ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರಾ ಡಿಸೆಂಬರ್‌ನಲ್ಲಿ ಮಾಡಿದ ಒಂದು ಟ್ವೀಟ್‌ ಮಂಗಳೂರಿನ ಸ್ವಾವಲಂಬಿ ಮಹಿಳೆಯೊಬ್ಬಳ ಬದುಕಿನ ದಿಕ್ಕುದೆಸೆಯನ್ನೇ ಬದಲಿಸಿಬಿಟ್ಟಿತು. ಅವರೇ `ಹಳ್ಳಿಮನೆ ರೊಟ್ಟೀಸ್‌’ನ ಶಿಲ್ಪಾ.

ಶಿಲ್ಪಾ ಕಳೆದ ಅನೇಕ ವರ್ಷಗಳಿಂದ ಮಂಗಳೂರಿನ ಮಣ್ಣುಗುಡ್ಡೆ ಪ್ರದೇಶದಲ್ಲಿ ಮಹೀಂದ್ರಾ ಬೊಲೆರೋ ವಾಹನದಲ್ಲಿ `ಹಳ್ಳಿಮನೆ ರೊಟ್ಟೀಸ್‌’ ಹೆಸರಿನಲ್ಲಿ ಮಲೆನಾಡಿನ ವೈವಿಧ್ಯಮಯ ರೊಟ್ಟಿಗಳ ಸವಿ ಉಣಬಡಿಸುವ ಸಂಚಾರಿ ಕ್ಯಾಂಟೀನ್‌ ಆರಂಭಿಸಿ, ಮಂಗಳೂರಿಗೆ ಮಲೆನಾಡಿನ ವಿಶಿಷ್ಟ ರೊಟ್ಟಿಗಳ ಪರಿಚಯ ಮಾಡಿಕೊಟ್ಟರು.

ಮಹೀಂದ್ರಾ ಗಮನಕ್ಕೆ ಬಂದದ್ದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ಒಬ್ಬರು ಶಿಲ್ಪಾರ ದೈನಂದಿನ ಕಾಯಕದ ಬಗ್ಗೆ ಫೋಟೊ ಸಮೇತ ಮಾಹಿತಿ ನೀಡಿ, ಅದನ್ನು ಮಹೀಂದ್ರಾ ಕಂಪನಿಯ ಸಿಇಓ ಆನಂದ್‌ ಮಹೀಂದ್ರಾರಿಗೆ ಟ್ಯಾಗ್‌ ಮಾಡಿದ್ದರು. ತಮ್ಮ ಕಂಪನಿಯ ವಾಹನದಲ್ಲಿ ಸ್ವಾವಲಂಬಿ ಜೀವನ ನಡೆಸಿ ಯಶಸ್ವಿ ಮಹಿಳೆ ಅನಿಸಿಕೊಂಡ ಶಿಲ್ಪಾರ ಬಗ್ಗೆ ಆನಂದ್‌ಗೆ ಬಹಳ ಕುತೂಹಲ ಮೂಡಿತು. ಆನಂದ್‌ ಮಹೀಂದ್ರಾ ತಕ್ಷಣವೇ ಟ್ವೀಟ್‌ ಮಾಡಿ ಶಿಲ್ಪಾ ತಮ್ಮ ಉದ್ಯಮವನ್ನು ವಿಸ್ತರಿಸಲು ಆಸಕ್ತಿ ಇದ್ದರೆ ನಾನು ಅವರಿಗೆ ಬೊಲೆರೋ ವಾಹನವನ್ನು ಉಚಿತವಾಗಿ ಕೊಡುವುದಾಗಿ ಹೇಳಿದರು. ಹೇಳಿದಂತೆಯೇ ಒಂದೇ ತಿಂಗಳಲ್ಲಿ ಮಹೀಂದ್ರಾ ವಾಹನವನ್ನು ಶಿಲ್ಪಾಗೆ ಹಸ್ತಾಂತರಿಸಿದರು. ಈಗ ಎರಡನೇ ವಾಹನದ ಮೂಲಕ ಕಂಕನಾಡಿ ಪ್ರದೇಶದಲ್ಲಿ ತಮ್ಮ ವಹಿವಾಟನ್ನು ವಿಸ್ತರಿಸಲು ಶಿಲ್ಪಾ ಪ್ರಯತ್ನಶೀಲರಾಗಿದ್ದಾರೆ.

