ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ದುರಂತ ಇವತ್ತಿಗೂ ಕಣ್ಣಮುಂದೆ ಬರುತ್ತಿದೆ. ಕರುನಾಡಿನ 7 ಕೋಟಿ ಜನರ ಮಾನಸದಲ್ಲಿ ಆ ಕಹಿ ನೆನಪು ಇನ್ನೂ ಮಾಸಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನ ಹುಚ್ಚು ಅಭಿಮಾನಕ್ಕೆ ತಿರುಗಿದ ಕ್ಷಣವದು. ಸತತ 18 ಸೀಸನ್ ಗಳ ಬಳಿಕ ಪ್ರಶಸ್ತಿ ಕೊರತೆ ನೀಗಿಸಿದ ಆರ್ ಸಿಬಿ ತಂಡ ಅಂದು ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆ ಖುಷಿಯನ್ನು ಹಂಚಿಕೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಅಸಂಖ್ಯಾತ ಅಭಿಮಾನಿಗಳು ದೌಡಾಯಿಸಿದ್ದರು.
ಅಂದು ಆರ್ ಸಿಬಿ ಆಡಳಿತ ಮಂಡಳಿಯ ತಪ್ಪೋ.. ಪೊಲೀಸ್ ಇಲಾಖೆಯ ಮಿಸ್ಟೇಕೋ.. ಸರ್ಕಾರದ ಆದೇಶದಲ್ಲಿದ್ದ ಎಡವಟ್ಟೋ.. ಒಟ್ಟಿನಲ್ಲಿ ಯಾವುದೇ ಮಾಹಿತಿ ಕೂಡ ಸ್ಪಷ್ಟವಾಗಿ ಹೊರಬಂದಿರಲಿಲ್ಲ.. ಎಲ್ಲರಿಗೂ ಗೊಂದಲ.. ವಿಜಯೋತ್ಸವ ಎಲ್ಲಿಂದ ಎಲ್ಲಿಗೆ ನಡೆಯುತ್ತೆ..? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಆರ್ ಸಿಬಿ ತಂಡ ನೇರವಾಗಿ ಎಲ್ಲಿಗೆ ಬರುತ್ತೆ..? ಎಲ್ಲಿ ವಿಜಯೋತ್ಸವ ಆಚರಣೆ..? ಕ್ರೀಡಾಂಗಣದಲ್ಲೋ..? ವಿಧಾನಸೌಧದ ಗ್ರಾಂಡ್ ಸ್ಟೆಪ್ ಗಳ ಮೇಲೋ ಎನ್ನುವ ಮಾಹಿತಿ ಅಸ್ಪಷ್ಟವಾಗಿತ್ತು.. ಮಧ್ಯಾಹ್ನ 3 ಗಂಟೆಯವರೆಗೂ ಯಾವುದೇ ರೀತಿಯ ಅಧಿಕೃತ ಪ್ರಕಟಣೆ ಹೊರಬಂದಿರಲಿಲ್ಲ. ಹೀಗಾಗಿ ಗೊಂದಲದಲ್ಲೇ ಲಕ್ಷಾಂತರ ಅಭಿಮಾನಿಗಳು ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂ ಅಂತೆಲ್ಲಾ ಓಡೋಡಿ ಬರುತ್ತಿದ್ದರು.. ಅದರ ಮಧ್ಯೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಲೂ ನೆರೆದಿದ್ದ ಅಭಿಮಾನಿಗಳ ಮಧ್ಯೆ ದಿಢೀರ್ ನೇ ಕಾಲ್ತುಳಿತ ಶುರುವಾಗಿಬಿಟ್ಟಿತ್ತು. ಅಮಾಯಕ 11 ಜೀವಗಳು ಅಲ್ಲೇ ಕೊನೆಯುಸಿರೆಳೆದಿದ್ದವು.
