ಮುಖಪುಸ್ತಕ ಎಷ್ಟೋ ಜನರಿಗೆ ಒಳ್ಳೆಯದನ್ನು ಮಾಡಿದೆ. ಸ್ನೇಹ ಸಂಬಂಧಗಳನ್ನು ಬೆಸೆಯುತ್ತದೆ. ಒಂದೇ ಮನಸ್ಕರಿಗೆ ಅದೇ ಮನಸ್ಸಿನವರು ಸಿಗುತ್ತಾರೆ. ನಮ್ಮ ನಮ್ಮ ಅಭಿರುಚಿಗೆಗೆ ತಕ್ಕ ವ್ಯಕ್ತಿತ್ವದವರು ದೊರೆಯುತ್ತಾರೆ. ಒಟ್ಟಿನಲ್ಲಿ ನಮ್ಮ ಆಯ್ಕೆ ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ `ಅಮ್ಮ’ ಎಂದು ಸಂಬೋಧಿಸುವತ್ತ, ಮುಖಪುಸ್ತಕದ ಮುಖೇನ ಪರಿಚಿತರಾಗಿ, ಖ್ಯಾತ ಲೇಖಕರಾದ ಸಂತೋಷ್‌ಕುಮಾರ್‌ ಮೆಹಂದಳೆಯವರ  `ಅವರು ಎಂದರೆ….’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖೇನ ಪರಿಚಿತರಾಗಿ, ಕ್ರಮೇಣ ಆತ್ಮೀಯರಾದ ಅಭೂತಪೂರ್ವ ಪ್ರತಿಭೆ. ಹತ್ತು ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅವುಗಳಲ್ಲಿ ಹೆಸರನ್ನು ಯಶಸ್ಸನ್ನು, ಗಳಿಸುತ್ತ, ಕುಟುಂಬಕ್ಕೆ ಬಂಧು ಬಾಂಧವರಿಗೆ, ಸ್ನೇಹಿತರಿಗೆ, ಆಪ್ತವರ್ಗದವರಿಗೆ, ಆತ್ಮೀಯರಾಗಿ ಸಕಲರಿಗೂ ಸತ್ಪಾತ್ರರಾದ ಸನ್ನಡತೆಯ ವ್ಯಕ್ತಿ ಡಾ. ಅನಸೂಯಾದೇವಿ.

ಕಾವೇರಮ್ಮ  ಹಾಗೂ ತಮ್ಮಯ್ಯ ಅಡಿಗರ ಸುಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಿಂದಲೇ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ, ಕಲಿಕೆ, ಶಿಕ್ಷಣ ದೊರಕಿತು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣ. ತದನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ.ಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಹರಿದಾಸ ಸಾಹಿತ್ಯದ ಮೇಲಿನ ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ, ಹಂಪಿಯ ಪಿಎಚ್‌ಡಿ ಪದವಿಯನ್ನು ಪಡೆದು ಡಾ. ಅನಸೂಯಾದೇವಿಯಾದರು!

ಸಾಹಿತ್ಯ ಕ್ಷೇತ್ರದಲ್ಲಿನ ಬೆಳವಣಿಗೆ

ಕವನ, ಲೇಖನ, ಸಣ್ಣಕಥೆ, ಕಾದಂಬರಿಗಳನ್ನು ಬರೆದಿರುವರು. ಈಗ್ಗೆ ಕೆಲವು ದಶಕಗಳ ಹಿಂದಿನ ಅನೇಕ ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ `ಕಾವೇರಿಸುತೆ’ ಕಾವ್ಯನಾಮದಿಂದ ಇವರ ಬರಹಗಳು ಪ್ರಕಟವಾಗಿದ್ದವು. ಪ್ರಸ್ತುತ ಅನೇಕ ದೈನಿಕ, ವಾರಪತ್ರಿಕೆಗಳಲ್ಲೂ ತಮ್ಮ ಸಾಹಿತ್ಯದ ಕೃಷಿಯನ್ನು ನಡೆಸುತ್ತಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನಿಕೇತನ ತ್ರೈಮಾಸಿಕದಲ್ಲಿ ಕನ್ನಡಕ್ಕೆ ಅನುವಾದಿಸಿರುವ ಡಾ. ಹೇಮಂತ ಕುಲಕರ್ಣಿಯವರ ಇಂಗ್ಲಿಷ್‌ ಕವಿತೆಗಳ ಕನ್ನಡ ರೂಪ ಪ್ರಕಟಗೊಂಡಿವೆ. ರಾಬಿನ್‌ ರವರ `ಫೇರ್‌’ ಇಂಗ್ಲಿಷ್‌ ಕಾದಂಬರಿಯನ್ನು ಕನ್ನಡಕ್ಕೆ `ಸಂಕಟವೇ ನಿಲ್ಲು, ಸಾಧನೆಯಾಗು!’ ಎಂದು ಭಾವಾನುವಾದ ಮಾಡಿರುವರು. ಹಾಗೆಯೇ ಇತರ ಕೃತಿಗಳಾದ `ಆಕಾಶದ ಹಾಡು,’ `ಕಾಡ ಬೆಳದಿಂಗಳು’ ಧಾರಾವಾಹಿಗಳಾಗಿ ಪ್ರಕಟಗೊಂಡು ಮೆಚ್ಚುಗೆ ಗಳಿಸಿವೆ.