`ಹಳ್ಳಿಮನೆ ರೊಟ್ಟೀಸ್‌’ನ ಹಿಂದೆ ಶಿಲ್ಪಾರ ಶ್ರದ್ಧೆ ಮತ್ತು ಅಪಾರ ಶ್ರಮವಿದೆ, ಅತೀ ತಾಳ್ಮೆ ಇದೆ. `ಹಳ್ಳೀಮನೆ ರೊಟ್ಟೀಸ್‌’ ಮಣ್ಣುಗುಡ್ಡೆ ಪ್ರದೇಶದಲ್ಲಿ ನೆಲೆ ನಿಲ್ಲಲು ಶಿಲ್ಪಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅವರ ಯಶೋಗಾಥೆಯ ಹಿಂದಿನ ಕಥೆಯನ್ನೊಮ್ಮೆ ಮೆಲುಕು ಹಾಕಿದರೆ ಶಿಲ್ಪಾರ ಶ್ರಮ ಎಂಥವರಿಗೂ ಪ್ರೇರಣೆಯಾಗುತ್ತದೆ.

ಹಾಸನ – ಮಂಗಳೂರು ಪಯಣ

ಶಿಲ್ಪಾ ಮೂಲತಃ ಹಾಸನದವರು. ಓದಿದ್ದು ಎಸ್‌ಎಸ್‌ಎಲ್‌ಸಿ ಮಾತ್ರ. ಮದುವೆಯಾದದ್ದು ತುಮಕೂರು ಮೂಲದ ಬೆಂಗಳೂರು ಉದ್ಯಮಿ ರಾಜಶೇಖರ್‌ರನ್ನು. ರಾಜಶೇಖರ್‌ ಗಣಿ ಉದ್ಯಮಕ್ಕೆ ಟ್ರಕ್‌ ಒದಗಿಸುವ ಟ್ರಾನ್ಸ್ ಪೋರ್ಟ್‌ ಉದ್ಯಮ ನಡೆಸುತ್ತಿದ್ದರು. ಅದರ ಪ್ರಧಾನ ಕಛೇರಿ ಮಂಗಳೂರಿನಲ್ಲಿತ್ತು. ಗಂಡ ಬಿಸ್‌ನೆಸ್‌ನಲ್ಲಿ ಮಗ್ನ. ಶಿಲ್ಪಾ ಮನೆಯಲ್ಲಿಯೇ ಮಗನ ಲಾಲನೆ ಪಾಲನೆಯಲ್ಲಿ ತಲ್ಲೀನರಾಗಿದ್ದರು. ಗಂಡ ಮನೆ ನಿರ್ವಹಣೆಗೆ, ಮಗನ ಪಾಲನೆ ಪೋಷಣೆಗೆ ಯಾವುದೇ ಕೊರತೆ ಮಾಡದ್ದರಿಂದ ಶಿಲ್ಪಾಗೆ ಆವರೆಗೆ ಹಣಕಾಸಿನ ಸಮಸ್ಯೆ ಏನೆಂಬುದು ಗೊತ್ತೇ ಇರಲಿಲ್ಲ.

ಗಂಡ ನಾಪತ್ತೆಯಾದ ಬಳಿಕ…..

ಆಫೀಸ್‌ ಕೆಲಸದ ನಿಮಿತ್ತ ರಾಜಶೇಖರ್‌ ಬೆಂಗಳೂರಿಗೆ ಹೋದವರು ಪುನಃ ವಾಪಸ್‌ ಬರಲಿಲ್ಲ. ಇವತ್ತು, ನಾಳೆ ಬರುತ್ತಾರೆ ಎಂದು ಕಾಯ್ದಿದ್ದೇ ಬಂತು, ಆದರೆ ಅವರು ಬರಲೇ ಇಲ್ಲ.

