ಆತ್ಮವಿಶ್ವಾಸ ತುಂಬಿರಬೇಕು : ಆ್ಯನಿ ಬೋವಿಯೇ ಕೊನೆಗೂ ಆರ್ಕಿಟೆಕ್ಚರ್‌ನ ಪದವಿ ಪಡೆದುಕೊಂಡೇಬಿಟ್ಟಳು! 2016ರಲ್ಲಿ ಕೆನಡಾ ದೇಶದ ಕ್ಯೂಬೆಕ್ ನಗರದಲ್ಲಿ ಒಂದು ಐತಿಹಾಸಿಕ ಭವನದಲ್ಲಿ ನಡೆಯುತ್ತಿರುವ ಸ್ಕೂಲ್‌ನಲ್ಲಿ ಮೊದಲ ದಿನ ಅವಳು ಪ್ರವೇಶಿಸ ಬೇಕಿದ್ದಾಗ, ನೋಡುತ್ತಾಳೆ..... ಅಲ್ಲಿ ತುಂಬಾ ಮೆಟ್ಟಿಲುಗಳಿದ್ದವು. ಅವಳು ಅಲ್ಲಿನ ಕೊರೆಯುವ ಚಳಿಯಲ್ಲಿ ತಾನು ದೈಹಿಕ ನ್ಯೂನತೆಯುಳ್ಳವಳು ಎಂಬುದನ್ನು ಮರೆತು, ವೀಲ್ ಚೇರಿನಲ್ಲಿ ಆ ಕಟ್ಟಡದ ಹಿಂಭಾಗದಲ್ಲಿದ್ದ ಟ್ರಕ್ಕುಗಳಿಗಾಗಿ ಲೋಡಿಂಗ್ ಅನ್‌ಲೋಡಿಂಗ್‌ಗೆ ಮೀಸಲಾಗಿದ್ದ ರಾಂಪ್ ಬಳಸಿಕೊಂಡೇ 3ನೇ ಮಹಡಿ ತಲುಪಿದಳು! ಆತ್ಮವಿಶ್ವಾಸ ಒಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ನಿದರ್ಶನವಾದಳು.
ಸುಖಾಂತ ಸಂಯೋಗ : ಅಮೆರಿಕಾದ ನ್ಯಾಶನಲ್ ವಿಲೆ ಬ್ಯಾಲೆ ಇತ್ತೀಚೆಗೆ ಆನ್ ಲೈನ್ ಡ್ಯಾನ್ಸ್ ಕ್ಲಾಸ್‌ಗಳಿಂದ 1920ರ ಆ ಐತಿಹಾಸಿಕ ಮಹತ್ವದ ದಿನಗಳನ್ನು ನೆನಪಿಸುತ್ತಿದೆ, ಆ ವರ್ಷದಿಂದಲೇ ಅಮೆರಿಕಾದ ಹೆಂಗಸರಿಗೂ ಮತದಾನದ ಹಕ್ಕಿದೆ ಎಂದು ಘೋಷಿಸಲಾಗಿತ್ತು. ಇದನ್ನೇ ಸುಖಾಂತ ಸಂಯೋಗ ಎಂಬಂತೆ ಸರಿಯಾಗಿ 100 ವರ್ಷಗಳು ಕಳೆದು, ಇಂದು ಭಾರತೀಯ ಮೂಲದ ಕಮಲಾ ಹ್ಯಾರಿಸ್ ಒಬ್ಬ ಹೆಂಗಸಾಗಿ ಅಲ್ಲಿ ಉಪ ರಾಷ್ಟ್ರಪತಿಯಾಗಿ ಆರಿಸಲ್ಪಟ್ಟಿದ್ದಾರೆ! ಈ ಬ್ಯಾಲೆ ಮೂಲಕ 100 ವರ್ಷಗಳ ಹಿಂದೆ ಕಂದಾಚಾರಿಗಳು ಹೇಗೆ ಹೆಣ್ಣನ್ನು ಮತದಾನವಿಲ್ಲದಂತೆ ಮಾಡಿದ್ದರೊ, ಅಂಥವರನ್ನು ಆಳಲು ಇಂದು ಒಬ್ಬ ಹೆಣ್ಣೇ ಬರಬೇಕಾಯಿತು ಎಂದು ಈ ಬ್ಯಾಲೆಯಲ್ಲಿ ಹೇಳಲಾಗುತ್ತಿದೆ.
ಸುಲಭವಲ್ಲ ಆನ್ ಲೈನ್ ಕೆಲಸ : ಇತ್ತೀಚೆಗೆ ವಿಶ್ವಾದ್ಯಂತ ಎಲ್ಲಾ ಶಾಲೆಗಳಲ್ಲೂ ಮಕ್ಕಳು ಗುರುಗಳ ಸಮ್ಮುಖದಲ್ಲಿ ಪಾಠ ಕಲಿಯಾಗದಂತೆ ಕೊರೋನಾ ಮಾರಿ ಕಾಡುತ್ತಿದೆ. ಒಂದು ಸರ್ವೇ ಪ್ರಕಾರ, ಇಂಗ್ಲೆಂಡ್‌ನ ಆರ್ಕಿಟೆಕ್ಚರ್‌ನ ವಿದ್ಯಾರ್ಥಿಗಳಲ್ಲಿ 97% ಅತಿ ಹೆಚ್ಚು ಟೆನ್ಶನ್‌ಗೆ ಗುರಿಯಾಗಿದ್ದಾರೆ. ಏಕೆಂದರೆ ಅವರು ನೆಮ್ಮದಿಯಾಗಿ ಪಾಠ ಕಲಿಯಲಾಗುತ್ತಿಲ್ಲ. ಇದೀಗ ತಂತಮ್ಮ ಮನೆಗಳ ಕಿರು ಕೋಣೆಗಳಲ್ಲಿ ಅಡಗಿದ್ದುಕೊಂಡೇ ಮೊಬೈಲ್, ಕಂಪ್ಯೂಟರ್ ಮೂಲಕ ಭಾರಿ ಭಾರಿ ಡ್ರಾಯಿಂಗ್ ಪ್ಲಾನ್ ಕಲಿಯಬೇಕಿದೆ. ಹೀಗಾದಾಗ ಹಾಸ್ಟೆಲ್ ರೂಂಮೇಟ್ಸ್ ಕಥೆ ಇನ್ನೂ ಕಷ್ಟ. ಒಬ್ಬರು ಕಷ್ಟಪಟ್ಟು ಅಭ್ಯಾಸ ನಡೆಸಿದರೆ ಇನ್ನೊಬ್ಬರಿಗೆ ಆ ಬೆಳಕಿನಲ್ಲೇ ನಿದ್ರಿಸಬೇಕಿದೆ.
