ಒಂದೆಡೆ ತೋರಿಕೆಯ ನಾಟಕ, ಇನ್ನೊಂದೆಡೆ ಹೆದರಿಕೆಯ ಶ್ರದ್ಧೆ. ಇದೆಲ್ಲ ಒಂಥರಾ ಸ್ಟೀರಿಯೊ ಟೈಪ್‌. ಇದು ನಮ್ಮ ವಾಸ್ತವದ ಕನ್ನಡಿ. ನಮ್ಮ ಸಮಾಜ ಧರ್ಮಾಂಧತೆಯ ಕಾರಣದಿಂದ ಪೂಜಾರಿ, ಪುರೋಹಿತರು ಜಾತ್ರೆ ಉತ್ಸದ ನೆಪವೊಡ್ಡಿ ನಾನಾ ಪ್ರಕಾರದ ಮೂಢನಂಬಿಕೆಗಳನ್ನು ಪಸರಿಸುವ ಕೆಲಸ ಮಾಡುತ್ತಾರೆ. ಅವುಗಳ ಹಿಂದಿನ ವಾಸ್ತವವನ್ನು ಮರೆಮಾಚಿ ಬಗೆಬಗೆಯ ಕರ್ಮಕಾಂಡಗಳನ್ನು ಅದಕ್ಕೆ ಪೋಣಿಸಿ ಜನರ ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾರೆ.

ಶುಭ ಅಂದರೆ ಒಳ್ಳೆಯದಾಗಬೇಕೆನ್ನುವ ಅಪೇಕ್ಷೆ, ಅನಿಷ್ಟ ಆಗುತ್ತದೆಂಬ ಸಂದೇಹ, ಅವನ್ನು ಪಾಲಿಸಲೇಬೇಕಾದ ವಿವಶತೆಯಿಂದ ಜನಸಾಮಾನ್ಯರು ಭಯಭೀತರಾಗಿ ಮೂಢನಂಬಿಕೆಯನ್ನು ತಮ್ಮ ತಲೆಯಲ್ಲಿ ತುಂಬಿಸಿಕೊಳ್ಳುತ್ತಾ ಹೋದರು. ನಮ್ಮ ಧಾರ್ಮಿಕ ಗ್ರಂಥಗಳು ಕೂಡ ಇದೇ ವಿಷಯವನ್ನು ಹೆಚ್ಚೆಚ್ಚು ಒತ್ತಿ ಹೇಳಿವೆ. ಒಪ್ಪದೇ ಹೋದರೆ ನಾಶವಾಗಿ ಹೋಗುತ್ತೀಯಾ ಎಂದು ಎಚ್ಚರಿಕೆ ಕೂಡ ಕೊಡುತ್ತವೆ.

(ಭಾ.ಗೀತಾ ಶ್ಲೋಕ 18/58) ಅಥಚೇತ್ವಮಹಂಕಾರಾನ್ನ ಶ್ರೇಷ್ಯಸಿ ವಿನಂಕ್ಷ್ಯಾರಿ ಅಂದರೆ ಅಹಂಕಾರದ ಕಾರಣದಿಂದ ನೀನು ಏನನ್ನು ಆಲಿಸದೆ ಇದ್ದರೆ ಮುಂದೆ ನೀನು ಸಂಪೂರ್ಣವಾಗಿ ನಾಶವಾಗಿ ಹೋಗುವೆ.

(ಭಾ.ಗೀತಾ ಶ್ಲೋಕ 18/67)ನ ಚಾಶುಶ್ರೂಷಿ ವಾತ್ಯಂ ನ ಚ ಮಾಂ ಯೋ ಭ್ಯಸೂಯತಿ ಅಂದರೆ ಅವನಿಗೆ (ದೇವರು) ಅದನ್ನು (ಜ್ಞಾನ) ನೀನೆಂದೂ ಹೀಗಳೆಯಬಾರದು ಹಾಗೂ ಭಗವಂತನನ್ನು ನಿಂದಿಸುವವರನ್ನು ಸಮರ್ಥಿಸಬಾರದು.