ಗಂಡನ ಅಕಾಲಿಕ ಕಣ್ಮರೆಯ ಬಳಿಕ ಶಿಲ್ಪಾರ ಆದಾಯದ ಮೂಲವೇ ಹೊರಟುಹೋಯಿತು. ಕಷ್ಟಗಳು ಅವರ ಮುಂದೆ ಧುತ್ತೆಂದು ಕುಣಿಯಲಾರಂಭಿಸಿದವು. ಆ ಸಂದಿಗ್ಧ ಸ್ಥಿತಿಯಲ್ಲಿ ಶಿಲ್ಪಾ ತೀವ್ರ ಆತಂಕಕ್ಕೆ ಒಳಗಾದರು. ಖಿನ್ನತೆಗೂ ತುತ್ತಾದರು. ಅವರ ಸ್ಥಿತಿ ನೋಡಿ ಮನೆಯವರಿಗೆ ಗಾಬರಿ. ವೈದ್ಯರು ಇವರನ್ನು ಹೀಗೆಯೇ ಬಿಟ್ಟರೆ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು, ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿದರೆ ಮತ್ತೆ ಮೊದಲಿನಂತಾಗಬಹುದು ಎಂದು ಹೇಳಿದರು.

ತಂದೆತಾಯಿ ಮತ್ತು ತಮ್ಮ ಅವರಿಗೆ ಧೈರ್ಯ ತುಂಬುತ್ತ `ನಾವೆಲ್ಲ ನಿನ್ನ ಜೊತೆಗೆ ಇದ್ದೇವೆ. ನೀನೇನು ಹೆದರಬೇಡ,’ ಎಂದು ಹೇಳಿದರು. ಕ್ರಮೇಣ ಶಿಲ್ಪಾ ಕ್ರಿಯಾಶೀಲರಾಗುತ್ತಾ ಹೋದರು. ಆರಂಭದಲ್ಲಿ ಶಿಲ್ಪಾ ಬ್ಯೂಟಿ ಪಾರ್ಲರ್‌ ಒಂದರಲ್ಲಿ ಕೆಲಸ ಮಾಡಿದರು. ಆಗ ಅವರಿಗೆ ಸಿಗುತ್ತಿದ್ದ ಸಂಬಳ ತಿಂಗಳಿಗೆ 1,500ರೂ. ಮಾತ್ರ. ಅಲ್ಲಿಂದ ಮುಂದೆ ಸೈಬರ್‌ ಸೆಂಟರ್‌ನಲ್ಲಿ ಕೆಲಸ ಮಾಡಿದರು. ಅಲ್ಲಿ 3,000ರೂ. ಸಂಬಳ ದೊರೆಯುತ್ತಿತ್ತು. ಆದರೆ ಎರಡೆರಡು ಬಸ್‌ ಬದಲಿಸಬೇಕಾಗಿ,

ಸಂಬಳದ ಬಹುಪಾಲು ಬಸ್‌ಗೆ ಹೋಗುತ್ತಿತ್ತು. ಅಲ್ಲಿಂದ ಮುಂದೆ ಶಿಲ್ಪಾ ಮನೆಗೆ ಹತ್ತಿರದಲ್ಲಿಯೇ ಇದ್ದ ಫ್ಯಾನ್ಸಿ ಸ್ಟೋರ್‌ನಲ್ಲಿ ಕೆಲಸ ಮಾಡತೊಡಗಿದರು. ಮುಂಜಾನೆ 9 ರಿಂದ ರಾತ್ರಿ 9 ರ ತನಕ ಎಡೆಬಿಡದೆ ಕೆಲಸ ಮಾಡಿದರೂ ಕುಟುಂಬ ನಿರ್ವಹಣೆಗೆ ಆ ಸಂಬಳ ಸಾಲುತ್ತಿರಲಿಲ್ಲ. ಆಗ ಅವರಿಗೊಂದು ಯೋಚನೆ ಬಂತು. ತಮ್ಮನಿಗೆ ಏನಾದರೂ ಸ್ವಂತ ಉದ್ಯೋಗ ಮಾಡಿಸಬೇಕು. ಅದರಿಂದ ಕುಟುಂಬಕ್ಕೆ ನೆರವಾಗುತ್ತದೆ ಎಂಬ ಯೋಚನೆ ಅವರದ್ದಾಗಿತ್ತು.  ಆದರೆ ಅವರ ತಮ್ಮ ಚಿರಂಜೀವಿ ಅಂತಹ ಸಾಹಸಕ್ಕೆ ಕೈ ಹಾಕಲು ಹಿಂಜರಿಯುತ್ತಿದ್ದ. ಆಗ ತಾವೇ ಏನಾದರೂ ಮಾಡಬೇಕೆಂದು ಶಿಲ್ಪಾ ಯೋಚಿಸಿದರು.

ಕೈ ಬಿಡಲಿಲ್ಲ ಅಡುಗೆ

ಶಿಲ್ಪಾಗೆ ಗೊತ್ತಿದ್ದದ್ದು ಅಡುಗೆ ಮಾತ್ರ. ಅದನ್ನೇ ತಮ್ಮ ಸ್ವಯಂ ಉದ್ಯೋಗವನ್ನಾಗಿ ಮಾಡಿ ಕೊಳ್ಳಬೇಕೆಂದು ಯೋಜನೆ ಹಾಕಿಕೊಂಡರು. ಅವರ ಮನೆ ಸಮೀಪ ಅನೇಕ ಕಛೇರಿಗಳಿದ್ದವು. ಕೆಲವು ಉದ್ಯೋಗಿಗಳನ್ನು ಸಂಪರ್ಕಿಸಿ ಮಧ್ಯಾಹ್ನದ ಊಟಕ್ಕೆ `ಲಂಚ್‌ ಬಾಕ್ಸ್’ ಕಳಿಸಿಕೊಡುವ ಬಗ್ಗೆ ಮಾತನಾಡಿದರು. ಆರಂಭದಲ್ಲಿ ಇಬ್ಬರಿಂದ ಮಾತ್ರ ಲಂಚ್‌ ಬಾಕ್ಸ್ ಗೆ ಆರ್ಡರ್‌ ಸಿಕ್ಕಿತು. ಊಟದ ರುಚಿಗೆ ಮನಸೋತ ಅವರಿಂದ ಬಾಯಿ ಪ್ರಚಾರದ ಮೂಲಕ ಪುನಃ ಬೇರೆ ಆಫೀಸುಗಳಿಂದ 9 ಊಟಕ್ಕೆ ಆರ್ಡರ್‌ ಸಿಕ್ಕಿತು.

ಊಟದ ಜೊತೆಗೆ ತಮ್ಮದೇ ಆದ ಗಾಡಿಯ ಮೂಲಕ ಸಂಜೆ ಹೊತ್ತು ವಿವಿಧ ತಿಂಡಿಗಳನ್ನು ಮಾಡಲು ಶುರು ಮಾಡಿದರು. ಆದರೆ ಗಾಡಿ ನಿಲ್ಲಿಸುವ ಜಾಗದ ಕುರಿತಂತೆ ಆರಂಭದಲ್ಲಿ ಪೊಲೀಸರಿಂದ ಸಾಕಷ್ಟು ಕಿರುಕುಳ ಅನುಭವಿಸುವಂತಾಯಿತು. ಪೊಲೀಸರು ಇವರೊಬ್ಬರದೇ ಗಾಡಿಯನ್ನು ಮಾತ್ರ ನಿಲ್ಲಿಸಲು ಅವಕಾಶ ಕೊಡುತ್ತಿರಲಿಲ್ಲ. ಬೇರೆಯವರು ಮಾತ್ರ ಎಂದಿನಂತೆ ರಾಜಾರೋಷವಾಗಿ ಗಾಡಿ ನಿಲ್ಲಿಸಿ ವ್ಯಾಪಾರ ನಡೆಸುತ್ತಿದ್ದರು. ಇದು ಶಿಲ್ಪಾರಲ್ಲಿ ಆಕ್ರೋಶವನ್ನುಂಟು ಮಾಡಿತು.

