ಕುಟುಂಬ ನಿರ್ವಹಣೆ ಹಾಗೂ ಉದ್ಯೋಗ ಈ ಎರಡರ ನಡುವೆ ಸಮನ್ವಯ ಸಾಧಿಸುವುದೇ ಕಷ್ಟ. ಅಂತಹದರಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಾ, ಗಂಡ, ಇಬ್ಬರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಾ, ವಾರಾಂತ್ಯದಲ್ಲಿ ಫ್ಯಾಷನ್ ಶೋಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದ ಬೆಂಗಳೂರಿನ ಪದ್ಮಪ್ರಿಯಾ ಗೋವಾದಲ್ಲಿ ನಡೆದ `ಮಿಸೆಸ್ ಇಂಡಿಯಾ ಯೂನಿವರ್ಸ್’ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ಬಹುದೊಡ್ಡ ಕೀರ್ತಿಗೆ ಪಾತ್ರರಾದರು.
ಗೃಹಶೋಭಾದ ಬೆಡಗಿಯರ ಕನಸು
ಪದ್ಮ ಪ್ರಿಯಾ ಮೂಲತಃ ಬೆಂಗಳೂರಿನವರು. ಅಪ್ಪ ವೈದ್ಯ ವೃತ್ತಿಯಲ್ಲಿದ್ದರು. ಅಮ್ಮ ಗೃಹಿಣಿ. ಅವರು ಮನೆಗೆ ತರುತ್ತಿದ್ದ `ಗೃಹಶೋಭಾ’ದ ಪುಟಗಳನ್ನು ಪದ್ಮಪ್ರಿಯಾ ಬಾಲ್ಯದಲ್ಲಿಯೇ ತಿರುಗಿಸಿ ನೋಡುತ್ತಿದ್ದರು. ಬಣ್ಣಬಣ್ಣದ ಬಟ್ಟೆ ತೊಟ್ಟ ಬೆಡಗಿಯರ ಫೋಟೋಗಳನ್ನು ನೋಡಿ ತಾನೂ ಆ ಥರ ಡ್ರೆಸ್ ಧರಿಸಬೇಕು. ಈ ರೀತಿ ಪತ್ರಿಕೆಗಳಲ್ಲಿ ತನ್ನ ಫೋಟೋ ಪ್ರಕಟವಾಗಬೇಕು ಎನ್ನುವುದು ಅವರ ಕನಸಾಗಿತ್ತು. 7ನೇ ತರಗತಿಯಲ್ಲಿ ಓದುತ್ತಿದ್ದಾಗ ಪತ್ರಿಕೆಯೊಂದರಲ್ಲಿ `ನಟಿಸಲು ಹುಡುಗಿ ಬೇಕು’ ಎಂಬ ಜಾಹೀರಾತು ನೋಡಿ ನಾಗತಿಹಳ್ಳಿ ಅವರನ್ನು ಭೇಟಿಯಾಗಿದ್ದರು. ಅವರು ಹುಡುಗಿಯ ಚಾಕಚಕ್ಯತೆ ನೋಡಿ, `ನಿನ್ನನ್ನು ಆಯ್ಕೆ ಮಾಡ್ತೀವಿ. ಶೂಟಿಂಗ್‌ಗೆ ವಿದೇಶಕ್ಕೆ ಹೋಗಬೇಕಾಗುತ್ತದೆ. ಬರೋಕೆ ಸಿದ್ಧನಾ? ನಿರ್ಧರಿಸಿ,’ ಎಂದು ಹೇಳಿದರು. ಮನೆಯವರೇನೊ ಒಪ್ಪಿದ್ದರು. ಆದರೆ ಅಕ್ಕಪಕ್ಕದವರು ಮತ್ತು ಸಂಬಂಧಿಕರು, `ಹುಡುಗಿಗೆ ಈಗಲೇ ಸಿನಿಮಾ ಹುಚ್ಚು ಹಚ್ಚಿಬಿಟ್ಟರೆ ಅವಳು ಮುಂದೆ ನಿಮ್ಮ ಕೈಗೆ ಸಿಗುವುದಿಲ್ಲ,’ ಎಂದು ಹೇಳಿಬಿಟ್ಟರು. ಹೀಗಾಗಿ ಕೈಗೆ ಬಂದ ಅವಕಾಶವೊಂದು ತಪ್ಪಿಹೋಯಿತು.
ಕಾಲೇಜು ದಿನಗಳಲ್ಲಿ ಅಂದರೆ ಎಂಜಿನಿಯರಿಂಗ್ ಓದುತ್ತಿದ್ದಾಗ ಸ್ಟೇಜ್ ಮೇಲೆ ಹತ್ತು ಹಲವು ಕಾರ್ಯಕ್ರಮಗಳನ್ನು ಕೊಡುವ ಅವಕಾಶ ಪದ್ಮಪ್ರಿಯಾಗೆ ಸಿಕ್ಕಿತು. `ನಿನಗೆ ಒಳ್ಳೆಯ ಫ್ಯಾಷನ್ ಟೇಸ್ಟ್ ಇದೆ. ನೀನು ಮುಂದೆ ಒಳ್ಳೆಯ ಫ್ಯಾಷನ್ ಶೋ ಕೊಡುತ್ತೀಯಾ,’ ಎಂದು ಆಗಲೇ ಗೆಳತಿಯೊಬ್ಬರು ಹೇಳುತ್ತಿದ್ದರು. ಆದರೆ ಇಷ್ಟೆಲ್ಲ ಪ್ರತಿಭೆ ಇದ್ದೂ ಮದುವೆಗೂ ಮುನ್ನ ಫ್ಯಾಷನ್, ಟಿವಿ ಪ್ರಪಂಚದಲ್ಲಿ ಪ್ರವೇಶಿಸುವ ಅವಕಾಶ ಸಿಗಲೇ ಇಲ್ಲ. `ಮದುವೆಗೂ ಮುನ್ನ ಅದೆಲ್ಲ ಬೇಡ, ಜನ ಏನೇನೊ ಆಡಿಕೊಳ್ತಾರೆ. ಮದುವೆಯಾದ ಮೇಲೆ ಏನಾದರೂ ಮಾಡುವೆಯಂತೆ,’ ಎಂದು ಕುಟುಂಬದವರು ಹೇಳುತ್ತಿದ್ದರು. ಹೀಗಾಗಿ ಮದುವೆಯಾಗುವ ತನಕ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ.
ಮದುವೆಯ ಬಳಿಕ
ಮದುವೆಯಾದ ಬಳಿಕವೇ ನನಗೆ ಹೊಸದೊಂದು ಪ್ರಪಂಚದ ಪರಿಚಯವಾಯಿತು. ಅದರಲ್ಲೂ ಇಬ್ಬರು ಮಕ್ಕಳು ಹುಟ್ಟಿದ ಬಳಿಕ ನನ್ನಲ್ಲಿ ಕ್ರಿಯಾಶೀಲತೆ ಹೆಚ್ಚಿತು, ಎಂದು ಪದ್ಮ ಪ್ರಿಯಾ ಹೇಳುತ್ತಾರೆ.
ಫ್ಯಾಷನ್ ಶೋಗಳು, ಟಿ.ವಿ ಧಾರಾವಾಹಿಗಳಲ್ಲಿ ಅವಕಾಶಗಳು ಸಿಗತೊಡಗಿದವು. ಈ ಮಧ್ಯೆ ವಿವಾಹಿತ ಮಹಿಳೆಯರಿಗೆ ಮಿಸೆಸ್ ಇಂಡಿಯಾ ಯೂನಿವರ್ಸ್ ಸ್ಪರ್ಧೆಯ ಜಾಹೀರಾತು ಕಣ್ಣಿಗೆ ಬಿದ್ದು ಅದರಲ್ಲಿ ಪಾಲ್ಗೊಳ್ಳುವ ಇಚ್ಛೆ ಅವರಲ್ಲಿ ಪ್ರಬಲವಾಯಿತು. ಅಂತಹ ಸ್ಪರ್ಧೆಗೆ ಪಾಲ್ಗೊಳ್ಳುವ ಮೊದಲ ಅರ್ಹತೆಯೆಂದರೆ `ಆನ್ ಲೈನ್ ಆಡಿಷನ್’ನಲ್ಲಿ ಪಾಲ್ಗೊಂಡು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅದರಲ್ಲಿ ಮಾತನಾಡುವ ಶೈಲಿಯೇ ಪದ್ಮಪ್ರಿಯಾರನ್ನು ಗೆಲ್ಲಿಸಿ ಗೋವಾ ಸ್ಪರ್ಧೆಗೆ ಹೋಗಿ ನಿಲ್ಲಿಸಿತು.
ಸ್ಪರ್ಧೆಗೆ 4-5 ತಿಂಗಳ ಮುಂಚೆಯೇ ಸಿದ್ಧತೆ ಆರಂಭವಾಗುತ್ತದೆ. ತಮ್ಮಲ್ಲಿರುವ ಕಲೆಗೆ ಇನ್ನೊಂದಿಷ್ಟು ಮೆರುಗು ಪಡೆದುಕೊಳ್ಳಲು ತರಬೇತಿ ಬೇಕಾಗುತ್ತದೆ. ಸಿನಿಮಾ ಗೀತೆಯೊಂದಕ್ಕೆ ಶಾಸ್ತ್ರೀಯ ಶೈಲಿಯ ನೃತ್ಯದ ತರಬೇತಿಗೆ ಪದ್ಮಪ್ರಿಯಾ 2-3 ತಿಂಗಳು ಕಷ್ಪಪಟ್ಟರು. ಗ್ರೂಮಿಂಗ್ ಹಾಗೂ ಕಮ್ಯುನಿಕೇಶನ್ ಕಲೆಯನ್ನೂ ಕರಗತ ಮಾಡಿಕೊಳ್ಳಬೇಕಾಯಿತು. ಇದರ ಹೊರತಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಧರಿಸಲು ಬೇಕಾದ 15-20 ಪ್ರಕಾರದ ಡ್ರೆಸ್‌ಗಳನ್ನು ಡಿಸೈನರ್‌ಗಳಿಂದ ಸಿದ್ಧಪಡಿಸಿಕೊಳ್ಳಬೇಕಾಯಿತು. ಇದಕ್ಕಾಗಿ 4 ತಿಂಗಳ ಸಮಯ ಬೇಕಾಯಿತು.
ಸ್ಪರ್ಧೆಯ ಹಂತದಲ್ಲಿ
`ಮಿಸೆಸ್ ಇಂಡಿಯಾ’ ಸ್ಪರ್ಧೆ ವಿವಾಹಿತ ಮಹಿಳೆಯರ ಒಂದು ಅತ್ಯುನ್ನತ ಸ್ಪರ್ಧೆಯೇ ಹೌದು. ಆ ಸಲ ಅದು ಗೋವಾದಲ್ಲಿ ನಡೆದಿತ್ತು. ಸ್ಪರ್ಧೆಗೆ 10 ದಿನಗಳ ಮುಂಚೆಯೇ ಆಯ್ಕೆಯಾದ ಮಹಿಳೆಯರನ್ನು ಅಲ್ಲಿಗೆ ಕರೆಸಿಕೊಳ್ಳುತ್ತಾರೆ. ಪ್ರತಿ ರಾಜ್ಯದಿಂದ ಒಬ್ಬರು ಸ್ಪರ್ಧಿಯಂತೆ ಅಲ್ಲಿಗೆ ಬಂದಿರುತ್ತಾರೆ. ಬೇರೆ ಬೇರೆ ರಾಜ್ಯದ ಇಬ್ಬರು ಒಂದೇ ರೂಮಿನಲ್ಲಿ 10 ದಿನಗಳ ಕಾಲ ಇರಬೇಕಾಗುತ್ತದೆ. ನೀವು ಅವರೊಂದಿಗೆ ಹೇಗೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತೀರಿ ಎನ್ನುವುದೇ ಅಲ್ಲಿ ಮೊದಲ ಪರೀಕ್ಷೆಯಾಗುತ್ತದೆ. ಪ್ರತಿದಿನ ಒಂದೊಂದು ಥೀಮ್ ಕೊಟ್ಟು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ.
ಸೆಲ್ಫ್ ಮೇಕಪ್, ಡ್ರೆಸ್ ಡಿಸೈನಿಂಗ್, ವಿವಿಧ ಕಲೆಗಳಲ್ಲಿ ನೈಪುಣ್ಯತೆಯ ಪ್ರದರ್ಶನ ತೋರಿಸಬೇಕಾಗುತ್ತದೆ.
10ನೇ ದಿನದ ಕೊನೆಗೆ ಮುಖ್ಯ ಸ್ಪರ್ಧೆ ನಡೆಯುತ್ತದೆ. ಅಂತಿಮ ಹಂತಕ್ಕೆ ಪ್ರವೇಶಿಸಿದ 5-6 ಮಹಿಳೆಯರ ನಡುವೆ ಹಣಾಹಣಿ ನಡೆಯುತ್ತದೆ. ಎಲ್ಲ ಸ್ಪರ್ಧಾರ್ಥಿಗಳನ್ನು ಹಿಂದೆ ಹಾಕಿದ ಪದ್ಮಪ್ರಿಯಾ ಫೈನಲ್‌ನಲ್ಲಿ ಗೆಲ್ಲಲಾಗದಿದ್ದರೂ ರನ್ನರ್ ಅಪ್ ಆಗಿ ಆಯೋಜಕರ ಗಮನ ಸೆಳೆದರು.
