ಸರಿ ಸುಮಾರು ಕ್ರಿ.ಶ. 1399ರ ಆಸುಪಾಸಿನಲ್ಲಿ ಈಗಿನ ಗುಜರಾತ್ ಮೂಲದವರಾದ ಶ್ರೀ ಯಧುರಾಯ ಮತ್ತು ಶ್ರೀ ರಂಗರಾಯ ಎನ್ನುವವರು ಮಹಾಬಲೇಶ್ವರ ತಪ್ಪಲಿನಲ್ಲಿ (ಈಗಿನ ಚಾಮುಂಡೀ ಬೆಟ್ಟ) ಸುಮಾರು 30 ಗ್ರಾಮಗಳ ಅಂದಿನ ವಿಜಯನಗರದ ಅಧೀನದಲ್ಲಿರುವ ಒಂದು ರಾಜ್ಯವನ್ನು ಕಟ್ದಿ, ಅಲ್ಲಿಂದ ಸುಮಾರು 7 ರಾಜರುಗಳ ಆಡಳಿತದ ನಂತರ 1529ರಲ್ಲಿ ವಿಜಯನಗರದ ಶ್ರೀ ಕೃಷ್ಣದೇವರಾಯರ ಕಾಲವಾದ ನಂತರ ಅವರ ಮುಂದಿನ ಪೀಳಿಗೆಯವರು ಅದೇ ಗತ್ತನ್ನು ಮುಂದುವರಿಸಿ ಕೊಳ್ಳಲಾಗದೇ ಹೋದಾಗ, ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟುವ ಮೂಲಕ ಆರಂಭವಾದ ಮೈಸೂರು ಸಂಸ್ಥಾನ ಈ ದೇಶದಲ್ಲಿ ಹತ್ತು ಹಲವು ಕಾರ್ಯಗಳಿಗೆ ಮೊದಲೆನಿಸಿಕೊಂಡು ಅಂದು ಇಂದು ಮತ್ತು ಎಂದೆಂದಿಗೂ ವಿಶಿಷ್ಟವಾದ ಸ್ಥಾನವನ್ನು ಪಡೆದುಕೊಂಡಿದೆ.
1799 ರಿಂದ 1868ರ ವರೆಗೆ ಮೈಸೂರು ಸಂಸ್ಥಾನದ ರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮೈಸೂರನ್ನು ಹೇಗಾದರೂ ಮಾಡಿ ತಮ್ಮ ಆಡಳಿತಕ್ಕೆ ಒಳಪಡಿಸಲೇಬೇಕು ಎಂದು ಹವಣಿಸುತ್ತಿದ್ದ ಬ್ರಿಟೀಷರು 1824ರಲ್ಲಿ ಅದ್ದೂರಿಯಿಂದ ದಸರಾ ನಡೆಯುತ್ತಿದ್ದ ಸಂದರ್ಭದಲ್ಲಿಯೇ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿಲ್ಲ. ಅನಾವಶ್ಯಕ ದುಂದು ವೆಚ್ಚ ಮಾಡುತ್ತಿದ್ದಾರೆ ಮತ್ತು ಆಡಳಿತ ಅರಾಜಕತೆಯಿಂದ ಕೂಡಿದೆ ಎಂಬ ಕುಂಟು ನೆಪವೊಡ್ಡಿ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಾಗ, ತಾಳ್ಮೆವಂತರಾದ ರಾಜರು ಶಾಂತಿಯಂದ ಬಗೆ ಹರಿಸಿಕೊಳ್ಳುವ ಸಲುವಾಗಿ ಬ್ರಿಟಿಷರಿಗೆ ಪತ್ರದ ಮೇಲೆ ಪತ್ರ ಬರೆಯುತ್ತಲೇ ಸುಮಾರು 50 ವರ್ಷಗಳ ಕಾಲ ಮುಂದುವರಿಯುತ್ತದೆಯೇ ಹೊರತು ರಾಜ್ಯದ ಆಡಳಿತ ಒಡೆಯರ್ ಅವರ ಸುಪರ್ದಿಗೆ ಒಪ್ಪಿಸಲು ಬ್ರಿಟಿಷರು ಒಪ್ಪಿರಲೇ ಇಲ್ಲ.