(ಭಾ.ಗೀತಾ ಶ್ಲೋಕ 18/66) ಸರ್ಧರ್ಮಾನ್ಪರಿತ್ಯಜ್ಯ ಮಾಮೆಕಂ ಶರಣಂ ಅಹಂ ತ್ವಾ ಸರ್ ಪಾಪೇಶ್ಯೋ ಮೋಕ್ಷಾಯಿಕ್ಷಾಮಿ ಮಾ ಶುಚಃ

ಅಂದರೆ ಯಾವಾಗ ಧರ್ಮಕರ್ಮ (ಲೋಕಧರ್ಮ ಅಥವಾ ಲೋಕ ವ್ಯವಹಾರ ಎಂಬುದು ನಾನಾ ಸಂಬಂಧಗಳ ಮಾಧ್ಯಮದಿಂದ ನಿರ್ಮಿತವಾಗಿದೆ)ನ್ನು ತೊರೆದು ನೀನು ನನಗೆ ಶರಣಾಗುವೆಯೋ, ಆಗ ನಾನು ನಿನ್ನನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುವೆ, ದುಃಖಿಸಬೇಡ.

ಇದೆಲ್ಲ ಏನು?

ಒಂದು ವೇಳೆ ದೇವರು ಇದ್ದದ್ದೇ ಆಗಿದ್ದರೆ, ಮಹಾಶಕ್ತಿಶಾಲಿ ಆಗಿದ್ದರೆ, ಅವನಿಗೆ ಎಲ್ಲವನ್ನು ಎಲ್ಲರಿಗೂ ಹೇಳುವ ಅವಶ್ಯಕತೆಯಾದರೂ ಏನಿತ್ತು? ಅವನು ತನ್ನ ವಚನಗಳನ್ನು, ಶ್ಲೋಕಗಳನ್ನು ಬೇರೆಬೇರೆ ಭಾಷೆಗಳಲ್ಲಿ ಏಕೆ ಬರೆಸಿದ? ಕಂಪ್ಯೂಟರ್‌ ಸಾಫ್ಟ್ ವೇರ್‌ನ ಹಾಗೆ ಅವನ ಬಳಿ ಸದಾ ಜ್ಞಾನ ವಿಜ್ಞಾನ ಇದ್ದೇ ಇರುತ್ತದೆ. ಹಾಗಾದರೆ ಕಾಗದಗಳಲ್ಲಿ, ಕಲ್ಲುಗಳ ಮೇಲೆ ಕೊರೆಸುವ ಅಗತ್ಯ ಏನಿತ್ತು? ಯಾರು ಇದನ್ನು ಒಪ್ಪುದಿಲ್ಲ ಅವರ ಎದುರು ಈ ಶ್ಲೋಕಗಳನ್ನು ಓದಿ ಹೇಳಲು ಏಕೆ ನಿರಾಕರಿಸಿದ? ಆ ಶ್ಲೋಕಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಅವರು ಪಾವನರಾಗಬೇಕಿತ್ತು. ಒಂದು ವಿಷಯ ಸ್ಪಷ್ಟ. ಅವರು ತರ್ಕಬದ್ಧ ಉತ್ತರ ಕೇಳುತ್ತಾರೆ, ಅದಕ್ಕೆ ಇವರ ಬಳಿ ಯಾವುದೇ ಉತ್ತರ ಇರುವುದಿಲ್ಲ. ಇದರಿಂದ ಇವರ ಬಣ್ಣ ಬಯಲಾಗುತ್ತಿತ್ತು. ಸತ್ಯ ಹೊರಬರುತ್ತಿತ್ತು. ಸತ್ಯವನ್ನು ವಾಸ್ತವವನ್ನು ನಿರಾಕರಿಸುವುದು, ತರ್ಕವಿಲ್ಲದೆ ಯಾವುದನ್ನಾದರೂ ಒಪ್ಪುವುದು, ಒಪ್ಪಿಸುವುದು ಹೀಗೆಯೇ ಶುರುವಾಗುತ್ತದೆ. ಧರ್ಮದ ಸುಳಿಗೆ ಸಿಕ್ಕ ಮನಸ್ಸು ದುರ್ಬಲವಾಗುತ್ತ ಹೋಗುತ್ತದೆ. ಈ ಭೀತಿಯಿಂದ ಹೊಸ ಹೊಸ ಮೂಢನಂಬಿಕೆಗಳು ಜನ್ಮ ತಳೆಯುತ್ತ ಹೋದವು ಹಾಗೂ ಮೂಢನಂಬಿಕೆಗೆ ತುತ್ತಾಗುವವರ ಸಂಖ್ಯೆ ಹೆಚ್ತುತ್ತಾ ಹೋಯಿತು.

