ಸಿಂಗಾಪೂರ್‌ನಲ್ಲಿ ಒಂದಕ್ಕಿಂತ ಒಂದು ಆಕರ್ಷಣೆಗಳು ಪ್ರವಾಸಿಗರ ಮನಸೆಳೆಯುತ್ತವೆ. ಆದರೆ ಈ ಎಲ್ಲವುಗಳಿಗಿಂತ ವಿಭಿನ್ನವಾದುದು ನೈಟ್ ಸಫಾರಿ ಅರ್ಥಾತ್ ನಿಶಾ ವನ್ಯ ವಿಹಾರ. ಇಡೀ ವಿಶ್ವದಲ್ಲೇ ಮೊಟ್ಟ ಮೊದಲನೆಯದಾಗಿ ಪ್ರಾರಂಭಿಸಲಾದ ಈ ನಿಶಾ ವನ್ಯ ವಿಹಾರ ಅಥವಾ ನೈಟ್ ಸಫಾರಿ ನಿಜಕ್ಕೂ ವಿಶಿಷ್ಟ! ಸಿಂಗಾಪೂರ್‌ಗೆ ಹೋದವರು ಇಲ್ಲಿಗೆ ಭೇಟಿ ನೀಡದೆ ಇರಲಾರರು. 68 ಎಕರೆಗಳಷ್ಟು ವನ್ಯ ಪ್ರದೇಶದಲ್ಲಿ ಪಸರಿಸಿರುವ ಈ ನಿಶಾ ಧಾಮವನ್ನು 1994ರ ಮೇ ತಿಂಗಳಲ್ಲಿ ಸಾರ್ವಜನಿಕರಿಗಾಗಿ ತೆರೆಯಲಾಯಿತು.
ಸಿಂಗಾಪೂರ್‌ನ ಮೃಗಾಲಯದ ಪಕ್ಕದಲ್ಲೇ ಇರುವ ಈ ತಾಣದಲ್ಲಿ 130 ಜಾತಿಯ 250 ಪ್ರಾಣಿಗಳಿವೆ. ವರ್ಷವೊಂದರಲ್ಲಿ 11 ಲಕ್ಷ ಜನ ಭೇಟಿ ನೀಡುವ ಈ ನೈಟ್ ಸಫಾರಿ ಅತ್ಯಂತ ಜನಪ್ರಿಯವೂ ಹೌದು. ಪೂರ್ಣವಾಗಿ ತೆರೆದ ತಾಣದಲ್ಲಿ ಏಳು ವಿಭಾಗಗಳಿದ್ದು, ಅವುಗಳನ್ನು ನಡೆದು ಅಥವಾ ಟ್ರಾಮ್ನಲ್ಲಿ ಹೋಗಿ ನೋಡಬಹುದು. ಟ್ರಾಮ್ನಲ್ಲಿ ಹೋಗುವಾಗ ನೋಡುಗರಿಗೆ ವಿವರಣೆ ನೀಡಲಾಗುತ್ತದೆ. ನೋಡುಗರಿಗೆ ಸ್ಪಷ್ಟವಾಗಿ ಕಾಣುವಂತೆ ಬೆಳದಿಂಗಳಿನಂತಹ ಬೆಳಕನ್ನು ಮೂಡಿಸಲಾಗಿದೆ.
ಲಂಡನ್ ಮೂಲದ ಸೈಮನ್ ಕಾರ್ಡರ್ ಮಾಡಿರುವ ಬೆಳಕಿನ ವಿನ್ಯಾಸ, ಯಾವುದೇ ರೀತಿಯಲ್ಲಿ ಪ್ರಾಣಿಗಳಿಗೆ ಶಾಂತಿ ಭಂಗವಾಗದಂತೆ, ಕೆರಳಿಸದಂತೆ ಅನುಕೂಲಕರವಾಗಿದೆ. ಯಾವುದೇ ಬೋನು ಪಂಜರಗಳಿಲ್ಲದೆ ನೈಸರ್ಗಿಕವಾಗಿ ಅವುಗಳನ್ನು ನೋಡುಗರಿಂದ ದೂರವಿರಿಸಲಾಗಿದೆ. ನೈಟ್ ಸಫಾರಿಯಲ್ಲಿ ಪ್ರವೇಶ ಮಾಡುತ್ತಿದ್ದಂತೆಯೇ ತಂಬೂರಕರ್ ಕಾಡಿನ ಜನಾಂಗದ ನೃತ್ಯ ನಿಮ್ಮ ಆ ರಾತ್ರಿಯ ನೀರವತೆಯಲ್ಲೂ ಬೆಚ್ಚಗೆ ಮಾಡುತ್ತದೆ.
