ಮಹಿಳಾ ಹಾಕಿಯ ಬಗ್ಗೆ ಪ್ರಸ್ತಾಪ ಆಗುತ್ತಿದ್ದಂತೆಯೇ ಶಾರೂಖ್ ಖಾನ್‌ರ `ಚಕ್‌ದೇ ಇಂಡಿಯಾ' ಕಣ್ಮುಂದೆ ಬರುತ್ತದೆ. ಈ ರಾಷ್ಟ್ರೀಯ ಕ್ರೀಡೆಯಲ್ಲಿ ಫೆಡರೇಶನ್‌ನವರ ಆಟ ಹೇಗಿರುತ್ತದೆ ಎಂಬುದನ್ನು ಬಿಂಬಿಸಲಾಗಿದೆ. ಆ ಹುಡುಗಿಯರನ್ನು ಕ್ರೀಡಾಪಟುಗಳೆಂದೇ ಭಾವಿಸುವುದಿಲ್ಲ. ಅವರು ತಮ್ಮ ಆಟದ ಮೆರುಗನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಜೊತೆಗೆ ತಮ್ಮನ್ನು ದೂಷಿಸುತ್ತಾ ದೂರ ಇಡಲು ಪ್ರಯತ್ನಿಸುವ ಸಮಾಜವನ್ನೂ ಎದುರಿಸಬೇಕಾಗಿ ಬರುತ್ತದೆ. ಇಷ್ಟೆಲ್ಲದರ ಹೊರತಾಗಿ ಹಾಕಿಯನ್ನೇ ಉಸಿರಾಗಿಸಿಕೊಂಡ ಹುಡುಗಿಯರು ದೇಶವಿದೇಶಗಳಲ್ಲೂ ತಮ್ಮ ಕಠೋರ ಪರಿಶ್ರಮದಿಂದ ಹೆಸರು ಗಳಿಸುತ್ತಿದ್ದಾರೆ.
ಅಂತಹದೇ ಒಬ್ಬ ಸಾಹಸಿ ಹುಡುಗಿ ಮೋನಿಕಾ ಮಲಿಕ್. 2014ರ ಇಂಚೋನ್ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಆ ಬಳಿಕ 2018ರ ಜಕಾರ್ತಾ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. 2017ರಲ್ಲಿ ಜಪಾನಿನಲ್ಲಿ ನಡೆದ ಏಷ್ಯಾ ಕಪ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದರು.
ಹರಿಯಾಣದ ಸೋನಿಪತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನವೆಂಬರ್ 5, 1993ರಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಮೋನಿಕಾ ಈ ಕ್ರೀಡೆಗೆ ಬರುವ ದಾರಿ ಅಷ್ಟೇನೂ ಸುಗಮವಾಗಿರಲಿಲ್ಲ.
ಕಷ್ಟದ ದಾರಿ
ಈ ಬಗ್ಗೆ ಅವರಿಂದಲೇ ಕೇಳಿ, ``ಈ ಹಂತಕ್ಕೆ ತಲುಪಲು ನಾನು ಬಹಳಷ್ಟು ಪರಿಶ್ರಮ ಪಟ್ಟಿರುವೆ. 2006-07ರಲ್ಲಿ ನಾನು ಅಕಾಡೆಮಿಗೆ ಸೇರ್ಪಡೆಯಾದೆ. 2009ರಲ್ಲಿ ಜೂನಿಯರ್ ಹಾಕಿ ತಂಡವನ್ನು ಪ್ರತಿನಿಧಿಸಿದೆ. ಈ ಅವಧಿಯಲ್ಲಿ ನಾನು ಕ್ರೀಡೆಯ ಸ್ಕಿಲ್ ಬಗ್ಗೆ ಹೆಚ್ಚಿನ ಗಮನಕೊಟ್ಟೆ. `ಅರ್ಜುನ' ಹಾಗೂ `ದ್ರೋಣಾಚಾರ್ಯ' ಪ್ರಶಸ್ತಿ ಪುರಸ್ಕೃತ ರಾಜೇಂದರ್ ಸಿಂಗ್ ಪಟ್ಟ ಪರಿಶ್ರಮದ ಫಲವಾಗಿ ನಾನಿಂದು ಈ ಸ್ಥಿತಿಗೆ ತಲುಪಿರುವೆ. ಪುರುಷ ಹಾಕಿ ತಂಡದ ಧನರಾಜ್ ಪಿಳ್ಳೈ ಹಾಗೂ ದೀಪಕ್ ಠಾಕೂರ್‌ರವರ ಆಟದಿಂದ ಬಹಳಷ್ಟನ್ನು ಕಲಿತುಕೊಂಡೆ.``
