ಅಂತೂ ಇಂತೂ ಜಗತ್ತಿನ ಕೋಟಿ ಕೋಟಿ ಜನರ ಹರಕೆ ಈಡೇರಿದೆ. ಪ್ರಾರ್ಥನೆ ಫಲಿಸಿದೆ. ಶತಕೋಟಿ ಭಾರತೀಯರ ಪೂಜೆ ಕೂಡ ಫಲ ಕೊಟ್ಟಿದೆ. ಕೊನೆಗೂ ಬರೋಬ್ಬರಿ 9 ತಿಂಗಳ ಬಳಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್​​​​​​ ಭೂಮಿಗೆ ವಾಪಸ್ಸಾಗುತ್ತಿದ್ದಾರೆ. ವಿಜ್ಞಾನಿಗಳ ಶ್ರಮದ ಫಲವಾಗಿಯೇ ಸುನಿತಾ ವಿಲಿಯಮ್ಸ್​ ಹಾಗೂ ಬಚ್​ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬರುತ್ತಿದ್ದಾರೆ. ಆ ಅಮೃತಘಳಿಗೆಗೆ ಕೆಲವೇ ಗಂಟೆಗಳು ಬಾಕಿ ಇವೆ.

ಈಗಾಗಲೇ ಸುನಿತಾ ವಿಲಿಯಮ್ಸ್ ಹಾಗೂ ಬಚ್​ ವಿಲ್ಮೋರ್ ಅವರನ್ನು ಯಶಸ್ವಿಯಾಗಿ ಭೂಮಿಗೆ ವಾಪಸ್ ಕರೆತರುವ ಆಪರೇಷನ್​​​ ಶುರುವಾಗಿದ್ದು, ಬುಧವಾರ ಇದು ಕಂಪ್ಲೀಟ್ ಆಗಲಿದೆ. ಅರ್ಥಾತ್​​ ಭಾರತೀಯ ಕಾಲಮಾನಕ್ಕೆ ಹೋಲಿಕೆ ಮಾಡಿದಲ್ಲಿ 9 ಗಂಟೆ ವ್ಯತ್ಯಾಸವಿದ್ದು, ಬುಧವಾರ ಬೆಳಗಿನ ಜಾವ 3 ಗಂಟೆ 27 ನಿಮಿಷಕ್ಕೆ ಬಂದು ತಲುಪಲಿದ್ದಾರೆ. ಈ ಎಲ್ಲಾ ಆಪರೇಷನ್​​ನ್ನು ನಾಸಾ ಲೈವ್ ಕವರೇಜ್ ಕೊಡಲಿದೆ.

SUNITHA WILLIAMS (3)

ಮೊನ್ನೆ ಮೊನ್ನೆಯಷ್ಟೇ ನಾಲ್ವರು ಗಗನಯಾತ್ರಿಗಳನ್ನು ಹೊತ್ತುಕೊಂಡು ಹೋಗಿದ್ದ ಸ್ಪೇಸ್​ ಎಕ್ಸ್​​ನ ಡ್ರ್ಯಾಗನ್​​ ಕ್ರಾಫ್ಟ್​ ಬಾಹ್ಯಾಕಾಶ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. ಆ ತಂಡವು ಫ್ಲೋರಿಡಾ ಕರಾವಳಿಯಲ್ಲಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ರಾಫ್ಟ್ ಬಾಹ್ಯಾಕಾಶ ನೌಕೆಯಲ್ಲಿ ಇಳಿಯಬಹುದು ಅಂತ ನಾಸಾ ತಿಳಿಸಿದೆ. ತಮ್ಮನ್ನು ಭೂಮಿಗೆ ವಾಪಸ್ ಕರೆಸಿಕೊಳ್ಳಲು ಶ್ರಮಿಸಿದ ಡೋನಾಲ್ಡ್ ಟ್ರಂಪ್, ಮಸ್ಕ್‌ಗೆ ಸುನಿತಾ ವಿಲಿಯಮ್ಸ್ ಧನ್ಯವಾದ ಹೇಳಿದ್ದಾರೆ.

