ನವರಾತ್ರಿಯ ಸಂದರ್ಭದಲ್ಲಿ ನಳಿನಿಯ ಮನೆ ಪೂಜೆಯ ಸಂಭ್ರಮದಿಂದ ಕೂಡಿರುತ್ತದೆ. ಆ 9 ದಿನಗಳೂ ಅವಳು ಉಪವಾಸ ವ್ರತ ಕೈಗೊಂಡು ಪೂಜೆ ನಡೆಸುತ್ತಾಳೆ. ದೇವಸ್ಥಾನಕ್ಕೆ ಹೋಗಿ ಬರುತ್ತಾಳೆ. ನವಮಿಯಂದು ಕನ್ಯಾಪೂಜೆ ನೆರವೇರಿಸುತ್ತಾಳೆ. ಇಷ್ಟೆಲ್ಲವನ್ನೂ ಹೇಗೆ ಮಾಡುವೆ ಎಂದು ಪ್ರಶ್ನಿಸಲು ಅವಳು ಬಹಳ ಶ್ರದ್ಧೆಯೊಡನೆ ಹೇಳುತ್ತಾಳೆ, “ದೇವಿಯ ಶಕ್ತಿಯಿಂದ ಎಲ್ಲ ಸಾಧ್ಯವಾಗುತ್ತದೆ. ನನ್ನ ಕುಟುಂಬದ ಸುಖಶಾಂತಿಗಾಗಿ ನಾನು ಇದನ್ನೆಲ್ಲ ಮಾಡುತ್ತೇನೆ.”

ವಾಸ್ತವವಾಗಿ ಅವಳ ಮನೆಯಲ್ಲಿ ನಿತ್ಯ ಪತಿಪತ್ನಿಯರ ನಡುವೆ ಜಗಳ ನಡೆಯುತ್ತಿರುತ್ತದೆ. ಕೆಲವೊಮ್ಮೆ ನೆರೆಯವರು ಅಥವಾ ನೆಂಟರು ಬಂದು ಸಮಾಧಾನ ಹೇಳುವ ಮಟ್ಟಿಗೆ ಜಗಳದ ಪ್ರಕೋಪವಿರುತ್ತದೆ.

ನಳಿನಿಗೆ ಇಬ್ಬರು ಗಂಡುಮಕ್ಕಳಿದ್ದು, ಅವರು ತಂದೆ ತಾಯಿಯರ ಕಲಹದಿಂದ ಬೇಸತ್ತಿದ್ದಾರೆ, “ಮನೆಗೆ ಬಂದಾಗೆಲ್ಲ ಅಪ್ಪ ಅಮ್ಮ ಸಣ್ಣ ಸಣ್ಣ ವಿಷಯಕ್ಕೂ ವಾದ ಮಾಡುತ್ತಾ ಇರುತ್ತಾರೆ. ಇವರ ಜಗಳವನ್ನು ನೋಡಿ ಆದಷ್ಟೂ ಮನೆಯಲ್ಲಿ ಇಲ್ಲದಿರುವುದೇ ಒಳ್ಳೆಯದು ಎನಿಸುತ್ತದೆ,” ಎನ್ನುತ್ತಾರೆ.

