ನಮ್ಮ ಭಾರತದ ಭೂಪಟದ ಮೇಲೆ ಕಣ್ಣಾಡಿಸುವಾಗ ಈಶಾನ್ಯದಲ್ಲಿ ಎತ್ತಿಹಿಡಿದ ಹೆಬ್ಬೆರಳಿನಂತಹ ಆಕಾರವೊಂದು ನಮ್ಮ ಗಮನಸೆಳೆಯುತ್ತದೆ. ಅದುವೇ ಸಿಕ್ಕಿಮ್ ರಾಜ್ಯ. ಭಾರತದ ರಾಜ್ಯಗಳಲ್ಲಿ ಗೋವಾ ನಂತರದ ಪುಟ್ಟ ರಾಜ್ಯ. ಆದರೆ ದೇಶದಲ್ಲೇ ಅತಿ ಕಡಿಮೆ ಜನಸಂಖ್ಯೆ (2011ರ ಜನಗಣತಿಯ ಪ್ರಕಾರ 6.07 ಲಕ್ಷ. ಕೇಂದ್ರಾಡಳಿತ ಪ್ರದೇಶವಾದ ಪುಟ್ಟ ಪುದುಚೇರಿಯಲ್ಲೇ 12.44 ಲಕ್ಷ ಜನಸಂಖ್ಯೆ ಇದೆ) ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಸಿಕ್ಕಿಮ್ ನದು, ಸಹಜೀವನ. ಇಡೀ ಸಿಕ್ಕಿಮ್ ಹಿಮಾಲಯದ ದುರ್ಗಮ ಶಿಖರಗಳು ಮತ್ತು ಅರಣ್ಯಾವೃತ ಕಣಿವೆಗಳಿಂದ ತುಂಬಿಹೋಗಿದೆ. ಬಯಲು ಜಾಗವೇ ಇಲ್ಲ ಎಂಬಂತಹ ಸ್ಥಿತಿ ಸಿಕ್ಕಿಮ್ ನದು. ಇಲ್ಲಿ ಕೃಷಿಯನ್ನು ಪೂರ್ಣ ಅವಲಂಬಿಸಲು ಸಾಧ್ಯವಿಲ್ಲ. ಇಳಿಜಾರಿನಲ್ಲಿ ಬೆಳೆಯುವ ಚಹಾ ಮತ್ತು ಏಲಕ್ಕಿಗಳು ಪ್ರಮುಖ ವಾಣಿಜ್ಯ ಬೆಳೆಗಳು. ಪ್ರವಾಸೋದ್ಯಮ ಆದಾಯದ ಮುಖ್ಯ ಮೂಲ. ಆಹಾರ ಧಾನ್ಯಗಳು ಹೊರಗಿನಿಂದಲೇ ಸರಬರಾಜಾಗಬೇಕು.

ಸಿಕ್ಕಿಮ್ 1975ರ ಮೇ 16ರಂದು ಭಾರತದ ಅಧಿಕೃತ ಭಾಗವಾಯಿತು. ಇದಕ್ಕೂ ಮುಂಚೆ ನ್ಯಾಮ್ಗ್‌ಂಶದ ಅರಸರ ಆಳ್ವಿಕೆಯಲ್ಲಿತ್ತು. ಉತ್ತರದಲ್ಲಿ ಟಿಬೆಟ್‌, ಪಶ್ಚಿಮದಲ್ಲಿ ನೇಪಾಳ, ಪೂರ್ವದಲ್ಲಿ ಭೂತಾನ್‌ ಹಾಗೂ ದಕ್ಷಿಣದಲ್ಲಿ ಭಾರತದ ಪಶ್ಚಿಮ ಬಂಗಾಳಗಳನ್ನು ಗಡಿಯಾಗಿ ಹೊಂದಿರುವ ಸಿಕ್ಕಿಮ್ ಅಸದೃಶ ಸೌಂದರ್ಯದ ಪೂರ್ವ ಹಿಮಾಲಯದಲ್ಲಿ ಪವಡಿಸಿದೆ. ಮಿಲಿಟರಿ ದೃಷ್ಟಿಯಿಂದ ಬಹಳ ನಾಜೂಕಾದ ಆಯಕಟ್ಟಿನ ವಲಯದಲ್ಲಿದೆ. ಭಾರತದ ಅತಿ ಎತ್ತರದ ದುರ್ಗಮ್ಯ ಶಿಖರ ಕಾಂಚನಜುಂಗಾ (8598 ಮೀಟರ್‌) ಸಿಕ್ಕಿಮ್ ನಲ್ಲಿಯೇ ಇರುವುದು. ಸಸ್ಯ ಹಾಗೂ ಪ್ರಾಣಿ ವೈವಿಧ್ಯಗಳ ಹಂಚಿಕೆ ಸಿಕ್ಕಿಮ್ ನ ಒಟ್ಟು ವಿಸ್ತೀರ್ಣಕ್ಕೆ ಹೋಲಿಸಿದರೆ ಬಹಳ ಹೆಚ್ಜೇ ಎನ್ನಬೇಕು. ಬಗೆಬಗೆಯ ಅಪರೂಪದ ಆರ್ಕಿಡ್‌ಗಳಿಗೆ ಸಿಕ್ಕಿಮ್ ಪ್ರಪಂಚ ಪ್ರಸಿದ್ಧ.