ಅವರ ಸಾಂಸ್ಕೃತಿಕ ನೃತ್ಯ ನಿಮ್ಮ ಮನಸೆಳೆದರೆ ಬೆಂಕಿಯನ್ನು ಉಗುಳುವ ಪ್ರದರ್ಶನ ವಾತಾವರಣದಲ್ಲಿ ಬಿಸಿಯನ್ನುಂಟು ಮಾಡುತ್ತದೆ. ನೃತ್ಯವನ್ನು ನೋಡುತ್ತಾ ಅಲ್ಲಿಯ ರುಚಿಕರ ಊಟ ಮಾಡಬಹುದು. ಇಲ್ಲವಾದಲ್ಲಿ ಊಟ ಮಾಡಿಕೊಂಡು ಬಂದರೆ ಪ್ರದರ್ಶನವನ್ನು ನಿರಾಳವಾಗಿ ನೋಡಬಹುದು. ಮುಂದೆ ನಿಮ್ಮ ಪಯಣ ಟ್ರಾಮ್ನತ್ತ.
ಟ್ರಾಮ್ನಲ್ಲಿ ಸಾಗುವಾಗ ಮೈಯೆಲ್ಲಾ ಒಂದು ರೀತಿಯಲ್ಲಿ ಉದ್ವೇಗಗೊಳ್ಳುತ್ತದೆ. ರಾತ್ರಿಯ ವೇಳೆ ಆ ಪ್ರಾಣಿಗಳು ಹೇಗೆ ಕಾಣುತ್ತವೆ ಎನ್ನುವ ಕುತೂಹಲ, ಜೊತೆಗೆ ಪೂರಾ ಕತ್ತಲು. ಆ ಕತ್ತಲಲ್ಲಿ ನಲವತ್ತು ನಿಮಿಷದ ಟ್ರಾಮ್ ಸವಾರಿಯಲ್ಲಿ ಸಾಗುವಾಗ ಅಲ್ಲಿನ ಗೈಡ್ ಮೆಲು ಧ್ವನಿಯಲ್ಲಿ ವಿವರಣೆಯನ್ನು ನೀಡುತ್ತಲೇ ಇರುತ್ತಾರೆ. ಕ್ಷಣ ಕ್ಷಣಕ್ಕೂ ಬದಲಾಗುವ ಪರಿಸರ, ಬೇರೆ ಬೇರೆಯ ಸಸ್ಯವರ್ಗ ಮತ್ತು ಪ್ರಾಣಿಗಳಿಗೆ ಅನುಗುಣವಾದ ತಾಣ, ನೋಟ ಈ ರೀತಿಯಾದರೆ ಅರಣ್ಯದ ನೀರವ ಮೌನ, ಹರಿಯುವ ನೀರಿನ ಜುಳು ಜುಳು ನಿನಾದ, ಕೀಟಗಳು ಗುಂಯ್ ಗುಡುವಿಕೆ, ಆಗಾಗ ನೀವು ನೋಡುವ ಪ್ರಾಣಿಗಳ ಹ್ಞೂಂಕಾರ, ಹಾಗೆಯೇ ಸಾಗುತ್ತಾ ಹೋಗುವಾಗ ನಲವತ್ತು ನಿಮಿಷವಾದದ್ದೇ ಗೊತ್ತಾಗದು. ರೋಮಗಳು ನಿಮಿರುತ್ತವೆ, ಮನ ಉದ್ವೇಗಗೊಳ್ಳುತ್ತದೆ. ಏನೋ ಒಂದು ವಿಭಿನ್ನ ರೀತಿಯ ಅನುಭವ ನಿಮ್ಮದಾಗುತ್ತದೆ.