ಗೀತಾಳ ಪತಿ ತೀರಿಕೊಂಡಾಗ ಮಗ ವಿಶಾಲ್‌ 8ನೇ ತರಗತಿಯಲ್ಲಿ ಓದುತ್ತಿದ್ದನು. ತಂದೆಯನ್ನು ಬಹಳವಾಗಿ ಹಚ್ಚಿಕೊಂಡಿದ್ದ ಅವನಿಗೆ ಅವರ ಮೃತ್ಯುವಿನ ನಂತರ ಒಂಟಿತನ ಕಾಡಲಾರಂಭಿಸಿತು. ಗೀತಾ ಬ್ಯಾಂಕ್‌ಉದ್ಯೋಗಿ. ಅವಳು ದಿನ ಬ್ಯಾಂಕಿಗೆ ಹೋಗುವ ಮುನ್ನ 2 ಗಂಟೆ ಮತ್ತು ಬ್ಯಾಂಕ್‌ನಿಂದ ಬಂದ ನಂತರ 1 ಗಂಟೆಯ ಕಾಲ ಪೂಜೆ ಮಾಡುತ್ತಿದ್ದಳು. ಅವಳ ಪೂಜಾ ಕೆಲಸ ಮತ್ತು ಮನೆಗೆಲಸವೆಲ್ಲ ಮುಗಿಯುವ ವೇಳೆಗೆ ಮಗ ಮಲಗಿಬಿಟ್ಟಿರುತ್ತಿದ್ದನು. ಹೀಗಾಗಿ ಅವಳಿಗೆ ಮಗನೊಡನೆ ಕೇವಲ ಔಪಚಾರಿಕ ಮಾತುಗಳನ್ನಾಡಲು ಮಾತ್ರ ಸಾಧ್ಯವಾಗುತ್ತಿತ್ತು. ತನ್ನ ಮನಸ್ಸಿನ ಭಾವನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ಕಾರಣದಿಂದ ವಿಶಾಲ್ ಕ್ರಮೇಣ ಡಿಪ್ರೆಶನ್‌ಗೆ ಗುರಿಯಾದ. ಈಗ ಗೀತಾ ಮಗನನ್ನು ಡಾಕ್ಟರ್‌ಬಳಿಗೆ ಕರೆದೊಯ್ಯುತ್ತಿದ್ದಾಳೆ.

ಮೂಢನಂಬಿಕೆಯ ಪರಾಕಾಷ್ಠೆ

ಗಾಯತ್ರಿ ಸ್ನಾನ ಪೂಜೆ ಮುಗಿಸುವವರೆಗೆ ನೀರನ್ನು ಸಹ ಕುಡಿಯುವುದಿಲ್ಲ. ಕೆಲವು ಸಲ ಮನೆಗೆಲಸ ಮಾಡಿ ಪೂಜೆ ಕೆಲಸ ಮುಗಿಯುವಾಗ ಮಧ್ನಾಹ್ನ ಆಗಿಬಿಡುತ್ತದೆ. ಅವಳ ಪತಿ ಎಷ್ಟೋ ಸಲ ಅವಳಿಗೆ ತಿಳಿಸಿ ಹೇಳಿದ್ದಾರೆ, “ತಿಂಡಿ ತಿನ್ನದೆ ಮಧ್ಯಾಹ್ನದರೆಗೂ ಇರುವುದು ಸರಿಯಲ್ಲ. ನಿನ್ನ ಆರೋಗ್ಯ ಹಾಳಾಗುತ್ತದೆ.”

ಆದರೆ ಗಾಯತ್ರಿ ಆ ಮಾತನ್ನು ಲಕ್ಷಿಸಲೇ ಇಲ್ಲ. ಒಂದು ದಿನ ತಲೆ ಸುತ್ತಿ ಬಿದ್ದುಬಿಟ್ಟಳು. `ಬಹಳ ಹೊತ್ತು ಹಸಿದಿರುವುದರಿಂದ ಬಿಪಿ ಕಡಿಮೆಯಾಗಿಬಿಟ್ಟಿದೆ,’ ಎಂದು ಡಾಕ್ಟರ್‌ ಹೇಳಿದರು. ಇಷ್ಟೆಲ್ಲ ಆದರೂ ಗಾಯತ್ರಿ ತನ್ನ ಪದ್ಧತಿಯನ್ನು ಬಿಡಲಿಲ್ಲ. ಇದರಿಂದಾಗಿ ಮನೆಯಲ್ಲಿ ಆ ಬಗ್ಗೆ ಜಗಳ ನಡೆಯುತ್ತಿರುತ್ತದೆ.

ಪ್ರತಿಭಾಳ ಪತಿಗೆ ಲಿವರ್‌ ಸಿರೋಸಿಸ್‌ ಕಾಯಿಲೆಯಾಗಿತ್ತು. 1 ತಿಂಗಳ ಚಿಕಿತ್ಸೆಯ ನಂತರ ಡಾಕ್ಟರ್‌ ಕೈ ಚೆಲ್ಲಿದರು. ಆಗ ಪ್ರತಿಭಾ ಜ್ಯೋತಿಷಿಗಳಿಗೆ ಮೊರೆ ಹೋದಳು. ಅವರು, “ಮಹಾ ಮೃತ್ಯುಂಜಯ ಹೋಮ ಮಾಡಿದರೆ ಪ್ರಾಣ ಉಳಿಸಬಹುದು,” ಎಂದು ಸಲಹೆಯಿತ್ತರು.

ಆಶೆಯ ಕಿರಣ ಕಂಡಕೂಡಲೇ ಪ್ರತಿಭಾ ಹಿಂದೆ ಮುಂದೆ ಯೋಚಿಸದೆ ಜ್ಯೋತಿಷಿಗೆ 25,000 ರೂ. ಕೊಟ್ಟಳು. ಆದರೆ ಮರುದಿನವೇ ಅವಳ ಪತಿ ವಿಧಿವಶರಾಗಿಬಿಟ್ಟರು.

ಸಾಫ್ಟ್ ವೇರ್‌ ಎಂಜಿನಿಯರ್‌ ಆದ ರಶ್ಮಿ ತನ್ನ ಸಹೋದ್ಯೋಗಿಯನ್ನು ಪ್ರೀತಿಸಿದಳು. ಒಂದೇ ಜಾತಿಗೆ ಸೇರಿದವರಾದ್ದರಿಂದ ಎರಡೂ ಮನೆಗಳಲ್ಲಿ ಒಪ್ಪಿಗೆ ಸಿಕ್ಕಿತು. ಆದರೆ, “ಜಾತಕ ಹೊಂದದಿರುವುದರಿಂದ ಈ ಮದುವೆ ನಡೆಯುವಂತಿಲ್ಲ. ಮದುವೆಯಾದರೆ ಇವರಿಬ್ಬರಲ್ಲಿ ಒಬ್ಬರ ಮೃತ್ಯು ಆಗುತ್ತದೆ,” ಎಂದು ಜೋಯಿಸರು ಅಭಿಪ್ರಾಯಪಟ್ಟರು.

ತಮ್ಮ ತಮ್ಮ ತಂದೆ ತಾಯಿಯರಿಗೆ ತಿಳಿಸಿ ಹೇಳಿದರೂ ಒಪ್ಪದಿದ್ದುದರಿಂದ ಹುಡುಗ ಹುಡುಗಿ ರಿಜಿಸ್ಟರ್‌ಮದುವೆ  ಮಾಡಿಕೊಂಡರು. ವಿವಾಹವಾಗಿ 15 ವರ್ಷಗಳ ನಂತರ ಅವರು ಸಂತೋಷಕರ ಜೀವನ ನಡೆಸುತ್ತಿದ್ದಾರೆ.

ಆತ್ಮಹತ್ಯೆಯ ಆಲೋಚನೆ

ಅಂಬಿಕಾ ಒಂದು ಭಜನಾ ಮಂಡಳಿಯ ಸದಸ್ಯೆ. ಅವಳು ತನ್ನ ಸಂಘದ ಸದಸ್ಯರೊಂದಿಗೆ ಭಜನೆ ಮಾಡಲು ಅಲ್ಲಿ ಇಲ್ಲಿ ಹೋಗುತ್ತಲೇ ಇರುತ್ತಾಳೆ. ತನ್ನ ಮಗನ ಪರೀಕ್ಷೆಯ ಸಮಯದಲ್ಲಿಯೂ ಅವಳು ಮನೆಯಲ್ಲಿರುತ್ತಿರಲಿಲ್ಲ. ಅವಳ ಮಗ 10ನೇ ತರಗತಿಯ ಪರೀಕ್ಷೆಯಲ್ಲಿ ಚೆನ್ನಾಗಿ ಮಾಡಿಲ್ಲವೆಂಬ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡನು. ಅಂಬಿಕಾ ಮಗನ ಜೊತೆಯಲ್ಲಿದ್ದು ಅವನ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರೆ, ಅವನು ಆತ್ಮಹತ್ಯೆಯ ಆಲೋಚನೆಯನ್ನು ದೂರ ಮಾಡಿ ಧೈರ್ಯ ತುಂಬಬಹುದಾಗಿತ್ತು.

ಇಂತಹ ಘಟನೆಗಳು ನಿತ್ಯ ನಮ್ಮ ಸುತ್ತಮುತ್ತ ಕಂಡು ಬರುತ್ತವೆ. ಪೂಜಾವಿಧಿ ಮತ್ತು ಧಾರ್ಮಿಕ ಆಚರಣೆಗಳು ಮನೆಗಳನ್ನು ಆವರಿಸಿ ಆಂತರಿಕ ಕಲಹ ಮತ್ತು ಹಾನಿಗಳಿಗೆ ಕಾರಣವಾಗುತ್ತಿವೆ. ಯಾವುದಾದರೂ ಸಮಸ್ಯೆ ಉಂಟಾದಾಗ ನಮ್ಮ ಜನರು ದೇವರಿಗೆ ಮೊರೆ ಹೋಗುತ್ತಾರೆ. ಅದಕ್ಕೆ ಕಷ್ಟ ದೂರವಾದರೆ 1,100 ರೂ. ಕಾಣಿಕೆ ಅರ್ಪಿಸುವೆನೆಂದು ಹರಕೆ ಹೊರುತ್ತಾರೆ. ಆದರೆ  ಆ ಸಮಸ್ಯೆಗೆ ನಮ್ಮ ವಿವೇಕ, ಜಾಣ್ಮೆಗಳಲ್ಲಿಯೇ ಪರಿಹಾರ ಅಡಗಿದೆಯೆಂದು ಅರ್ಥ ಮಾಡಿಕೊಳ್ಳುವುದಿಲ್ಲ. ಜೀವನ ಒಂದು ದೋಣಿಯಿದ್ದಂತೆ. ನಾವು ಆ ಕೋಣೆಯಲ್ಲಿ ಕುಳಿತು ಬುದ್ಧಿ ಮತ್ತು ವಿವೇಕವೆಂಬ ಹುಟ್ಟಿನಿಂದ ಈ ಜೀವನ ಸಾಗರದಲ್ಲಿ ಮುಂದುವರಿಯಬೇಕು. ಅಜ್ಞಾನವಶರಾದರೆ ದೋಣಿ ಗೋತ ಹೊಡೆಯುತ್ತದೆ. ನಿಮಗೆ ಅಂತಹ ಸ್ಥಿತಿ ಬಾರದಿರಲು ಈ ಸಲಹೆಗಳನ್ನು ಗಮನಿಸಿ :

ಕುಟುಂಬಕ್ಕೆ ಪ್ರಾಮುಖ್ಯತೆ ನೀಡಿ : ಪತಿಪತ್ನಿಯರ ಜಗಳನ್ನು ಹೋಗಲಾಡಿಸಿಕೊಳ್ಳಲು ಧೈರ್ಯ ಮತ್ತು ತಿಳಿವಳಿಕೆ ಬೇಕು. ಉಪವಾಸ, ವ್ರತ, ಪೂಜಾವಿಧಿಗಳನ್ನು ಕೈಗೊಳ್ಳುವ ಬದಲು ಪರಸ್ಪರರನ್ನು ಅರ್ಥ ಮಾಡಿಕೊಳ್ಳಿ. ಭಿನ್ನಾಭಿಪ್ರಾಯ ಬಂದಾಗ ಕೆಲವನ್ನು ಅವರ ರೀತಿಯಲ್ಲಿ ಮತ್ತೆ ಕೆಲವನ್ನು ನಿಮ್ಮ ರೀತಿಯಲ್ಲಿ ನಡೆಸಿಕೊಳ್ಳಿ. ಆಗ ದೊಡ್ಡ ಸಮಸ್ಯೆಯೂ ಪರಿಹಾರವಾಗಬಲ್ಲದು.

ಗೃಹಸ್ಥ ಜೀವನದ ಆಧಾರವೆಂದರೆ ಪ್ರೀತಿ, ವಿಶ್ವಾಸ, ಸಹನೆ, ವಿನಯ ಹಾಗೂ ಸಹಕಾರ ಸಮರ್ಪಣಾ ಭಾವಗಳು. ಪತಿ ಪತ್ನಿಯರ ಸಂಬಂಧ ಸುಸೂತ್ರವಾಗಿ ನಡೆಯಲು ಅಹಂಕಾರವನ್ನು ತ್ಯಾಗ ಮಾಡುವುದು ಅತಿ ಅವಶ್ಯಕ. ಯಾವುದೇ ಕೋಪ ಭಿನ್ನಾಭಿಪ್ರಾಯವನ್ನು ಅಹಂನಿಂದಾಗಿ ಎಳೆದು ದೊಡ್ಡದು ಮಾಡದೆ ಆಗಲೇ ಪರಿಹರಿಸಿಕೊಳ್ಳಿ. ನಿಮ್ಮ ಪೂಜಾ ವಿಧಿಯಿಂದಾಗಿ ಮನೆಯಲ್ಲಿ ಜಗಳವಾಗುತ್ತಿದ್ದರೆ, ಮನೆಯ ಅಶಾಂತಿಗೆ ಭಂಗ ಉಂಟಾಗುವ ಅಂತಹ ಪೂಜೆಯಿಂದ ಏನು ಪ್ರಯೋಜನ ಎಂದು ತಾರ್ಕಿಕವಾಗಿ ಆಲೋಚಿಸಿ. ಕುಟುಂಬದ ಶಾಂತಿಗೆ ತೊಡಕಾಗುವ ಯಾವ ಕೆಲಸವನ್ನೂ ಮಾಡಬೇಡಿ.

