ಆಹಾರ ಮೇಳದಲ್ಲಿ ನೃತ್ಯ ವೈಭವ :
ವಿಶ್ವ ವಿಖ್ಯಾತವಾದ ಮೈಸೂರು ದಸರಾ ಮಹೋತ್ಸದ ಅಂಗವಾಗಿ ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿತಿನಿಸುಗಳನ್ನು ಸವಿದು ತಮ್ಮ ಜಿಹ್ವಾ ಚಾಪಲ್ಯವನ್ನು ತೀರಿಸಿಕೊಳ್ಳಲು ಬರುವ ಪಾಕ ಆಸ್ವಾದಕರನ್ನು ರಂಜಿಸಲೆಂದು ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಪ್ತಮಿತ್ರ ಖ್ಯಾತಿಯ ನೃತ್ಯಪಟು ಮತ್ತು ಗುರು ಶ್ರೀಧರ್ ಜೈನ್ ತಂಡದವರು ಸುಮಾರು ಎರಡು ಗಂಟೆಗಳ ಕಾಲ ನಡೆಸಿಕೊಟ್ಟ ಚಲನಚಿತ್ರ ಗೀತೆಗಳ ನೃತ್ಯ ವೈಭವವಂತೂ ಪ್ರೇಕ್ಷಕರನ್ನು ಮೋಡಿ ಮಾಡುವಲ್ಲಿ ಯಶಸ್ವಿಯಾಯಿತು.
ಗಾನಗಂಧರ್ವ ಗಾಯನದ ಮೋಡಿ :
ದೇಶ ಕಂಡಿರುವ ಅದೇ ದುರ್ಲಭ ಕಂಠಸಿರಿಯ ಗಾಯಕರಲ್ಲಿ ಒಬ್ಬರಾದ ಪಂಡಿತ್‌ಜಸರಾಜ್ ರವರ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ವಿಶ್ವ ವಿಖ್ಯಾತವಾದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆಯ ಆರಣದಲ್ಲಿ ಆಯೋಜಿಸಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭ :
ಇತ್ತೀಚೆಗೆ ಪಿರಿಯಾಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ದಾರಿದೀಪ ವಾರಪತ್ರಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಹುಣಸೂರಿನ ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ಕುಮಾರ್ ಅರಸೇಗೌಡರಿಗೆ `ಕಾಯಕರತ್ನ' ಪ್ರಶಸ್ತಿಯನ್ನು ಖ್ಯಾತ ಚಿತ್ರನಟ ನಿರ್ಮಾಪಕ ದ್ವಾರಕೀಶ್ ಪ್ರದಾನ ಮಾಡಿದರು. ಸಂಪಾದಕ ಕಂಪ್ಲಾಪುರ ಮೋಹನ್, ನಿವೃತ್ತ ಪ್ರಾಂಶುಪಾಲರಾದ ಟಿ.ಸಿ. ವಸಂತರಾಜ್ ಅರಸ್, ಚಿತ್ರನಟಿ ಅಂಶಿಣಿ ಮುಂತಾದವರು ಉಪಸ್ಥಿತರಿದ್ದರು.
ರೋಮಾಂಚನಗೊಳಿಸಿದ ರಷ್ಯನ್ ನೃತ್ಯ :
ವಿಶ್ವ ವಿಖ್ಯಾತವಾದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆಯ ಆವರಣದಲ್ಲಿ ಒಂಬತ್ತು ದಿನಗಳ ಕಾಲ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ರಷ್ಯಾದಿಂದ ಆಗಮಿಸಿದ್ದ ಸುಮಾರು 42 ಜನ ರಷ್ಯನ್ ಕಲಾವಿದರು ನಡೆಸಿಕೊಟ್ಟ ನೃತ್ಯ ವೈಭವ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರ ಹಾಗೂ ಪ್ರವಾಸಿಗರ ಮನಸೂರೆಗೊಂಡಿತು.
