ಶಿಷ್ಟಾಚಾರದ ಈ ಕಿವಿಮಾತುಗಳು ನಿಮಗೆ ಕೇವಲ ವಿದೇಶದಲ್ಲಿ ಪ್ರಿಯ ಅತಿಥಿಯಾಗುವುದಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿಯನ್ನಾಗಿಯೂ ಮಾಡುತ್ತವೆ.

ಸುಮಿತ್ರಾದೇವಿ ತಮ್ಮ ಮಗಳು ಶಶಿಕಲಾ ವಾಸವಾಗಿರುವ ಅಮೆರಿಕ ದೇಶಕ್ಕೆ ಹಲವು ಸಲ ಹೋಗಿಬಂದಿದ್ದಾರೆ. ಈಗಲೂ ಅನೇಕ ಕಾರಣಗಳಿಂದ ಹೋಗುತ್ತಿರುತ್ತಾರೆ. ಮಗಳು ಹೊಸದಾಗಿ ಗಂಡನ ಮನೆಗೆ ಹೋದಾಗ ಅಳಿಯನ ಒತ್ತಾಯಕ್ಕೆ ದೇಶ ಸುತ್ತಲು ಹೋಗಿದ್ದರು. ಬಳಿಕ ಸುಮಿತ್ರಾದೇವಿ ಮಗಳ ಹೆರಿಗೆಗೆಂದು ಹೋದರು. ನಂತರ ಮತ್ತೊಮ್ಮೆ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ಬಂದರು. ಈಗ ಅವರು ಮೊಮ್ಮಕ್ಕಳಿಗೆ ರಜೆ ಇದ್ದಾಗ ಅವರ ಜೊತೆ ಖುಷಿಯಿಂದ ಕಾಲ ಕಳೆಯಲು ಹೋಗುತ್ತಾರೆ. ಈ ನಿಮಿತ್ತ ಅಮೆರಿಕಕ್ಕೆ ಹೋದಾಗಲೆಲ್ಲ ಅವರು ಅಕ್ಕಪಕ್ಕದವರ ಜೊತೆಗೆ ಸಾಕಷ್ಟು ನಿಕಟತೆ ಬೆಳೆಸಿಕೊಂಡರು. ಪ್ರತಿಸಲ ಅಮೆರಿಕಕ್ಕೆ ಹೋದಾಗಲೆಲ್ಲ ಅವರ ಎನರ್ಜಿ ಉನ್ನತ ಮಟ್ಟದಲ್ಲಿರುತ್ತದೆ.

ಅವರ ಮಗಳು, ಅಳಿಯ ವಾಸಿಸುವ ಪ್ರದೇಶದಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿಗಿಲ್ಲ. ಮಾಲುಗಳಿಗೆ ಹೋದಾಗ ಯಾವಾಗಲಾದರೂ ಯಾರಾದರೂ ಭೇಟಿಯಾಗುತ್ತಾರೆ ಅಷ್ಟೆ. ಆಗ ಅವರ ನಡುವಿನ ಮಾತುಕತೆ ಹಾಯ್‌, ಹಲೋಗಿಂತ ಹೆಚ್ಚು ಮುಂದುವರಿಯುತ್ತಿಲ್ಲ. ಸ್ನೇಹಜೀವಿ ಹಾಗೂ ಎಲ್ಲರೊಂದಿಗೂ ಬೆರೆಯುವ ಸ್ವಭಾವದ ಸುಮಿತ್ರಾದೇವಿಗೆ ಆ ಸಂಗತಿ ಬಹಳ ಬೇಸರ ತರಿಸುತ್ತಿತ್ತು. ಆದರೆ, ಯಾರು ತಮ್ಮೊಂದಿಗೆ ಇಲ್ಲವೋ ಅವರ ಬಗ್ಗೆ ಯೋಚಿಸುವುದು ಅವರಿಗೆ ಸರಿ ಕಾಣುತ್ತಿರಲಿಲ್ಲ. ಹೀಗಾಗಿ ಅವರು ಅಕ್ಕಪಕ್ಕದ ಆಂಗ್ಲ ಕುಟುಂಬದೊಂದಿಗೆ ನಿಕಟತೆ ಬೆಳೆಸಿಕೊಂಡರು.

