– ರಾಘವೇಂದ್ರ ಅಡಿಗ ಎಚ್ಚೆನ್.
ಸಾಲಗಾರರ ಸಹಕಾರ ಸಂಘ ಚಿತ್ರಕ್ಕೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಕಂಠದಾನ, ಎಂ.ಎಸ್.ತ್ಯಾಗರಾಜ್ ಬರವಣಿಗೆ ಮತ್ತು ರಾಗ ಒದಗಿಸಿರುವ ಶೀರ್ಷಿಕೆ ಗೀತೆಯ ಅನಾವರಣ ಸಮಾರಂಭವು ಕಿಕ್ಕಿರಿದ ಎಂಎಂಬಿ ಲೆಗೆಸಿ ಹಾಲ್‌ದಲ್ಲಿ ಅದ್ದೂರಿಯಾಗಿ ನಡೆಯಿತು. ಜ್ಯೋತಿಷ್ ವಿದ್ವಾನ್ ಡಾ.ಶ್ರೀಧರ್ ಗುರೂಜಿ ಮತ್ತು ನಟಿ ಬೃಂದಾಆಚಾರ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಎನ್‌ಎಲ್‌ಎನ್‌ಎಸ್ ಎಂಟರ್ಟೈನರ್ಸ್ ಹಾಗೂ ಹವಿಶ್ ಸಿನಿ ಕ್ರಿಯೇಶನ್ಸ್ ಅಡಿಯಲ್ಲಿ ಕುಮರೇಶ್.ಎ ಮತ್ತು ಸುನೀಲ್‌ಕುಮಾರ್ (ಪಟ್ಟಣಗೆರೆ) ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರಾಜಣ್ಣ ಪುಟ್ಟೇನಹಳ್ಳಿ, ಚಂದ್ರು ಶಿರಾಳಕೊಪ್ಪ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ’ಪಂಟ್ರು’, ’ಗೆಳೆಯ’ ನಿರ್ದೇಶನ ಮಾಡಿರುವ ವಿಕ್ರಮ್ ಧನಂಜಯ್.ಆರ್ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಮೂರು ಚಿತ್ರಗಳಿಗೂ ನಿರ್ಮಾಪಕರು ಮತ್ತು ನಿರ್ದೇಶಕರು ಒಬ್ಬರೇ ಎಂಬುದು ವಿಶೇಷ.

ಸಾಲ ಕೊಡಿಸುವ ಕೆಂಪೆಗೌಡ, ದೊಡ್ಡ ಸಾಲಗಾರನಾಗಿ ಜಾಲಿ ಜಾಲಿ ಜಾಕ್, ಸಾಲ ಮಾಡಿ ವ್ಯಥೆ ಪಡುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಮತ್ತು ಪ್ರವೀಣ್‌ಕುಮಾರ್, ಪೂಜಾ ಪಾತ್ರದ ಪರಿಚಯ ಮಾಡಿಕೊಂಡರು. ತಾರಾಗಣದಲ್ಲಿ ರಂಗಾಯಣರಘು, ಹೊನ್ನವಳ್ಳಿಕೃಷ್ಣ, ಲಕ್ಷೀಸಿದ್ದಯ್ಯ ಮುಂತಾದವರು ನಟಿಸಿದ್ದಾರೆ.

ಐದು ಹಾಡುಗಳಿಗೆ ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಜೋಗಿಪ್ರೇಮ್, ನವೀನ್‌ಸಜ್ಜು ಹಾಗೂ ಎಂ.ಎಂ.ತ್ಯಾಗರಾಜ್ ಧ್ವನಿಯಾಗಿದ್ದಾರೆ. ಛಾಯಾಗ್ರಹಣ ಅನಿರುದ್ದ್, ಸಂಕಲನ ಗಣೇಶ್ ನಿರ್ಚಾಲ್-ಶೇಷಾಚಲ ಕುಲಕರ್ಣಿ ಅವರದಾಗಿದೆ. ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಸುಂದರ ತಾಣಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಪ್ರಾರಂಭದಲ್ಲಿ ಟೈಟಲ್ ನೋಂದಣಿ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ಸಕರಾತ್ಮಕ, ನಕರಾತ್ಮಕ ಪ್ರತಿಕ್ರ್ರಿಯೆಗಳು ಬಂದವು. ಇದನ್ನೆ ಬಂಡವಾಳವಾಗಿಸಿಕೊಂಡು ಒನ್ ಲೈನ್ ಎಳೆ ಸಿದ್ದಪಡಿಸಿಕೊಂಡೆ. ನಾಲ್ಕು ನಿರುದ್ಯೋಗಿ ಯುವಕರು ಕಾರಣ ಇಲ್ಲದೆ ಸಾಲ ಮಾಡುತ್ತಾರೆ. ನಂತರ ಬಡ್ಡ್ಡಿ ಕಟ್ಟಲು ಮತ್ತೆ ಸಾಲದ ಹಿಂದೆ ಹೋಗುತ್ತಾರೆ. ಕೊನೆಗೆ ಅಸಹಾಯಕ ಪರಿಸ್ಥಿತಿ ಬಂದಾಗ ನಮ್ಮಂತೆ ಸಾಲ ಮಾಡಿರುವವರನ್ನು ಒಗ್ಗೂಡಿಸಿ ಸಂಘ ಶುರು ಮಾಡಿ ಸರ್ಕಾರಕ್ಕೆ ಒಂದಷ್ಟು ಬೇಡಿಕೆ ಇಡುತ್ತಾರೆ. ಅದು ಏನು? ಸರ್ಕಾರವು ಯಾವ ರೀತಿ ಸ್ಪಂದನೆ ಕೊಡುತ್ತದೆ? ನೀವುಗಳು ಸಾಲ ತೀರಿಸಬೇಕು ಅಂದರೆ ಸಿನಿಮಾ ನೋಡಬೇಕು. ಅದೇ ರೀತಿ ನಮ್ಮಲ್ಲಿ ಸದಸ್ಯರಾದರೆ ಸಾಲ ತೀರಿಸೋ ಜವಬ್ದಾರಿ ನಮ್ಮದಾಗಿರುತ್ತೆ. ಎಲ್ಲಾ ಸನ್ನಿವೇಶಗಳು ಹಾಸ್ಯದಿಂದ ಕೂಡಿದೆ. ಶರಣ್ ಅವರೊಂದಿಗೆ ಒಂದು ಹಂತದ ಮಾತುಕತೆ ನಡೆದಿದೆ. ಅವರು ಹಸಿರು ನಿಶಾನೆ ಕೊಟ್ಟರೆ ಹಾಡನ್ನು ಶೂಟ್ ಮಾಡಲಾಗುವುದು. ಹಂತ ಹಂತವಾಗಿ ಪ್ರಮೋಷನ್ ಮಾಡುತ್ತಾ, ಜನವರಿಗೆ ತೆರೆಗೆ ತರಲು ಯೋಜನೆ ಹಾಕಲಾಗಿದೆ ಎಂದು ವಿಕ್ರಮ್ ಧನಂಜಯ್ ಮಾಹಿತಿ ನೀಡಿದರು.

ಪ್ರೇಮಂ ಪೂಜ್ಯಂ’ ಚಿತ್ರಕ್ಕೆ ನಾಯಕಿಯಾಗಲು, ಇಂದು ಈ ವೇದಿಕೆ ಮೇಲೆ ನಿಂತಿರಬೇಕಾದರೆ ಅದಕ್ಕೆ ಮೂಲ ಕರ್ತೃ ವಿಕ್ರಮ್ ಧನಂಜಯ್ ಎಂದು ಬೃಂದಾಆಚಾರ್ಯ ಸ್ಮರಿಸಿಕೊಂಡು, ನಾನಂತೂ ಸಂಘದ ಸದಸ್ಯೆ ಆಗಲಾರೆ ಎಂದು ನಗೆ ಚೆಲ್ಲಿದರು.
ಕಾಮಿಡಿ ಕಿಲಾಡಿಗಳು ಕಲಾವಿದರುಗಳಾದ ಶಿವರಾಜ್.ಕೆ.ಆರ್.ಪೇಟೆ, ದಿವ್ಯಶ್ರೀ ಮೋಹನ್, ಗೋವಿಂದೆಗೌಡ, ಮಡೆನೂರು ಮನು, ರೀಲ್ಸ್‌ದಲ್ಲಿ ಹೆಸರು ಮಾಡುತ್ತಿರು ಬಿಗ್ ಬಾಸ್‌ನ ಸೋನುಶ್ರೀನಿವಾಸಗೌಡ, ನಟ ಸನತ್, ನಟಿ ದಿವ್ಯಾಗೌಡ ಹಾಜರಿದ್ದು ತಂಡಕ್ಕೆ ಶುಭಹಾರೈಸಿದರು.
SONG LINK: https://youtu.be/37s0JbOinL4?si=_2cLNqzjQTMhmBl8




 
  
         
    




 
                
                
                
                
                
               