ಪ್ರಕಟಿತ ಕೃತಿಗಳು ಕವನ ಸಂಕಲನಗಳು : ಪ್ರಕೃತಿ ಪುರುಷ, ಅಮ್ಮ!… ನಿನ್ನ ನೆನಪಿಗೆ, ಕೇಶ ನಮನ, ಅನನ್ಯ, ಎದೆಹಾಸಿನ ಭಾವ, ಹೂಗಳು.

ಕಥಾಸಂಕಲನಗಳು : ಮಲ್ಲಿಗೆ ಹೂ, ಉರಿಯಬೇಲಿ, ದೀಪದ ಕೆಳಗೆ, ಅನಸೂಯಾ ಕಥೆಗಳು, ಕಥೆಯೊಳಗಿನ ಕಥೆಗಳು, ಅಜ್ಜಿ ಹೇಳಿದ ಕಥೆಗಳು.

ಕಾದಂಬರಿಗಳು : ಆಕಾಶದ ಹಾಡು, ಕಾಡ ಬೆಳದಿಂಗಳು, ನಕ್ಷತ್ರ ಸೂಕ್ತ, ಸಂಕಟವೇ ನಿಲ್ಲು…. ಸಾಧನೆಯಾಗು!

ವೈಚಾರಿಕ ಕೃತಿಗಳು : ವ್ಯಾಸಕೂಟ ಮತ್ತು ದಾಸಕೂಟ ಪಿಎಚ್‌ಡಿ ಮಹಾಪ್ರಬಂಧ, ಕುಂದಗನ್ನಡ.

ಗಾದೆಗಳು : ವ್ಯಾಖ್ಯಾನದೊಂದಿಗೆ, ಪ್ರಕೃತಿ ಮತ್ತು ಪ್ರೀತಿ, ವೈಚಾರಿಕ ಮತ್ತು ಆಧ್ಯಾತ್ಮಿಕ ಬರಹಗಳ ಸಂಕಲನ.

ಲೇಖಕಿಯಾಗಿ ಪಡೆದಿರುವ ಪ್ರಶಸ್ತಿಗಳು : ಧರ್ಮಸ್ಥಳ ಟ್ರಸ್ಟ್ ನಿಂದ `ರತ್ನಮ್ಮ ಮಂಜಯ್ಯ ಹೆಗ್ಗಡೆ,’ ಗೊರೂರು ಸಾಹಿತ್ಯ ಪ್ರಶಸ್ತಿ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯಿಂದ ವಿಶುಕುಮಾರ್‌ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯಶ್ರೀ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನ, ಕುವೆಂಪುಶ್ರೀ ಪ್ರಶಸ್ತಿ, ಶ್ರೀ ವಿಜಯ ಪ್ರಶಸ್ತಿ, ಸಾಹಿತ್ಯಸೇತು ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಎಂ.ಜಿ. ರಂಗನಾಥ್‌ ಸ್ಮಾರಕ ವಿಶೇಷ ಬಹುಮಾನ, ಹೂಗೊಂಚಲು ಪ್ರಶಸ್ತಿ, ಸ್ಥಳೀಯ ಪ್ರತಿಭಾ ಸನ್ಮಾನ, ಶ್ರೀ ಭೀಮಸೇತು ಪುರಂದರ ಪ್ರಶಸ್ತಿ 2012, ಅತ್ಯುತ್ತಮ ಕೃತಿ 2013 ಪ್ರಥಮ ಬಹುಮಾನ ಪುರಸ್ಕಾರ, ವೈಚಾರಿಕ ಲೇಖನಕ್ಕೆ ಪ್ರಥಮ ಬಹುಮಾನ, ಅತ್ಯುತ್ತಮ ಚಿಂತನಾಕೃತಿ 2014 ಪ್ರಥಮ ಬಹುಮಾನ ಪುರಸ್ಕಾರ ದೊರೆತಿರುವುದು.