ರಂಜನೀಯ ನೃತ್ಯ ಪ್ರದರ್ಶನ :
2013ನೇ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಿವಿಧ ವೇದಿಕೆಗಳಲ್ಲಿ ಅನೇಕ ಕಲಾ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು. ಅಂತಹ ಪ್ರತಿಭೆಗಳಲ್ಲಿ ಒಬ್ಬರಾದ ಮೇಘನಾ ಕಲಾಮಂದಿರದಲ್ಲಿ ನಡೆಸಿಕೊಟ್ಟ ಭರತನಾಟ್ಯ ಕಾರ್ಯಕ್ರಮ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕನಸಿನಕನ್ಯೆಯ ಅಮೋಘ ನೃತ್ಯ :
ವಿಶ್ವ ವಿಖ್ಯಾತವಾದ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದ ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಯಲ್ಲಿ ಖ್ಯಾತ ಹಿಂದಿ ನಟಿ ಹಾಗೂ ಎವರ್ ಗ್ರೀನ್ ಕನಸಿನಕನ್ಯೆ ಹೇಮಮಾಲಿನಿ ಮತ್ತು ಅವರ ತಂಡದವರು ನಡೆಸಿಕೊಟ್ಟ ಪೌರಾಣಿಕ ಹಿನ್ನೆಲೆಯ ನೃತ್ಯ ರೂಪಕಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಜನಸ್ತೋಮವನ್ನು ಮನತಣಿಯೆ ರಂಜಿಸಿ 2013ರ ದಸರಾ ಮಹೋತ್ಸವವನ್ನು ಅವಿಸ್ಮರಣೀಯಗೊಳಿಸಿದವು.
ಅಪೂರ್ವ ಛಾಯಾಚಿತ್ರಗಳ ಅನಾರವಣ :
ಮೈಸೂರಿನ ಛಾಯಾಗ್ರಾಹಕರಲ್ಲಿ ಒಬ್ಬರಾದ ಮನೀಶ್ ರವರು ತಮ್ಮ ಅದ್ಭುತ ಕೈಚಳಕದಿಂದ ಕ್ಯಾಮರಾದಲ್ಲಿ ಸೆರೆಹಿಡಿದಿರುವ ವನ್ಯಪ್ರಾಣಿ ಮತ್ತು ಪಕ್ಷಿಗಳ ಅಪೂರ್ವ ದೃಶ್ಯಾವಳಿಗಳ ವರ್ಣಚಿತ್ರಗಳು ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡು ಸಂದರ್ಶಕರೆಲ್ಲರ ಪ್ರಶಂಸೆಗೆ ಪಾತ್ರವಾಯಿತು. ಪೊಲೀಸ್‌ವಾದ್ಯಗಳ ಅಪೂರ್ವ ಜುಗಲ್ ಬಂದಿ ವಿಶ್ವ ವಿಖ್ಯಾತವಾದ ಮೈಸೂರು ದಸರಾ ಮಹೋತ್ಸವದ ವಿಶೇಷಗಳಲ್ಲಿ ಮೈಸೂರಿನ ಅಂಬಾ ವಿಲಾಸ್ ಅರಮನೆಯ ಆವರಣದಲ್ಲಿ ಜರುಗುವ ಪೊಲೀಸ್ ಬ್ಯಾಂಡ್ ಪ್ರದರ್ಶನ ಸಹ ಒಂದು. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಆಗಮಿಸುವ ಪೊಲೀಸ್ ತಂಡಗಳು ಒಂದೆಡೆ ಕಲೆತು ವಿವಿಧ ವಾದ್ಯಗಳನ್ನು ನುಡಿಸುತ್ತಾ ಶಿಸ್ತುಬದ್ಧ ಕವಾಯಿತು ನಡೆಸುವುದರ ಜೊತೆಗೆ ತಮ್ಮ ಕವಾಯತಿಗೆ ಬಳಸಲಾಗುವ ವಾದ್ಯಗಳಿಂದ ಜುಗಲ್ ಬಂದಿ ಮಾದರಿಯಲ್ಲಿ ಪಾಶ್ಚಿಮಾತ್ಯ ಮತ್ತು ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟರು.