ಭಾರತೀಯ ಮಹಿಳಾ ಕ್ರಿಕೆಟ್‌ ಟೀಮಿನ ಕ್ಯಾಪ್ಟನ್‌ ಮಿಥಾಲಿ ರಾಜ್‌ ಈಗ ಎಂಥ ಸೆಲೆಬ್ರಿಟಿ ಎಂದರೆ ಅಂಥ ಒಬ್ಬ ಮಹಿಳಾ ಕ್ರಿಕೆಟರ್‌ನ್ನು ಕ್ರಿಕೆಟ್‌ ಪ್ರೇಮಿಗಳಿಗೆ ಹೊಸದಾಗಿ ಪರಿಚಯಿಸುವ ಅಗತ್ಯವೇ ಇಲ್ಲ. ಅಸಲಿಗೆ ಮಿಥಾಲಿ ಡ್ಯಾನ್ಸರ್‌ ಆಗಲು ಬಯಸಿದ್ದರು. ಆದರೆ 10 ವಯಸ್ಸಿನಲ್ಲೇ ಆಕೆ ಬ್ಯಾಟ್‌ ಹಿಡಿದಿದ್ದೇ ಬಂತು, ಮತ್ತೆ ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.

ಕ್ರಿಕೆಟ್‌ ಮೈದಾನದಲ್ಲಿ ಫೋರರ್‌ ಸಿಕ್ಸರ್‌ಗಳ ಮಳೆಗರೆಯುವ ಮಿಥಾಲಿಗೆ ಓದುವುದರಲ್ಲಿ ಹೆಚ್ಚು ಆಸಕ್ತಿ. ಆಕೆ ಎಲ್ಲೇ ಆಡಲಿಕ್ಕೆ ಹೋದರೂ, ಜೊತೆಗೆ ಒಂದು ಕಾದಂಬರಿ ಅಗತ್ಯ ಇರುತ್ತಿತ್ತು.

ಕ್ರಿಕೆಟ್‌ ಆಡುವ ಹವ್ಯಾಸ

ಮಿಥಾಲಿ ಹೇಳುತ್ತಾರೆ, “ಹಾಗೆ ನೋಡಿದರೆ ನಾನು 10 ವರ್ಷದವಳಾಗಿದ್ದಾಗಿನಿಂದಲೇ ಅಣ್ಣನ ಜೊತೆ ಕ್ರಿಕೆಟ್‌ ಆಡುತ್ತಿದ್ದೆ. ಆದರೆ 1991ರಲ್ಲಿ  ಸ್ಟೇಟ್‌ ಲೆವೆಲ್‌ನಲ್ಲಿ ಅಂಡರ್‌ 16 ಹಾಗೂ ಅಂಡರ್‌ 19 ಮ್ಯಾಚ್‌ಗಳನ್ನು ಆಡಿದೆ. ಆಗ ನನ್ನ ತಂದೆಗೂ ಮುಂದೆ ನಾನು ಇದನ್ನೇ ಪ್ರೊಫೆಶನ್‌ ಆಗಿ ಮುಂದುರಿಸುವುದು ಸರಿ ಅನ್ನಿಸಿತು. 1999ರಲ್ಲಿ ನಾನು ಮೊದಲ ಸಲ ಅಂತಾರಾಷ್ಟ್ರೀಯ ಮ್ಯಾಚ್‌ ಆಡಿದೆ, ಅದೂ ಇಂಗ್ಲೆಂಡ್‌ನಲ್ಲಿ! ಆಗ ನಾನು ಕೇವಲ 16 ವರ್ಷದವಳು.”

ಮಹಿಳಾ ಕ್ರಿಕೆಟ್‌ನ ತೆಂಡೂಲ್ಕರ್‌

ಮಹಿಳಾ ಕ್ರಿಕೆಟ್‌ನ ಕ್ರೀಡಾಪಟುವಾಗಿ ಒಂದು ದಿನದ ಮ್ಯಾಚುಗಳಲ್ಲಿ 6 ಸಾವಿರಕ್ಕೂ ಹೆಚ್ಚು ರನ್‌, 20 ಮ್ಯಾಚುಗಳಲ್ಲಿ 2 ಸಾವಿರಕ್ಕೂ ಹೆಚ್ಚು ರನ್‌ ಮಾಡಿರುವ ಮಿಥಾಲಿ, ಎಷ್ಟು ರೆಕಾರ್ಡ್‌ ಮಾಡಿದ್ದಾರೆಂದರೆ, ಇವರನ್ನು ಮಹಿಳಾ ಕ್ರಿಕೆಟ್‌ ತಂಡದ ತೆಂಡೂಲ್ಕರ್‌ ಎಂದೇ ಬಣ್ಣಿಸಲಾಗುತ್ತದೆ. ಈ ಕುರಿತಾಗಿ ಆಕೆ ಹೇಳುತ್ತಾರೆ, “ಯಾರಾದರೂ ಈ ರೀತಿ ಪ್ರಶಂಸಿಸಿದರೆ ನಿಜಕ್ಕೂ ಬಹಳ ಹೆಮ್ಮೆ ಎನಿಸುತ್ತದೆ. ಆದರೆ…. ಜನ ನನ್ನನ್ನು ಮಿಥಾಲಿ ರಾಜ್‌ ಎಂದೇ ಗುರುತಿಸಿದರೆ ನನಗೆ ಇನ್ನೂ ಹೆಚ್ಚು ಖುಷಿ! ಏಕೆಂದರೆ ಸಚಿನ್‌ರ ಜೊತೆ ನನ್ನನ್ನು ಹೋಲಿಸುವುದು ಅಷ್ಟು ಸರಿಯಲ್ಲವೇನೋ ಎನಿಸುತ್ತದೆ. ಅವರಿಗೆ ಯಾರೂ ಸಮನಲ್ಲ.”

ಬೇರೆ ಆಟಗಳ ಮೇಲೆ ಕ್ರಿಕೆಟ್‌ ಪ್ರಭಾವ

ಭಾರತದಲ್ಲಿ ಕ್ರಿಕೆಟ್‌ಗೆ ಸಿಕ್ಕಿರುವಷ್ಟು ಜನಪ್ರಿಯತೆ, ಇಲ್ಲೇ ಹುಟ್ಟಿ ಬೆಳೆದ ಇತರ ಆಟಗಳಿಗೆ ಸಿಕ್ಕಿಲ್ಲ ಎಂದೇ ಹೇಳಬೇಕು. ಆದರೆ ಆ ದೋಷವನ್ನು ಕೇವಲ ಕ್ರಿಕೆಟ್‌ ಮೇಲೆ ಹೇರುವುದು ಎಷ್ಟು ಸರಿ? ಇದಕ್ಕೆ ಮಿಥಾಲಿಯ ಉತ್ತರ, “ಯಾವುದೇ ಆಟ ಬೇರೆ ಆಟಕ್ಕೆ ಅಡ್ಡಿಯಾಗಲಾರದು. 1983ಕ್ಕೂ ಮೊದಲು ಕ್ರಿಕೆಟ್‌ ನಮ್ಮಲ್ಲಿ ಈಗಿರುವಷ್ಟು ಜನಪ್ರಿಯ ಆಗಿರಲಿಲ್ಲ. ಆದರೆ 1983ರಲ್ಲಿ ಕಪಿಲ್‌ ನಾಯಕತ್ವದಲ್ಲಿ ಭಾರತ ಮೊದಲ ಸಲ ವಿಶ್ವಕಪ್‌ ವಿಜೇತರೆನಿಸಿದಾಗ ಉತ್ತಮ ಮಾರ್ಕೆಟಿಂಗ್‌ ನಡೆಸಿತು. ನಮ್ಮ ದೇಶದಲ್ಲಿ ಇಂಥದೇ ಮಾರ್ಕೆಟಿಂಗ್‌ನ ಅಗತ್ಯ ಬೇರೆ ಆಟಗಳಿಗೂ ಇದ್ದೇ ಇದೆ.”

ಇವರು ಯಾರಿಂದ ಪ್ರಭಾವಿತರು?