ಸಿಕ್ಕಿಮ್ ವೈವಿಧ್ಯಮಯ ಸಂಸ್ಕೃತಿಗಳ ರಾಜ್ಯ. ಬಹುಸಂಖ್ಯಾತ ನೇಪಾಳಿಗಳು, ಟಿಬೆಟ್‌ ಮೂಲದ ಭುಟಿಯಾಗಳು, ಮೂಲನಿವಾಸಿ ಲೆಪ್ಚಾಗಳು, ಭಾರತೀಯ ಮೂಲದ ಬಂಗಾಳಿಗಳು, ಹಿಂದಿ ಭಾಷಿಕರು ಹೀಗೆ ಎಲ್ಲ ಸೇರಿ ಸಿಕ್ಕಿಮ್ ನ ಸಮಾಜ ಒಂದು ವಿಶಿಷ್ಟ ಸೌಹಾರ್ದದ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಈ ಅನನ್ಯತೆಯ ಕಾರಣಕ್ಕೆ ಸಿಕ್ಕಿಮ್ ನಲ್ಲಿ ಕಾಲಿಟ್ಟಾಗ ನಾವು ತೀರಾ ಭಿನ್ನವಾದವು, ಈ ತನಕ ಕಲ್ಪಿಸಿಕೊಂಡಿರದ ಪ್ರದೇಶಕ್ಕೆ ಬಂದೆವು ಎನಿಸುತ್ತದೆ. ಸಿಕ್ಕಿಮ್ ಜನ ಕಷ್ಟಸಹಿಷ್ಣುಗಳು. ಅವರದು ಧಾವಂತವಿಲ್ಲದ ಬದುಕು. ಅವರ ಸಾಮಾಜಿಕ ಬದುಕಿನಲ್ಲಿ ಸರಾಸರಿ ಪ್ರಾಮಾಣಿಕತೆ ಮನೆ ಮಾಡಿದೆ. ಇಲ್ಲಿ ಟ್ಯಾಕ್ಸಿ ಚಾಲಕರು ಸರ್ಕಾರ ನಿಗದಿಪಡಿಸಿದ ದರದ ಮೇಲೆ ಒಂದು ಪೈಸೆಯನ್ನೂ ಹೆಚ್ಚಿಗೆ ಒತ್ತಾಯಿಸುವುದಿಲ್ಲ.