ಒಂದು ದಿನ ಅವರು ಮಧ್ಯರಾತ್ರಿ ರಸ್ತೆ ಮಧ್ಯದಲ್ಲಿಯೇ ಧರಣಿ ಕುಳಿತುಕೊಳ್ಳುವ ಪರಿಸ್ಥಿತಿ ಸಹ ಉದ್ಭವಿಸಿತ್ತು. ಅದನ್ನು ಕಂಡು ಕಾರ್ಪೊರೇಟರ್‌ ಒಬ್ಬರು, “ನೀವು ನಮ್ಮ ಏರಿಯಾಕ್ಕೆ ಬನ್ನಿ. ಅಲ್ಲಿ ನಿಮಗೆ ಯಾವುದೇ ತೊಂದರೆ ಇರದು,” ಎಂದು ಹೇಳಿದರು. ಶಿಲ್ಪಾ ತಮ್ಮ ಗಾಡಿಯನ್ನು ಹೊಸ ಸ್ಥಳಕ್ಕೆ ವರ್ಗಾಯಿಸಿದರು.

“ಈ ಸ್ಥಳದಲ್ಲಿ ಏನು ವ್ಯಾಪಾರ ಆಗುತ್ತಮ್ಮ. ಇಲ್ಲಿಗೇಕೆ ಬಂದಿರಿ?” ಎಂದು ಅನೇಕರು ಆರಂಭದಲ್ಲಿ ಅವರಿಗೆ ಹೇಳಿದ್ದುಂಟು. `ನೋಡೋಣ ನನ್ನ ಕೈರುಚಿ ಸರಿಯಾಗಿದ್ದರೆ ಜನ ಬರ್ತಾರೆ,’ ಎಂದು ಶಿಲ್ಪಾ ಅವರಿಗೆ ಉತ್ತರ ಕೊಟ್ಟಿದ್ದರು. ಆ ಹೊಸ ಜಾಗವೇ ಮಣ್ಣುಗುಡ್ಡೆ ಪ್ರದೇಶ. ಅವರ ಸಂಚಾರಿ ಕ್ಯಾಂಟೀನ್‌ ಅಂದಿನಿಂದ ಇಂದಿನವರೆಗೂ ಅಲ್ಲಿಯೇ ನೆಲೆ ನಿಂತಿದೆ. ಅವರ ಪ್ರಕಾರ, ಅವರಿಗೆ ಅದು ಮರುಜೀವ ಕೊಟ್ಟ ಜಾಗ.

ಆರಂಭದಲ್ಲಿ ಇಡ್ಲಿ, ರೈಸ್‌ ಭಾತ್‌ಗಳಿಂದ ತಮ್ಮ ಕ್ಯಾಂಟೀನ್‌ ಆರಂಭಿಸಿದ ಶಿಲ್ಪಾ ಬಳಿಕ ಮಂಗಳೂರು ನಾಗರಿಕರಿಗೆ ಮಲೆನಾಡು ಭಾಗದ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಹಾಗೂ ಉತ್ತರ ಕರ್ನಾಟಕ ಭಾಗದ ಜೋಳದ ರೊಟ್ಟಿಗಳ ರುಚಿ ತೋರಿಸಿ ಸೈ ಎನಿಸಿಕೊಂಡರು. ತಾವು ಮಾಡುವ ರೊಟ್ಟಿಗಳಿಗೆ ಬೇಕಾಗುವ ಅಕ್ಕಿ ಹಿಟ್ಟು, ರಾಗಿಹಿಟ್ಟು ಮುಂತಾದ ವಸ್ತುಗಳನ್ನು ಅವರು ಹಾಸನದಿಂದಲೇ ತರಿಸಿಕೊಳ್ಳುತ್ತಾರೆ.