ಮಿಥಾಲಿ ತಮ್ಮ ಯಶಸ್ಸಿನ ಶ್ರೇಯಸ್ಸನ್ನು ಹೆತ್ತವರು ಹಾಗೂ ಅಣ್ಣನಿಗೆ ಸಲ್ಲಿಸುತ್ತಾರೆ. ಆದರೆ ಸಕಾರಾತ್ಮಕ ವಿಚಾರದ ಬಗ್ಗೆ ಮಾತು ಬಂದಾಗ ಮಿಥಾಲಿ, “ನಾನು ಡ್ಯಾನ್ಸ್ ಕಲಿಯುತ್ತಿದ್ದಾಗ ನನ್ನ ಗುರು ಆನಂದಾ ಶಂಕರ್‌ ನನ್ನನ್ನು ಹೆಚ್ಚು ಪ್ರಭಾವಿತಗೊಳಿಸಿದ್ದಾರೆ. ಆಕೆ ಸದಾ ಪಾಸಿಟಿವ್‌ ಆಗಿಯೇ ಚಿಂತಿಸುತ್ತಿದ್ದರು. ಆಕೆಯ ಧೀಶಕ್ತಿ ನಿಜಕ್ಕೂ ಅತ್ಯದ್ಭುತ! ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ.”

ಎಲ್ಲಕ್ಕೂ ದೊಡ್ಡ ಚಾಲೆಂಜ್

ಮಹಿಳೆಯರಿಗೆ ತಮ್ಮದೇ ಐಡೆಂಟಿಟಿ ಹೊಂದಲು ಯಾವ ಯಾವ ತರಹದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ? ಇದಕ್ಕೆ ಮಿಥಾಲಿ ಹೇಳುತ್ತಾರೆ, “ಪುರುಷಪ್ರಧಾನ ಸಮಾಜದಲ್ಲಿ ಮಹಿಳೆಯರಿಗೆ ಎಷ್ಟೋ ತರಹದ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನನಗೂ ಸಾಕಷ್ಟು ಎಡರುತೊಡರುಗಳನ್ನು ಎದುರಿಸಬೇಕಾಯಿತು. ಹುಡುಗಿ ಆಗಿ ಕ್ರಿಕೆಟ್‌ ಆಡ್ತೀಯಾ? ಜನ ಏನೆಂದುಕೊಳ್ಳುತ್ತಾರೋ ಏನೋ? ಎಂದು ವ್ಯಂಗ್ಯವಾಡಿದವರೇ ಹೆಚ್ಚು. ಆದರೆ ವಿದೇಶಗಳಲ್ಲಿ ಜನ ಹುಡುಗಿಯರು ತಮ್ಮ ಕೆರಿಯರ್‌ ಆರಿಸಿಕೊಳ್ಳಲು ತುಂಬು ಮನದ ಪ್ರೋತ್ಸಾಹ ನೀಡುತ್ತಾರೆ. ಅವರು ಮುಂದುವರಿಯಲು ಅವಕಾಶ ಕಲ್ಪಿಸಿ, ಸಮರ್ಥನೆ ಸಹ ನೀಡುತ್ತಾರೆ.