ಸಿಕ್ಕಿಮ್ ನ ಜೈಲುಗಳು ಖೈದಿಗಳಿಲ್ಲದೆ ಬಿಕೋ ಎನ್ನುತ್ತಿರುತ್ತವೆ. ಕಳುವಿನಂತಹ ಸಾಮಾನ್ಯ ಅಪರಾಧಗಳೂ ಇಲ್ಲಿ ಅಪರೂಪ ಎನ್ನಬೇಕು. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರು. ಪದೇ ಪದೇ ಭೂ ಕುಸಿತ ಸಂಭವಿಸಿ ಸಿಕ್ಕಿಮ್ ವಾರಗಟ್ಟಲೆ ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡರೂ ಜನ ಕಂಗೆಡುವುದಿಲ್ಲ. ಭೂಕಂಪಗಳೂ ಸಾಮಾನ್ಯವೇ. 2011ರ ಭೂಕಂಪ ದೊಡ್ಡ ಸುದ್ದಿ ಮಾಡಿತು. ಆದರೆ ಜನ ಪರಸ್ಪರ ನೆರವಾಗುವ ಮೂಲಕ ನಿಸರ್ಗದ ಸಾಲನ್ನು ದಿಟ್ಟವಾಗಿ ಎದುರಿಸಿದರು. ಭೂಕಂಪನ ಕೇಂದ್ರವೊಂದರ ಸನಿಹವೇ ನೆಲೆಸಿರುವುದರಿಂದ ಸಿಕ್ಕಿಮ್ ಯಾವಾಗಲೂ ಆಪತ್ತಿನಲ್ಲಿರುವ ಪ್ರದೇಶವಾಗಿದೆ.

ಬೌದ್ಧ ವಿಹಾರಗಳ ನಾಡು

ಸಿಕ್ಕಿಮ್ ನಲ್ಲಿ  ಹಿಮಾಲಯದಷ್ಟೆ ಮನಸ್ಸು ಸೆಳೆಯುವ ಸಂಗತಿಯೆಂದರೆ ಬೌದ್ಧ ವಿಹಾರಗಳು. ಸಿಕ್ಕಿಮ್ ನಲ್ಲಿ 200ಕ್ಕೂ ಹೆಚ್ಚು ವಿಹಾರಗಳಿವೆ. ಮುನ್ನೂರು ವರ್ಷಗಳಷ್ಟು ಹಳೆಯದಾದ ವಿಹಾರ ಭೇಟಿಗೆ ಯೋಗ್ಯವಾಗಿದೆ. ಒಂದಕ್ಕಿಂತ ಒಂದು ಸುಂದರ ಪರಿಸರದಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ವಾಸ್ತುಶಿಲ್ಪ ಮತ್ತು ಚಿತ್ರಕಲೆಗಳಿಂದ ಈ ವಿಹಾರಗಳು ಕಂಗೊಳಿಸುತ್ತವೆ. ನಮ್ಮ ಇತ್ತೀಚಿನ ಸಿಕ್ಕಿಮ್ ಪ್ರವಾಸದಲ್ಲಿ ಕೆಲವನ್ನು ನೋಡಲು ಸಾಧ್ಯವಾದರೂ ಎರಡು ಬೌದ್ಧ ವಿಹಾರಗಳು ತಮ್ಮದೇ ಕಾರಣಕ್ಕೆ ಮುಖ್ಯವಾಗಿವೆ. ಒಂದು ಅತಿ ಪ್ರಸಿದ್ಧವಾದದ್ದು, ಇನ್ನೊಂದು ಅತಿ ಅಪರಿಚಿತವಾಗಿ ಉಳಿದಿರುವಂತಹುದು. ಎರಡೂ ಒಂದು ಗಂಟೆಯ ಅವಧಿಯಲ್ಲಿ ಸಂದರ್ಶಿಸುವಂತಹ ಅಂತರದಲ್ಲಿದೆ.

ಮೊದಲನೆಯದು ಸಿಕ್ಕಿಮ್ ಗೆ ಹೋದವರೆಲ್ಲ ತಪ್ಪಿಸದೇ ನೋಡಿಬರುವ ಅತಿ ಹಳೆಯ ರುಮ್ ಟೆಕ್‌ ಬೌದ್ಧಚಕ್ರ ವಿಹಾರ. ಇದು ಸಿಕ್ಕಿಮ್ ನ ವಿಹಾರಗಳಲ್ಲೇ ಅತಿ ದೊಡ್ಡದು. ಭಾರತದ ಬೌದ್ಧ ವಿಹಾರಗಳಲ್ಲೇ ಅತಿ ಶ್ರೀಮಂತವಾದುದೂ ಹೌದು. (ಹಿಂದೂಗಳಿಗೆ ತಿರುಪತಿ ದೇವಾಲಯವಿದ್ದಂತೆ)  ಬಿಲಿಯನ್‌ ಗಟ್ಟಲೆ ಮೌಲ್ಯವಾದ ಸಂಪತ್ತು ಈ ವಿಹಾರದ್ದು. ಇಲ್ಲಿ ಪ್ರಾಂಗಣ ಮತ್ತು ಕಿರುಜಗುಲಿಯ ಭಿತ್ತಿಚಿತ್ರಗಳನ್ನು ಹೊರತುಪಡಿಸಿ ಇನ್ನುಳಿದ ಕಡೆ ಛಾಯಾಗ್ರಹಣ ನಿಷಿದ್ಧ. ಅಷ್ಟರಮಟ್ಟಿಗೆ ಇದು ಮುಚ್ಚಿದ ವಿಹಾರವೇ ಸರಿ. ರುಮ್ ಟೆಕ್ಕಿನ ಪರಿಸರ ಪ್ರವಾಸಿಗರಿಂದ ಗಿಜಿಗಿಜಿ ಎನ್ನುತ್ತಿರುತ್ತದೆ. ಬುದ್ಧನಿಗೆ ದಕ್ಕಿರಬಹುದಾದ ಮಾನಸಿಕ ಪ್ರಶಾಂತತೆ ಇಲ್ಲಿ ಪ್ರವಾಸಿಗಳಿಗೆ ಅಸಂಭವ. ರುಮ್ ಟೆಕ್‌ನ ಮುಖವಾಡಗಳ ತ್ಸೆಚೂ ನೃತ್ಯ ಜಗತ್ಪ್ರಸಿದ್ಧ.

ರುಮ್ ಟೆಕ್‌ನಿಂದ ಗ್ಯಾಂಗ್‌ಟಾಕ್‌ಗೆ ಕೂಡಲೇ ಮರುಳುವುದೋ, ಬೇಡವೋ ಎಂಬ ಜಿಜ್ಞಾಸೆಯಲ್ಲಿ ನಾವಿದ್ದಾಗ ನಮ್ಮ ನೇಪಾಳಿ ಟ್ಯಾಕ್ಸಿ ಡ್ರೈವರ್‌ ರಾಜು, “ಸರ್‌, ನೀವು ರಂಕಾ ಗೊಂಪ ನೋಡ್ತೀರಾ? ಬಹಳ ಚೆನ್ನಾಗಿದೆ,” ಎಂದರು.

ನಾವು `ಎಸ್‌’ ಎಂದೆವು. ನಮ್ಮ ಮಾರ್ಗ ಬದಲಾಯಿತು. ಮಾರ್ಗ ಮಧ್ಯೆ  ಏಲಕ್ಕಿ ತೋಟಗಳ ನಡುವೆ ಸಾಗಿದೆ. ಈ ಏಲಕ್ಕಿಯ ವಿಶೇಷವೆಂದರೆ ಇಡೀ ಭಾರತದಲ್ಲೇ ಸಿಕ್ಕಿಮ್ ನಲ್ಲಿ ಮಾತ್ರ ಬೆಳೆಯುವ ಅತಿ ದೊಡ್ಡ ಗಾತ್ರದ ಕಾಯಿ ಬಿಡುವ ಪ್ರಭೇದವಿದು. ಅರ್ಧ ಗಂಟೆಯ ಪಯಣದ ನಂತರ ನಾವು ರಂಕಾ ಹಳ್ಳಿಗೆ ಹೋದೆವು. ಅಲ್ಲೊಂದು ಗೊಂಪವಿದೆ. ಗೊಂಪ ಎಂದರೆ ಭುಟಿಯಾ ಭಾಷೆಯಲ್ಲಿ ವಿಹಾರ ಎಂದರ್ಥ. ಆಶ್ಚರ್ಯವೆಂದರೆ ರಂಕಾದ ವಿಹಾರದಲ್ಲಿ ಪ್ರವಾಸಿಗರೇ ಇಲ್ಲ. ಬೌದ್ಧ ಭಿಕ್ಕುಗಳೇ ಓಡಾಡಿಕೊಂಡಿರುತ್ತಾರೆ. ಸುತ್ತ ಅಂಗಡಿ ಮುಂಗಟ್ಟುಗಳಿಲ್ಲ. ಗೌಜು, ಗದ್ದಲವಿಲ್ಲ. ಮತ್ತೆ ಯಾರಿಗಾಗಿ ಈ ವಿಹಾರ ಎಂದು ಅನುಮಾನ ಮೂಡಿತು. ಈ ವಿಹಾರದ ಪರಿಸರದಲ್ಲಿ ಓಕ್‌ ಹಾಗೂ ಪೈನ್‌ಮರಗಳ ನಡುವೆ ಸುಳಿಯುವ ಗಾಳಿಯ ಮೃದು ಸದ್ದು ಬಿಟ್ಟರೆ ಮೌನದ್ದೇ ಕಾರುಬಾರು. ರಂಕಾ ವಿಹಾರವನ್ನು ಲಿಂಗ್ಡಮ್ ವಿಹಾರವೆಂದೂ ಕರೆಯುತ್ತಾರೆ. ಹದಿನೈದು ವಸಂತಗಳನ್ನಷ್ಟೇ ಕಂಡಿರುವ ವಿಹಾರವಿದು.

