗಳು ಇದಕ್ಕಿಂತ ವಿಸ್ತಾರವಾಗಿವೆ. ಆದರೆ ಹಿಮಾಲಯದಲ್ಲಿ ಯಾವುದೇ ಸರೋವರ ಏಕ್‌ ದಂ ಪ್ರೇಕ್ಷಣೀಯ ಸ್ಥಳವಾಗಿರುತ್ತದೆ. ಥಂಡಿ ತುಂಬಿದ, ನಿರ್ಜನ ಪರಿಸರದಲ್ಲಿ, ಶಿಖರಗಳ ಇಕ್ಕಟ್ಟಿನಲ್ಲಿ ಏಕಾಂಗಿಯಾಗಿ ಮೈ ತೆರೆದುಕೊಳ್ಳುವ ಹಿಮಾಲಯದ ಸರೋವರಗಳ ಧಾಂತವಿಲ್ಲದೆ ದಡಕ್ಕೆ ಬಡಿಯುವ ಅಲೆಗಳು ಮತ್ತು ತಿಳಿನೀರ ಮಟ್ಟಸ ಮೇಲ್ಮೈ ಎಲ್ಲವೂ ಥಟ್ಟನೆ ನಮ್ಮನ್ನು ಸೆಳೆದುಬಿಡುತ್ತವೆ. ಈ ಆಕರ್ಷಣೆಗಳಿಂದ ಚಾಂಗು ಹೊರತಾಗಿಲ್ಲ.

ಹಾಗಿದ್ದರೆ ಚಾಂಗುವಿನ ವಿಶೇಷವೇನು?

chng3

ಮೊದಲು ನಮಗೂ ಅರಿವಾಗಲಿಲ್ಲ. ಕಾರಿನಿಂದಿಳಿದು ತೀರದಲ್ಲಿ ನಿಲ್ಲುತ್ತಿದ್ದಂತೆಯೇ ನಮ್ಮೆಲ್ಲರನ್ನು ವಿಚಿತ್ರ ಸ್ತಬ್ಧತೆಯೊಂದು ಆವರಿಸಿಕೊಂಡಿತು. ನಮ್ಮ ಇರವನ್ನೇ ಮರೆಸುವ ಸರೋವರದ ನೀರಿನಷ್ಟೇ ಪ್ರಶಾಂತ ಭಾವ ನಮ್ಮೊಳಗೆ ತುಂಬಿಕೊಂಡಿತು. ಯಾರಿಗೂ ಮಾತು ಬೇಕಿಲ್ಲ. ಸರೋವರದ ನಿಗೂಢ ಸ್ತಬ್ಧತೆಯ ಒಂದು ಭಾಗವೇ ಆಗಿಬಿಡುವ ನಮ್ಮ ಅನುಭವಿದೆಯಲ್ಲ ಅದುವೇ ಚಾಂಗುವಿನ ವೈಶಿಷ್ಟ್ಯ! ಇಲ್ಲಿ ಮೈಮರೆತು ನಿಂತಷ್ಟು ಹೊತ್ತು ನಮ್ಮ ಮನಸುಗಳಲ್ಲಿ ನಾಗರಿಕ ಜಗತ್ತಿನ ತಲ್ಲಣಗಳಾಗಲಿ, ಒತ್ತಡಗಳಾಗಲಿ, ಕಿರಿಕಿರಿಗಳಾಗಲಿ ನೆನಪಾಗುವುದೇ ಇಲ್ಲ. ದೇಹ, ಮನಸ್ಸುಗಳ ಆಯಾಸವೆಲ್ಲ ಕರಗಿ ಹಗುರಭಾವದ ಹಕ್ಕಿಗಳಾಗಿ ಬಿಡುವ ನಮಗೆ ಚಾಂಗುವಿನ ನಿಷ್ಕಳಂಕ ಪರಿಸರ ಅಪೂರ್ವವೆನಿಸಿಬಿಡುತ್ತದೆ.