ನನ್ನ ಮೊದಲಿನ ದಿನಗಳ ಬಗ್ಗೆ ಹೇಳಬೇಕೆಂದರೆ, ಪ್ರ್ಯಾಕ್ಟೀಸ್‌ನ ಕಾರಣದಿಂದ ನಾನು ರಾತ್ರಿ ತಡವಾಗಿ ಮನೆಗೆ ತಲುಪುತ್ತಿದ್ದೆ. ಆಗ ನಾನು ಚಂಡೀಗರ್ ನಲ್ಲಿ ಸೈಕಲ್ ಮುಖಾಂತರ ಅಕಾಡೆಮಿಗೆ ಹೋಗಿ ಬರುತ್ತಿದ್ದೆ. ಅವು ಅತ್ಯಂತ ಕಷ್ಟದ ದಿನಗಳು. ಆದರೆ ನನಗೆ ಹಾಕಿ ಆಟ ಆಡುವುದು ಎಷ್ಟು ಇಷ್ಟ ಆಗುತ್ತಿತ್ತೆಂದರೆ ನಾನು ಆ ಅಡೆತಡೆಗಳ ಬಗ್ಗೆ ಹೆಚ್ಚು ಗಮನಕೊಡಲು ಹೋಗುತ್ತಿರಲಿಲ್ಲ.
``2009ರಲ್ಲಿ ನಾನು ಜೂನಿಯರ್ ಟೀಮಿಗೆ ಆಯ್ಕೆಯಾದೆ. ಆಗ ನನಗಾದ ಖುಷಿ ಅಷ್ಟಿಷ್ಟಲ್ಲ. ಆ ಬಳಿಕ ನನ್ನ ಸಂಪೂರ್ಣ ಗಮನ ಈ ಕ್ರೀಡೆಯ ಬಗ್ಗೆಯೇ ಇತ್ತು. 2011ರಲ್ಲಿ ನಾನು ಸೀನಿಯರ್ ಟೀಮಿನಲ್ಲಿ ಆಯ್ಕೆಯಾದೆ.''
ಅಪ್ಪನ ಬೆಂಬಲ
ಈಗಂತೂ ಹುಡುಗಿಯರು ಪ್ರತಿಯೊಂದು ಕ್ರೀಡೆಯಲ್ಲೂ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. `ನಿಮ್ಮ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತು?' ಎಂಬ ಪ್ರಶ್ನೆಗೆ ಮೋನಿಕಾ ಹೀಗೆ ಹೇಳಿದರು, ``ಆಗ ಹರಿಯಾಣ ರಾಜ್ಯದಲ್ಲಿ ಹುಡುಗಿಯರ ಆಟಗಳ ಬಗ್ಗೆ ಅಷ್ಟೊಂದು ಗಮನ ಕೊಡಲಾಗುತ್ತಿರಲಿಲ್ಲ. ಹುಡುಗಿ ಬೆಳೆದು ದೊಡ್ಡವಳಾದಳೆಂದರೆ, ಅವಳಿಗೆ ಮದುವೆ ಮಾಡಿ ಕಳಿಸಿಬಿಡುವುದೇ ಅವರ ದೊಡ್ಡ ಚಿಂತೆಯಾಗಿರುತ್ತಿತ್ತು. ಆದರೆ ಇದು ಬಹು ದೊಡ್ಡ ತಪ್ಪು ಯೋಚನೆಯಾಗಿತ್ತು. ನಾನು ಹೇಳುವುದಿಷ್ಟೆ, ನಿಮ್ಮ ಮನೆಯಲ್ಲಿ ಹುಡುಗಿಯೊಬ್ಬಳು ಇದ್ದರೆ ಅವಳ ಮದುವೆ ಮಾಡಿ ಮುಗಿಸುವುದೇ ನಿಮ್ಮ ಕರ್ತವ್ಯವೆಂದು ಭಾವಿಸಬೇಡಿ. ಹುಡುಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಇಚ್ಛೆಪಟ್ಟರೆ ಅವಳಿಗೆ ಪೋತ್ಸಾಹ ಕೊಡಿ. ಓದಲು ಇಷ್ಟಪಟ್ಟರೆ ಸಾಕಷ್ಟು ಓದಿಸಿ.