ಈಗಿನ ಯುವ ಜನಾಂಗದ ಮುಖ್ಯ ಗುರಿ ಸಾಫ್ಟ್ ವೇರ್‌ ಎಂಜಿನಿಯರ್‌ ಆಗುವುದು, ಅಕಸ್ಮಾತ್‌ ಅವರು ಬೇಡವೆಂದರೂ ತಂದೆ ತಾಯಿಯರು ಬಿಡುವುದಿಲ್ಲ. ಮೆರಿಟ್‌  ಸೀಟ್‌ ಸಿಕ್ಕದಿದ್ದರೂ ಕಷ್ಟಪಟ್ಟಾದರೂ ಪೇಮೆಂಟ್‌ ಸೀಟ್‌ ಪಡೆದು ಓದಿಸುವುದು ಈಗಿನ ಟ್ರೆಂಡ್‌ ಎನ್ನಬಹುದು. ಹೀಗಿರುವಾಗ ಪಿ.ಯು.ಸಿ.ಯಲ್ಲಿ 96% ಪಡೆದು ಕಾಮರ್ಸ್‌ ತೆಗೆದುಕೊಳ್ಳುವವರು ಅಪರೂಪವೇ ಸರಿ. ಅದೂ ಹೆಣ್ಣುಮಕ್ಕಳಿಗೆ ಜೀವನದ ಮುಖ್ಯ ಹಂತ ಮದುವೆ. ಹೆಣ್ಣುಮಕ್ಕಳನ್ನು ಒಳ್ಳೆಯ ಮನೆಗೆ ಸೇರಿಸಿಬಿಟ್ಟರೆ ತಮ್ಮ ಜೀವನ ಧನ್ಯ ಎನ್ನುವುದು ಎಲ್ಲಾ ಹೆಣ್ಣು ಹೆತ್ತವರ ಮನಸ್ಸಿನ ಮಾತು. ಜೊತೆಗೆ ಮದುವೆಯಾದೊಡನೆ ಆಯಿತು, ಇನ್ನು ಒಂದು ಮಗುವಾಗಿಬಿಟ್ಟರೆ ಎಲ್ಲವೂ ಮುಕ್ತಾಯಕ್ಕೆ ಬಂದಂತೆ ಎನ್ನುವುದು ಇಡೀ ಪ್ರಪಂಚ ಯೋಚಿಸುವ ರೀತಿ.

ಮದುವೆಯ ನಂತರ ಏನಾದರೂ ಸಾಧಿಸುವುದೆಂದರೆ ನಿಜಕ್ಕೂ ಸುಲಭವೇನಲ್ಲ. ಸಂಸಾರದ ನಿರ್ವಹಣೆ ಒಂದೆಡೆಯಾದರೆ ಮಗುವಿನ ಪಾಲನೆ  ಇವುಗಳೆಲ್ಲದರ ಜೊತೆಗೆ ಹಿರಿಯರ ಸಮ್ಮತಿ ಈ ಎಲ್ಲವನ್ನೂ ನಿಭಾಯಿಸಿ, ಏನಾದರೂ ಸಾಧನೆ ಮಾಡುವುದು ಖಂಡಿತ ಕಷ್ಟವೇ ಸರಿ. ಅದರಲ್ಲೂ ಸಿ.ಎ. ಅಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು, ಅದೂ ಮೂರನೇ ಸ್ಥಾನ ಪಡೆಯುವುದೆಂದರೆ ನಿಜಕ್ಕೂ ಅತಿಶಯವೇ! ಇಂತಹ ಒಂದು ಸಾಧನೆ, ಹತ್ತು ವರ್ಷದ ಗಂಡು ಮಗುವಿನ ತಾಯಿ ಅನ್ನಪೂರ್ಣಾ ಎನ್ನುವ ಅದ್ಭುತ ಪ್ರತಿಭೆಯದು ಎನ್ನಬಹುದು. ಬರಿಯ ಬುದ್ಧಿವಂತಿಕೆಯಷ್ಟೇ ಅಲ್ಲ, ನೋಡಲು ಸಹಾ ಮೊದಲ ನೋಟಕ್ಕೆ ಮನಸೆಳೆಯುವಂತಹ ಮುದ್ದು ಮುಖದ ಹುಡುಗಿ. ಸೌಮ್ಯ ಸ್ವಭಾವ, ಮಾತಿನಲ್ಲಿ ವಿನಯ, ವಿದ್ಯೆಯಲ್ಲಿ ಸರಸ್ವತಿ ಎನ್ನುವುದರ ಜೊತೆಗೆ ಹಾಡುವುದರಲ್ಲೂ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿ ಮಾಡಬಲ್ಲ ಕಂಠಸಿರಿ. ಇವೆಲ್ಲ ಒಂದೇ ಕಡೆ ಇರಲು ಸಾಧ್ಯವೇ ಎಂದು ಅಚ್ಚರಿಪಡುವಂತಹ ವ್ಯಕ್ತಿತ್ವ. ನಿಜಕ್ಕೂ ಆ ದೇವನ ಅಪರೂಪದ ಸೃಷ್ಟಿ ಎನ್ನಬಹುದು.