ಆ ಕಹಿ ಘಟನೆಯನ್ನು ಇಡೀ ಕರುನಾಡಿನ ಜನ ಇನ್ನೂ ಮರೆತಿಲ್ಲ. ಹಾಗಾಗಿ ಆ ಮೃತ 11 ಮಂದಿಯ ಸ್ಮರಣಾರ್ಥ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹತ್ವದ ನಿರ್ಣಯ ತೆಗೆದುಕೊಂಡಿದೆ. ತಾನು ಆಡುವ ಪ್ರತಿ ಮ್ಯಾಚ್ ನಲ್ಲಿ 11 ಸ್ಥಾನಗಳನ್ನು ಖಾಲಿ ಇಟ್ಟು ಅವರ ನೆನಪಿನಲ್ಲೇ ಮೀಸಲು ಇಡಲು ನಿರ್ಧರಿಸಿದೆ.
ಕಳೆದ ಬಾರಿಯ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದಾಗಿ ಮೃತಪಟ್ಟ 11 ಮಂದಿ ಅಭಿಮಾನಿಗಳ ಸ್ಮರಣಾರ್ಥ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಪಿ1 ಗ್ಯಾಲರಿಯಲ್ಲಿ 11 ಆಸನಗಳನ್ನು ಕಾಯ್ದಿರಿಸುವ ಮೂಲಕ ಮೃತ ಅಭಿಮಾನಿಗಳಿಗೆ ಕೆಎಸ್ಸಿಎ ಮತ್ತು ಆರ್ ಸಿಬಿ ಗೌರವ ಸಲ್ಲಿಸಿದವು. ಆಟಗಾರರೂ ಕೂಡ ತೋಳಿಗೆ ಕಪ್ಪು ಪಟ್ಟಿ ಧರಿಸಿ ಆಡಿ ಗೌರವ ನಮನ ಸಲ್ಲಿಸಿದರು.
11 ಸ್ಥಾನಗಳನ್ನು ಖಾಲಿ ಇಡುವ ಬದಲು ಕುಟುಂಬಸ್ಥರಿಗೆ ಟಿಕೆಟ್ ಕೊಡಬಹುದಿತ್ತು ಎನ್ನುವ ಹಲವರ ಪ್ರಶ್ನೆಗೆ ಆರ್ ಸಿಬಿ ಉತ್ತರ ಕೊಟ್ಟಿದೆ. ಆಹ್ವಾನ ನೀಡುವ ಸಂಬಂಧ ಕೆಎಸ್ಸಿಎ ಸಮಿತಿಯಲ್ಲಿ ಚರ್ಚೆ ಕೂಡ ನಡೆದಿದೆ. ಆದರೆ, ಮೃತರ ಕುಟುಂಬಸ್ಥರಿಗೆ ಮತ್ತಷ್ಟು ನೋವುಂಟು ಮಾಡಬಾರದು ಎಂಬ ಕಾರಣಕ್ಕೆ ಆಹ್ವಾನ ನೀಡಿಲ್ಲ.
ಒಟ್ಟಿನಲ್ಲಿ ಶನಿವಾರ ರಾತ್ರಿ ನಡೆದ ಓಪನಿಂಗ್ ಮ್ಯಾಚ್ ನಲ್ಲಿ ಆರ್ ಸಿಬಿ ಅಭಿಮಾನಿಗಳು ರೊಚ್ಚಿಗೇಳದಂತೆ ಪೊಲೀಸರು ಜನದಟ್ಟಣೆ ನಿರ್ವಹಣೆಯಲ್ಲಿ ಸಫಲರಾಗಿದ್ದು ಖುಷಿ ಕೊಟ್ಟಿದೆ. ಜೊತೆಗೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷತೆಯ ಕೆಎಸ್ ಸಿಎ ಕೂಡ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದು ಎಲ್ಲರಿಗೂ ಸಂತಸ ಉಂಟು ಮಾಡಿದೆ.





