ಸಾಮಾಜಿಕ ವಿಕೃತಿಯೇ ಆಗಿರುವ ಈ ಅಪರಾಧ ಎಸಗುವ ಅಪರಾಧಿಗಳು ಮನೆಯೊಳಗಡೆಯೇ ಇದ್ದರೆ ಅವರನ್ನು ಹೇಗೆ ಕಟಕಟೆಯಲ್ಲಿ ನಿಲ್ಲಿಸುವುದು?
ದಿನಪತ್ರಿಕೆಯೊಂದರಲ್ಲಿ ಒಂದು ವ್ಯಂಗ್ಯ ಚಿತ್ರ ಪ್ರಕಟವಾಗಿತ್ತು. ಅದರಲ್ಲಿ ಒಬ್ಬ ವ್ಯಕ್ತಿ ಮತ್ತೊಬ್ಬನಿಗೆ ಕೇಳುತ್ತಾನೆ, ``ವಾಹನಗಳು ಬಗೆಬಗೆಯ ಧ್ವಜ ಹಾಕಿಕೊಂಡು ಎಲ್ಲಿಗೆ ಹೊರಟಿವೆ?'
'ಇನ್ನೊಬ್ಬ ವ್ಯಕ್ತಿ ಅದಕ್ಕೆ ಉತ್ತರಿಸುತ್ತಾನೆ, ``ಬಹುಶಃ ಎಲ್ಲೋ ರೇಪ್ ಘಟನೆ ನಡೆದಿರಬಹುದು.''
ದೇಶಾದ್ಯಂತ ನಡೆಯುತ್ತಿರುವ ಬಲಾತ್ಕಾರಗಳ ಬಗ್ಗೆ ಮಾಡಿದ ಈ ಹಾಸ್ಯ ಚಟಾಕಿ ಒಂದು ಕಹಿ ಸತ್ಯವನ್ನು ಬಿಂಬಿಸುತ್ತದೆ. ದೇಶದ ಆಡಳಿತ ನಡೆಸುತ್ತಿರುವ ಅಧಿಕಾರಿಗಳು ಈ ಘಟನೆಗಳ ಬಗ್ಗೆ ತನಿಖೆ ನಡೆಸಲು ಬಾಯಿ ಬಾಯಿ ಬಿಡುತ್ತಿರುವಾಗ ಇತರೆ ಅಭಿವೃದ್ಧಿ ಕೆಲಸಗಳಿಗೆ ಅವರು ಹೇಗೆ ಸ್ಪಂದಿಸಲು ಸಾಧ್ಯ?
ಉತ್ತರಪ್ರದೇಶದ ಬದಾಯುನಲ್ಲಿ ಇಬ್ಬರು ಹುಡುಗಿಯರ ಮೇಲೆ ಗ್ಯಾಂಗ್ ರೇಪ್ ನಡೆಸಿ ಅವರನ್ನು ಮರಕ್ಕೆ ನೇತು ಹಾಕಲಾಗಿತ್ತು. ಅದೇ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮಾಡಿ ಬಳಿಕ ಆಕೆಯನ್ನು ಹತ್ಯೆಗೈಯಲಾಗಿತ್ತು. ಅಷ್ಟೇ ಅಲ್ಲ, ಆಕೆಯ ಗುರುತು ಸಿಗದಿರಲೆಂದು ಆ್ಯಸಿಡ್‌ನಿಂದ ಮುಖವನ್ನು ಸುಟ್ಟುಹಾಕಲಾಗಿತ್ತು.
ಇದು ಕೇವಲ ಉತ್ತರ ಪ್ರದೇಶದ್ದೊಂದೇ ಕಥೆ ಅಲ್ಲ. ಇಡೀ ಭಾರತದಾದ್ಯಂತ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಅತ್ಯಾಚಾರಿಗಳು ಎಳೆಯ ವಯಸ್ಸಿನ ಹುಡುಗಿಯರ ಮೇಲೆ ಈ ತೆರನಾದ ಕೃತ್ಯ ಎಸಗಿದಾಗ ಅಲ್ಲೋಲ ಕಲ್ಲೋಲದ ವಾತಾವರಣ ಸೃಷ್ಟಿಯಾಗುತ್ತದೆ.