ಮುಂಜಾನೆ ಹೊತ್ತು ಪ್ರತಿಯೊಬ್ಬರೂ ಹಾಯ್‌ ಹಲೋ ಹೇಳುತ್ತಿದ್ದರು. ಕ್ರಮೇಣ ಅದೇ ಪರಿಚಯದಲ್ಲಿ ಪರಿವರ್ತನೆಗೊಂಡಿತು. ಆದರೆ ಪರಸ್ಪರರ ಮನೆಗೆ ಹೋಗುವ ಔಪಚಾರಿಕತೆಯೊಂದು ಬಾಕಿ ಇತ್ತು. ಸುಮಿತ್ರಾದೇವಿಯವರಿಗೆ ಎದುರು ಮನೆಯ ಮಿಸೆಸ್‌ ರಾಬರ್ಟ್‌ ಮನೆಗೆ ಹೋಗಬೇಕೆಂದು ಅನಿಸುತ್ತಿತ್ತು. ಆದರೆ ವರ್ಷಾನುವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಶಶಿಕಲಾ ಹಾಗೆಯೇ ಒಮ್ಮೆಲೇ ಹೋಗುವುದು ಸರಿಯಲ್ಲ ಎಂದು ಹೇಳಿದಳು. ಯಾರದೇ ಮನೆಗೆ ಹೋಗಬೇಕೆಂದರೂ ನಾವು ಕೆಲವು ಸಂಗತಿಗಳನ್ನು ಗಮನಿಸಬೇಕು ಎಂದು ಕಿವಿಮಾತು ಹೇಳಿದಳು.

– ಯಾರಿಂದಲೇ ಆಮಂತ್ರಣ ಅಂದರೆ ಅದು ಫೋನ್‌, ಇಮೇಲ್‌, ವ್ಯಾಟ್ಸ್ಆ್ಯಪ್‌ ಮುಖಾಂತರ ದೊರೆತದ್ದಾಗಿರಬಹುದು, ಎಲ್ಲಕ್ಕೂ ಮೊದಲು ಆಮಂತ್ರಣ ದೊರೆತ ಬಗ್ಗೆ ನಿಮ್ಮ ವಿದೇಶಿ ಮಿತ್ರನಿಗೆ ಧನ್ಯವಾದ ತಿಳಿಸಿ. ಪಾರ್ಟಿ ಅಟೆಂಡ್‌ ಮಾಡಿದ ಬಳಿಕ ಅದೇ ರೀತಿ ಧನ್ಯವಾದ ತಿಳಿಸುವುದು ಸೂಕ್ತವಾಗಿರುತ್ತದೆ.

– ಒಂದು ವೇಳೆ ನೀವು ಆಮಂತ್ರಣ ಸ್ವೀಕರಿಸಿದ್ದರೆ, ಅದು ಈವೆಂಟ್‌ ಅಥವಾ ವಿಶೇಷ ಸಂದರ್ಭ ಆಗಿದ್ದರೆ ಅವಶ್ಯವಾಗಿ ಹೋಗಿ. ಅವರು ಆಮಂತ್ರಣ ಕೊಟ್ಟ ವ್ಯಕ್ತಿಗೆ ವಿಶೇಷ ಮಹತ್ವ ಕೊಡುತ್ತಾರೆ.