ಮಕ್ಕಳೊಂದಿಗೆ ಸಮಯ ಕಳೆಯಿರಿ : ಕಿಶೋರಾವಸ್ಥೆಗೆ ಬರುತ್ತಿರುವ ನಿಮ್ಮ ಮಕ್ಕಳೊಂದಿಗೆ ಆದಷ್ಟು ಹೆಚ್ಚು ಸಮಯ ಕಳೆಯಿರಿ. ಅವರೊಂದಿಗೆ ಸ್ನೇಹಿತರಂತೆ ವ್ಯವಹರಿಸಿ. ಅವರ ವೈಯಕ್ತಿಕ ವಿಷಯದ ಬಗ್ಗೆಯೂ ಮಾತನಾಡಿ. ಆಗ ಅವರು ತಮ್ಮ ಮನಸ್ಸಿನ ಎಲ್ಲ ಮಾತುಗಳನ್ನೂ  ನಿಮ್ಮೊಂದಿಗೆ ತೆರೆದಿಡಲು ಸಾಧ್ಯವಾಗುತ್ತದೆ. ಅವರು ತೊಂದರೆಯಲ್ಲಿದ್ದಾಗ ಅವರಿಗೆ ಸಮಾಧಾನ ಹೇಳಿ ಸರಿಯಾದ ಮಾರ್ಗದರ್ಶನ ನೀಡಿ. ಮಕ್ಕಳಿಗೆ ಮನೆಯಲ್ಲಿ ಪ್ರೀತಿಯ ವಾತಾವರಣ ದೊರೆಯದಿದ್ದರೆ ಅವರು ಸ್ನೇಹಿತರ ಕಡೆ ತಿರುಗುತ್ತಾರೆ. ಅದರಿಂದ ಕೆಲವು ಸಲ ಅವರು ದಾರಿ ತಪ್ಪಲೂಬಹುದು.

ನಿಮ್ಮ ವ್ರತ, ಪೂಜೆಗಳಿಂದಾಗಿ ನಿಮ್ಮ ಮಕ್ಕಳು ನಿರ್ಲಕ್ಷಿಸಲ್ಪಡದಂತೆ ಎಚ್ಚರದಿಂದಿರಿ. ಮಕ್ಕಳನ್ನು ಇವುಗಳ ಕಡೆಗೆ ಸೆಳೆಯದೆ ವಿದ್ಯಾಭ್ಯಾಸ ಒಂದು ಪೂಜೆ ಎಂದು ತಿಳಿಸಿಕೊಟ್ಟು ಅವರು ಮನಸ್ಸಿಟ್ಟು ಅಭ್ಯಾಸ ಮಾಡುವಂತೆ ನೋಡಿಕೊಳ್ಳಿ.

ಆರೋಗ್ಯದ ಕಡೆ ಗಮನವಿರಿಸಿ : ಕೆಲವರು ಪೂಜೆ ಮಾಡದೆ ಏನೂ ತಿನ್ನುವುದಿಲ್ಲ ಎಂಬ ನಿಯಮವನ್ನು ಪಾಲಿಸುತ್ತಾರೆ. ಗೃಹಿಣಿಯರು ಮನೆಗೆಲಸ ಮುಗಿಸುವ ತರಾತುರಿಯಲ್ಲಿ ಬೆಳಗಿನ ತಿಂಡಿ ತಿನ್ನದೆ ಒಟ್ಟಿಗೆ ಊಟ ಮಾಡುತ್ತಾರೆ. ಇದು ಕಾಯಿಲೆಗೆ ಕರೆ ನೀಡಿದಂತಾಗುತ್ತದೆ.