ಶಿಲ್ಪಾರ ರೊಟ್ಟಿ ಮಹಿಮೆ ಮಹೀಂದ್ರಾ ಕಂಪನಿಯ ಸಿಇಓ ಆನಂದ್‌ ಮಹೀಂದ್ರಾ ತನಕ ತಲುಪಿ ಅವರ ಶ್ರಮ ಜೀವನಕ್ಕೆ ಹೊಸದೊಂದು ಬೆಳಕು ದೊರೆಯಿತು.

ಮಹೀಂದ್ರಾ ಕಂಪನಿಯಿಂದ ಅವರಿಗೆ ಬೊಲೆರೊ ವಾಹನವಷ್ಟೇ ದೊರಕಲಿಲ್ಲ, ಅದರ ಜೊತೆಗೆ `ಮಹೀಂದ್ರಾ ಟ್ರಾನ್ಸ್ ಪೋರ್ಟ್‌ಎಕ್ಸಲೆನ್ಸಿ ಅವಾರ್ಡ್‌’ ಕೂಡ ದೊರಕಿತು. ಈ ಪ್ರಶಸ್ತಿಗೆ ಆಯ್ಕೆಯಾದ ಕರ್ನಾಟಕದ ಏಕೈಕ ಮಹಿಳೆ ಇವರು.

ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯ ಪ್ರತಿಷ್ಠಿತ ಹೋಟೆಲೊಂದರಲ್ಲಿ ಜರುಗಿತು. ರಾಷ್ಟ್ರಮಟ್ಟದ ಪ್ರಶಸ್ತಿಗೆ ಪಾತ್ರರಾದ ಬಳಿಕ ಶಿಲ್ಪಾಗೆ ಮಂಗಳೂರು, ಉಡುಪಿ, ಬೆಂಗಳೂರು ಮತ್ತಿತರ ಕಡೆ ಸನ್ಮಾನಗಳ ಸುರಿಮಳೆ. ಕಾಲೇಜುಗಳಲ್ಲಿ ಏರ್ಪಡಿಸಲಾಗುವ ಸನ್ಮಾನ ಸಮಾರಂಭಗಳಲ್ಲಿ ಅವರು ಮಾತನಾಡುವ ಒಂದೊಂದು ಶಬ್ದಗಳಿಗೆ ವಿದ್ಯಾರ್ಥಿಗಳು ಕಿವಿಯಾಗುತ್ತಾರೆ.

“ಕಷ್ಟ ಬಂದಾಗ ಕುಗ್ಗಬಾರದು, ಅದನ್ನು ಎದುರಿಸಿ ನಿಲ್ಲುವ ಶಕ್ತಿ ಒಗ್ಗೂಡಿಸಿಕೊಳ್ಳಬೇಕು. ನಮ್ಮೊಳಗೆ ಇರುವ ಸುಪ್ತ ಶಕ್ತಿ. ಹೊರ ಹೊಮ್ಮಿಸಲು ಅವಕಾಶ ಕೊಡಬೇಕು.

“ನಮಗೆ ಚೆನ್ನಾಗಿ ಗೊತ್ತಿರುವ ಯಾವುದಾದರೊಂದು ಕ್ಷೇತ್ರದಲ್ಲಿ ನೆಲೆ ನಿಲ್ಲಲು ಪ್ರಯತ್ನಿಸಬೇಕು. ಆಗಲೇ ಜನರು ನಮ್ಮನ್ನು ಗುರುತಿಸುತ್ತಾರೆ. ನಮಗೆ ಎಲ್ಲ ಗೊತ್ತಿದೆ ಎಂಬ ಭ್ರಮೆ ತೊರೆದು, ಮಾಡುವ ಕೆಲಸಕ್ಕೆ ಗೌರವ ಕೊಡುವುದನ್ನು ಕಲಿಯಬೇಕು,” ಎಂದು ಹೇಳುವುದನ್ನು ಕೇಳಿ ವಿದ್ಯಾರ್ಥಿನಿಯರು ಅವರ ಬಗ್ಗೆ ಹೆಮ್ಮೆಪಡುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