ಸಾಧಕರಿಗೆ ಸುಮ್ಮನಿರಲು ಆಗದು, ಒಂದು ಗುರಿ ಮುಟ್ಟಿದ ಮೇಲೆ ಮತ್ತೊಂದನ್ನು ಸಾಧಿಸುವ ಆಸೆ. ಅಂತೆಯೇ ಸಿ.ಎ. ಆದನಂತರ ಕಂಪನಿ ಸೆಕ್ರೆಟರಿ ಕೋರ್ಸ್‌ ತೆಗೆದುಕೊಂಡು ಅದರಲ್ಲೂ ಮೂರನೇ ಸ್ಥಾನ ಗಳಿಸಿದ ಹೆಗ್ಗಳಿಕೆ ಅನ್ನಪೂರ್ಣಾರದು.  ಜೊತೆಗೆ ಸಿ.ಎ.ನ ಮುಂದಿನ ಭಾಗವಾದ ಡಿ.ಐ.ಎಸ್‌.ಎ.ನಲ್ಲೂ ಮೂರನೇ ಸ್ಥಾನ, ಈ ರೀತಿ ಒಟ್ಟಾರೆ ರಾಷ್ಟ್ರಮಟ್ಟದ ಮೂರು ಸಾಧನೆಗಳಿಗೆ ಪ್ರಶಸ್ತಿಗಳನ್ನು ಸಹ ನವದೆಹಲಿಯಲ್ಲಿ ನೀಡಲಾಯಿತು.

ಮಲೆನಾಡಿನ ತವರೂರಾದ ಚಿಕ್ಕಮಗಳೂರಿನ ಸಂತ ಜೋಸೆಫ್‌ ಕಾನ್ವೆಂಟ್‌ ಹೈಸ್ಕೂಲ್‌ನಲ್ಲಿ ಇವರ ವಿದ್ಯಾಭ್ಯಾಸ. ಮೊದಲಿನಿಂದಲೂ ಯಾವಾಗಲೂ ಮೊದಲನೇ ಸ್ಥಾನ ಇವರದೆ. ಹತ್ತನೇ ತರಗತಿಯಲ್ಲಿ 93% ಅದು ಹಾಗೆಯೇ ಮುಂದುವರಿದು ಪಿ.ಯು.ಸಿ.ಯಲ್ಲೂ 90%. ಅದು ಹಾಗೆಯೇ ಮುಂದುವರಿದು ಪ್ರತಿ ಹಂತದಲ್ಲೂ ಹೆಚ್ಚಿನ ಅಂಕಗಳನ್ನು ಗಳಿಸಿದರು. ಬಿ.ಕಾಂ.ನಲ್ಲಿ ಎರಡನೇ ಸ್ಥಾನ, ಮತ್ತೆ ಮೂರು ಬಾರಿ ಮೂರನೇ ಸ್ಥಾನ ಪಡೆದರು.