2006ರಲ್ಲಿ ಭಾರತ ಸರ್ಕಾರ `ಹಿಮಾಲಯದ ಸರೋವರಗಳು’ ಎಂಬ ಶೀರ್ಷಿಕೆಯಡಿ ಐದು ಅಂಚೆ ಚೀಟಿಗಳನ್ನು ಹೊರತಂದಿತು. ಅವುಗಳಲ್ಲಿ ಒಂದು ಚಾಂಗುವಿಗೆ ಸಂಬಂಧಿಸಿದ್ದು (ಉಳಿದ ಕಾಶ್ಮೀರದ ತ್ಸೋವೋರಿರಿ, ಹಿಮಾಚಲ ಪ್ರದೇಶದ ಚಂದ್ರಾವತ್‌, ಉತ್ತರಾಖಂಡದ ರೂಪ್‌ ಕುಂಡ್‌ ಮತ್ತು ಅರುಣಾಚಲ ಪ್ರದೇಶದ ಸೇವಾ ಸರೋವರಗಳು). ಚಾಂಗು ಸರೋವರ ಸಿಕ್ಕಿಂ ರಾಜ್ಯದ ಹೆಗ್ಗುರುತಾಗಿದೆ. ಸಿಕ್ಕಿಂಗೆ ಹೋದವರು ಚಾಂಗು ನೋಡದೆ ಬಂದವರು ಎಂದರೆ ಅವರು ಜೀವನದಲ್ಲಿ ಏನೋ ಕಳೆದುಕೊಂಡರು ಎಂದರ್ಥವಂತೆ. ನಾವು ಹೊರಗಿನವರು ಎಂದು ಗೊತ್ತಾಗುತ್ತಿದ್ದಂತೆ ಸಿಕ್ಕಿಂ ಮಂದಿ ನಮಗೆ, “ನೀವು ಚಾಂಗು ನೋಡಿದಿರಾ?” ಎಂದು ಕೇಳುತ್ತಾರೆ.

“ಇಲ್ಲ, ನೋಡಿಲ್ಲ,” ಎಂದರೆ, “ಮರೀಬೇಡಿ, ನೋಡಿಹೋಗಿ,” ಎಂದು ಮೃದುವಾಗಿ ಒತ್ತಾಯಿಸುತ್ತಾರೆ. ಸಿಕ್ಕಿಂ ಜನರ ಮೃದು ನಡವಳಿಕೆಯ ಪ್ರತಿಬಿಂಬವಾಗಿಯೂ ಚಾಂಗು ಕಂಡುಬಂದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಉಜ್ವಲ ಹೊಳಪಿನ ಸರೋವರ

chng5

ಸರೋವರದ ಮೂರು ದಿಕ್ಕಿನಲ್ಲಿ ಶಿಖರಗಳು. ಒಂದು ದಿಕ್ಕಿನಲ್ಲಿ ಕಡಿದಾದ ಇಳಿಜಾರು. ಮೇ-ಆಗಸ್ಟ್ ವರೆಗೆ ಹಿಮಕರಗಿದ ನೀರು ಸರೋವರವನ್ನು ತುಂಬುತ್ತದೆ. ಈ ಅವಧಿಯಲ್ಲಿ ಲುಂಗ್‌ಟ್ಸೆ ಎಂಬ ಪುಟ್ಟ ನದಿ ಸರೋವರದಿಂದ ಜೀವ ತಳೆದು ಮೆಲ್ಲಗೆ ಕಣಿವೆಗೆ ಇಳಿಯುತ್ತದೆ. ಹಿಮಪಾತ ಆರಂಭವಾಗುವ ಕೆಲವು ದಿನಗಳ ಮುಂಚೆಯಷ್ಟೆ ಚಾಂಗುವಿಗೆ ಆಗಮಿಸಿದ್ದ ನಮಗೆ ಸುತ್ತಲಿನ ಹಿಮಾವೃತ ಶಿಖರಗಳು ಮತ್ತು ಹೆಪ್ಪುಗಟ್ಟಿ ಗಾಜಿನಂತಾಗುವ ಚಾಂಗುವನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದಷ್ಟೇ ನಮ್ಮ ಪಾಲಿಗೆ ಉಳಿದದ್ದು.

ಚಾಂಗು ಸರೋವರದ ಒಂದು ಭೌಗೋಳಿಕ ವಿಶೇಷವೆಂದರೆ, ಅದು ಇಡೀ ಸಿಕ್ಕಿಂನಲ್ಲೇ ತನ್ನ ತೀರದವರೆಗೂ ಮೋಟಾರು ರಸ್ತೆ ಸಂಪರ್ಕ ಪಡೆದಿರುವ ಏಕೈಕ ಸರೋವರವಾಗಿದೆ. ದಿನಗಟ್ಟಲೆ ಚಾರಣದ ಮೂಲಕ ಇದನ್ನು ತಲುಪಬೇಕಾದ ಶ್ರಮವಿಲ್ಲ.

ಸ್ಥಳೀಯರಿಗೆ ಚಾಂಗು ದೈವೀಸ್ವರೂಪದ ಸರೋವರವಾಗಿದೆ. ಹಿಂದೆ ಲಾಮಾಗಳು ಈ ಸರೋವರದ ಬಣ್ಣವನ್ನು ವೀಕ್ಷಿಸಿ ಭವಿಷ್ಯ ನುಡಿಯುತ್ತಿದ್ದರಂತೆ. ಈ ಐತಿಹ್ಯ ಏನೇ ಇರಲಿ, ನೀಲಿ ಆಗಸದ ಒಂದು ತುಣುಕು ಕಳಚಿ ಭೂಮಿಯ ಮೇಲೆ ಬಿದ್ದಿದೆಯೋ ಎಂಬಂತೆ ಭಾಸವಾಗುವ ಚಾಂಗು ಮಾತ್ರ ತನ್ನ ಸ್ವಚ್ಛ ಮತ್ತು ಸ್ಛಟಿಕ ಶುದ್ಧ ನೀರಿನ ಮೂಲಕ ಆಕಾಶದ ಬಣ್ಣಗಳನ್ನು ಸಮರ್ಥವಾಗಿ ಪ್ರತಿಫಲಿಸುತ್ತದೆ. ಅವು ತನ್ನದೇ ಬಣ್ಣಗಳು ಎಂಬ ಭಾವನೆ ಮೂಡಿಸುತ್ತದೆ. ಬೇರೆ ಬೇರೆ ಎತ್ತರದಿಂದ, ಬೇರೆ ಬೇರೆ ಕೋನಗಳಿಂದ ನೋಡಿದಾಗ ಚಾಂಗು ಏಕಕಾಲಕ್ಕೆ ಬೇರೆ ಬೇರೆ ಬಣ್ಣದ ಸರೋವರವಾಗಿ ಕಂಗೊಳಿಸುತ್ತದೆ. ಆದರೆ ಚಾಂಗುವನ್ನು ಆಗಸ ನೀಲಿಯ, ಉಜ್ವಲ ಹೊಳಪಿನ ಸರೋವರವೆಂದೇ ವರ್ಗೀಕರಿಸಲಾಗಿದೆ.

ಚಾಂಗುವಿನಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಟಿಬೆಟ್‌ನಿಂದ ಇಲ್ಲಿಗೆ ಹಕ್ಕಿಗಳು ವಲಸೆ ಬರುತ್ತವೆ. ಬಹುವರ್ಣದ ರಡ್ಡಿ ಶೆಲ್ ‌ಡ್ರೇಕ್‌ ಎಂಬ ಬಾತುಕೋಳಿ ಇವುಗಳಲ್ಲಿ ಮುಖ್ಯವಾದುದು. ಒಂದು ಕಿ.ಮೀ. ಉದ್ದ, 15 ಮೀ. ಗರಿಷ್ಠ ಆಳವಿರುವ ಈ ಸರೋವರದ ಸುತ್ತಲಿನ ಶಿಖರಗಳ ತುಂಬ ಏಪ್ರಿಲ್‌ನಿಂದ ಆಗಸ್ಟ್ ವರೆಗೆ ರೋಡೋಡೆಂಡ್ರಾನ್‌ ಮತ್ತು ಪ್ರಿಮ್ಯುಲಾ ಹೂಗಳು ಅರಳಿ ಇಡೀ ಪರಿಸರಕ್ಕೆ ಬಣ್ಣ ಬಳಿಯುತ್ತವೆ. ಒಟ್ಟಾರೆ ಈ ಸರೋವರದ ಸಮಗ್ರ ಚೆಲುವನ್ನು ಕಾಣಬೇಕೆಂದರೆ ವರ್ಷದ ಎಲ್ಲ ಋತುವಿನಲ್ಲೂ ಚಾಂಗುವಿಗೆ ಭೇಟಿ ಕೊಡಬಹುದು.

