ಬ್ರಿಟೀಷರು ನಮ್ಮ ಸಂಪೂರ್ಣ ಸಂಪ್ರದಾಯಗಳು, ಸಂಸ್ಕಾರ ಗಳನ್ನು ಹಾಳು ಮಾಡಿ ಇಲ್ಲಿನ ಸಂಪತ್ತೆಲ್ಲವನ್ನೂ ಲೂಟಿ ಮಾಡಿ, ಆಗಸ್ಟ್ 15,, 1947ರಂದು ಭಾರತವನ್ನು ಬಿಟ್ಟು ಹೋಗುವ ಮುನ್ನಾ ನಮ್ಮವರಿಗೆ ಬಿಟ್ಟು ಹೋದದ್ದು, ಇಂಗ್ಲೀಷ್, ಕ್ರೈಸ್ತ ಧರ್ಮ ಮತ್ತು ಕ್ರಿಕೆಟ್. 1983ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಅಚಾನಕ್ಕಾಗಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯವನ್ನು ಗೆದ್ದ ಮೇಲಂತೂ ಭಾರತದಲ್ಲಿ ಕ್ರಿಕೆಟ್ ಆಟವು ಒಂದು ರೀತಿಯ ಧರ್ಮದಂತೆ ಆಗಿ ಹೋಗಿ ಉಳಿದೆಲ್ಲಾ ಆಟಗಳನ್ನು ನುಂಗಿ ನೀರು ಕುಡಿದಿದೆ ಎಂದರೂ ತಪ್ಪಾಗದು. 2008 ರಲ್ಲಿ ಭಾರತದಲ್ಲಿ ಆರಂಭವಾಗಿ ನಿರಂತವಾಗಿ 16 ಋತುಗಳು ನಡೆದ ಐಪಿಎಲ್ ಪಂದ್ಯಾವಳಿಗಳೂ ಸಹಾ ಕ್ರಿಕೆಟ್ಟನ್ನು ಮತ್ತೊಂದು ಹಂತಕ್ಕೆ ತೆರೆದುಕೊಂಡು ಹೋಗಿದೆ.

ಆರಂಭದಲ್ಲಿ 8 ತಂಡಗಳಿಂದ ಆರಂಭವಾದ IPL ಇಂದು 10 ತಂಡಗಳೊಂದಿಗೆ ಸುಮಾರು ಎರಡು ತಿಂಗಳುಗಳ ಕಾಲ ಭಾರತವಷ್ಟೇ ಅಲ್ಲದೇ ಇಡೀ ವಿಶ್ವಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳಿಗೆ ಕ್ರಿಕೆಟ್ ಹಬ್ಬದ ರಸದೌತಣವನ್ನು ನೀಡುತ್ತಿದ್ದು, ಬೆಂಗಳೂರು ಮೂಲದ RCB ತಂಡವು ಇದುವರೆವಿಗೂ ಒಂದು ಬಾರಿಯೂ ಪ್ರಶಸ್ತಿಯನ್ನುಪಡೇಯದೇ ಹೋದರೂ, ಪ್ರಪಂಚಾದ್ಯಂತ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದ್ದು ಪ್ರತೀ ಬಾರಿ IPL ಪಂದ್ಯಾವಳಿಗಳು ಆರಂಭವಾದಾಗಲೂ, RCB ಅಭಿಮಾನಿಗಳು ಈ ಸಲ ಕಪ್ ನಮ್ದೇ ಎನ್ನುತ್ತಲೇ ಅತ್ಯಂತ ಉತ್ಸಾಹದಿಂದ ಆರಂಭಿಸುತ್ತಿದ್ದರೂ, ಅಂತಿಮ ಸುತ್ತುಗಳಲ್ಲಿ RCB ತಂಡ ಸೋಲುವ ಮೂಲಕ RCB ಅಭಿಮಾನಿಗಳನ್ನು ನಿರಾಶೆಗೊಳಿಸುತ್ತಿದ್ದದ್ದು ಅತ್ಯಂತ ಬೇಸರದ ಸಂಗತಿಯಾಗಿತ್ತು.