ವೈದ್ಯರ ಪ್ರಕಾರ ರಾತ್ರಿ ಮತ್ತು ಮಧ್ಯಾಹ್ನದ ಊಟದ ನಡುವೆ ಹೆಚ್ಚು ಸಮಯದ ಅಂತರವಿರುವುದರಿಂದ ಬೆಳಗಿನ ತಿಂಡಿ ತಿನ್ನುವುದು ಅವಶ್ಯಕ. ಏಕೆಂದರೆ ಈ ಅಂತರ ಹೆಚ್ಚಾದಾಗ ಶರೀರದಲ್ಲಿ ವಿಷಯುಕ್ತ ಹಾರ್ಮೋನ್‌ ಉತ್ಪನ್ನಗೊಳ್ಳುತ್ತದೆ. ಇದು ಆರೋಗ್ಯಕ್ಯೆ ಬಹಳ ಹಾನಿಕಾರಕ.

ಮೂಢನಂಬಿಕೆ ಬೇಡ : ಕೆಲವರು ಅನಾರೋಗ್ಯ ಅಥವಾ ಸಮಸ್ಯೆಗಳ ಪರಿಹಾರಕ್ಕಾಗಿ ತಾಂತ್ರಿಕ ಮಾಂತ್ರಿಕರ ಬಳಿಗೆ ಧಾವಿಸುತ್ತಾರೆ. ಅದರ ಬದಲು ವೈದ್ಯರನ್ನು ಸಂಪರ್ಕಿಸಿ ಔಷಧ ಪಡೆಯಿರಿ ಮತ್ತು ಕಾಯಿಲೆ ಹೆಚ್ಚದಂತೆ ತಡೆಯಿರಿ.

ರಾಗಿಣಿಯ 3 ವರ್ಷದ ಮಗಳು ಬಹಳ ಚೂಟಿ ಹಾಗೂ ತುಂಟಿ. ಒಂದು  ದಿನ ಅವಳಿಗೆ ಇದಕ್ಕಿದ್ದಂತೆ ಜ್ವರ ಬಂದಿತು. ರಾಗಿಣಿ 1 ವಾರದವರೆಗೆ ಅವಳನ್ನು ಅಲ್ಲಿ ಇಲ್ಲಿ ಕರೆದೊಯ್ದು ದೃಷ್ಟಿ ನಿವಾಳಿಸಿದಳು, ಮಂತ್ರ ಹಾಕಿಸಿದಳು. ಆದರೆ ಆ ಮಗುವಿಗೆ ಟೈಫಾಯಿಡ್‌ಆಗಿತ್ತು. ನಂತರ ವೈದ್ಯರಿಂದ ದೀರ್ಘ ಚಿಕಿತ್ಸೆ ಕೊಡಿಸಿ ಗುಣಪಡಿಸಲಾಯಿತು. ಆದ್ದರಿಂದ ಮೂಢನಂಬಿಕೆಗೆ ಬಲಿಯಾಗಬೇಡಿ. ಪೂಜೆಯ ಹೆಸರಿನಲ್ಲಿ ಹಣ ದೋಚುವುರಿಂದ ದೂರವಿರಿ. ನಿಮ್ಮ ಹಣವನ್ನು ಸದುಪಯೋಗಗೊಳಿಸಿ.

ಮಕ್ಕಳ ಸಂತೋಷ ಮುಖ್ಯವಾಗಿರಲಿ : ನಿಮ್ಮ ಮಕ್ಕಳ ಮದುವೆ ಮಾಡಬೇಕಾದಾಗ ಜಾತಕ, ಕುಂಡಲಿ, ಜಾತಿ, ಅಂತಸ್ತುಗಳು ಪ್ರಮುಖವಾಗದಿರಲಿ. ಯೋಗ್ಯತೆ ಮತ್ತು ಸತ್ಕುಟುಂಬಗಳನ್ನು ಮಾನದಂಡವನ್ನಾಗಿ ಇರಿಸಿಕೊಳ್ಳಿ ಮತ್ತು ಮಕ್ಕಳ ಸಂತೋಷದಲ್ಲಿ ಪಾಲ್ಗೊಳ್ಳಿ. ಅವರ ಸಂತೋಷದಲ್ಲೇ ನಿಮ್ಮ ಸಂತೋಷವನ್ನು ಕಂಡುಕೊಳ್ಳಿ.