– ಒಂದು ವೇಳೆ ಆಮಂತ್ರಣ ನಿಮಗಷ್ಟೇ ಸಿಕ್ಕಿದ್ದರೆ, ನೀವಷ್ಟೇ ಹೋಗಿ. ಇಡೀ ಕುಟುಂಬ ಅಥವಾ ಮನೆಗೆ ಬಂದ ಅತಿಥಿಗಳನ್ನು ಜೊತೆಗೆ ಕರೆದುಕೊಂಡು ಹೋಗಬೇಡಿ. ನಿಮ್ಮ ಸಾಕುಪ್ರಾಣಿಗಳನ್ನು ಅಪ್ಪಿತಪ್ಪಿಯೂ ಕೂಡ ಜೊತೆಗೆ ಕರೆದುಕೊಂಡು ಹೋಗಬೇಡಿ.

– ನಿಮ್ಮ ಜೊತೆಗೆ ಮಗು ಕೂಡ ಬೇಡ.

– ಯಾರದ್ದೇ ಮನೆಗೆ ಹೋದರೂ ಖಾಲಿ ಕೈಯಲ್ಲಿ ಮಾತ್ರ ಹೋಗಬೇಡಿ. ಹೂಗುಚ್ಛ ಅಥವಾ ಅತಿಥಿಯ ಆಸಕ್ತಿಗೆ ತಕ್ಕುದಾದ ಯಾವುದಾದರೊಂದು ಉಡುಗೊರೆ ತೆಗೆದುಕೊಂಡು ಹೋಗಿ. ನಿಮ್ಮನ್ನು ಕೇವಲ ಟೀ ಪಾರ್ಟಿಗಾಗಿ ಕರೆದಿದ್ದರೆ, ಅವರಿಗೆ ಇಷ್ಟ ಆಗಬಹುದಾದ ಯಾವುದಾದರೂ ಸ್ನ್ಯಾಕ್ಸ್ ತೆಗೆದುಕೊಂಡು ಹೋಗಿ. ಇಲ್ಲಿ ಟೇಬಲ್ ನ್ಯಾಪ್‌ಕಿನ್ಸ್, ಬಾಥ್‌ರೂಮಿಗಾಗಿ ರೂಮ್ ಫ್ರೆಶ್ನರ್‌ ಅಥವಾ ಸೆಂಟೆಡ್‌ ಸೋಪ್‌ ತೆಗೆದುಕೊಂಡು ಹೋಗಿ.

– ಆಮಂತ್ರಣ ಕೊಡಲು ಬಂದ ಸಮಯದಲ್ಲಿ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬಂದಿದ್ದರೆ ಅಥವಾ ಬರುವವರಿದ್ದರೆ ನೀವು ವಿದೇಶಿ ಆತಿಥೇಯರಿಗೆ ಈ ವಿಷಯ ಸ್ಪಷ್ಟಪಡಿಸುವುದು ಉತ್ತಮ. ನಮ್ಮಲ್ಲಿ ಗೆಸ್ಟ್ ಬಂದಿರುವುದರಿಂದ ನನಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೆ ನಿಮ್ಮ ಸ್ಪಷ್ಟತೆಯ ಬಗ್ಗೆ ಅವರಿಗೆ ಖುಷಿಯಾಗುತ್ತದೆ.

– ವಿದೇಶಿ ವ್ಯಕ್ತಿಗಳು ಹೆಚ್ಚು ಸ್ಪಷ್ಟವಾದಿಗಳಾಗಿರುತ್ತಾರೆ. ಹೀಗಾಗಿ ಅವರ ದೃಷ್ಟಿಯಲ್ಲಿ `ಹೌದು’ ಎಂಬುದರ ಅರ್ಥ ಹೌದು ಹಾಗೂ `ಇಲ್ಲ’ ಎಂಬುದರ ಅರ್ಥ ಇಲ್ಲ ಎಂದೇ ಆಗಿರುತ್ತದೆ. `ಸ್ಪಷ್ಟತೆ’ ಒಂದು ರೀತಿಯಲ್ಲಿ ಅವರ ಜೀವನದ ಒಂದು ಭಾಗವೇ ಆಗಿಹೋಗಿರುತ್ತದೆ.