ಬಾಪೂಜಿಯ ಎಚ್ಚರಿಕೆ
ಇಲ್ಲಿ ಮಹಾತ್ಮ ಗಾಂಧಿಯವರಿಗೆ ಸಂಬಂಧಪಟ್ಟ ಒಂದು ಸುದ್ದಿಯನ್ನು ತಿಳಿಸುವುದು ಸೂಕ್ತ ಎನಿಸುತ್ತದೆ. ಗುಜರಾತಿ ಭಾಷೆಯಲ್ಲಿ ಅವರು ಬರೆದ 3 ಪತ್ರಗಳನ್ನು ಬ್ರಿಟನ್ನಿನಲ್ಲಿ ಹರಾಜು ಮಾಡಲಾಗುತ್ತಿತ್ತು. ಅದರಲ್ಲಿ ಜೂನ್ 1935ರ ಒಂದು ಪತ್ರದಲ್ಲಿ ಗಾಂಧೀಜಿಯವರು ತಮ್ಮ ಮಗ ಹರಿಲಾಲ್‌ಗೆ ಹೀಗೆ ಬರೆದಿದ್ದರು. ``ಮನು ನಿನ್ನ ಬಗ್ಗೆ ಸಾಕಷ್ಟು ಅಪಾಯಕಾರಿ ವಿಷಯ ತಿಳಿಸಿದ್ದಾಳೆ. 8 ವರ್ಷಕ್ಕೂ ಕಡಿಮೆ ವಯಸ್ಸಿನ ಅವಳ ಬಗ್ಗೆ ನೀನು ಕೆಟ್ಟದಾಗಿ ನಡೆದುಕೊಂಡೆಯಂತೆ. ಅವಳ ಆ ನೋವು ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಅವಳಿಗೆ ಚಿಕಿತ್ಸೆ ನೀಡುವ ಸ್ಥಿತಿ ಉಂಟಾಯಿತು.''
ಮಹಾತ್ಮ ಗಾಂಧಿಯವರು ಈ ಮಾತನ್ನು ಹರಿಲಾಲ್‌ನ ಮಗಳು ಮನುವಿನ ಕುರಿತಂತೆ ಹೇಳಿದ್ದರು. ಆದರೆ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಮಾಧ್ಯಮಗಳಲ್ಲಿ ಬಂದ ಸುದ್ದಿಯ ಕುರಿತಂತೆ ಹೇಳಿಕೆ ನೀಡಿ, ``ಅವೆಲ್ಲ ಸುಳ್ಳು ಸುದ್ದಿ,'' ಎಂದು ಹೇಳಿದ್ದರು. ಮಹಾತ್ಮ ಗಾಂಧಿಯವರು ಗುಜರಾತಿ ಭಾಷೆಯಲ್ಲಿ ಬರೆದ ಪತ್ರಗಳ ಅನುವಾದ ಅತ್ಯಂತ ಕೆಳಮಟ್ಟದಲ್ಲಿತ್ತು. ಏಕೆಂದರೆ ಮಹಾತ್ಮ ಗಾಂಧಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ತಮ್ಮ ಮಗ ಹರಿಲಾಲ್‌ಗೆ ಬರೆದ ಚೀಟಿಯಲ್ಲಿ ಬಾಲ ವಿಧವೆ (ಹೆಂಡತಿಯ ತಂಗಿ)ಯ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಛೀಮಾರಿ ಹಾಕಿದ್ದರು. ಚೀಟಿಯಲ್ಲಿ ಬಾಪೂಜಿಯವರು ಹರಿಲಾಲ್ ಚಿಕ್ಕಪ್ಪ ತಮ್ಮ ದಿವಂಗತ ಹೆಂಡತಿಯ ತಂಗಿಯ ಜೊತೆಗಿನ ಸಂಬಂಧದ ಬಗ್ಗೆ ವಿರೋಧಿಸಿದ್ದರು. ಬಳಿಕ ಹರಿಲಾಲ್ ಅವರನ್ನು ವಿವಾಹ ಕೂಡ ಆಗಿದ್ದರು. ಬಾಪೂಜಿ ಜೊತೆಗೆ ವರ್ಧಾದಲ್ಲಿರುವ ಸೇವಾ ಗ್ರಾಮದಲ್ಲಿದ್ದ ಹರಿಲಾಲ್ ಮಗಳು ಮನು ಅವರಿಗೆ ತಿಳಿಸಿದ್ದೇನೆಂದರೆ, ಹರಿಲಾಲ್ ಬಾಲ ವಿಧವೆಯ ಜೊತೆಗೆ ದುರ್ವರ್ತನೆ ತೋರಿದ್ದರು. ಆಕೆಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು.