*ಪದಗಳೇ, ಸ್ವಲ್ಪ ನಿಲ್ಲಿ.*

ಭಾವ ತುಂಬಿ ದೈವದಲಿ ಮೊರೆಯಿಡುತಾ,

ಹಣತೆ ಹಚ್ಚುವ ಲೋಗರಿಗೆ ದೈವ ಕೃಪೆಯೆಡೆ

ಕರೆದೊಯ್ವ ನಿಮ್ಮನು ಕವಿತೆ ಮಾಡುವೆ.

ನೀವಲ್ಲವೇ ಭಕ್ತರ, ದೈವದೊಡನೆ ಬೆಸೆವ ಸೇತುವೆ?

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ, ಕರೆದಾಗ ಬನ್ನಿ.*

ಮಸಣದ ದಿಕ್ಕು ಮರೆತು "ನಾನು ನನ್ನಿಂದಲೇ"*

ಎಂದು ಮೆರೆದು ಸೊಟ್ಟಗಾದುದ, ಬಾಯಿ ಮುಚ್ಚಿಸಿ

ನಿಮ್ಮ ಮೂಲಕವೇ   ಅಟ್ಟದಿಂದಿಳಿಸುವೆ.

ನನ್ನ ಅಕ್ಕಪಕ್ಕದಲ್ಲೇ ನಿಂತಿರಿ.

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ, ನನ್ನ ನಂಬಿ ಬನ್ನಿ.*

ವಜ್ರದಂತೆ ಕಠಿಣವಾದ ನಿಮ್ಮನು ಉಜ್ಜಿ ಉಜ್ಜಿ ಹೊಳೆವಂತಾಗಿಸಿ,

ಬಾಗಿ ಬಳಕುವ ಪುಟಕ್ಕಿಟ್ಟ ಬಂಗಾರದ ಹಾರವಾಗಿಸುವೆ.

ನಿಮ್ಮ ಕಾಠಿಣ್ಯವ ಮೆದುವಾಗಿಸಿ ಬಳಸುವೆ.

ಬನ್ನಿ ಪದಗಳೇ ಬನ್ನಿರಿ.

happy 2

*ಪದಗಳೇ, ಒಂಚೂರು ಅತ್ತಿತ್ತ ಜರುಗಿ ನಿಲ್ಲಿ.*

ದುಃಖ ಹೆಪ್ಪುಗಟ್ಟಿದ್ದರೂ ನಿಮ್ಮನರ್ಥೈಸಿಕೊಳ್ವ ಮನವ ಕರಗಿಸಿ,

ಅಳಿಸಿ, ಹಗುರಾಗಿಸುವಲ್ಲಿ ನಿಮ್ಮನೇ ಮುಂದಾಳಾಗಿ ಸ್ಥಾಪಿಸುವೆ.

ಮನಸ್ಸಿಗೆ ಎಟುಕುವಷ್ಟು ದೂರ ದೂರ ನಿಲ್ಲಿ.

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ, ನಿಮಗೆ ಅಪಮಾನಗೊಳಿಸಲಾರೆ.*

ಮನಸಿನ ಮಾತುಗಳನು ಮಿದುಳಿಗೆ ತಾಕಿಸಿ,

ಕೆಟ್ಟುದನ್ನಲ್ಲೇ ಸೋಸಿ ನಂತರವೇ ನಾಲಿಗೆಗೆ ನೀಡುವೆ.

ನಿಮಗೆ ಗೌರವ ನೀಡುವೆ.

ದಯವಿಟ್ಟು ಬನ್ನಿ.

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ, ನಿಮ್ಮನು ಕಿಲಕಿಲನೆ ನಗಿಸುವೆ.*

ನಾಳೆಗಳ ನಂಬದಷ್ಟು ವಿಷಾದ, ದುಗುಡ

ತುಂಬಿದ ಮನಕೆ ನಿಮ್ಮ ನಗುವೇ ಔಷಧವು.

ಮೊದಲು, ನೀವು ನಗುನಗುತ್ತಾ ಇರುವಂದದಿ

ನಗೆಯ ಪಟ್ಟಕ್ಕೇ ನಿಮ್ಮನ್ನೇರಿಸುವೆ.

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ, ನೀವಿಲ್ಲದೆ ಕವನವೇ ಇಲ್ಲ.*

ಹೆಪ್ಪುಗಟ್ಟಿದ ಮೌನದಲಿ, ಮಂಜು ಮುಸುಕಿದ ಬೈಗಿಗೆ

ಮಲ್ಲಿಗೆಯ ಘಮಲು ಮುತ್ತನಿಕ್ಕಲು, ನಾಲಿಗೆ ತಡವರಿಸಿದೆ.

ಪದಗಳು ಬೇಕೇ ಬೇಕಿವೆ. ಈಗಲ್ಲದೆ ಮತ್ತೆಂದು ಬರುವಿರಿ?

ಬನ್ನಿ ಪದಗಳೇ ಬೇಗ ಬನ್ನಿರಿ.

 

*ಪದಗಳೇ, ನೀವೇಕೆ ಬರುತ್ತಿಲ್ಲ?ನಾನೇನು ತಪ್ಪು ಮಾಡಿದೆ?*

ಹೇಳಿ ಹೇಳಿ. ನಾನು ನಿಮ್ಮನೇನು ಸಾಲ ಕೇಳಿದೆನೇ?

ಮಹಾಮಹಿಮರ ಸಹವಾಸ ಬಿಟ್ಟು ಬರಲು ಕೋರಿದೆನೇ?

ನಿಮ್ಮನ್ನಾರಾಧಿಸುವ ನನಗೂ, ಅಲ್ಪ ಕರುಣೆ ತೋರಿರಿ.

ಬನ್ನಿ ಪದಗಳೇ ಬನ್ನಿರಿ.

 

*ಪದಗಳೇ ಬಳಿಗೆ ಬನ್ನಿ.*

ಸುಮ್ಮನೆ ಕುಳಿತು ನಿಂತು ಹೊತ್ತು ಕಳೆವ ನಿಮ್ಮನ್ನಾಯ್ದು

ಅಂದವಾಗಿ ಕಟ್ಟಿ, ಚಂದದ ಗುಚ್ಛವಾಗಿಸುವೆ.

ಗುರುವನ್ನು ಭಜಿಸುವ ಮಹಾಮಹಿಮರಲ್ಲಿಗೇ

ನಿಮ್ಮನ್ನು ಸೇರಿಸುವೆ.

ಬನ್ನಿ ಪದಗಳೇ ಬನ್ನಿರಿ.

 

*ಶಾಂತಿವಾಸು*

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