ಇದೇ ಸಮಯದಲ್ಲೇ ಮೈಸೂರು ಸಂಸ್ಥಾನದ ಆಪ್ತರಾಗಿದ್ದ ಶ್ರೀ ಚೆಟ್ಟಿಯವರು ಮತ್ತು ಅಸ್ಗರ್ ಅಲಿಯವರು ಬ್ರಿಟೀಷರ ಮೆಲೆ ಒತ್ತಡ ತಂದು ಮೈಸೂರಿಗೆ ಬ್ರಿಟಿಷರಿಂದ ಮರಳಿ ಅಧಿಕಾರ ಕೊಡಿಸಲು ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತಲೇ ಇದ್ದಾಗಲೇ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಮಗ ಶ್ರೀ ಚಾಮರಾಜ ಒಡೆಯರ್ ಮತ್ತು ಸೊಸೆ ಕೆಂಪ ನಂಜಮ್ಮಣ್ಣಿಯವರಿಗೆ 1884ರ ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನನವಾಗಿತ್ತದೆ. ಕೇವಲ 10 ವರ್ಷದ ಬಾಲಕನಾಗಿರುವಾಗಲೇ 28 ಡಿಸೆಂಬರ್ 1894ರಲ್ಲಿ ತಂದೆಯನ್ನು ಕಳೆದುಕೊಂಡ ಬಾಲಕ ಕೃಷ್ಣರಾಜರಿಗೆ ಪೆಬ್ರವರಿ 1, 1895ರಲ್ಲಿ ಪಟ್ಟಾಭಿಷೇಕ ಮಹೋತ್ಸವ ಎಲ್ಲರೂ ಮೆಚ್ಚುವಂತೆ ವೈಭವೋಪೇತವಾಗಿ ನಡೆಸಲಾಗುತ್ತದೆ. ಆರಂಭದಲ್ಲಿ ಕೆಲಕಾಲ ಅಮ್ಮನ ಆಶ್ರಯದಲ್ಲೇ ಆಡಳಿತ ನಡೆಸಿ ಮುಂದೆ ಅಲ್ಲಿಂದ 38 ವರ್ಷಗಳ ಮೈಸೂರು ಸಂಸ್ಥಾನದಲ್ಲಿ ನಭೂತೋ ನಭವಿಷ್ಯತಿ ಎನ್ನುವಂತೆ ಭವ್ಯ ಆಡಳಿತವನ್ನು ನಡೆಸಿದ ಕೀರ್ತಿ ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳು ಇಂದಿಗೂ ನೆನಪಿನಲ್ಲಿ ಉಳಿಯುವ ಸಾಕ್ಷಿಗಳಾಗಿ ನಮ್ಮ ಕಣ್ಣ ಮುಂದಿದೆ. ಆಡಳಿತ ಚುಕ್ಕಾಣಿ ಹಿಡಿದ ರಾಜನ ಬಿಗಿಮುಷ್ಠಿಯಲ್ಲಿ ಇಡೀ ರಾಜ್ಯವೇ ಇರಬೇಕು ಎಂದು ಭಾವಿಸಿದೇ ತಾನೊಬ್ಬ ಜನಸೇವಕ. ಜನ ಸೇವೆಯೇ ತನ್ನ ನೈಜ ಗುರಿಯೆಂದು ಪ್ರತಿಪಾದಿಸಿ ಪ್ರಜಾಪ್ರಭುತ್ವ ಸಿದ್ಧಾಂತವನ್ನು ಆಗಲೇ ಜನರಿಗೆ ಪರಿಚಯಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರಿಗೆ ಸಲ್ಲುತ್ತದೆ.

ರಾಜ್ಯಭಾರ ವಹಿಸಿಕೊಂಡ ಸಮಯದಲ್ಲಿ ಆರ್ಥಿಕ ಸಂಕಷ್ಟದಲ್ಲಿದ್ದ ಮೈಸೂರು ಸಂಸ್ಥಾನ ಕೃಷ್ಣರಾಜರ ದಕ್ಷಾ ರಾಜ್ಯಭಾರ ಮತ್ತು ದೂರಾಲೋಚನೆಯಿಂದ ಆರಂಭಿಸಿದ ವಿವಿಧ ಕೈಗಾರಿಕೆಗಳಿಂದಾಗಿ ಮುಂದಿನ 30-40 ವರ್ಷಗಳಲ್ಲಿ ದೇಶದ ಶ್ರೀಮಂತರಲ್ಲಿ 2ನೇ ಸ್ಥಾನಗಳಿಸುವಷ್ಟರ ಮಟ್ಟಿಗೆ ಏರಿರುತ್ತಾರೆ ಎಂದರೆ ಅವರ ದಕ್ಷತೆ ಮತ್ತು ಕಾರ್ಯವೈಖರಿ ಹೇಗಿತ್ತು? ಎಂಬುದರ ಅರಿವಾಗುತ್ತದೆ. ರಾಜರು ಚಿಕ್ಕವರಿರುವ ಸಮಯದಲ್ಲೇ ಮೈಸೂರಿಗೆ ಭೇಟಿ ನೀಡಿದ ಲಾರ್ಡ್ ಮೆಕಾಲೆ ವ್ಯವಹಾರದ ದೃಷ್ಥಿಯಿಂದ ರಾಜರುಗಳಿಗೆ ಇಂಗ್ಲೀಷ್ ಕಲಿಯಲು ಸೂಚಿಸಿದ್ದನ್ನು ಸ್ವೀಕರಿಸಿದ ಮಹಾರಾಜರು ತಾವು ಇಂಗ್ಲೀಷ್ ಕಲಿತದ್ದಲ್ಲದೇ ತಮ್ಮ ಮಕ್ಕಳುಗಳಿಗಷ್ಟೇ ಇಂಗ್ಲೀಷ್ ಕಲಿಕೆಯನ್ನು ಸೀಮಿತಗೊಳಿಸದೇ ತಮ್ಮ ಪ್ರಾಂತ್ಯದಲ್ಲಿರುವ ಮಕ್ಕಳುಗಳೂ ಆಂಗ್ಲ ಮಾಧ್ಯಮದ ಶಿಕ್ಷಣ ಪಡೆಯುವಂತೆ ಮಾಡುತ್ತಾರೆ.