ಸವಿ ಸವಿ ನೆನಪು

ಒಂದು ಘಟನೆ ನೆನೆಸಿಕೊಂಡು ಮಿಥಾಲಿ ನಸುನಗುತ್ತಾ ಹೇಳುತ್ತಾರೆ, “ಒಂದು ಸಲ ಮುಂಬೈನಲ್ಲಿ ಕ್ಯಾಂಪ್‌ ನಡೆಯುತ್ತಿತ್ತು. ನನ್ನ ಫ್ರೆಂಡ್ಸ್ ಜೊತೆ ನಾನು ಹೊರಗೆ ಸುತ್ತಾಡಲು ಹೊರಟಿದ್ದೆ. ಹೀಗೇ ದಿನಾ ನಡೆಯುತ್ತಿತ್ತು. ಹೀಗೆ 2 ಸಲ ಬರುವಾಗ ನಾವು ಲೇಟ್‌ ಆಗಿ ಕೋಚ್‌ ಬಳಿ ಬೈಸಿಕೊಂಡಿದ್ದೆವು. 3ನೇ ಸಲ ಹೋದಾಗ ಈ ಬಾರಿ ಲೇಟ್‌ ಆಗಲೇಬಾರದು ಎಂದುಕೊಂಡೆವು. ಬೇಗ ಬೇಗ ನಾವು ಓಡಿ ಬಂದು ಮೆಯ್ನ್ ಗೇಟ್‌ ತಲುಪುವಷ್ಟರಲ್ಲಿ ಅದು ಒಳಗಿನಿಂದ ಬಂದ್‌ ಆಗಿತ್ತು. ಬೈಸಿಕೊಳ್ಳಬಾರದು ಎಂದು ನಾನು ಸರಸರ ಗೇಟ್‌ ಹತ್ತಿ ಇನ್ನೇನು ದುಮುಕಬೇಕು, ಆಗ ನನ್ನ ಗೆಳತಿ ಬೀಗ ಹಾಕಿಲ್ಲ ಎಂದು ದಢಾರನೆ ಗೇಟ್‌ ತೆರದೇ ಬಿಟ್ಟಳು! ನಾನು ಧೊಪ್‌ ಎಂದು ಕೆಳಗೆ ಬಿದ್ದೆ. ಆ ಘಟನೆ ನೆನೆಸಿಕೊಂಡು ನಾವೆಲ್ಲ ಗೆಳತಿಯರು ಈಗಲೂ ನಗುತ್ತಿರುತ್ತೇವೆ.”

ಸೌಂದರ್ಯ ಎಂದರೆ…..

ಸೌಂದರ್ಯವನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಉತ್ತಮ ಅಂಗಾಂಗ ಹೊಂದಿರುವುದಷ್ಟೇ ಸೌಂದರ್ಯಕ್ಕೆ ಮಾನದಂಡವೇ? ಇದಕ್ಕೆ ಮಿಥಾಲಿ ಹೇಳುತ್ತಾರೆ, “ನೀವು ಸೌಂದರ್ಯ ಎಂದು ನಿಮ್ಮ ದೃಷ್ಟಿಯಿಂದ ಹೇಗೆ ವ್ಯಾಖ್ಯಾನಿಸುತ್ತೀರಿ ಎನ್ನುವುದರ ಮೇಲೆ ಇದು ನಿಂತಿದೆ. ಯಾವ ರೀತಿ ಡ್ರೆಸ್‌ ಮಾಡುತ್ತೀರಿ, ಬೇರೆಯವರ ಜೊತೆ ನಿಮ್ಮ ಒಡನಾಟ ಹೇಗಿರುತ್ತದೆ, ಜನರ ಜೊತೆ ಹೇಗೆ ಮಾತುಕಥೆ ನಡೆಸುತ್ತೀರಿ, ಒಟ್ಟಾರೆ ನಿಮ್ಮ ವ್ಯಕ್ತಿತ್ವದ ಪ್ರಭಾವ ಇತರರ ಮೇಲೆ ಹೇಗಿದೆ…. ಇತ್ಯಾದಿ ಎಲ್ಲವನ್ನೂ ಒಗ್ಗೂಡಿಸಿ ಯಶಸ್ವಿಯಾದವರನ್ನೇ ಸುಂದರ ವ್ಯಕ್ತಿತ್ವದವರು ಎನ್ನಬೇಕು.”

ಕ್ರೀಡಾಪಟು ಆಗಿರದಿದ್ದರೆ

ಕೆರಿಯರ್‌ ಆಯ್ಕೆ ಕುರಿತಾಗಿ ಮಿಥಾಲಿ ಹೇಳುತ್ತಾರೆ, “ನಾನಂತೂ ಕ್ರಿಕೆಟರ್‌ ಆಗಲೇ ಬೇಕೆಂದು ಮೊದಲಿನಿಂದಲೇ ನಿರ್ಧರಿಸಿದ್ದೆ. ಅಕಸ್ಮಾತ್‌ ಹಾಗಾಗಿರದಿದ್ದಲ್ಲಿ ನಾನು ಕ್ಲಾಸಿಕ್‌ ಕಥಕ್‌ ಡ್ಯಾನ್ಸರ್‌ ಅಥವಾ ಸಿವಿಲ್‌ ಸರ್ವಿಸಸ್‌ನಲ್ಲಿ ಸೇರಿರುತ್ತಿದ್ದೆ!”

– ಪ್ರತಿನಿಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