ಹಿಮಾಲಯದ ತಪ್ಪಲು
ಮೊದಲು ಎದುರಾಗುವುದು ಹಿಮಾಲಯದ ಪರ್ವತ ಶ್ರೇಣಿಯ ತದ್ರೂಪ. ಇಳಿಜಾರಿನ ಕಲ್ಲುಗಳ ಮೇಲೆ ಬೆಳೆದಿರುವ ಹಸಿರು, ಹರಿಯುವ ನದಿ ಸದ್ದು, ಅಲ್ಲಿ ಸದೃಢವಾಗಿ ನಿಂತಿರುವ ವಿಶ್ವದಲ್ಲೇ ಅತ್ಯಂತ ದೊಡ್ಡ ವನ್ಯ ಆಡು (ವೈಲ್ಡ್ ಗೋಟ್ ಮಾರ್ಕೋರ್ಸ್). ರಾತ್ರಿಯ ನಿಶ್ಶಬ್ದದಲ್ಲಿ ಮೆಲ್ಲಗೆ ತಮ್ಮ ಮೇವನ್ನು ಮೇಯುತ್ತಿರುವ ವನ್ಯಜೀವಿಗಳು, ಅವುಗಳನ್ನೆಲ್ಲಾ ನೋಡುತ್ತಾ ಮುಂದೆ ಸಾಗಿದಾಗ, ಕುರಿಗಳ ಪುರಾತನ ಕಾಲದ ವಂಶಜರಾದ ಮೌಪ್ಲೇನ್ಸ್ ಸಿಗುತ್ತದೆ. ಅಲ್ಲಿಂದ ಮುಂದೆ ಸಾಗಿದರೆ ಎದುರಾಗುವುದು ಅದಕ್ಕಿಂತ ವಿಭಿನ್ನವಾದ ಪರಿಸರದಲ್ಲಿರುವ ಬಾರಾಸಿಂಗ್ ಜಿಂಕೆ ಅಂದರೆ ಹನ್ನೆರಡು ಕೊಂಬುಗಳಿರುವ, ಕೊಂಬುಗಳು ಹನ್ನೆರಡು ಕವಲುಗಳಾಗಿ ಹೊಮ್ಮಿರುವ ಸುಂದರ ಜಿಂಕೆಗಳ ಗುಂಪು. ಜಿಂಕೆಗಳನ್ನು ನೋಡಿ ಅಚ್ಚರಿಪಡುವಷ್ಟರಲ್ಲಿ ಬೆಳ್ಳನೆಯ ಹೊಳೆಯುವ ಮಂಚೂರಿಯನ್ ಬಕಪಕ್ಷಿಗಳು. ನಡೆದಾಡುವುದನ್ನು ನೋಡುತ್ತಲೇ ಮುಂದೆ ಸಾಗಿದಾಗ ತನ್ನ ಮೈಮೇಲೆ ಕಪ್ಪು ಪಟ್ಟೆಗಳಿಂದ ಅಲಂಕೃತವಾದ ಹೈನಾಗಳನ್ನು ನೋಡುವ ಭಾಗ್ಯ ನಿಮ್ಮದಾಗುತ್ತದೆ. ಏಷ್ಯಾದಲ್ಲಿ ಮಾತ್ರ ದೊರಕುವ ಈ ಹೈನಾಗಳು ರಾತ್ರಿಯ ವೇಳೆ ಚುರುಕಾಗಿರುತ್ತವೆ. ಹೀಗಾಗಿ ಬೇರೆ ಪ್ರಾಣಿಗಳು ತಿಂದುಳಿದ ಆಹಾರವನ್ನು ತಿನ್ನುವ ಸ್ಕ್ಯಾವೆಂಜರ್ ಎಂದು ಹೆಸರು ಪಡೆದಿರುವ ಈ ಮೃಗ ತನ್ನ ಆಹಾರವನ್ನು ತಿನ್ನುವ ದೃಶ್ಯ ನೋಡಲು ಸಿಗಬಹುದು.