ಒಂದೇ ವಿಷಯ ಮನಸ್ಸಿನ ಆಳದಲ್ಲಿ ಕುಳಿತುಬಿಟ್ಟಿತು. ಯಾವುದೇ ತರ್ಕವಿಲ್ಲದೆ ಹೀಗೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಏನೂ ಮಾಡದೇ ಇದ್ದರೆ ಕೆಟ್ಟದಾಗುತ್ತದೆ. ಅದೇ ರೀತಿ ನಮ್ಮ ಹಾಗೂ ಇತರರ ಕ್ರಿಯಾಕಲಾಪಗಳಿಂದ ಕೆಟ್ಟದ್ದಾಗಬಹುದು. ಹೀಗೆ ಶುರುವಾಯಿತು ಮೂಢನಂಬಿಕೆಗಳ ಸರಣಿ. ಕ್ರಿಕೆಟ್‌ನಲ್ಲಿ ಗೆದ್ದಿದ್ದಕ್ಕಾಗಿಯೊ, ಒಲಿಂಪಿಕ್‌ ಪದಕ ಪಡೆದದ್ದಕ್ಕಾಗಿಯೋ, ಮುಖಂಡನೊಬ್ಬ ಚುನಾವಣೆಯಲ್ಲಿ ಗೆದ್ದದ್ದಕ್ಕಾಗಿಯೋ ಹೋಮ ಹವನ ಮಾಡಲಾರಂಭಿಸಿದರು. ಅದೆಲ್ಲ ಆಗಬಹುದಾದರೆ, ಕೊಲೆ, ಬಲಾತ್ಕಾರ, ಕಳ್ಳತನ, ಬೆಂಕಿ ಅನಾಹುತಗಳನ್ನು ತಡೆಯಲು ಯಾಕೆ ಯಾರೊಬ್ಬರೂ ಹವನ ಮಾಡುವುದಿಲ್ಲ? ಇದು ವಿಚಾರ ಮಾಡುವಂತಹ ಮಾತು.

ತೋರಿಕೆಯ ನಾಟಕ

ಬೆಕ್ಕು ಒಂದು ಸಲ ಅಡ್ಡ ಬಂದರೆ, ಅದರಿಂದ ಕೆಟ್ಟದ್ದು ಆಗಿಬಿಟ್ಟರೆ ಅಶುಭ ಎನ್ನುವುದು ಖಾತ್ರಿ ಆಯಿತು. ಎರಡನೇ ಸಲ ಅದು ಮರುಕಳಿಸಿದರೆ ಆ ನಂಬಿಕೆ ಇನ್ನಷ್ಟು ಬಲವಾಯಿತು. ಮೂರನೇ ಸಲ ಘಟಿಸಿದರೆ ಅದು ಮನಸ್ಸಿನಲ್ಲಿ ಮೂಢನಂಬಿಕೆಯಾಗಿ ಪರಿವರ್ತನೆಯಾಯಿತು. ಮನಸ್ಸಿನಲ್ಲಿ ಹೆದರಿಕೆ ಎಷ್ಟೊಂದು ಆಳವಾಗಿ ಬೇರೂರಿತೆಂದರೆ, ದಾರಿಯನ್ನೇ ಬದಲಿಸಬೇಕಾಗಿ ಬಂತು. ಇಲ್ಲಿ ಬೇರೆ ಯಾರಾದರೂ ಹೋಗುವುದನ್ನು ಕಾಯುತ್ತಾ ಕುಳಿತುಕೊಳ್ಳಬೇಕಾಗಿ ಬರುತ್ತದೆ. ಮನಸ್ಸಿನಲ್ಲಿ ಎಷ್ಟೊಂದು ಗಾಢವಾಗಿ ಕುಳಿತುಬಿಟ್ಟಿತೆಂದರೆ, ಅದರಿಂದ ಒಳ್ಳೆಯದಾಯಿತೊ ಅಥವಾ ಕೆಟ್ಟದಾಯಿತೊ ಎನ್ನುವುದರ ಕಡೆ ಗಮನವೇ ಹೋಗುವುದಿಲ್ಲ. ನಮ್ಮ ಹೆದರಿಕೆಯನ್ನು ಮನೆಯವರ ಮೇಲೆ ಹಾಗೂ ಇತರರ ಮೇಲೂ ಹೇರುತ್ತಾ ಹೋದೆವು. ಒಬ್ಬರಿಂದ ಇನ್ನೊಬ್ಬರಿಗೆ, ಅವರಿಂದ ಮತ್ತೊಬ್ಬರಿಗೆ ಹೀಗೆ ಬಾಯಿಂದ ಬಾಯಿಗೆ ಹರಡುತ್ತ ಎಲ್ಲೆಡೆ ಪಸರಿಸಿತು. ಧಾರ್ಮಿಕವಾದಿಗಳ ಸಂಖ್ಯೆ ಎಷ್ಟೊಂದು ಪ್ರಮಾಣದಲ್ಲಿ ಹೆಚ್ಚುತ್ತ ಹೋಯಿತೋ, ಅದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮೂಢನಂಬಿಕೆ ಮತ್ತು ಅದನ್ನು ನಂಬುವ ಮೂಢರ ಸಂಖ್ಯೆ ಹೆಚ್ಚುತ್ತ ಹೋಯಿತು. ಹೀಗಾಗಿ ಎಲ್ಲಕ್ಕೂ ಮೊದಲು ಧರ್ಮ, ಎರಡನೆಯದು ವ್ಯಕ್ತಿಯೊಬ್ಬನ ದುರ್ಬಲ ಮನಸ್ಸು ಇದಕ್ಕೆಲ್ಲ ಕಾರಣ. ಇದರ ಪರಿಣಾಮ ಎಂಬಂತೆ ಮೂಢನಂಬಿಕೆಯುಳ್ಳವರು ಸತ್ಯವನ್ನು, ವಾಸ್ತವವನ್ನು ಸ್ಪಷ್ಟವಾಗಿ ನಿರಾಕರಿಸಿದರು.

ಮೂರನೇ ಕಾರಣವೆಂದರೆ, ತೋರಿಕೆಯ ನಾಟಕ. ಕೆಲವೊಂದು ಜನರು ಧಾರ್ಮಿಕ ವಿಧಿವಿಧಾನಗಳಲ್ಲಿ ಮಗ್ನರಾಗಿದ್ದುಕೊಂಡು ತಾವು ಅತಿಯಾದ ಧಾರ್ಮಿಕವಾದಿ ಎಂದು ತೋರಿಸಿಕೊಳ್ಳುತ್ತಾರೆ. ಧಾರ್ಮಿಕವಾದಿಗಳು ಎಂದಾಕ್ಷಣ ಜನ ತಮ್ಮನ್ನು ಸತ್ಯವಂತರು, ಸಹೃದಯಿಗಳು ಎಂದು ಭಾವಿಸುತ್ತಾರೆ ಎಂಬ ಅಭಿಪ್ರಾಯ ಅವರದ್ದಾಗಿರುತ್ತದೆ. ದಾನಧರ್ಮದ ಹೆಸರಿನಲ್ಲಿ ಅವರು ಎಂಥದೇ ದುಷ್ಕೃತ್ಯದಲ್ಲಿ ನಿರತರಾದರೂ ತಮ್ಮನ್ನು ಯಾರೂ ಗಮನಿಸುವುದಿಲ್ಲ, ದೂಷಿಸುವುದಿಲ್ಲ ಎಂದು ಅವರು ಭಾವಿಸಿರುತ್ತಾರೆ. ಜನರಿಗೆ ಹಾಗೂ ಕಾನೂನಿನ ಕಣ್ಣಿಗೆ ಮಣ್ಣೆರಚುತ್ತ ಅಪಾರ ಸಂಪತ್ತು ಹಣ ಗಳಿಸಿ, ಹೆಸರು ಮಾಡುತ್ತಾರೆ.

ಪರಂಪರೆಯ ನೆಪ

ವಿವೇಕವನ್ನು ಬದಿಗೊತ್ತಿದರೆ ಜೀವನದಲ್ಲಿ ಮತ್ತೇನು ಬೇಕು? ಎಲ್ಲರೂ ಅದೇ ಮಂತ್ರವನ್ನು ಪಠಿಸುವವರಾಗುತ್ತಾರೆ. ಭ್ರಷ್ಟ ಮುಖಂಡರು, ತೆರಿಗೆಗಳ್ಳತನ ಮಾಡುವ ದೊಡ್ಡ ದೊಡ್ಡ ಸಿನಿಮಾ ತಾರೆಯರು, ಮೀಡಿಯಾದೆದುರು, ದೇವಸ್ಥಾನಗಳಲ್ಲಿ, ಆಸ್ಪತ್ರೆಯಲ್ಲಿ ತಾವು ಧಾರ್ಮಿಕವಾದಿಗಳು, ನಮಗೆ ಸದಾ ದೇವರ ಆಶೀರ್ವಾದ ಇರುತ್ತದೆ ಎಂದು ಧಾರ್ಮಿಕ ಸೋಗಿನಲ್ಲಿ ಹೇಳುತ್ತಾರೆ. ಇವೆಲ್ಲ ಕಣ್ಣು ತೆರೆಯಲು ಸಾಕಾಗುವುದಿಲ್ಲವೋ?  ವಾಸ್ತವ ಸಂಗತಿ ಏನೆಂದರೆ, ನಾವೆಲ್ಲ ಕಣ್ಣುಮುಚ್ಚಿ ಕುಳಿತಿರುವುದಿಲ್ಲ. ಎಲ್ಲ ಗೊತ್ತಿದ್ದೂ ಕಣ್ಣು ಮುಚ್ಚಿ ಕುಳಿತಿದ್ದೇವೆ. ನಿದ್ದೆ ಮಾಡುವನನ್ನು ಎಬ್ಬಿಸಬಹುದು. ಆದರೆ ನಿದ್ದೆಯ ನಾಟಕ ಮಾಡುವವರನ್ನು ಎಬ್ಬಿಸುವುದು ಮಹಾ ಕಷ್ಟ.

ನಾಲ್ಕನೇ ಕಾರಣವೇನೆಂದರೆ, ಹೇಳಿದ್ದನ್ನೇ ಹೇಳಿ ಅದನ್ನೇ ಸತ್ಯ ಎಂದು ನಂಬಿಸುವವರು ಹಾಗೂ ಪರಂಪರೆಯ ನೆಪ ಹೇಳುವವರು. ನಮ್ಮ ಪೂರ್ವಜರು ಹಾಗೂ ದೊಡ್ಡವರು ಏನನ್ನು ಮಾಡುತ್ತ ಬಂದಿದ್ದರೊ, ಅದನ್ನೇ ನಾವು ಕಣ್ಣು ಮುಚ್ಚಿಕೊಂಡು ಮಾಡುತ್ತ ಬರುತ್ತಿದ್ದೇವೆ. ಹೀಗೆ ಮಾಡುವುದನ್ನು ನಾವು ನಮ್ಮ ಕರ್ತವ್ಯ ಎಂದು ನಂಬಿದ್ದೇವೆ. ಅವರ ಬಗೆಗಿನ ಪ್ರೀತಿ ಆದರಭಾವನೆ ತೋರಿಸುವುದೆಂದು ತಿಳಿಯುತ್ತೇವೆ. ಅದರ ಬಗ್ಗೆ ನಾವು ಯಾವುದೇ ತರ್ಕ ಮಾಡಲು ಹೋಗುವುದಿಲ್ಲ. ಕೇವಲ ಅದನ್ನು ಅನುಸರಿಸುತ್ತ ಬರುತ್ತಿದ್ದೇವೆ. ಅದರಿಂದ ನಮಗೆ ಸಂತೃಪ್ತಿ ದೊರೆತರೆ, ಖುಷಿ ಎನಿಸತೊಡಗಿದರೆ ಅದರ ಬಗ್ಗೆ ವಿಶ್ವಾಸ ಉಂಟಾಗುತ್ತದೆ. ಮುಂದೆ ಅದೇ ಒಂದು ಪರಂಪರೆಯಾಗುತ್ತದೆ. ಈಗ ನಮ್ಮ ಮನೆ ಸುರಕ್ಷಿತವಾಗಿದೆ ಎಂದುಕೊಂಡು ಮನೆಗೆ ಬೀಗ ಜಡಿದು ಹೊರಗೆ ಹೊರಡುತ್ತೇವೆ. ಆ ಕರ್ಮಕಾಂಡ, ಆ ಮೂಢನಂಬಿಕೆಗಳನ್ನು ಪಾಲಿಸುತ್ತ, ಅವನ್ನು ಅನುಸರಿಸುತ್ತ ಭವಿಷ್ಯದ ಬಗ್ಗೆ ಸುರಕ್ಷತೆಯ ಅನುಭವ ಮಾಡಿಕೊಳ್ಳುತ್ತೇವೆ. ನಮ್ಮ ಹಿರಿಯರು ಏನನ್ನು ಮಾಡುತ್ತ ಬಂದಿದ್ದರೊ ಅದರ ಬಗ್ಗೆ ಹಿಂದೆ ಮುಂದೆ ಯೋಚಿಸದೆ ಹಾಗೆಯೇ ಮಾಡುತ್ತ ಬಂದಿದ್ದೇವೆ.