ಸರಿ ಎಂದು ನಿರೂಪಿಸುವ ಪ್ರಯತ್ನ : ಅಮೆರಿಕಾದ ಸೋಪೇಮೋರ್ ವಿಶ್ವವಿದ್ಯಾಲಯದ ಬಿಯಾಂಕಾ ಸಿಫ್ಟ್ ಎಂಬ ಲೇಖಕಿ ಅತಿ ಮಹತ್ವಪೂರ್ಣ ಕೆಲಸವನ್ನೇ ಮಾಡಿದ್ದಾಳೆ. ಸಾಮಾನ್ಯವಾಗಿ ಅಲ್ಲಿ ಬಿಳಿಯರು ಕರಿಯರ ಯಾವುದೇ ಕೆಲಸವನ್ನೂ ನಗಣ್ಯ ಎಂದು ನಿರ್ಲಕ್ಷಿಸುತ್ತಾರೆ, ಅದರಲ್ಲೂ ಅದು ಸಾಹಿತ್ಯ ಸೃಜನಶೀಲತೆ ಆಗಿದ್ದರೆ ಒಂದು ಕೈ ಇನ್ನೂ ಹೆಚ್ಚು.... 1880ರ ಆ ಕಾಲದಲ್ಲಿ ಪ್ರಕಟಗೊಂಡಿದ್ದ ಆಕೆಯ ಕವಿತೆಗಳು ಇಂದಿಗೂ ಸಕಾಲಿಕ! ಅಂಥ ಕೃತಿಗಳನ್ನು ಮರುಮುದ್ರಣಗೊಳಿಸಿ ಇಂದಿನ ಯುವ ಜನಾಂಗಕ್ಕೆ ಕರಿಯರ ಅಂದಿನ ಸಾಧನೆಯನ್ನು ಪರಿಚಯಿಸುತ್ತಿದ್ದಾಳೆ ಬಿಯಾಂಕಾ, ನಿಜಕ್ಕೂ ಅಭಿನಂದನಾರ್ಹಳು!
ಕೊನೆಗೂ ಯಶಸ್ಸು ಸಿಕ್ಕಿಯೇಬಿಟ್ಟಿತು! : ಎಲ್ಲೆಲ್ಲೂ ಲಾಕ್ ಡೌನ್ ಕಾಟ ಮೇರೆ ಮೀರಿರುವಾಗ, ವಿಶ್ವದ ಶೇ.60ಕ್ಕೂ ಹೆಚ್ಚಿನ ಸಣ್ಣಪುಟ್ಟ ಉದ್ಯಮಗಳು ಮುಚ್ಚಲ್ಪಟ್ಟು ಮೂಲೆಗುಂಪಾಗುತ್ತಿರುವಾಗ, ಅಮೆರಿಕಾದ ಕಾರ್ಲೆಟ್ ಹ್ಯೂಯಿಟ್ ತನ್ನ ಬಹು ದೊಡ್ಡದೇನಲ್ಲದ ಈವೆಂಟ್ ಕಂಪನಿಯನ್ನು ಇನ್ನಷ್ಟು ದೇಶಗಳಲ್ಲಿ ವಿಸ್ತರಿಸುವ ಪ್ರಯತ್ನ ಪಡುತ್ತಿರುವುದು ನಿಜಕ್ಕೂ ನಿಬ್ಬೆರಗಾಗಿಸುವ ವಿಚಾರ. ಜನ ಹಳೆಯ ವಿಧಾನದಲ್ಲೇ ಉದ್ಯಮಗಳೊಂದಿಗೆ ವ್ಯವಹರಿಸಲು ಸಿದ್ಧರಿಲ್ಲ, ಹೀಗಾಗಿ ವಿಶ್ವಾದ್ಯಂತ ಎಲ್ಲರ ಬಿಸ್‌ನೆಸ್ ಠುಸ್ಸ್! ಈಕೆ ಮಾತ್ರ ಸಮರ್ಪಕ ರೀತಿಯಲ್ಲಿ ಆನ್ ಲೈನ್ ಈವೆಂಟ್ಸ್ ನ್ನು ಅರೇಂಜ್ ಮಾಡುವ ಸಾಹಸ ತೋರಿಸಿದಳು. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಝೂಮ್ ಮೀಟಿಂಗ್ಸ್ ನ್ನು ಯಶಸ್ವಿಗೊಳಿಸಿದಳು. ಆಹಾ ಓಹೋ ಎಂಬಷ್ಟಲ್ಲದಿದ್ದರೂ ಇತರರು ಅಸೂಯೆ ಪಡುವಷ್ಟು ಯಶಸ್ಸು ಇವಳಿಗೆ ಸಿಕ್ಕಿತು.