ಕಬ್ಬನ್‌ ಪಾರ್ಕಿನ ಮುಂಜಾನೆ ರಾಗಮಂಟಪದಲ್ಲಿ `ಯಾವ ಜನ್ಮದ ಮೈತ್ರಿ….’ ಹಾಡನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದ ಗಾಯಕಿಯ ದನಿಗೆ ಮರುಳಾಗಿ ಗೆಳತಿ ವೀಣಾ ಓಡಿಬಂದು ನನ್ನ ವಾಕಿಂಗ್‌ ಕಡಿತಗೊಳಿಸಿದಳು. ಸರಿ ಮುಂಜಾನೆ ರಾಗಮಂಟಪದ ಬಳಿಗೆ ತೆರಳಿದೆ. ಈ ಚಳಿಯಲ್ಲೂ ಅಷ್ಟು ಜನ ಸೇರಿದ್ದು ಕಂಡು ಆಶ್ಚರ್ಯವಾಯಿತು. ಆಶ್ಚರ್ಯವೇನು ಬಂತು, ನಿಂತಿದ್ದು ಸ್ವಾಭಾವಿಕಿವೆನಿಸಿತು! ಗಾಯಕಿಯ ಸಿರಿಕಂಠ, ಲಯಬದ್ಧವಾಗಿ ಹಾಡಿಗೆ ನ್ಯಾಯ ಒದಗಿಸುತ್ತಿದ್ದ ಪರಿ ನಿಜವಾಗಿಯೂ ಖುಷಿಕೊಡುತ್ತಿತ್ತು. ಇಂಪಾದ ಹಾಡುಗಳು, ಹಿತಿವೆನಿಸೋ ಎಳೆಬಿಸಿಲು, ವಾವ್‌ ವಾತಾವರಣವೇ ರಮ್ಯವೆನಿಸಿತ್ತು!

ಎಲ್ಲೋ ಕೇಳಿದ ದನಿ, ಮುಖ ಪರಿಚಯವಿರಲಿಲ್ಲ. ಅಷ್ಟರಲ್ಲಿ ತಿಳಿಯಿತು ಇವರೇ ಮಂಗಳಾ ರವಿ ಎಂದು. ಸಮಯದ ಅಭಾವದಿಂದ ಅಂದು ಮಾತನಾಡಿಸಲು ಆಗಲಿಲ್ಲ. ತದನಂತರ ಮಜಾ ಟಾಕೀಸ್‌ನ ಖ್ಯಾತ ಗಾಯಕಿ, ನನ್ನ ಆತ್ಮೀಯ ಗೆಳತಿ ರೆಮೋರವರಿಂದ ದೂರವಾಣಿ ಸಂಖ್ಯೆ ಪಡೆದು ಫೋನಾಯಿಸಿ ಮಾತನಾಡಿದಾಗ ಆತ್ಮೀಯತೆಯಿಂದ ಮಾತನಾಡಿದರು. ಚಿಕ್ಕವರಾದರೂ ಪ್ರತಿಭೆ ಆಗಾಧವಾಗಿತ್ತು.

ಹಲವಾರು ಮಾಧುರ್ಯ ಪ್ರಧಾನ ಗೀತೆಗಳು ಇವರ ಕಂಠಸಿರಿಯಿಂದ ಹೊರಹೊಮ್ಮಿದೆ. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಸರಿಸುಮಾರು ಸಾವಿರಕ್ಕೂ ಮಿಗಿಲಾದ ಧ್ವನಿ ಸಾಂದ್ರಿಕೆ (ಸಿ.ಡಿ.)ಗಳಿಂದ ಅಭಿಮಾನಿ ಕೇಳುಗರಿಗೆ ಚಿರಪರಿಚಿತರಾಗಿರುವರು. ತಮ್ಮದೇ ಆದ 2 ಭಾವಗೀತೆಗಳ ಧ್ವನಿಸುರುಳಿಗಳನ್ನು ಹೊರತಂದಿರುವರು. ಈಗ್ಗೆ 17 ವರ್ಷಗಳಿಂದ ಸಂಗೀತ ಜೀವನ  ಸಾಗಿಸುತ್ತಿರುವ ಇವರು ಆಕಾಶವಾಣಿಯ ಬಿ ಹೈಗ್ರೇಡ್‌ ಕಲಾವಿದೆ.

ಸುಮಾರು 80 ಚಿತ್ರಗಳಿಗೆ ಹಾಡಿರುವ ಇವರು ಹೆಸರಾಂತ ಸಂಗೀತ ನಿರ್ದೇಶಕರ ಬಳಿ ಕೆಲಸ ನಿರ್ವಹಿಸಿರುವರು. ಹಲವಾರು ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನು ಹಾಡಿದ್ದಾರೆ. 600ಕ್ಕೂ ಹೆಚ್ಚು ವೇದಿಕೆಗಳಲ್ಲಿ ಮಿಂಚಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲದೆ, ಮುಂಬೈ, ಮಸ್ಕತ್‌, ಆಸ್ಟ್ರೇಲಿಯಾ ಹಾಗೂ ಯು.ಎಸ್‌.ಗಳಲ್ಲಿಯೂ ಹಾಡಿ ಅಪಾರ ಅಭಿಮಾನಿಗಳನ್ನು ಪಡೆದಿರುವರು.