5ನೇ ಕಾರಣ ಅನಕ್ಷರತೆ, ಅಜ್ಞಾನ, ಇದು ಕೂಡ ಒಂದು ದೊಡ್ಡ ಕಾರಣ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಬಂದಿದೆ. ಕೆಲವರ ಮೆದುಳಿನಲ್ಲಿ ಏನು, ಏಕೆ ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ. ವ್ಯಕ್ತಿಯೊಬ್ಬ ಮೊದಲು ಕಾರಣ ಅರಿಯಲು ಯತ್ನಿಸುತ್ತಾನೆ. ಬಳಿಕ ಅದನ್ನು ನಂಬಬೇಕೊ ಬಿಡಬೇಕೊ ಎಂದು ಯೋಚಿಸುತ್ತಾನೆ. ಆದರೆ ಈಗಲೂ ಕೂಡ ಬಹಳಷ್ಟು ಜನರು ಕಲಿಯುವುದರಿಂದ ವಂಚಿತರಾಗಿದ್ದಾರೆ. ಮೊಬೈಲು, ಕಾರು ಉಪಯೋಗಿಸುತ್ತಾರೆ. ಆದರೆ ಸ್ವಾಮಿಗಳ ಚಮತ್ಕಾರದ ಅಭಿಲಾಷೆಯಿಂದ ಅವರ ಬಳಿ ಹೋಗುವುದನ್ನು ಬಿಡುವುದಿಲ್ಲ. ಅವರ ಕಪಿಮುಷ್ಟಿಗೆ ಸಿಲುಕುತ್ತ ಹೋಗುತ್ತಾರೆ. ಆಸಾರಾಮ್ ಬಾಪುರಂಥ ಸ್ವಾಮಿಗಳು ಎಲ್ಲಿಗೆ ಹೋದರು? ಅವರ ವಾಸ್ತವ ಯಾರಿಂದಲೂ ಬಚ್ಚಿಡಲಾಗಿಲ್ಲ. ದುರ್ಗಮ ಪರ್ವತಗಳ ಕಿರಿದಾದ ರಸ್ತೆಗಳ ನಡುವೆ ಪ್ರಾಣ ಪಣಕ್ಕೊಡ್ಡಿ ದೇವಿದೇವತೆಯರ ದರ್ಶನ ಮಾಡಲು ಅಲ್ಲಿಗೆ ತಲುಪುತ್ತಾರೆ. ಒಮ್ಮೊಮ್ಮೆ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ದೇಹಕ್ಕೆ ಕಷ್ಟ ಕೊಡುವುದರಿಂದ, ಉಪವಾಸ ಇರುವುದರಿಂದ, ನೈವೇದ್ಯ ಕೊಡುವುದರಿಂದ ದೇವಿದೇವತೆ ಪ್ರಸನ್ನರಾಗಿ ತಮಗೆ ಕಲ್ಯಾಣವನ್ನುಂಟು ಮಾಡುತ್ತಾಳೆ, ತಮ್ಮ ಇಚ್ಛೆ ನೆರವೇರಿಸುತ್ತಾಳೆ ಎಂದು ನಂಬಿರುತ್ತಾರೆ. ಆದರೆ ಯಾರಾದರೂ ಆ ಬಗ್ಗೆ ಇದೆಲ್ಲ ಏಕೆ ಹಾಗೂ ಹೇಗೆ ಎಂದು ತರ್ಕಬದ್ಧ ಪ್ರಶ್ನೆ ಮಾಡಿದರೆ ಅವರಲ್ಲಿ ಅದರ ಬಗ್ಗೆ ಯಾವುದೇ ಉತ್ತರ ಇರುವುದಿಲ್ಲ.