ಅಂತಾರಾಷ್ಟ್ರೀಯ ಪ್ರಶಸ್ತಿ : ಕನ್ನಡ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಲ್ಲಿನ ಇವರ ಗಣನೀಯ ಸೇವೆಯನ್ನು ಪರಿಗಣಿಸಿ ಅಬುದಾಬಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿ ಯು.ಎ.ಇ. ಕನ್ನಡ ಒಕ್ಕೂಟ ಇವರಿಗೆ `ವಿಶ್ವಮಾನ್ಯರು’ ಪ್ರಶಸ್ತಿ ನೀಡಿ ಗೌರವಿಸಿದೆ.

ಸಂಗೀತ ಕ್ಷೇತ್ರ : ಸುಗಮ ಸಂಗೀತ, ಭಾವಗೀತೆ, ಜನಪದ ಗೀತೆ, ನಾಡಗೀತೆ, ದೇವರನಾಮಗಳಲ್ಲಿ ಸುಶ್ರಾವ್ಯತೆಯನ್ನು ಹರಿಸಿದ್ದಾರೆ. ತಮ್ಮ ಸಿರಿಕಂಠದ ಗಾನಸುಧೆಯನ್ನು ಆಕಾಶವಾಣಿ,  ಚಂದನ ದೂರದರ್ಶನ, ಉದಯ ಟಿ.ವಿ.ಗಳಲ್ಲಿಯೂ ಹಾಡಿದ್ದಾರೆ. ದಾಸರ ಪದಗಳು  ಹಾಗೂ ವಚನಗಳನ್ನು ಹಾಡುವುದರಲ್ಲಿ ವಿಶೇಷ ಪರಿಣಿತಿ ಇದ್ದು, ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಆರತಕ್ಷತೆ, ಉಪನಯನ, ಹುಟ್ಟುಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ಸಗಮ ಸಂಗೀತದ ಜೊತೆ ಜೊತೆಗೆ ಹಳೆಯ ಜನಪ್ರಿಯ ಕನ್ನಡ, ಹಿಂದಿ ಗೀತೆಗಳನ್ನು ಹಾಡುತ್ತ ಜನಮೆಚ್ಚುಗೆ ಪಡೆದಿದ್ದಾರೆ. ಕೀಬೋರ್ಡ್‌ ಹಾರ್ಮೋನಿಯಂ ನುಡಿಸುವುದರಲ್ಲೂ ಇವರು ನಿಪುಣರು. ವಿದೇಶಗಳಲ್ಲಿಯೂ ಇವರ ಗಾನಸುಧೆಯ ಲಹರಿಯು ಹರಿದು ಅಭಿಮಾನಿಗಳನ್ನು ಗಳಿಸಿದ್ದಾರೆ. ಮಲೇಷಿಯಾ, ಸಿಂಗಾಪೂರ್‌, ಅಬುದಾಬಿ, ದುಬೈಗಳಲ್ಲಿ ರಾಜ್ಯೋತ್ಸವ, ದೀಪಾವಳಿ ಮುಂತಾದ ವಿಶೇಷ ದಿನಗಳಲ್ಲಿ ಹಾಡಿ ಜನ ಮೆಚ್ಚುಗೆ ಗಳಿಸಿರುವರು.