ರಂಕಾ ವಿಹಾರ

ನಾವು ರಂಕಾಗೆ ಬಂದ ಸಮಯದಲ್ಲಿ ವಿಹಾರದ ಬಾಗಿಲು ಮುಚ್ಚಿತ್ತು. ನಮಗಾದ ನಿರಾಸೆಯನ್ನು ನಮ್ಮ ಮುಖಭಾವದಿಂದಲೇ  ಅರ್ಥ ಮಾಡಿಕೊಂಡ ಭಿಕ್ಕುಗಳು ಓಡಿಹೋಗಿ ಕೀಲಿ ಕೈ ತಂದು ಬಾಗಿಲು ತೆರೆದರು. ಓಹ್‌! ಅದೊಂದು ವರ್ಣಗಳ ಅದ್ಭುತ ಲೋಕ. ಟೆಬೇಟಿಯನ್‌ ಶೈಲಿಯ ಅನೂಹ್ಯ ವಿನ್ಯಾಸಗಳ ಬೆರಗಿನ ಲೋಕ. ಹಿಮಾಲಯದ ನಿಸರ್ಗ ಸೌಂದರ್ಯ ಹಾಗೂ ಪ್ರಾಣಿ ಪಕ್ಷಿಗಳ ಚಿತ್ರಗಳು, ಭಿತ್ತಿಚಿತ್ರಗಳು, ಕಾವ್ಯ ಚಿತ್ರಗಳು, ಇಳಿಬಿದ್ದ ಬಟ್ಟೆಯ ಮೇಲೆ ಬರೆದ ಚಿತ್ರಗಳು, ಕಂಬ, ತೊಲೆ, ಜಂತೆ, ಕೈಪಿಡಿ, ಛಾವಣಿ ಹೀಗೆ ಎಲ್ಲೂ ಒಂದಿಂಚು ಜಾಗವನ್ನೂ ಖಾಲಿ ಬಿಡದೆ ಬಿಡಿಸಿದ ಚಿತ್ತಾರಗಳು. ಬುದ್ಧ, ಪದ್ಮಸಂಭ, ಗುರು ರಿಂಪೋಚೆ ಇವನ್ನು ಯಾರು ಯಾರದೋ ಚಿತ್ರಗಳು. ಒಟ್ಟಾರೆ ವಿಹಾರದ ಚಿತ್ರಕಲೆ ಭಿಕ್ಕುಗಳ ಸೂಕ್ಷ್ಮ ಕಲೆಗಾರಿಕೆಗೆ ಕನ್ನಡಿ ಹಿಡಿಯುತ್ತದೆ. ವರ್ಣ ವೀಕ್ಷಣೆಯಲ್ಲಿ ಮೈಮರೆತು ನಾವು ಅದಾವುದೋ ಲೋಕಕ್ಕೆ ತೆರಳಿಬಿಡುತ್ತೇವೆ.