– ನೀವು ಸಾಫ್ಟ್ ಡ್ರಿಂಕ್‌ ಸೇವಿಸುತ್ತೀರೊ ಅಥವಾ ಹಾರ್ಡ್‌ಡ್ರಿಂಕ್‌ ಎಂದು ಅವರು ಒಂದೇ ಸಲ ಮಾತ್ರ ವಿಚಾರಿಸುತ್ತಾರೆ. ನೀವು ಸೇವಿಸುವ ಆಹಾರದ ಕುರಿತಾಗಿಯೂ ಅವರು ಇದೇ ರೀತಿ ಪ್ರಶ್ನಿಸುತ್ತಾರೆ. ಒಂದು ವೇಳೆ ನೀವು ಯಾವುದಾದರೂ ತಿಂಡಿಯ ಬಗ್ಗೆ `ಊಹೂಂ’ ಎಂದು ಹೇಳಿದರೆ,  ಅದರ ಅರ್ಥ ಅದು ನಿಮಗೆ ಬೇಕಿಲ್ಲ ಎಂದು ಅವರು ಅರ್ಥ ಮಾಡಿಕೊಳ್ಳುತ್ತಾರೆ. ನಿಮಗೆ ಯಾವುದೇ ಪದಾರ್ಥ ಬೇಕಿದ್ದರೆ ಹಾಂ ಎನ್ನಿ. ಇಲ್ಲದಿದ್ದರೆ ಅವರ ಮನೆಯಿಂದ ನೀವು ಖಾಲಿ ಹೊಟ್ಟೆಯಲ್ಲಿಯೇ ವಾಪಸ್‌ ಹೋಗಬೇಕಾಗುತ್ತದೆ.

– ಮನೆಗೆ ಕರೆಸಿಕೊಂಡಿದ್ದರು, ನನ್ನನ್ನು ಸರಿಯಾಗಿ ವಿಚಾರಿಸಿಕೊಳ್ಳಲೇ ಇಲ್ಲ ಎಂದು ನೀವು ಅಂದುಕೊಳ್ಳುವಂತಾಗಬಾರದು. ನೀವೇನೋ ಸೌಜನ್ಯಪೂರ್ವಕವಾಗಿ ಯಾವುದೋ ಒಂದು ಪದಾರ್ಥದ ಬಗ್ಗೆ `ನೋ’ ಎಂದು ಹೇಳಿರಬಹುದು. ಒಂದೇ ಸಲಕ್ಕೆ ಯಾರಾದರೂ ಬೇಕು ಎಂದು ಹೇಳುತ್ತಾರಾ ಎಂದು ನೀವು ಕೇಳಬಹುದು. ಆದರೆ ಈ ಸೌಜನ್ಯತೆ ಭಾರತದಲ್ಲಿ ಇದೆ. ವಿದೇಶದಲ್ಲಿ ಅಲ್ಲ. ಅದು ಇಂಗ್ಲೆಂಡ್‌ ಆಗಿರಬಹುದು ಅಥವಾ ಅಮೆರಿಕಾ.

– ನೀವು ಏನನ್ನಾದರೂ ತಯಾರಿಸಿ ತೆಗೆದುಕೊಂಡು ಹೋಗುವವವರಿದ್ದರೆ, ನೀವು ಯಾವ ಡಿಶ್‌ ತೆಗೆದುಕೊಂಡು ಹೋಗಬೇಕೆಂದಿದ್ದೀರೋ ಅದಕ್ಕೆ ಸಂಬಂಧಪಟ್ಟ ಗಾರ್ನಿಶಿಂಗ್‌ ಸಾಮಗ್ರಿಗಳ ಜೊತೆಗೆ ಸರ್ವಿಂಗ್‌ಗಾಗಿ ಅದಕ್ಕೆ ಹೊಂದುವಂಥ ಪ್ಲ್ಯಾಟರ್‌, ಸ್ಪ್ಯಾಟುಲಾ, ವಿಶೇಷ ಆಕಾರದ ಚಮಚ ಮುಂತಾದವುಗಳಿದ್ದರೆ ಅವನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ. ಈ ಸಂಗತಿಗಳಿಂದ ಇದು ವಿದೇಶಿ ನೆರೆಹೊರೆಯವರ ಜೊತೆ ನಿಕಟತೆಯನ್ನು ಸ್ನೇಹದಲ್ಲಿ ಪರಿವರ್ತಿಸುತ್ತದೆ.

– ಎಷ್ಟೋ ಸಲ ನಾವು ಪಾರ್ಟಿಯಲ್ಲಿ ಬೇರೆಯವರೊಂದಿಗೆ ಪರಿಚಯ ಮಾಡಿಕೊಳ್ಳಲು ಮಾತುಕತೆ ನಡೆಸಲು ಹಿಂದೇಟು ಹಾಕುತ್ತೇವೆ ಹಾಗೂ ಒಂದು ಮೂಲೆಯಲ್ಲಿ ಕುಳಿತು ಬಿಡುತ್ತೇವೆ. ಪಾರ್ಟಿ ಏರ್ಪಡಿಸಿದ ವ್ಯಕ್ತಿ ಅಲ್ಲಿಗೆ ಬಂದ ಪ್ರತಿಯೊಬ್ಬ ಅತಿಥಿಯೂ ಪಾರ್ಟಿಯ ಸಂಪೂರ್ಣ ಆನಂದ ಪಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತಾರೆ. ನಮ್ಮ ಹಾಗೆಯೇ ಅಲ್ಲಿಗೆ ಬಂದ ಇತರ ಅತಿಥಿಗಳ ಜೊತೆ ನಾವೇಕೆ ಪರಿಚಯ ಮಾಡಿಕೊಳ್ಳಬಾರದು? ಮೊದಲು ಪ್ರಯತ್ನ ಮಾಡಿ. ನಿಮಗೊಬ್ಬ ಒಳ್ಳೆಯ ಸ್ನೇಹಿತ ಸಿಕ್ಕರೂ ಸಿಗಬಹುದು.

– ಪಾರ್ಟಿ, ಡಿನ್ನರ್‌ ಅಥವಾ ಟೀ ಪಾರ್ಟಿಯಿಂದ ಹೊರಟುಹೋಗುವ ಮುಂಚೆ ಆತಿಥ್ಯ ನೀಡಿದವರಿಗೆ ಡೈನಿಂಗ್‌ ಟೇಬಲ್ ಕ್ಲೀನ್‌ ಮಾಡಲು, ಕ್ರಾಕರಿ ಮುಂತಾದವುಗಳನ್ನು ಪುನಃ ಸ್ವಸ್ಥಾನದಲ್ಲಿ ಇಡಲು ನೆರವಾಗಿ. ನಿಮ್ಮ ಈ ನೆರವಿನ ಹಸ್ತ ವಿದೇಶಿ ಆತಿಥೇಯರಿಗೆ ಮನಸಾರೆ ಖುಷಿ ಕೊಡುತ್ತದೆ. ಇದಕ್ಕಾಗಿ ನಿಮಗೆ ಅವರು ಥ್ಯಾಂಕ್ಯೂ ಹೇಳದೆ ಇರಲಾರರು. ಆದರೆ ನಿಮ್ಮ ನೆರವು ಅವರಿಗೆ ಹಸ್ತಕ್ಷೇಪ ಎನಿಸಬಾರದು.