ಕಾವ್ಯವಾಚನ / ವ್ಯಾಖ್ಯಾನ

ಈ ಪ್ರಕಾರದಲ್ಲಿ ಬಹಳವೇ ಪರಿಣಿತಿಯನ್ನು ಪಡೆದವರು, ತಮ್ಮದೇ ಆದ ಛಾಪನ್ನು ಮೂಡಿಸಿರುವರು. ಗಮಕ ಶೈಲಿಯಲ್ಲಿ ಹಾಡುವುದು ಇವರ ಆಸಕ್ತಿ. ಮಗದೊಂದು ವಿಚಾರ. ಕುಮಾರವ್ಯಾಸ ಭಾರತದ ಆಯ್ದ ಪದ್ಯಗಳನ್ನು ಹಾಡಿರುವ ಧನ್ಯತೆ ಇವರದು. ಇವರು ಪ್ರಸ್ತುತಪಡಿಸುವ `ಕರ್ಣ ಪರ್ವ’ದಿಂದ ಆಯ್ದ ಪದ್ಯಗಳು ಹಾಗೂ ಅವುಗಳಿಗೆ ಸ್ವತಃ ವ್ಯಾಖ್ಯಾನ ನೀಡಿರುವ ಇವರ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಚಂದನ ಟಿವಿಯಲ್ಲಿ ಹಾಗೂ ಹಲವಾರು ಸಾಂಸ್ಕೃತಿಕ ಸಾಹಿತ್ಯಕ ವೇದಿಕೆಗಳಲ್ಲಿ ಕಾವ್ಯವಾಚನ ವ್ಯಾಖ್ಯಾನ ನೀಡಿ ಪ್ರಸಿದ್ಧರಾಗಿದ್ದಾರೆ.

ಅಭಿನಯ ಕ್ಷೇತ್ರ

ಬಾಲ್ಯದಿಂದಲೂ ನಟನೆಯಲ್ಲಿ ಅಪಾರ ಆಸಕ್ತಿ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಟಕಗಳಲ್ಲಿ ವಿಭಿನ್ನ ಪಾತ್ರಗಳ ಅಭಿನಯ ನೀಡುತ್ತ ಬಂದಿದ್ದು, ಇಂದಿಗೂ ಸಹ ಆ ನಟನೆಯಲ್ಲಿ ಉತ್ಸಾಹ ಕುಂದಿಲ್ಲ! ಬಾಲಕಲಾವಿದೆಯಾಗಿ ಆಕಾಶವಾಣಿಯಲ್ಲಿ ಭಾಗಹಿಸಿದ ಅನುಭವವಿದೆ. ಶಾಕುಂತಲಾ, ಅನುಭವ ಮಂಟಪದಲ್ಲಿ ಅಕ್ಕ ಮುಂತಾದ ಅನೇಕ ನೃತ್ಯರೂಪಕಗಳಿಗೆ ತಾವೇ ಸಾಹಿತ್ಯ ರಚನೆ ಮಾಡಿ ಸ್ವತಃ  ಅಭಿನಯಿಸಿದ್ದಾರೆ.  ಬೆಂಗಳೂರಿನ ಬಸವಭವನ, ಕರ್ನಾಟಕ ಲೇಖಕಿಯರ ಸಂಘ ಮುಂತಾದ ಅನೇಕ ಸಂಸ್ಥೆಗಳಲ್ಲಿ ವಿವಿಧ ಪಾತ್ರಗಳಲ್ಲಿ ಅಭಿನಯ ಕಲೆ ಮೆರೆದಿದ್ದಾರೆ. ಅಲಸೂರು ತಮಿಳು ಸಂಘದಲ್ಲಿ ಕನ್ನಡ ಪ್ರಹಸನಗಳನ್ನು ತಾವೇ ಸ್ವತಃ ಬರೆದು ನಿರ್ದೇಶಿಸಿ ಅಭಿನಯ ನೀಡಿದ್ದಾರೆ. ಈಗಲೂ ತಾವು ಸ್ಥಾಪಿಸಿರುವ `ಶ್ರೀ ಕೃಷ್ಣಾ ಕೃಪಾ ಮಹಿಳಾ ಭಜನ ಮಂಡಳಿ’ಯ ಸದಸ್ಯೆಯರಿಗೆ ಅಭಿನಯ, ಕೋಲಾಟ, ನೃತ್ಯರೂಪಕಗಳನ್ನು ಹೇಳಿಕೊಡುತ್ತಾ ಪ್ರಹಸನಗಳನ್ನು ಮಾಡಿಸುತ್ತಾ, ತಾವೇ ಸ್ವತಃ ಪಾತ್ರವಹಿಸುತ್ತಾ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.

