ಅತಿಯಾದ ಶೋಕಿ ಅಪಾಯಕ್ಕೆ ಆಹ್ವಾನ ಕಣ್ರೀ. ಮತ್ತು ತಲೆಗೇರಿಬಿಟ್ರೆ ಆಪತ್ತು ಕಟ್ಟಿಟ್ಟಬುತ್ತಿ. ಅದೇ ರೀತಿ ಓವರ್ ಬಿಲ್ಡಪ್ ಕೊಡೋಕೆ ಹೋಗಿ ಪೊಲೀಸರಿಗೆ ತಗ್ಲಾಕ್ಕೊಂಡಿದ್ದು ಬಿಗ್ಬಾಸ್ ಕಂಟೆಸ್ಟೆಂಟ್ಗಳಾದ ರಜತ್ ಕಿಶನ್ ಹಾಗೂ ವಿನಯ್ಗೌಡ. ಕಲರ್ ಕಲರ್ ಬಟ್ಟೆ ಹಾಕಿಕೊಂಡು.. ಡಿಫರೆಂಟ್ ಡಿಫರೆಂಟ್ ಆಗಿ ನಾನೇ ಹೀರೋ ಅನ್ನೋ ರೇಂಜಿಗೆ ಕೈಯಲ್ಲಿ ಲಾಂಗ್ ಹಿಡಿದು ತಿರುಗಿಸಿ ತಿರುಗಿಸಿ ರೀಲ್ಸ್ ಮಾಡಿದ ಇಬ್ಬರ ಮೇಲೂ ಕೇಸ್ ದಾಖಲಾಗಿದೆ. ಲಕ್ಷಗಟ್ಟಲೇ ಲೈಕ್ಸ್, ವೀವ್ಸ್ ಬರುತ್ತೆ ಅಂತಾ ಕನಸು ಕಟ್ಟಿಕೊಂಡು ನಡುರೋಡ್ನಲ್ಲೇ ಲಾಂಗ್ ಹಿಡ್ಕೊಂಡ್ ವಿಡಿಯೋ ಮಾಡಿದವರು ಪೊಲೀಸರ ಅತಿಥಿಯಾಗಿದ್ದರು. ಆದ್ರೆ, ಅಚ್ಚರಿ ಅಂದ್ರೆ, ಮಧ್ಯಾಹ್ನ ಅರೆಸ್ಟ್ ಆದವರು ರಾತ್ರೋರಾತ್ರಿ ರಿಲೀಸ್ ಆಗಿದ್ದಾರೆ.
ರಜತ್ ಕಿಶನ್ ಹಾಗೂ ವಿನಯ್ ಗೌಡ.. ಇಬ್ಬರೂ ಬೇರೆ ಬೇರೆ ಬಿಗ್ ಬಾಸ್ ಸೀಸನ್ಗಳ ಕಂಟೆಸ್ಟೆಂಟ್ಗಳು.. ಇಬ್ರೂ ರೆಬೆಲ್ ಆ್ಯಟಿಟ್ಯೂಡ್ನಲ್ಲಿ ಪ್ರತಿಸ್ಪರ್ಧಿಗಳ ಮೇಲೆ ರಾಂಗ್ ಆಗ್ತಿದ್ದ ಈ ರೆಬೆಲ್ ಬಾಯ್ಸ್.. ಆದ್ರೀಗ ಲಾಂಗ್ ಹಿಡಿದು ಮಾಡಿದ ಇದೊಂದು ರೀಲ್ಸ್ ಇಬ್ಬರನ್ನ ಸಂಕಷ್ಟಕ್ಕೆ ತಳ್ಳಿತ್ತು. ಬೆಂಗಳೂರಿನ ಬಸವೇಶ್ವರ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವಂತ ರೀಲ್ಸ್ ಮಾಡಿದ್ದಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ FIR ದಾಖಲಾಗಿತ್ತು. ಅಲ್ಲದೇ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರನ್ನ ಬಂಧಿಸಿದ್ರು. ಆದ್ರೀಗ ಮಧ್ಯಾಹ್ನ ಬಂಧಿಸಿ, ರಾತ್ರೋರಾತ್ರಿ ರಿಲೀಸ್ ಮಾಡಿದ್ದಾರೆ. ಇದು ಹಲವಾರು ಪ್ರಶ್ನೆಗಳನ್ನ ಹುಟ್ಟುಹಾಕಿದೆ.