ಅದೃಷ್ಟವಷಾತ್, ಈ ಬಾರಿ 2024ರ ಮಾರ್ಚ್ 17ರಂದು ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ದೆಲ್ಲಿ ಕ್ಯಾಪಿಟಲ್ಸ್ ವಿರುದ್ದ RCB ಮಹಿಳಾ ತಂಡವು ಅದ್ಬುತವಾಗಿ 8 ವಿಕೆಟ್ಗಳ ಭರ್ಜರಿ ವಿಜಯ ಸಾಧಿಸುವ ಮೂಲಕ, ನಿಸ್ಸಂದೇಹವಾಗಿ ಈ ಸಲ ಕಪ್ ನಮ್ದು ಎಂದು ಎದೆ ತಟ್ಟಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು, ತಂಡದ ನಾಯಕಿ ಸ್ಮೃತಿ ಮಂದಾನ, ಆಲ್ರೌಂಡರ್ ಎಲ್ಲೀಸ್ ಪೆರ್ರಿ, ವಿಕೆಟ್ ಕೀಪರ್ ರೀಚಾ ಘೋಘ್ ಅವರುಗಳ ಭರ್ಜರಿ ಬ್ಯಾಟಿಂಗ್ ನಡುವೆಯೂ, ಇನ್ನೂ ಕೇವಲ 22ರ ಹರೆಯದ ಕರ್ನಾಟಕ ಮತ್ತು ಭಾರತದ ಮಹಿಳಾ ಕ್ರಿಕೆಟ್ಟಿನ ಉದಯೋನ್ಮುಖ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಕೊಡುಗೆಯೂ ಅಪಾರವಾಗಿದ್ದು, ಈ ಐಪಿಎಲ್ ಪಂದ್ಯಾವಳಿಯಲ್ಲಿ ಅತಿ ಹೆಚ್ಚಿನ ವಿಕೆಟ್ (13) ಗಳಿಸಿ ನೇರಳೇ ಟೋಪಿ ಪ್ರಶಸ್ತಿಯ ಜೊತೆಗೆ ಪಂದ್ಯಾವಳಿಯ ಉದಯೋನ್ಮುಖ ಆಟಗಾರ್ತಿಯಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದ್ದು ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ನೋಡ ಇದೋ ನಿಮಗಾಗಿ.

ಮೂಲತಃ ಕಲಬುರ್ಗಿಯ ಜೇವರ್ಗಿಯ ಶ್ರೀ ರಾಜೇಶ್ ಪಾಟೀಲ್ ದಂಪತಿಗಳಿಗೆ ಎರಡನೇ ಮಗಳಾಗಿ 31 ಜುಲೈ 2002ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಶ್ರೇಯಾಂಕ, ಬಾಲ್ಯದಿಂದಲೂ ಓದಿಗಿಂತ ಆಟದಲ್ಲೇ ಅತ್ಯಂತ ಚುರುಕಾಗಿದ್ದ ಹುಡುಗಿ. ತಂದೆ ಶ್ರೀ ರಾಜೇಶ್ ಪಾಟೀಲ್ ಅವರು ಜೀವನೋಪಾಯಕ್ಕಾಗಿ ಉದ್ಯಮಿಯಾಗಿದ್ದರೂ ಕ್ರಿಕೆಟ್ ಅವರ ಪ್ರವೃತ್ತಿಯಾಗಿದ್ದು ಅವರೂ ಸಹಾ ಬೆಂಗಳೂರಿನ ಡಿವಿಷನ್ ಕ್ರಿಕಟ್ ಅಲ್ಲದೇ ವಿವಿಧ ಲೀಗ್ ಪಂದ್ಯಾವಳಿಗಳಲ್ಲಿ ಉತ್ತಮ ಬೌಲರ್ ಆಗಿದ್ದವರು. ಹಾಗಾಗಿ ಶ್ರೇಯಾಂಕಳಿಗೆ ಕ್ರಿಕೆಟ್ ಎನ್ನುವುದು ರಕ್ತಗತವಾಗಿ ಬಂದಿದೆ ಎಂದರೂ ತಪ್ಪಾಗದು.