ರಂಕಾ ವಿಹಾರದ ಇಡೀ ವಾಸ್ತುಶಿಲ್ಪದ ವಿನ್ಯಾಸ ಟಿಬೆಟ್‌ನ ಪಗೋಡಾ ಶೈಲಿಯಲ್ಲಿದೆ. ಬೌದ್ಧ ವಿಹಾರ ನೋಡಲು ನಾವು ಟಿಬೆಟ್‌ಗೆ ಬಂದಿದ್ದೇವೆ ಎಂಬ ಭಾವನೆ ಮೂಡಿಸುವುದೇ ಈ ಶೈಲಿಯ ಹಿಂದಿನ ಉದ್ದೇಶವಂತೆ. ಇಲ್ಲಿನ ಭಿಕ್ಕುಗಳು ಕಾಗ್ಯೂ ಎಂಬ ಟಿಬೆಟ್‌ಪಂಥದ ಅನುಯಾಯಿಗಳು. ಒಂದು ಸಾವಿರ ವರ್ಷಗಳ ಹಿಂದೆ ಮಾರ್ಪ, ಮಿಲರೆಪ ಎಂಬ ಧರ್ಮಗುರುಗಳಿಂದ ಜನಪ್ರಿಯವಾದ ಪಂಥವಿದು. ರಂಕಾ ವಿಹಾರದಲ್ಲಿ ಮುನ್ನೂರು ಭಿಕ್ಕುಗಳಿಗೆ ಅಧ್ಯಯನ ನಡೆಸಲು ಅನುಕೂಲಗಳಿವೆ.

ಭೂತಾನ್‌, ನೇಪಾಳ, ಭಾರತ, ಟೆಬೆಟ್‌ಗಳಿಂದ ಬಂದ ಭಿಕ್ಕುಗಳು ಇಲ್ಲಿದ್ದಾರೆ. ರಂಕಾ ವಿಹಾರದ ಮೇಲ್ವಿಚಾರಕರಿಗೆ ತಮ್ಮ ವಿಹಾರ ಪ್ರವಾಸಿ ಆಕರ್ಷಣೆಯಾಗುವುದು ಅಷ್ಟೇನೂ ಇಷ್ಟವಿಲ್ಲವೆಂದು ಕಾಣುತ್ತದೆ. ಇಲ್ಲಿನ ಸ್ವಚ್ಛತೆ, ನೀರವತೆ, ನಿರಾಡಂಬರಗಳನ್ನು ನೋಡಿದಾಗ ಹಾಗೆನ್ನಿಸುತ್ತದೆ. ಆದರೆ ಈ ವಿಹಾರವನ್ನು ಹುಡುಕಿ ಬಂದವರಿಗೆ ಆತ್ಮೀಯ ಸ್ವಾಗತವಂತೂ ಖಚಿತವಾಗಿ ಸಿಗುತ್ತದೆ.

ರಂಕಾ ವಿಹಾರ ಗ್ಯಾಂಗ್‌ಟಾಕ್‌ನಿಂದ 25 ಕಿ.ಮೀ. ದೂರದಲ್ಲಿದೆ. ಈ ವಿಹಾರದ ಕುರಿತು ಪ್ರವಾಸಿ ಗೈಡ್‌ಗಳಲ್ಲಿ ಎಲ್ಲೂ ವಿವರಣೆ ಸಿಗುವುದಿಲ್ಲ. ಸಿಕ್ಕಿಮ್ ಗೆ ಹೋದರೆ ಖಂಡಿತಾ ರಂಕಾಗೆ ಹೋಗಿಬನ್ನಿ. ಸ್ನೇಹಮಯಿ ಭಿಕ್ಕುಗಳ ಸಾಂಗತ್ಯದಲ್ಲಿ ನಿರುದ್ವಿಗ್ನ ಗಳಿಗೆಗಳನ್ನು ಕಳೆದು ಬನ್ನಿ.

ಕೆ.ಎಸ್‌. ರವಿಕುಮಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