ನಂತರ ಪ್ರಶಸ್ತಿಗಳ ಸರಮಾಲೆಯೇ ಇವರದಾಯಿತು. ನದೆಹಲಿಯಲ್ಲಿ 2009ರಲ್ಲಿ ನಡೆದ ಸಮಾರಂಭದಲ್ಲಿ ಸಿ.ಎ. ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದದ್ದಕ್ಕಾಗಿ ಎನ್‌. ರಂಗಾಚಾರಿ ಬೆಳ್ಳಿಯ ಪದಕ, ಕೇರಳ ವರ್ಮ ನೆನಪಿನ ಕಾಣಿಕೆ, ಶಾ. ಪೂರ್ಜಿ ಬಿಲ್ಲಿ ಮೆಮೋರಿಯಾ ಬಹುಮಾನ, ಎಲ್.ಟಿ. ಕರ್ನಲ್ ಅಂಬುಜ್‌ನಾಥ್‌ ನೆನಪಿನ ಬಹುಮಾನ! ಇವುಗಳೆಲ್ಲವನ್ನೂ ದೆಹಲಿಯಲ್ಲಿ 2009ರ ಫೆಬ್ರವರಿ 4ರಂದು ಪಡೆದರೆ, ಚೆನ್ನೈನಲ್ಲಿ ಸೌಂದರ್‌ರಾಜನ್‌ ನೆನಪಿನ ಬಹುಮಾನ, ಎಂ.ಜಿ. ಸುಬ್ರಹ್ಮಣ್ಯಮ್ ನಗದು ಬಹುಮಾನ, ಪಿ. ಗೋಪಾಲ ಕೃಷ್ಣರಾವ್ ಬಹುಮಾನ ನಿಧಿ. ಇಷ್ಟೆಲ್ಲಾ ಪಡೆದಾಗ್ಯೂ ಅವರ ಸಿ.ಎ. ಫಲಿತಾಂಶ ತಿಳಿದ ತಕ್ಷಣ ನನಗೆ ಮೊದಲನೆಯ ಸ್ಥಾನ ತಪ್ಪಿತ್ತೆನ್ನುವ ಉದ್ಗಾರ ಅನ್ನಪೂರ್ಣಾ ಅವರದ್ದಾಗಿತ್ತಂತೆ! ಅವರ ಆ ಇನ್ನೂ ಸಾಧಿಸಬೇಕೆಂಬ ಮಹಾಭಿಲಾಷೆಯೇ ಅವರ ಸಾಧನೆಯ ಕಾರಣ ಆಗಿರಬಹುದು ಅಲ್ಲವೇ? ಕಷ್ಟಪಡದಿದ್ದಲ್ಲಿ ಏನನ್ನು ಸಾಧಿಸಲೂ ಆಗುವುದಿಲ್ಲ. ನಾವು ಏನೇ ಮಾಡಬೇಕೆಂದಾಗ, `ಬೇಗ ಆರಂಭಿಸಿ, ಸರಿಯಾದ ರೀತಿಯಲ್ಲಿ ಪ್ಲಾನ್‌ ಮಾಡಿಕೊಳ್ಳಿ, ಆ ಪ್ಲಾನ್‌ನ್ನು ಜಾರಿಗೆ ತನ್ನಿ, ದಿನ ಆ ಬಗ್ಗೆ ಪರಿಶೀಲನೆ ಮಾಡಿ, ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳಿ,’ ಇವು ಸಾಧನೆಗೆ ಸುಲಭ ಮಾರ್ಗಗಳು ಎನ್ನುತ್ತಾರೆ.

ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಪ್ರತಿ ದಿನ ಮೂವತ್ತು ನಿಮಿಷ ಪ್ರಾಣಾಯಾಮ ಮಾಡುತ್ತಾರಂತೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ. ಇವರು ಯಾವುದೇ ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲವೆಂದಾಗ ಅಚ್ಚರಿ ಎನ್ನಿಸಬಹುದು.