ವ್ಯರ್ಥವಾದ ಕ್ರಿಯಾಕರ್ಮಗಳಲ್ಲಿ ತೊಡಗಿ ನಿಮ್ಮ ಮಕ್ಕಳ ಸಂತೋಷವನ್ನು ಹಾಳುಮಾಡಬೇಡಿ. ಏಕೆಂದರೆ ತಂದೆ ತಾಯಿಯರ ನೆರಳಿನಲ್ಲಿ ಮತ್ತು ಅವರ ಆಶೀರ್ವಾದದೊಂದಿಗೆ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಲು ಮಕ್ಕಳು ಬಯಸುತ್ತಾರೆ. ತಂದೆ ತಾಯಿಯರು ತಮ್ಮ ಹಠಕ್ಕೇ ಕಟ್ಟುಬಿದ್ದರೆ, ಮಕ್ಕಳು ಆಗ ಅವರ ಅನುಪಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ.

ವಿವೇಚನೆ ಇರಲಿ

ಜೀವನವೇ ಒಂದು ಸಂಘರ್ಷ. ಇದರಲ್ಲಿ ಸುಖದುಃಖಗಳು ಬಂದು ಹೋಗುತ್ತಿರುತ್ತವೆ. ಇಲ್ಲಿ ಎದುರಾಗುವ ಸಮಸ್ಯೆಗಳನ್ನು ಬುದ್ಧಿ ಮತ್ತು ವಿವೇಕಗಳನ್ನು ಉಪಯೋಗಿಸಿ ಪರಿಹರಿಸಿಕೊಳ್ಳಬೇಕಲ್ಲದೆ, ಪೂಜಾವಿಧಿಗಳಿಂದಲ್ಲ. ಪ್ರಸ್ತುತ ಕಾಲದಲ್ಲಿ ದೇವದೂತರಂತೆ ಧರ್ಮದ ಹೆಸರಿನಲ್ಲಿ ಪೂಜಾ ವಿಧಿಗಳನ್ನು ನಡೆಸಿಕೊಡುವ ಜನರು ಹೇರಳವಾಗಿದ್ದಾರೆ. ಮಹಿಳೆಯರು ಮಾತ್ರವಲ್ಲದೆ, ಪುರುಷರೂ ಸಹ ಜೀವನದ ಬಗೆಬಗೆಯ ಸಮಸ್ಯೆಗಳ ಸಮಾಧಾನಕ್ಕಾಗಿ ಪೂಜಾವಿಧಿ ಮತ್ತು ಧಾರ್ಮಿಕ ಅನುಷ್ಠಾನಗಳ ಮೊರೆ ಹೋಗುತ್ತಾರೆ. ಆದರೆ ತರ್ಕ ಬುದ್ಧಿಯನ್ನು ಉಪಯೋಗಿಸಿ. ವಿವೇಚನೆಯಿಂದ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಅವರ ಕೈಯಲ್ಲೇ ಇದೆಯಲ್ಲದೆ. ಇತರರು ಅದನ್ನು ಹೇಗೆ ಬಗೆಹರಿಸಬಲ್ಲರು?

ಯಾವುದು ಸರಿ ತಪ್ಪು, ಯಾವುದು ಲಾಭ ನಷ್ಟ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಪೂರ್ವಾಗ್ರಹ, ಕರ್ಮ, ಮೂಢನಂಬಿಕೆಗಳಂತಹ ಭಾವನೆಗಳಿಂದ ದೂರ ಸರಿದು ವಿವೇಚನೆಯಿಂದ ಜೀವನ ನಡೆಸದಿದ್ದರೆ, ಬಾಳು ದುರ್ಗಮವಾಗುತ್ತದೆ. ಆದ್ದರಿಂದ ಜೀವನದ ಪ್ರಾಮುಖ್ಯತೆಯನ್ನು ಅರಿತು ಅವಕ್ಕೆ ತಕ್ಕಂತೆ ಕೆಲಸ ಮಾಡುತ್ತಾ ಮುಂದುವರಿಯಬೇಕು.

– ಪ್ರತಿಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