ಸ್ಮಶಾನ ಎಂದರೆ ಭಯಪಡುವ ಜಾಗ ಆಗಿರುವಾಗ ಅಲ್ಲಿನ ಸಿಬ್ಬಂದಿಯ ಮಕ್ಕಳ ಏಳಿಗೆಗಾಗಿ ಇಂಥ ಒಂದು ಪಾಠಶಾಲೆ ಇದೆ. ಇದರ ಕುರಿತು ಇಲ್ಲೊಂದು ವಿವರವಾದ ಮಾಹಿತಿ……….!
ಸಾಮಾನ್ಯವಾಗಿ ಸ್ಮಶಾನ ಎಂದರೆ ಎಲ್ಲರೂ ಹೆದರಿ ದೂರ ಓಡುತ್ತಾರೆ. ಯಾವುದೇ ಸಾವು ಸಂಭವಿಸಿದ್ದಲ್ಲಿ ಮಾತ್ರವೇ ಸ್ಮಶಾನದತ್ತ ತೆರಳುವ ನಮಗೆ, ಅಲ್ಲಿಯೇ ನೆಲೆಸಿ ಮೃತ ದೇಹವನ್ನು ಮಣ್ಣಾಗಿಸಲು ಸಹಕರಿಸುವವರ ಕುಟುಂಬದ ಕುರಿತಂತೆ ಯಾವ ಭಾವನೆಯೂ ಇರುವುದಿಲ್ಲ. ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದ ಈ ಕುಟುಂಬಗಳು ಇಂದಿಗೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ.
ಕಳೆದ ಐದು ತಲೆಮಾರುಗಳಿಂದ ಸ್ಮಶಾನದ ಕೆಲಸಗಳನ್ನೇ ಮಾಡುತ್ತಾ ಬಂದಿರುವ ಇವರ ಮಕ್ಕಳು ಸಹ ಇತ್ತೀಚಿನವರೆಗೂ ಶಾಲೆ, ಶಿಕ್ಷಣದಿಂದ ದೂರವೇ ಉಳಿದಿದ್ದರು. ಸ್ಮಶಾನದಲ್ಲಿನ ಗೋರಿ, ಬಾವಲಿ, ಗೂಬೆ, ಹಾವುಚೇಳುಗಳ ಸಂಗದಲ್ಲಿಯೇ ಬೆಳೆದ ಈ ಮಕ್ಕಳ ಮನೋಭಾವ ಐವತ್ತರ ವಯೋಮಾನದ ವ್ಯಕ್ತಿಗಳಂತಿರುವುದು ಅಚ್ಚರಿಯಾದರೂ ಸತ್ಯ.
ಪ್ರತಿನಿತ್ಯ ಸಾವು, ಸಂಕಟವನ್ನು ಕಂಡ ಈ ಕಂದಮ್ಮಗಳಿಗೆ ವಯೋಸಹಜವಾಗಿ ಇರಬೇಕಾದ ತುಂಟತನ, ಹಾಸ್ಯ, ಆಟದ ಪರಿವೆಯೇ ಇಲ್ಲ. ಬದಲಿಗೆ ಗಂಭೀರತೆಯೇ ಮನತುಂಬಿಕೊಂಡು ಎಲ್ಲರೊಡನೆಯೂ ಸ್ಥಿತಪ್ರಜ್ಞರಂತೆ ವರ್ತಿಸುತ್ತಾರೆ. ಆದರೆ ಇದೀಗ ಇಂತಹ ಮಕ್ಕಳಿಗೂ ತಕ್ಕ ಶಿಕ್ಷಣ ದೊರೆಯುವಂತೆ ಮಾಡಿ ಅವರನ್ನು ಸಾಮಾನ್ಯ ಜನರ ನಡುವೆ ಬದುಕುವಂತೆ ಮಾಡಬೇಕೆನ್ನುವ ಸದುದ್ದೇಶ ಹೊಂದಿರುವ ಇಬ್ಬರು ಫ್ರೆಂಡ್ಸ್ ಬೆಂಗಳೂರಿನ ವಿವಿಧ ಸ್ಮಶಾನಗಳಿಗೆ ತೆರಳಿ ಅಲ್ಲಿನ ಕೆಲಸಗಾರರ ಮಕ್ಕಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ!
ಸುಶಿಕ್ಷಿತ ಕುಟುಂಬದ ಹಿನ್ನೆಲೆ ಹೊಂದಿರುವ ಗ್ಲೀಡಾ ಡಿಸಿಲ್ವಾ ಮತ್ತು ಸ್ಯಾಮ್ಯುಯೆಲ್ ಗ್ಲಾಡ್‌ಸನ್ ಎನ್ನುವ ಫ್ರೆಂಡ್ಸ್ ವಿಭಿನ್ನ ಪರಿಸರದಲ್ಲಿ ವಾಸವಿರುವ ಈ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಿಕೊಡುತ್ತಿದ್ದಾರೆ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಈ ಇಬ್ಬರು ಫ್ರೆಂಡ್ಸ್ ಗೆ ಮೊದಲಿನಿಂದಲೂ ತಾವು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ತುಡಿತವಿತ್ತು.
ಅದರಂತೆ ಇಬ್ಬರೂ ವಿವಿ ವ್ಯಾಸಂಗ ಪೂರೈಸಿ ತಮ್ಮ ಕನಸಿಗೆ ಸಾಕಾರ ರೂಪ ಕೊಡಲು ಮುಂದಾದರು. ಗ್ಲೀಡಾ ಮುಂಬೈನಲ್ಲಿ ಸ್ನಾತಕಪದವಿ ಪೂರೈಸಿದರೆ, ರೈಲ್ವೆ ಅಧಿಕಾರಿಯ ಮಗನಾದ ಸ್ಯಾಮ್ಯುಯೆಲ್ ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿದರು. ಮನೆಯವರ ವಿರೋಧವನ್ನು ಲೆಕ್ಕಿಸದೆ, ತಮ್ಮ ಇಷ್ಟದ ಸಾಮಾಜಿಕ ಕಾರ್ಯವನ್ನು ಮಾಡಲು ಮುಂದಾದ ಈ ಯುವ ಜೋಡಿಯ ಕೆಲಸ ಸ್ವಾಗತಾರ್ಹ. ಪ್ರತಿನಿತ್ಯ ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಕಲಪನಹಳ್ಳಿ ಸ್ಮಶಾನ, ಶಾಂತಿನಗರದ ಸ್ಮಶಾನಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಶೈಕ್ಷಣಿಕ ತರಬೇತಿ ನೀಡುತ್ತಿದ್ದಾರೆ.
ಸಾವಿನಲ್ಲಿ ಸಿಕ್ಕಿತು ಪ್ರೇರಣೆ
ಸ್ಮಶಾನನ್ನು ಗುರುಕುಲವನ್ನಾಗಿ ಮಾಡಹೊರಟ ಇವರಿಬ್ಬರ ಕೆಲಸಕ್ಕೆ ಪ್ರೇರಣೆ ದೊರಕಿದ್ದು ಸಾವಿನಿಂದ! ಗ್ಲೀಡಾರ ತಂದೆ ವಿಪರೀತ ಮದ್ಯವ್ಯಸನಿಯಾಗಿದ್ದರು. ತಾಯಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ತಂದೆಯ ಈ ಚಟದಿಂದ ಗ್ಲೀಡಾ ಮತ್ತವರ ತಾಯಿ ಅನುಭವಿಸಿದ ಅವಮಾನ, ನೋವು ವಿಪರೀತವಾಗಿತ್ತು. ಅದೇ ಕುಡಿತದ ಚಟ ತಂದೆಯನ್ನು ಬಲಿ ತೆಗೆದುಕೊಂಡಿತು. ಗ್ಲೀಡಾಗೆ ಇದು ದೊಡ್ಡ ಪಾಠವಾಯಿತು. ಬದುಕಿನಲ್ಲಿ ಕಂಡ ಏರಿಳಿತಗಳೇ ಅವರಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಲು ಕಾರಣವಾಯಿತು.