1974ರಲ್ಲಿ ತೆರೆಕಂಡ ಭೂತಯ್ಯನ ಮಗ ಅಯ್ಯು ಕನ್ನಡ ಚಲನಚಿತ್ರದಲ್ಲಿ ಆರ್.ಎನ್.ಜಯಗೋಪಾಲ್ ಸಾಹಿತ್ಯ, ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿಯವರ ಕಂಠ ಮಾಧುರ್ಯದಲ್ಲಿ ಮೂಡಿ ಬಂದ ಹಾಡೊಂದರಲ್ಲಿ ಮಲೆನಾಡ ಹೆಣ್ಣ ಮೈ ಬಣ್ಣ ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ ಎಂದು ಗಂಡು ಹೆಣ್ಣನ್ನು ಹಾಡಿ ಹೊಗಳಿದರೆ, ಅದಕ್ಕುತ್ತರವಾಗಿ ಆ ಹೆಣ್ಣು ಸಹಾ, ಬಯಲು ಸೀಮೆಯ ಗಂಡು ಬಲುಗುಂಡು ಜಗಮೊಂಡು ದುಂಡು ಹೂ ಚೆಂಡು ನನ್ನ ಸರದಾಗೆ ರಸಗುಂಡು ಎಂದು ಹಾಡಿ ಹೊಗಳುತ್ತಾಳೆ. ಈ ಹಾಡಿನಲ್ಲಿ ನಟಿಸಿರುವ ನಾಯಕ ನಾಯಕಿಯರಿಬ್ಬರೂ ಸಹಾ ಕಟ್ಟು ಮಸ್ತಿನವರಾಗಿ ಆರೋಗ್ಯವಂತರಾಗಿ ಕಾಣುವುದನ್ನು ನೋಡಿದಾಗ, ಈ ಹಿಂದೆ ಸಧೃಢತೆ ಮತ್ತು ಆರೋಗ್ಯ ಎರಡಕ್ಕೂ ಅವಿನಾಭಾವ ಸಂಬಂಧವಿದ್ದು, ಪುರುಷ ಮತ್ತು ಮಹಿಳೆಯರು ಎಂಬ ಬೇಧ ಭಾವವಿಲ್ಲದೇ, ಎಲ್ಲರೂ ಸಹಾ ತಮ್ಮ ದೈನಂದಿನ ಚಟುವಟಿಕೆಗಳ ಮೂಲಕವೇ ಆರೋಗ್ಯವನ್ನು ಮತ್ತು ದೇಹದ ಸ್ವಾಸ್ಥ್ಯವನ್ನು ಕಾಪಾಡಿ ಕೊಂಡಿರುತ್ತಿದ್ದರು. 70ರ ದಶಕದಲ್ಲಿ ಯಾರಾದರೂ ದಪ್ಪಗೆ ಇದ್ದಾರೆ ಎಂದರೆ ಅವರ ಆರೋಗ್ಯ ಸರಿ ಇಲ್ಲ ಎನ್ನುತ್ತಿದ್ದದ್ದು, 90ರ ದಶಕದಲ್ಲಿ ಎಲ್ಲರೂ ಸಹಾ ಆಲಸಿಗಳಾದ ಪರಿಣಾಮ, ಬಹುತೇಕರು ಸ್ಥೂಲಕಾಯರಾಗಿದ್ದು, ಸಣ್ಣಗಿದ್ದರೇ ಅನಾರೋಗ್ಯ ಎಂಬು ಪರಿಭಾವಿಸುವಂತಾಗಿರುವುದು ವಿಪರ್ಯಾಸವೇ ಸರಿ.

ಹೇಳಿ ಕೇಳಿ ಭಾರತ ದೇಶವು ಹೆಚ್ಚಾದ ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು ಕೃಷಿಯಾಧಾರಿತ ದೇಶವಾಗಿದ್ದು, ಕೃಷಿ ಚಟುವಟಿಕೆಗಳಿಂದ ದಣಿವರಿದ ರೈರಾಪಿ ವರ್ಗದವರು ತಮ್ಮ ಮನೋರಂಜನೆಗಾಗಿ, ದೈಹಿಕ ಮತ್ತು ಬೌದ್ಧಿಕ ಸಧೃಢತೆಗಾಗಿ ಅನೇಕ ದೇಸೀ ಆಟಗಳನ್ನು ಆವಿಷ್ಕರಿಸಿ, ಸಮಯ ಸಿಕ್ಕಾಗಲೆಲ್ಲಾ ಆಬಾಲವೃದ್ದರಾದಿಯಾಗಿ ಆ ಆಟಗಳನ್ನು ಆಡುವ ಮೂಲಕ ನಮ್ಮ ದೇಶದ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಶ್ರೀಮಂತಗೊಳಿಸಿದ್ದಾರೆ ಎಂದರೂ ತಪ್ಪಾಗದು. ಚಿಕ್ಕಂದಿನಿಂದಲೂ ಎಲ್ಲರೂ ಒಗ್ಗೂಡಿ ಆಡುವ ಮರಕೋತಿ, ಬಿಲ್ಲುಗಾರಿಕೆ, ಕುಸ್ತಿ ಮುಂತಾದವುಗಳು ನಂತರ ದೊಡ್ಡವರಾದ ನಂತರ ಅದೇ ಆಟಗಳಿಂದ ಸಧೃಡರಾಗಿ ದೇಶ ರಕ್ಷಣೆಗಾಗಿ ಮರಕಲೆಗಳಾಗಿ ಮಾರ್ಪಾಡಾಗಿ ಹೋಗಿರುವ ಸಂಗತಿ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ದುರಾದೃಷ್ಟವಷಾತ್ ಇಂದು ನಮ್ಮ ದೇಶದಲ್ಲಿ ಹಳೆಯ ದೇಸೀ ಆಟಗಳೆಲ್ಲವೂ ನೇಪತ್ಯಕ್ಕೆ ಸರಿದು, ಇಂದು ಆಟ ಎಂದರೆ ಕೇವಲ ಪಾಶ್ಚಾತ್ಯ ಆಟಗಳಾದ ಕ್ರಿಕೆಟ್, ಪುಟ್ ಬಾಲ್, ವಾಲಿಬಾಲ್, ಟೆನ್ನಿಸ್ ಗಳಿಗಷ್ಟೇ ಸೀಮಿತವಾಗಿ ನಮ್ಮ ಗ್ರಾಮೀಣ ಸೊಗಡಿನ ಆಟಗಳಾದ ಕಬ್ಬಡ್ಡಿ, ಖೋಖೋ, ಆಟ್ಯಾಪಾಟ್ಯಾ ಮರಕೋತಿ, ಬುಗರಿ, ಚಿನ್ನಿ ದಾಂಡು, ಗೋಲಿ ಮುಂತಾದ ಆಟಗಳು ನೇಪತ್ಯಕ್ಕೆ ಸರಿದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆ ಬಹುತೇಕ ದೇಸಿ ಆಟಗಳು ಕೇವಲ ಹೊರಾಂಗಣಕ್ಕೆ ಮಾತ್ರವೇ ಸೀಮಿತವಾಗಿರದೇ, ಒಳಾಂಗಣದಲ್ಲೂ ಆಟಬಹುದಾಗಿದ್ದು, ಅವು ಕೇವಲ ಮನೋರಂಜನಾತ್ಮಕವಾಗಿದ್ದಲ್ಲದೇ, ತಮ್ಮೂಲಕ ಮಕ್ಕಳಲ್ಲಿ ಧೈರ್ಯ, ಸಾಹಸ, ಬುದ್ದಿಶಕ್ತಿ ಮತ್ತು ದೈಹಿಕ ಕ್ಷಮತೆಗಳನ್ನು ಹೆಚ್ಚಿಸುವುದರ ಜೊತೆಗೆ ಪರೋಕ್ಷವಾಗಿ ಬದುಕಿನ ಪಾಠಗಳನ್ನು ಕಲಿಸಿಕೊಡುತ್ತಿತ್ತು ಎಂದರೂ ತಪ್ಪಾಗದು. ಆದರೆ 80-90ರ ದಶಕಗಳಲ್ಲಿ ಟಿವಿ ಮತ್ತು ವಿಡೀಯೋ ಗೇಮ್ ನಮ್ಮ ದೇಶಕ್ಕೆ ಪರಿಚಯವಾದ ನಂತರ ನಮ್ಮ ದೇಶದ ಮಕ್ಕಳು ಅದರಲ್ಲೂ ವಿಶೇಷವಾಗಿ ನಗರ ಪ್ರದೇಶದ ಮಕ್ಕಳು ಹೊರಾಂಗಣ ಆಟವನ್ನು ಸಂಪೂರ್ಣವಾಗಿ ಮರೆತು ಹೋದ ಪರಿಣಾಮ ಅವರ ದೈಹಿಕ ಕ್ಷಮತೆಯ ಮೇಲಾದ ದುಪ್ಷರಿಣಾಮಗಳು ನಿಜಕ್ಕೂ ಆಘಾತಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಪೋನ್ ಮತ್ತು ಇಂಟರ್ನೆಟ್ ಸರ್ವೇ ಸಾಮಾನ್ಯವಾದ ಮೇಲಂತೂ ಮಕ್ಕಳ ದೈಹಿಕ ಕ್ಷಮತೆ ಮತ್ತಷ್ಟು ಬಿಗಡಾಯಿಸಿದೆ ಎಂದರೂ ತಪ್ಪಾಗದು. ಇದನ್ನೆಲ್ಲವನ್ನೂ ಗಮನಿಸಿದ ಭಾರತ ಸರ್ಕಾರ ದೈಹಿಕ ಕ್ಷಮತೆಯನ್ನು ದೈನಂದಿನ ಜೀವನದ ಭಾಗವಾಗಿಸಲು ಮತ್ತು ದೈಹಿಕವಾಗಿ ಸದಾಕಾಲವೂ ಸಕ್ರಿಯವಾಗಿಸುವ ಇಚ್ಛೆಯಿಂದ FIT ಇಂಡಿಯಾ ಎಂಬ ಅಭಿಯಾನವನ್ನು ಆರಂಭಿಸಿದ್ದಲ್ಲದೇ, ಖೇಲೋ ಇಂಡಿಯಾ ಎಂಬ ಮತ್ತೊಂದು ಅಭಿಯಾನದ ಮೂಲಕ, ನಮ್ಮ ಗ್ರಾಮೀಣ ಸೊಗಡಿನ ಸ್ಥಳೀಯ ಕ್ರೀಡೆಗಳನ್ನು ಮರಳಿ ಮುನ್ನಲೆಗ ತರುವ ಪ್ರಯತ್ನವನ್ನು ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ.