ಸಂಗೀತ ಕ್ಷೇತ್ರದ ದಿಗ್ಗಜರಾದ ದಿವಂಗತ ಎಸ್‌.ಪಿ.ಬಿ., ಸಿ. ಅಶ್ವಥ್‌, ಯೇಸುದಾಸ್‌, ರಾಜು ಅನಂತಸ್ವಾಮಿ ಅವರೊಂದಿಗೂ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಇವರದು.`ಆಲಾಪನ’ ಇವರ ಕನಸಿನ ಸಂಸ್ಥೆ. ಚಿಕ್ಕಮ್ಮ ಹೇಮಾರವರೊಂದಿಗೆ ಸೇರಿ ಈ ಸಂಸ್ಥೆಯನ್ನು ಕಟ್ಟಿದ್ದಾರೆ. ಉಪಸಂಸ್ಥಾಪಕಿಯಾಗಿ ಹಲವಾರು ಕಾರ್ಯಕ್ರಮ, ತರಗತಿ, ಕಾರ್ಯಾಗಾರ, ಶಿಬಿರಗಳನ್ನು ನಡೆಸುವ ಮುಖೇನ ವಿದ್ಯಾರ್ಥಿಗಳಿಗೆ, ಸಂಗೀತಾಸಕ್ತರಿಗೆ ಸಹಾಯಕರಾಗಿದ್ದಾರೆ. ಮಕ್ಕಳಿಗೆ ಪಾಠವೊಂದೇ ಅಲ್ಲದೆ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಕಾರ್ಯಕ್ರಮಗಳನ್ನು ಸಹ ನೀಡುತ್ತಿದ್ದಾರೆ. ಇದು ಇವರ ದೊಡ್ಡತನ!

ಇವರ ಸುಗಮ ಸಂಗೀತ ಕ್ಷೇತ್ರದ ಕಾರ್ಯಕ್ಷಮತೆಗಾಗಿ ಉಪಾಸನಾ ಪ್ರಶಸ್ತಿ, ರಾಧಾಕಲ್ಯಾಣ  ಧಾರಾವಾಹಿಯ ಶೀರ್ಷಿಕೆ ಗೀತೆ, ಅತ್ಯಂತ ಜನಪ್ರಿಯತೆ ಪಡೆದುದಕ್ಕಾಗಿ `ಕೆಂಪೇಗೌಡ ಪ್ರಶಸ್ತಿ,’ ‘ಕೀಮಾ ಪ್ರಶಸ್ತಿ’ಗಳೂ ಸಹ ಲಭಿಸಿವೆ.