– ಪಾರ್ಟಿಗಳಲ್ಲಿ ಒಂದು ವಿಷಯ ಸಾಮಾನ್ಯವಾಗಿ ಪ್ರಸ್ತಾಪವಾಗುತ್ತಿರುತ್ತದೆ. ಅಲ್ಲಿಗೆ ಬಂದಿರುವ ಯಾರಾದರೂ ವ್ಯಕ್ತಿಗಳು ನಿಮಗೆ ಮತ್ತೇನು ಹೊಸ ವಿಷಯ ಎಂದು ನಿಮಗೆ ಕೇಳಬಹುದು. ಆಗ ನೀವು ಅಂಥದ್ದೇನೂ ಹೊಸ ವಿಷಯ ಇಲ್ಲ ಎಂದು ಆತುರಾತುರವಾಗಿ ಹೇಳಲು ಹೋಗಬೇಡಿ. ಅದರ ಬದಲಿಗೆ ಯಾವುದಾದರೂ ಕಾರ್ಯಕ್ರಮ ಇರಬಹುದು, ಟೂರ್‌ಗೆ ಹೋಗಿ ಬಂದಿರಬಹುದು, ಯಾವುದಾದರೂ ಹೊಸ ಪುಸ್ತಕ ಅಥವಾ ಕಾದಂಬರಿ ಓದಿರಬಹುದು ಅಥವಾ ನಗರದಲ್ಲಿನ ಪ್ರಸಿದ್ಧ ಸ್ಥಳಗಳಲ್ಲಿ ಸುತ್ತಾಡಿದ್ದರೆ ಅದರ ಬಗೆಗಿನ ವಿವರವನ್ನು ಹಂಚಿಕೊಂಡರೆ ಅವರ ಮತ್ತು ನಿಮ್ಮ ನಡುವಿನ ನಿಕಟತೆ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.

– ಒಂದು ವೇಳೆ ಆ ಸಮಾರಂಭದಲ್ಲಿ ಯಾವುದಾದರೂ ಪದಾರ್ಥವನ್ನು ಬೇಡ ಎಂದು ನೀವು ನಿಸ್ಸಂಕೋಚವಾಗಿ ಹೇಳಬಹುದು. ಈ ಬಗ್ಗೆ ವಿದೇಶಿಗರು ಯಾವುದೇ ತಪ್ಪು ಭಾವಿಸುವುದಿಲ್ಲ. ನೀವು ಪ್ರತಿಯೊಂದು ಚಿಕ್ಕಪುಟ್ಟ ಸಂಗತಿಗಳ ಬಗ್ಗೆ ಗಮನಹರಿಸಲು ಇಚ್ಛಿಸುತ್ತೀರಿ, ಅದನ್ನು ನಿಮ್ಮ ಕರ್ತವ್ಯ ಎಂದು ಭಾವಿಸುತ್ತೀರಿ. ನೀವು ಏನನ್ನು ತಿನ್ನುತ್ತೀರೊ ಅದನ್ನಷ್ಟೇ ತಿನ್ನಿ, ಹೊಸದೇನನ್ನೂ ಟ್ರೈ ಮಾಡಲು ಹೋಗಬೇಡಿ.

– ಎಷ್ಟೋ ಜನರು ನಿಗದಿತ ಸಮಯಕ್ಕೆ ತಲುಪುವುದನ್ನು ಸರಿಯೆಂದು ಭಾವಿಸುವುದಿಲ್ಲ. ಪಾರ್ಟಿ ಒಂದು ಹಂತಕ್ಕೆ ಜೋರಾಗಿ ನಡೆಯುತ್ತಿರುವಾಗ ಹೋಗಿ ತಲುಪುತ್ತಾರೆ. ಇದು ಸರಿಯಾದ ಕ್ರಮವಲ್ಲ. ನಿಗದಿತ ಸಮಯಕ್ಕೆ ಮುಂಚೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಿ ಹಾಗೂ ಕಾರ್ಯಕ್ರಮ ಮುಗಿದ ಬಳಿಕ ಸಂಘಟಕರಿಗೆ ಬೈ ಬೈ ಹೇಳಿಯೇ ಅಲ್ಲಿಂದ ಹೊರಡಿ.

– ಪಿ. ಅನಸೂಯಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