ಅಸಲಿಗೆ ಸೋಮವಾರ ಬೆಳಗ್ಗೆಯಿಂದ ಇಬ್ಬರಿಗೂ ಬಸವೇಶ್ವರನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇನ್ನೇನು ಮಧ್ಯಾಹ್ನ ಅರೆಸ್ಟ್ ಮಾಡೇಬಿಟ್ರು ಅಂತಾ ಎಲ್ರೂ ಮಾತನಾಡಿಕೊಳ್ತಿದ್ರು. ಲೇಟಾದ್ರೂ ಸಂಜೆ ವೇಳೆ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದ್ರು ಬಂಧಿಸಿದ್ರು. ಆದ್ರೆ, ರಾತ್ರಿ ಆಗ್ತಿದ್ದಂತೇ ಪೊಲೀಸರ ವರಸೇನೇ ಚೇಂಜ್ ಆಗಿತ್ತು. ಇಬ್ಬರ ಕೈನಲ್ಲಿ ರಾರಾಜಿಸಿದ್ದ ಮಚ್ಚು ಫೈಬರ್‌ನಿಂದ ಮಾಡಿದ್ದು ಅಂತ ಪೊಲೀಸರು ಹೇಳ್ತಿದ್ದಾರೆ. ಇದನ್ನೇ ನೆಪ ಮಾಡಿಕೊಂಡು ಪೊಲೀಸ್ ಠಾಣೆಯಿಂದ ವಿನಯ್ ಗೌಡ ಹಾಗೂ ರಜತ್‌ನ ರಾತ್ರೋರಾತ್ರಿ ಬಿಡುಗಡೆ ಮಾಡಿದ್ದಾರೆ. ಆರೋಪಿಗಳ ಮಾತನ್ನ ಕೇಳಿ ಫೈಬರ್ ಮಚ್ಚು ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ. ಇದೀಗ ನೋಟಿಸ್ ನೀಡಿ ಆರೋಪಿಗಳನ್ನ ಬಿಟ್ಟು ಕಳಿಸಿದ್ದು, ಮಂಗಳವಾರ ಬೆಳಗ್ಗೆ 10.30ಕ್ಕೆ ಠಾಣೆಗೆ ಬರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಅಂತ ತಿಳಿದುಬಂದಿದೆ.
ಆದ್ರಿಲ್ಲಿ ಪ್ರಶ್ನೆ ಉದ್ಭವಿಸೋದು ಎಲ್ಲಿ ಅಂದ್ರೆ.. ಸೋಮವಾರ ಬೆಳಗ್ಗೆನೇ ವಿಡಿಯೋ ನೋಡಿದ ಪೊಲೀಸರಿಗೆ ಅದು ರಿಯಲ್ ಲಾಂಗಾ.. ರೀಲ್ ಲಾಂಗಾ ಅನ್ನೋ ಅನುಮಾನನೇ ಬರ್ಲಿಲ್ವಾ..? ಬರ್ಲಿಲ್ಲಾ ಅಂದ್ರೂ ಕೂಡ ಸಂಜೆ ವೇಳೆ ಇಬ್ಬರೂ ಸ್ಟೇಷನ್ಗೆ ಬಂದಾಗ ಸಂಜೆನೇ ಇದು ಫೈಬರ್ ಲಾಂಗ್ ಹೌದೋ.. ಅಲ್ವಾ ಅನ್ನೋದೂ ಕೂಡ ತಿಳಿಲೇ ಇಲ್ವಾ..? ಇಷ್ಟಾದ್ರೂ ಮಧ್ಯರಾತ್ರಿ ಫೈಬರ್ ಲಾಂಗ್ ಅಂತಾ ಹೇಗೆ ಗೊತ್ತಾಗಿದ್ದು..? ಇಬ್ಬರನ್ನೂ ರಿಲೀಸ್ ಮಾಡೋದ್ರ ಹಿಂದೆ ಪ್ರಭಾವಿಗಳ ಒತ್ತಡವೇನಾದ್ರೂ ಇತ್ತಾ..? ಅನ್ನೋ ಸಾಮಾನ್ಯ ಪ್ರಶ್ನೆಗಳು ಹುಟ್ಟಿಕೊಳ್ತಿವೆ.. ಇವೆಲ್ಲವಕ್ಕೂ ಪೊಲೀಸರೇ ಉತ್ತರ ಕೊಡಬೇಕಿದೆ.