ಹೀಗೆ ಒಮ್ಮೆ ‘ಗಾಂಧಿ ಸ್ಮೈಲ್ಸ್’ ಚಿತ್ರಕ್ಕಾಗಿ ವೈಷ್ಣವ ಜನತೋ ಕನ್ನಡ ಅನುವಾದವನ್ನು ಜಯಂತ್‌ ಕಾಯ್ಕಿಣಿಯವರು ಬರೆದರು. ಅದರ ಟ್ರ್ಯಾಕ್‌ನ್ನು ಮಂಗಳಾ ಹಾಡಿದರು. ಈ ಗೀತೆಯನ್ನು ಲತಾ ಮಂಗೇಶ್ಕರ್‌ ಹಾಡಬೇಕಿತ್ತು. ಈ ಟ್ರ್ಯಾಕ್‌ ಕೇಳಿದ ಆ ಸಂಗೀತ ಸರಸ್ವತಿ, ಈಕೆಯದು ಎಂತಹ ಸುರೀಲೀ ಆವಾಜ್‌! ಇದನ್ನು ಹಾಗೇ ಇಟ್ಟುಕೊಳ್ಳಿ, ಪುನಃ ನಾನು ಹಾಡುವುದು ಬೇಡ ಎಂದುಬಿಟ್ಟರಂತೆ! ಸುರೇಶ್‌ ವಾಡ್ಕರ್‌ ಸಹ ಇವರ ಹಾಡನ್ನು ಕೇಳಿ ಮೆಚ್ಚಿ ಪ್ರಶಂಸೆ ನೀಡಿರುವರು. ಇದಕ್ಕಿಂತ ಬೇರೆ ಪ್ರಶಸ್ತಿ ಬೇಕೇ? ಎನ್ನುತ್ತಾರೆ. ಇವರು  ಹಾಡುವಾಗ ಅವರ ಗಾಯನದಲ್ಲಿ ಅದೆಷ್ಟು ಸ್ಪಷ್ಟತೆ, ತಾಳ, ಶೃತಿಯನ್ನು ಪ್ರತಿ ಸ್ವರದಲ್ಲೂ ಕಂಡುಹಿಡಿಯಬಹುದು ಎಂಬುದು ಅನೇಕ ನಿರ್ದೇಶಕರ ಅಭಿಪ್ರಾಯ! ಶಾಸ್ತ್ರೀಯ ಸಂಗೀತವನ್ನು ಬಿ.ಎಸ್‌. ಹೇಮಾವತಿ, ವಿ.ಎ. ಸುಬ್ಬರಾವ್ ಹಾಗೂ ಆನೂರು ಅನಂತಕೃಷ್ಣ ಶರ್ಮರ ಬಳಿ ಕಲಿತಿದ್ದಾರೆ. ಸುಗಮಸಂಗೀತದ ಗುರುಗಳು ರಾಜು ಅನಂತಸ್ವಾಮಿ!  ತಮ್ಮ ಮೂರನೇ ವಯಸ್ಸಿನಲ್ಲಿ ಹಾಡಿ ಬಹುಮಾನ ಗಳಿಸಿದ ಪ್ರತಿಭೆ. ಮೂಲತಃ ಬೆಂಗಳೂರಿನವರೆ. ತಂದೆ ಪಿ. ಅಶ್ವಥ್‌ ನಾರಾಯಣ, ತಾಯಿ ನಾಗಲಕ್ಷ್ಮಿ ಬಿ.ಎಸ್‌. ಮನೆಯಲ್ಲಿ ಸಂಗೀತ ಬಲ್ಲರು! ಮನೆಯ ಕಡೆ ಸಂಗೀತಾಸಕ್ತರು ಹೆಚ್ಚು. ಆದರೆ ಯಾರೂ ವೃತ್ತಿಯನ್ನಾಗಿ ಸ್ವೀಕರಿಸಿರಲಿಲ್ಲ! ತಮ್ಮ ಏಳನೇ ವಯಸ್ಸಿನಲ್ಲಿ ಹಂಸಲೇಖಾರವರ ನಿರ್ದೇಶನದಲ್ಲಿ `ಬಾಳೊಂದು ಭಾವಗೀತೆ,’ ಚಲನಚಿತ್ರಕ್ಕೆ ಎಸ್‌.ಪಿ.ಬಿ.ಯವರೊಂದಿಗೆ ಹಾಡಿದ ಹೆಗ್ಗಳಿಕೆ ಇವರದು. ಸಾಧನೆಯ ಹಾದಿಯಲ್ಲಿ ಏಳುಬೀಳುಗಳನ್ನು ಕಂಡವರು. ಗಾಡ್‌ ಫಾದರ್‌ ಇಲ್ಲದೆ ಪ್ರತಿಭೆಯೊಂದರಿಂದಲೇ ಮೇಲೆ ಬಂದಿರುವ ಕಲಾವಿದೆ ಎಂದರೆ ತಪ್ಪಾಗಲಾರದು. ಮಗಳ ಹಿಂದಿನ ಯಶಸ್ಸಿಗೆ ತಾಯಿತಂದೆಯ ಶ್ರಮ ಅಪಾರ.

ಇನ್ನು ಇವರ ಕಾಳಜಿ ಹೇಗಿದೆಯೆಂದರೆ, ಯುವ ಪ್ರತಿಭೆಗಳಿಗೆ ಕಿವಿಮಾತನ್ನು ಹೇಳುತ್ತಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಗೆದ್ದು ಬರುವವರು ಜಗತ್ತನ್ನೇ ಗೆದ್ದೆವೆಂಬ ಭಾವದಲ್ಲಿ ನಿಲ್ಲುತ್ತಾರೆ. ಆದರೆ ಅವರಲ್ಲಿ ಕಲಿಕೆ ಕುಂಠಿತವಾಗುತ್ತದೆ ಎಂಬುದನ್ನು ಘಂಟಾಘೋಷವಾಗಿ ಹೇಳುತ್ತಾರೆ. ಜೊತೆಗೆ ಈಗಿನ ಪೀಳಿಗೆಯರಿಗೆ ಶ್ರದ್ಧೆ, ಭಕ್ತಿ, ಶಿಸ್ತು, ಆಸಕ್ತಿ ಬಹಳ ಕಡಿಮೆ! ಕೊನೆಗೊಂದು ದಿನ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವೇನು ಎಂಬಂತಾಗಬಾರದು.

ಮದುವೆಯಾದ ಬಳಿಕ ಇವರ ಸಂಗೀತದ ಪ್ರಯಾಣಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ಪತಿಯ ಪರಿಪೂರ್ಣ ಸಹಕಾರ ಇವರಿಗಿರುವುದು. ಇವರೂ ಸಹ ಸಂಗೀತಾಸಕ್ತರೆ. ಮಂಗಳಾರಿಗೆ ಸಂಗೀತ ವೃತ್ತಿಯಾದರೆ ರವಿಯರಿಗಿದು ಪ್ರವೃತ್ತಿ! ಇವರ ಸಾಧನೆ ಇನ್ನಷ್ಟು ಹೆಚ್ಚಿ ನಮ್ಮ ದೇಶದ ಕೀರ್ತಿಯನ್ನು ವಿಶ್ವದಲ್ಲಿ ಎಲ್ಲೆಡೆ ಬೆಳಗುವಂತಾಗಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

– ಸವಿತಾ ನಾಗೇಶ್‌

Tags:
COMMENT