ಇನ್ನಿತರ ಸಾಧನೆ

`ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ’ಯಲ್ಲಿ ಕರ್ನಾಟಕ ಸರ್ಕಾರದಿಂದ ವಿಶೇಷ ತರಬೇತಿ ಪಡೆದವರಾಗಿ, ಅಲಸೂರಿನ ತಮಿಳು ಸಂಘದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ಕಿರಿಯ ಪ್ರಹಸನ, ಹಾಸ್ಯ ಪ್ರಹಸನಗಳನ್ನು ತಾವೇ ಸ್ವತಃ ಬರೆದು ನಿರ್ದೇಶಿಸಿ, ವಿದ್ಯಾರ್ಥಿನಿಯರಿಂದ ವೇದಿಕೆಗಳಲ್ಲಿ ಪ್ರದರ್ಶಿಸಿದ್ದಾರೆ. ಅನೇಕ ಗೀತೆಗಳಿಗೆ ತಾವೇ ರಾಗ ಸಂಯೋಜನೆ ನೀಡಿ ವಿದ್ಯಾರ್ಥಿಗಳಿಂದ ಹಾಡಿಸಿರುವರು. ಆಕಾಶವಾಣಿ, ಪಿಸಿ ಹಾಗೂ ಎಫ್‌.ಎಂ. ಮೆಟ್ರೋದಲ್ಲಿ ವನಿತಾವಿಹಾರ, ಚಿಂತನ, ಯುಗಾದಿಯ ಮಾತುಗಳು, ಸ್ತ್ರೀ ಸಂವೇದನೆಯ ಕುರಿತಾದ ಅನೇಕ ವಿಚಾರಧಾರೆಗಳ ಕುರಿತಾದ ಭಾಷಣ ನೀಡಿದ್ದಾರೆ. ಹಲವು ಬಾರಿ ರೇಡಿಯೋದಲ್ಲಿ ಸ್ವರಚಿತ ಕವಿತಾವಾಚನ, ಸಂದರ್ಶನ ಕಾರ್ಯಕ್ರಮಗಳು ಬಿತ್ತರವಾಗಿವೆ. ಚಂದನ ಟಿ.ವಿ.ಯ ಹರಟೆ,  ಕವಿಗೋಷ್ಠಿಗಳಲ್ಲಿಯೂ ಸಹ ಭಾಗವಹಿಸಿದ್ದಾರೆ. ಇನ್ನು ಇವರ ಸಂದರ್ಶನ ಆಕಾಶವಾಣಿ, ಚಂದನ, ಪಿಸಿ. ಚಾನೆಲ್, ಟಿ.ವಿ.9 ಹಾಗೂ ಚಂದನದ `ಬೆಳಗು’ ಕಾರ್ಯಕ್ರಮದಲ್ಲಿಯೂ ಮೂಡಿಬಂದಿದೆ.

ಇದೀಗ ಪ್ರಕಟಣೆಯ ಸಿದ್ಧತೆಯಲ್ಲಿದ್ದು ಕೆಲವೇ ದಿನಗಳಲ್ಲಿ ಹೊರಬರಲಿರುವ ಕೃತಿಗಳೆಂದರೆ : ಕರುಣಾಳು ಬಾ ಬೆಳಕೆ! (ಇಂಗ್ಲಿಷ್‌ನಿಂದ ಅನುವಾದ), ದಾಸ ಹೃದಯ ಮಂದಾರ (ದಾಸ ಸಾಹಿತ್ಯ), ಪುರಾಣ ಪ್ರಪಂಚದ ಸ್ತ್ರೀಯರು. ಇಷ್ಟೆಲ್ಲಾ ಸಾಧನೆಯ ಪ್ರತೀಕ ಇವರಾಗಿರುವಾಗ ಬೆಂಬಲ ಪ್ರೋತ್ಸಾಹ ಸ್ಛೂರ್ತಿ ಕುಟುಂಬವೇ ಹೌದು. ನಿವೃತ್ತ ವೈದ್ಯಾಧಿಕಾರಿಯಾದ ಪತಿ ಡಾ. ಸೂರ್ಯನಾರಾಯಣ ಆಚಾರ್ಯ ಸದಾ ಇವರಿಗೆ ಜೊತೆಯಾಗಿದ್ದಾರೆ. ಇವರಿಗೆ ಮಕ್ಕಳು, ಮೊಮ್ಮಕ್ಕಳ ಸಂಪೂರ್ಣ ಸಹಕಾರವಿದೆ. ಕುಂದದ ಬಾಡದ ಇವರ ಚೈತನ್ಯಭರಿತ ಸಾಧನೆಗಳಿಗೆ ಮತ್ತಷ್ಟು ಮಗದಷ್ಟು ಸ್ಛೂರ್ತಿ ದೊರಕಲಿ !

– ಸವಿತಾ ನಾಗೇಶ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