ಪ್ರತಿಭೆಗಳಿಗೆ ತರಬೇತಿಯ ಅಪೇಕ್ಷೆ
ಸೌಂದರ್ಯ ಸ್ಪರ್ಧೆ, ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುವ ಅಪೇಕ್ಷೆ ಹಲವು ಮಹಿಳೆಯರಿಗೆ ಇರುತ್ತದೆ. ಆದರೆ ಮಾಹಿತಿ ಕೊರತೆ ಹಾಗೂ ಸೂಕ್ತ ತರಬೇತಿ ಪಡೆಯಲು ಸಾಧ್ಯವಾಗದೆ ಅನೇಕ ಮಹಿಳೆಯರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ಅಂತಹ ಯುವತಿಯರನ್ನು ಕಾಲೇಜು ಹಂತದಲ್ಲಿಯೇ ಗುರುತಿಸಿ ಅವರಿಗೆ ಸೂಕ್ತ ತರಬೇತಿ ಕೊಡಬೇಕು ಎನ್ನುವುದು ಪದ್ಮಪ್ರಿಯಾರ ಅಪೇಕ್ಷೆಯಾಗಿದೆ.
ಅದಕ್ಕಾಗಿ ಅವರು ಪತಿ ನಂದಕುಮಾರ್, ಸಹೋದರಿ ಸುನೀತಾ, ಗೆಳತಿ ಸುಚಿತ್ರಾ ಅವರನ್ನೊಳಗೊಂಡ ಒಂದು ತಂಡ ರಚಿಸಿಕೊಂಡು ಪೇಜೆಂಟ್ ಸಂಸ್ಥೆಯೊಂದನ್ನು ಹುಟ್ಟುಹಾಕಲು ಈಗಾಗಲೇ ಸಿದ್ಧತೆ ಆರಂಭಿಸಿದ್ದಾರೆ. ಅದು ಕಾರ್ಯರೂಪಕ್ಕೆ ಬಂದರೆ ಸಾಮಾನ್ಯ ಮಹಿಳೆಯರು ಕೂಡ ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು.
ಫಿಟ್‌ನೆಸ್ ಮುಖ್ಯ
ಇಂತಹ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳ ಬಯಸುವ ಮಹಿಳೆಯರಿಗೆ ಏನು ಹೇಳಬಯಸುತ್ತೀರಿ? ಎಂಬ ಪ್ರಶ್ನೆಗೆ ಅವರು ಬಹಳಷ್ಟು ವಿಷಯಗಳನ್ನು ತಿಳಿಸುತ್ತಾರೆ. `ವಿವಾಹಿತ ಮಹಿಳೆಯರು ಎಲ್ಲಕ್ಕೂ ಮೊದಲು ತಮ್ಮ ಫಿಟ್‌ನೆಸ್ ಬಗ್ಗೆ ಗಮನ ಕೊಡಬೇಕು. ಎಂತಹದೇ ಡ್ರೆಸ್ ಧರಿಸಿದರೂ ಅವರಿಗೆ ಒಪ್ಪುವಂತಿರಬೇಕು. ಆಯೋಜಕರು ಕೇಳುವ ಪ್ರಶ್ನೆಗಳಿಗೆ ಚಾಕಚಕ್ಯತೆಯಿಂದ, ಧೈರ್ಯದಿಂದ ಉತ್ತರಿಸಬೇಕು. ಗ್ರೂಮಿಂಗ್ ಮತ್ತು ಕಮ್ಯೂನಿಕೇಶನ್ ಕಲೆ ಕೂಡ ಗೊತ್ತಿರಬೇಕು. ಎಲ್ಲಕ್ಕೂ ಹೆಚ್ಚಾಗಿ ಎಲ್ಲರ ಜೊತೆಗೆ ಬೆರೆಯುವ ಗುಣವಿರಬೇಕು,’ ಎಂದು ಪದ್ಮಪ್ರಿಯಾ ಹೇಳುತ್ತಾರೆ. ಜೊತೆಗೆ, `ನಾನು ಹೈಸ್ಕೂಲಿನ ದಿನಗಳಿಂದ ಗೃಹಶೋಭಾ ಪತ್ರಿಕೆಗೆ ಅಭಿಮಾನಿ. ಅದರಲ್ಲಿನ ಫ್ಯಾಷನ್ ಪುಟಗಳನ್ನು ನೋಡಿ ನಾನೂ ಇದೇ ತರಹ ಯಶಸ್ವೀ ಮಾಡೆಲ್ ಆಗಬೇಕೆಂದು ಕನಸು ಕಾಣುತ್ತಿದ್ದೆ. ಅದಿನ ನನಸಾಗಿದೆ!’ ಎನ್ನುತ್ತಾರೆ.
– ಅಶೋಕ ಚಿಕ್ಕಪರಪ್ಪಾ