ಹಗಲು ರಾತ್ರಿ ಹೇಗಾಗುತ್ತವೆ? ಗೊತ್ತಿರದಿದ್ದರೆ ಏನೇನೊ ಕಲ್ಪನೆಗಳನ್ನು ಮಾಡಿಕೊಳ್ಳಲಾಗುತ್ತದೆ. ರಾಕ್ಷಸನೊಬ್ಬ ಸೂರ್ಯನನ್ನು ನುಂಗಿ ಬಿಡುತ್ತಾನೆ ಅಥವಾ ಎಂತೆಂಥದೊ ತಲೆಬಾಲವಿಲ್ಲದ ಕಲ್ಪನೆಗಳು. ಈಗಲೂ ಕೂಡ ಅದೆಷ್ಟೋ ಕಲೆ, ವಿಜ್ಞಾನದ ಸಂಗತಿಗಳು ಜಗತ್ತಿನ ಗರ್ಭದಲ್ಲಿ ಮರೆ ಮಾಚಿವೆ. ಅವುಗಳತ್ತ ನಮ್ಮ ಚಿತ್ತವನ್ನು ಹರಿಸಬೇಕಾಗಿದೆ. ನಾವು ನಮ್ಮ ಸಮಯದ ಸದುಪಯೋಗ ಮಾಡಿಕೊಳ್ಳದೆ ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ. ಮೂಢನಂಬಿಕೆಗಳಿಂದ ಗ್ರಸ್ತರಾಗಿ ಪರಿಪೂರ್ಣವಾಗಿ ಖುಷಿಯಿಂದ ಇರಲು ಕೂಡ ಸಾಧ್ಯವಾಗುವುದಿಲ್ಲ. ಜ್ಞಾನದ ಪ್ರಕಾಶವನ್ನು ನಮ್ಮೊಳಗೆ ಹರಡಬೇಕು.

ಆಧಾರ ರಹಿತ ಕಥೆಗಳು

ಅವರ ಕಣ್ಣು ಸರಿಯಾಗಿಲ್ಲ. ಅವರ ದೃಷ್ಟಿ ತಗುಲಿತು ಎಂದು ಹೇಳುವುದನ್ನು ಕೇಳಿರುತ್ತೀರಿ. ಯಾವುದಾದರೂ ಕೆಲಸ ಶುರು ಮಾಡುವ ಮುನ್ನ ಸೀನಿಬಿಟ್ಟರೆ ನಮ್ಮ ಕೆಲಸಕ್ಕೆ ಅಪಶಕುನ ಎಂದು ಭಾವಿಸುತ್ತಾರೆ. ಕಣ್ಣು ಪಟಪಟಾಂತ ಹಾರುವುದು, ದೀಪ ಆರುವುದು, ಬೆಕ್ಕು ಅಡ್ಡ ಬರುವುದು, ನಾಯಿ ಅಳುವುದು ಹೀಗೆ ಅದೆಷ್ಟೋ ಸಂಗತಿಗಳನ್ನು ನಮ್ಮ ಜೀವನಕ್ಕೆ ಹೋಲಿಸಿಕೊಂಡು ಕೆಟ್ಟದ್ದಾಗುತ್ತದೆ ಎಂದು ಭಾವಿಸುತ್ತೇವೆ. ನಾವು ಸಾಕ್ಷರರಾಗಿದ್ದುಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಜಗತ್ತಿನಲ್ಲಿ ತರ್ಕ ಇರದೇ ಇರುವಂತಹ, ಕಾರಣ ಇರದೇ ಇರುವಂತಹ  ಯಾವುದೇ ಸಂಗತಿ ಇಲ್ಲ.

– ನೀರಜಾ ಶ್ರೀವತ್ಸ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