ಬರಿಯ ಓದಷ್ಟೇ ಅಲ್ಲ, ಸಂಗೀತ ಇವರ ಮತ್ತೊಂದು ಆದ್ಯತೆ ಎನಿಸಿಕೊಳ್ಳುತ್ತದೆ. ಮೈಸೂರಿನಲ್ಲಿ ನಡೆದ `ಜನರಲ್ ಮ್ಯಾನೇಜ್‌ಮೆಂಟ್‌  ಕಮ್ಯುನಿಕೇಷನ್‌’ ಕಾರ್ಯಕ್ರಮದಲ್ಲಿ ಇವರು ಸಕ್ರಿಯವಾಗಿ ಭಾಗವಹಿಸಿ ವ್ಯಕ್ತಿತ್ವ ವಿಕಸನ, ಮುಂದಾಳತ್ವ (ಲೀಡರ್‌ ಶಿಪ್‌) ಪ್ರೇರಣೆ ಮತ್ತು ಸ್ವಯಂ ವಿಶ್ಲೇಷಣೆ, ಈ ವಿಷಯಗಳಲ್ಲಿ ಭಾಷಣ ನೀಡಿದ್ದಾರೆ. ಇಷ್ಟಲ್ಲದೆ ಹಾಡು, ಕವನ, ಪ್ರಬಂಧ, ಚರ್ಚಾ ಸ್ಪರ್ಧೆ ಜೊತೆಗೆ ಕ್ರೀಡೆಗಳಲ್ಲೂ ಆಸಕ್ತಿ ಇದೆ. ಮಲ್ಟಿ ಟಾಸ್ಕ್ ಎನ್ನುವ ವಿಶೇಷಣ ಇವರಿಗೆ ಚೆನ್ನಾಗಿ ಒಪ್ಪುತ್ತದೆ. `ಸಮ್ಮಿಲನ’ ಎನ್ನುವ ವೇದಿಕೆಯ ಮೂಲಕ `ಅಜಿತ ನೆಲೆ’ ಎನ್ನುವ ಅನಾಥಾಶ್ರಮದ ಇಬ್ಬರು ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ವೆಚ್ಚವನ್ನು  ಭರಿಸುತ್ತಿದ್ದಾರೆ. ತಮ್ಮ ಕುಟುಂಬದವರೇ ನಡೆಸುತ್ತಿರುವ ವೃದ್ಧಾಶ್ರಮದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಜೀವನದ ಹಲವು ಮಜಲುಗಳನ್ನು ತಲುಪಿದಾಗ ಬೇರುಗಳನ್ನು ಮರೆಯದಿರುವುದು ಹೃದಯವಂತಿಕೆಯಾಗುತ್ತದೆ. ತಮ್ಮ ಸಾಧನೆಗೆ ತಮ್ಮ ಕುಟುಂಬದ ಪೂರ್ಣ ಸಹಕಾರವಿತ್ತ ತಮ್ಮ ತಾಯಿ ಹೊಳೆನರಸೀಪುರದಂತಹ ಚಿಕ್ಕ ಊರಿನವರು. ಅವರು ತಮ್ಮ ಜೀವನದಲ್ಲಿ ಸಾಧಿಸಲಾಗದಿದ್ದನ್ನು ನನ್ನ ಮೂಲಕ ಅವರ ವಿಜಯವನ್ನು ಕಂಡುಕೊಂಡರು ಎನ್ನುತ್ತಾರೆ. ಅದೃಷ್ಟ, ಪ್ರತಿಭೆ, ಕುಟುಂಬದ ಬೆಂಬಲ ಎಲ್ಲ ಒಟ್ಟುಗೂಡಿದಾಗ ಸಾಧನೆಗೆ ಮಿತಿಯೇ ಇರದು, ಎಷ್ಟೇ ಅನುಕೂಲವಿದ್ದರೂ ಇಂಹತದೊಂದು ಸಾಧನೆ ನಿಜಕ್ಕೂ ಅಪರೂಪವೇ!

– ಮಂಜುಳಾ ರಾಜ್‌

Tags:
COMMENT