ಬಾಹ್ಯಾಕಾಶ ಕೇಂದ್ರಕ್ಕೆ 8 ದಿನದ ಅಧ್ಯಯನಕ್ಕಾಗಿ ಹೋಗಿದ್ದ ವಿಜ್ಞಾನಿಗಳು 9 ತಿಂಗಳು ಸಿಲುಕಿದ್ದಾರೆ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ 6 ತಿಂಗಳವರೆಗೂ ಹೋಗ್ತಾರೆ. ಆದರೇ ಸುನಿತಾ ವಿಲಿಯಮ್ಸ್, ಬಚ್ ವಿಲ್ಮೋರ್ 9 ತಿಂಗಳಿನಿಂದ ಇದ್ದಾರೆ. ಹೀಗಾಗಿ ಇಬ್ಬರು ಭೂಮಿಗೆ ಬಂದ ಮೇಲೆ ಭೂಮಿಯ ವಾತಾವರಣಕ್ಕೆ ಒಡ್ಡಿಕೊಳ್ಳಲು ದೈಹಿಕ ತೊಂದರೆ ಅನುಭವಿಸಲಿದ್ದಾರೆ. ಸದ್ಯ ಆಗಸದಲ್ಲೇ ಅತಂತ್ರವಾಗಿದ್ದ ವಿಜ್ಞಾನಿಗಳು ಭೂಮಿಗೆ ಬರುತ್ತಿರುವುದನ್ನು ಕಾಣಲು ವಿಶ್ವವೇ ಕಾತರದಿಂದ ಕಾಯುತ್ತಿದೆ.

ಗುಜರಾತ್ ಮೂಲದ ಸುನಿತಾ ವಿಲಿಯಮ್ಸ್, 1998ರಲ್ಲಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾಗೆ ಆಯ್ಕೆಯಾಗಿದ್ದರು. 2006ರಲ್ಲಿ ಫ್ಲೈಟ್ ಇಂಜಿನಿಯರ್ ಆಗಿ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಸುನೀತಾ ಹಾರಿದ್ದರು. 2007ರ ಫೆಬ್ರವರಿ 5ರಂದು ಸುನೀತಾ ಬಾಹ್ಯಾಕಾಶದಲ್ಲಿ ಮೊದಲ ದಾಖಲೆ ಮಾಡಿದ್ದರು. ಇದು ಮಹಿಳಾ ಗಗನಯಾತ್ರಿಯೋರ್ವರು ಬಾಹ್ಯಾಕಾಶ ನಿಲ್ದಾಣದಲ್ಲಿ ಹೆಚ್ಚು ಕಾಲ ಉಳಿದ ದಾಖಲೆಯಾಗಿದೆ. 27 ಗಂಟೆ 17 ನಿಮಿಷಗಳಷ್ಟು ಬಾಹ್ಯಾಕಾಶದಲ್ಲಿ ನಡಿಗೆ ಮಾಡಿ ದಾಖಲೆ ನಿರ್ಮಿಸಿದ್ದರು. 2012 ಜುಲೈ 14ರಂದು ಸುನೀತಾ ಎರಡನೇ ಬಾರಿಗೆ ಬಾಹ್ಯಾಕಾಶ ಯಾನ ಮಾಡಿದ್ದರು. ಈ ಸಂದರ್ಭದಲ್ಲಿ ನಾಲ್ಕು ತಿಂಗಳುಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ಇದ್ದರು. ಈ ವೇಳೆ 50 ಗಂಟೆ 40 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡುವ ಮೂಲಕ ತನ್ನದೇ ಹಳೆಯ ದಾಖಲೆಯನ್ನ ಅಳಿಸಿ ಹೊಸ ದಾಖಲೆ ನಿರ್ಮಿಸಿದ್ದರು. ಸುನೀತಾ ಅವರ 2ನೇ ಬಾಹ್ಯಾಕಾಶ ಕಾರ್ಯಾಚರಣೆ 2012ರ ನವೆಂಬರ್ 18ರಂದು ಕೊನೆಗೊಂಡಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