ಚಾಂಗುವಿನ ಪರಿಸರ ಕಲುಷಿತಗೊಳ್ಳದಂತೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಶ್ರಮವಹಿಸಿವೆ. ಈ ಹೇಳಿಕೆಗೆ ಪುರಾವೆಯೆಂಬಂತೆ ಸರೋವರದ ನೀರಿನಲ್ಲಿ  ಮಾನವ ನಿರ್ಮಿತ ಕಸದ ಪದಾರ್ಥಗಳೇನೂ ತೇಲುವುದು ಕಂಡುಬರಲಿಲ್ಲ. ವ್ಯರ್ಥ ಪ್ಲಾಸ್ಟಿಕ್‌ಗಳು ತೀರದಲ್ಲೆಲ್ಲೂ ಬಿದ್ದಿರುವುದು ಕಾಣಲಿಲ್ಲ. ಉತ್ತರ ತೀರದಲ್ಲಿ ಹತ್ತಾರು ಚಹಾದಂಗಡಿಗಳು ಮತ್ತು ಸ್ಮರಣಿಕೆಗಳನ್ನು  ಮಾರುವ ಅಂಗಡಿಗಳ ಒಂದು ಸಾಲೇ ಇದೆ. ಆದರೆ ಅವು ಬಳಸಿದ ನೀರು ಸರೋವರವನ್ನು ಸೇರದಂತೆ ಎಚ್ಚರ ವಹಿಸಲಾಗಿದೆ.

ಬಿಸಿಬಿಸಿ ಚಹಾ ಕುಡಿದು, ರುಚಿಯಾದ ಮೋಮೋ (ಟಿಬೆಟಿಯನ್‌ ಮೂಲದ ಹಬೆಯಲ್ಲಿ ಬೇಯಿಸುವ ಮೈದಾ ಹಿಟ್ಟಿನ ತಿನಿಸು) ತಿಂದು, ನೆನಪಿಗೆ ಚಮರೀಮೃಗಗಳ ಸುಂದರ ಗೊಂಬೆಗಳು, ಟಿಬೆಟಿಯನ್‌ ಮಣಿಸರಗಳನ್ನು ಖರೀದಿಸಿ ಚಾಂಗು ನೆನಪುಗಳನ್ನು ಗಾಢಗೊಳಿಸಿಕೊಳ್ಳಬಹುದು. ಚಮರೀಮೃಗಗಳ ಮೇಲೆ ಕುಳಿತು ಸರೋವರದ ಸುತ್ತ ಸವಾರಿ ಮಾಡಿಬರಬಹುದು. ಈ ಸಾರಿ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ.

ಸರೋವರದ ಪೂರ್ವ ತೀರದಲ್ಲಿ ಮಿಲಿಟರಿ ಕ್ಯಾಂಪುಗಳಿವೆ. ಇತ್ತೀಚೆಗೆ ಸರ್ಕಾರದ ವತಿಯಿಂದ ಪ್ರವಾಸೀ ಗೃಹಗಳನ್ನು ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಚಾಂಗು ಜನಜಂಗುಳಿಯಿಂದ ನರಳಬಹುದು. ಪ್ರವಾಸೋದ್ಯಮದ ಕೊಳಕು ಚಾಂಗುವನ್ನು ತುಂಬಬಹುದು, ಹಾಗಾಗದಿರಲಿ.

ಚಾಂಗು ಸರೋವರ ಗ್ಯಾಂಗ್‌ ಟಾಕ್‌ (ಸಿಕ್ಕಿಂ ರಾಜಧಾನಿ) ಮತ್ತು ಲ್ಹಾಸಾ (ಟಿಬೆಟ್‌ ರಾಜಧಾನಿ)ಗಳ ನಡುವಿನ ಪ್ರಾಚೀನ ರೇಷ್ಮೆ ಮಾರ್ಗದಲ್ಲಿದೆ. ಚಾಂಗುವಿನಿಂದ ಲ್ಹಾಸಾ ಬರೀ 400 ಕಿ.ಮೀ.ಗಳಷ್ಟೆ. ಕ್ರಿಸ್ತಪೂರ್ವದಿಂದಲೂ ಈ ಮಾರ್ಗದಲ್ಲಿ ಚೀನಾ ಹಾಗೂ ಭಾರತದ ವ್ಯಾಪಾರಿಗಳ ನಡುವೆ ಬಿರುಸಿನ ವ್ಯಾಪಾರ, ವಹಿವಾಟು ಜರುಗುತ್ತಿದ್ದವಂತೆ.

ಚಾಂಗು ಸರೋವರಕ್ಕೆ ಟಿಬೆಟ್‌ ಗಡಿ ಸನಿಹವಿರುವುದರಿಂದ ಚಾಂಗು ನೋಡಲು ಸರ್ಕಾರದ ಅನುಮತಿ ಬೇಕೇಬೇಕು. ಗ್ಯಾಂಗ್‌ಟಾಕ್‌ನಲ್ಲಿ ಪೊಲೀಸ್‌ ಸೂಪರಿಂಟೆಂಡೆಂಟ್‌ ಕಛೇರಿಯಲ್ಲಿ ಶುಲ್ಕ ತೆತ್ತು ಅನುಮತಿ ಪಡೆಯಬೇಕು. ಇಲ್ಲವಾದರೆ ಭೇಟಿ ಸಾಧ್ಯವೇ ಇಲ್ಲ. ಈ ಮುನ್ನ ಸರೋವರದ ಛಾಯಾಚಿತ್ರ ತೆಗೆಯಲು ಅವಕಾಶವಿರಲಿಲ್ಲ. ಆದರೆ ಇಂದು ಆ ನಿರ್ಬಂಧವಿಲ್ಲ.

ಚಾಂಗುವಿಗೆ ಬೆಳಗ್ಗೆ ಒಂಬತ್ತರಿಂದ ಮಧ್ಯಾಹ್ನ ಎರಡು ಗಂಟೆಯ ಒಳಗಾಗಿ ಭೇಟಿ ನೀಡುವುದು ಹೆಚ್ಚು ಸೂಕ್ತ. ವರ್ಷದ ಹತ್ತು ತಿಂಗಳು ಬರಿಯ ಮೋಡಗಳ ನಡುವೆಯೇ ಈ ಪ್ರದೇಶ ಕಣ್ಣಾಮುಚ್ಚಾಲೆ ಆಡುವುದರಿಂದ ಧಾರಾಕಾರ ಮಳೆ ದಿಢೀರನೆ ಬಂದು ಭೂಕುಸಿತವಾಗಬಹುದು. ವಾಹನ ಚಾಲನೆ ಮಾಡಲಾಗದಷ್ಟು ದಟ್ಟ ಮಂಜು ಕವಿಯಬಹುದು. ಏಪ್ರಿಲ್ ‌ಮತ್ತು ಮೇ ತಿಂಗಳುಗಳ ಅವಧಿಯಲ್ಲಿ ಮಾತ್ರ ಮಳೆ, ಹಿಮ ಮತ್ತು ಚಳಿಯ ಕಾಟವಿರುವುದಿಲ್ಲ.

ಸಿಕ್ಕಿಂಗೆ ಹೋದಾಗ ಅವಶ್ಯ ಚಾಂಗುವಿಗೆ ಹೋಗಿ ಬನ್ನಿ. ನಿತ್ಯದ ಎಲ್ಲ ಜಂಜಾಟಗಳಿಂದ ಮುಕ್ತರಾಗಿ ಚಾಂಗುವಿನ ಸ್ತಬ್ಧತೆಯಲ್ಲಿ ಕಳೆದುಹೋಗುವ ಅನುಭವ ಪಡೆದುಕೊಳ್ಳಿ.

– ಕೆ.ಎಸ್‌. ರವಿಕುಮಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